ನಿನ್ನೆ ರಾತ್ರಿ 9 ಗಂಟೆಗೆ ಇರಾನ್ನ ರಾಜಧಾನಿ ಟೆಹ್ರಾನ್ನಲ್ಲಿ ಸ್ಫೋಟ ಸಂಭವಿಸಿದೆ. ಆ ಕಟ್ಟಡದ ಬೇಸ್ಮೆಂಟ್ನಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡ ಕಾರಣಕ್ಕೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಟೆಹ್ರಾನ್ : ಇರಾನ್ನ ಟೆಹ್ರಾನ್ನಲ್ಲಿರುವ ಮೆಡಿಕಲ್ ಕ್ಲಿನಿಕ್ನಲ್ಲಿ ಮಂಗಳವಾರ ರಾತ್ರಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಇಡೀ ಕಟ್ಟಡವೇ ಹೊತ್ತಿ ಉರಿದಿದ್ದು, 19 ಜನರು ಸಾವನ್ನಪ್ಪಿದ್ದಾರೆ. ಬಹುಮಹಡಿಯ ಕಟ್ಟಡ ಹೊತ್ತಿ ಉರಿಯುತ್ತಿರುವ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ. ಟೆಹ್ರಾನ್ನ ಮೆಡಿಕಲ್ ಕ್ಲಿನಿಕ್ನಲ್ಲಿ ಉಂಟಾದ ಸ್ಫೋಟಕ್ಕೆ ಗ್ಯಾಸ್ ಸೋರಿಕೆಯೇ ಕಾರಣ ಎಂದು ಅಂದಾಜಿಸಲಾಗಿದೆ. ಇಂದು ಬೆಳಗಿನ ಜಾವದವರೆಗೂ ಬೆಂಕಿ ಆರಿಸುವ ಕಾರ್ಯಾಚರಣೆ ನಡೆದಿದೆ. ಘಟನೆಯಲ್ಲಿ 19 ಜನರು ಸಾವನ್ನಪ್ಪಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಟೆಹ್ರಾನ್ನ ಸಿನಾ ಅಟ್ಟರ್ ಮೆಡಿಕಲ್ ಕೇಂದ್ರದಲ್ಲಿ ಈ ಪ್ರಬಲ ಸ್ಫೋಟ ಸಂಭವಿಸಿದ್ದು, ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ. ನಿನ್ನೆ ರಾತ್ರಿ 9 ಗಂಟೆಗೆ ಸಿನಾ ಅಟ್ಟರ್ ಕ್ಲಿನಿಕ್ ನಲ್ಲಿ ಸ್ಫೋಟ ಸಂಭವಿಸಿತ್ತು. ಆ ಕಟ್ಟಡದ ಬೇಸ್ಮೆಂಟ್ನಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡ ಕಾರಣಕ್ಕೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಅಲ್ಲಿದ್ದ ವೈದ್ಯಕೀಯ ಉಪಕರಣಗಳನ್ನು ಹೊರಹಾಕಲಾಗಿದೆ.ಸಾವನ್ನಪ್ಪಿರುವ 19 ಜನರಲ್ಲಿ 15 ಜನ ಪುರುಷರು ಮತ್ತು 4 ಮಹಿಳೆಯರಿದ್ದಾರೆ. ಆರಂಭದಲ್ಲಿ 13 ಜನರು ಸಾವನ್ನಪ್ಪಿದ್ದರು. ಆದರೆ, ಅಗ್ನಿ ಶಾಮಕ ಸಿಬ್ಬಂದಿ ಮತ್ತೆ 6 ಮಂದಿಯ ಶವಗಳನ್ನು ಹೊರತೆಗೆದಿದ್ದು, ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.