ಹಿಂದಿ ಕಲಿಯುವುದು ಕಡ್ಡಾಯವಲ್ಲ

ಪರದೇಶದ ಭಾಷೆ ಇಂಗ್ಲೀಷ್ ಮೇಲಿಲ್ಲದ ಸಿಟ್ಟು ಹಿಂದಿ ಮೇಲೆ ಯಾಕೆ ?

ಸ್ವಾತಂತ್ರ್ಯ ಹೋರಾಟದ ಹೊತ್ತಿನಲ್ಲಿ ಇಡೀ ಭಾರತವನ್ನು ರಾಷ್ಟ್ರೀಯ ವಿಚಾರಧಾರೆಯಲ್ಲಿ ಬೆಸೆಯಲು ಗಾಂಧೀಜಿ ಆರಿಸಿಕೊಂಡ ದಾರಿ ಅಂದರೆ ಅದು ಹಿಂದಿ ಭಾಷೆಯ ಶಿಕ್ಷಣ. ಸ್ವಾತಂತ್ರ್ಯ ಹೋರಾಟದ ಕಸುವನ್ನು ದಕ್ಷಿಣ ಭಾರತದಲ್ಲಿ ತೀವ್ರಗೊಳಿಸಲು ದಕ್ಷಿಣ ಭಾರತದವರು ಹಿಂದಿ ಭಾಷೆಯನ್ನು ಕಲಿಯಬೇಕು ಎಂದವರು ಇಚ್ಛೆ ವ್ಯಕ್ತಪಡಿಸಿದ್ದರು. ಅದಕ್ಕೆ ಪೂರಕವಾಗಿ ಆಗಿನ ಮದ್ರಾಸಿನಲ್ಲಿ ಹಿಂದಿ ಪ್ರಚಾರ ಸಮಿತಿಯ ಸ್ಥಾಪನೆಯನ್ನು (1918) ಮಾಡಿದ್ದರು ಗಾಂಧೀಜಿ.

ಗಾಂಧೀಜಿಯವರು ಹಿಂದಿ ಶಿಕ್ಷಕನಾಗಿ ಎರಡು ವರ್ಷ ಬೋಧನೆ ಕೂಡ ಮಾಡಿದ್ದರು. ಹಿಂದಿ ನಮ್ಮ ರಾಷ್ಟ್ರ ಭಾಷೆಯಾಗಬೇಕು ಎಂದವರು ಬಯಸಿದ್ದರು. ಅಂಬೇಡ್ಕರ್ ಅವರು ಕೂಡ ಹಿಂದಿ ಭಾಷೆಯ ಪರವಾಗಿದ್ದರು. ಅದು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ಅವರೆಲ್ಲರ ಬಯಕೆಯ ಪ್ರಕಾರ ಹಿಂದಿ ರಾಷ್ಟ್ರ ಭಾಷೆ ಆಗಲೇ ಇಲ್ಲ. ಕಾರಣ ಗೊತ್ತಿಲ್ಲ.

ತ್ರಿಭಾಷಾ ಕಲಿಕೆಗೆ ಅಸ್ತು ಅಂದವರು ಇಂದಿರಾ
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭ ಶಿಕ್ಷಣದಲ್ಲಿ ತ್ರಿಭಾಷಾ ಪದ್ಧತಿ ಜಾರಿಗೆ ಬಂತು (1968). ಆರು ವರ್ಷದ ಮಕ್ಕಳು ಕೂಡ ಮೂರು ಭಾಷೆಗಳನ್ನು ಸುಲಲಿತವಾಗಿ ಕಲಿಯಬಲ್ಲರು ಎನ್ನುತ್ತಾರೆ ಮನಶ್ಶಾಸ್ತ್ರಜ್ಞರು. ಮಕ್ಕಳಿಗೆ ಭಾಷೆ ಕಲಿಯುವುದು ಹೊರೆ ಅಲ್ಲವೇ ಅಲ್ಲ. ಇಡೀ ಭಾರತದಲ್ಲಿ ಪ್ರಥಮ ಭಾಷೆಯಾಗಿ ಮಾತೃಭಾಷೆಯನ್ನು ಮಕ್ಕಳು ಕಲಿಯಬೇಕು (ಅಂದರೆ ಕರ್ನಾಟಕದಲ್ಲಿ ರಾಜ್ಯಾಂಗದ ಭಾಷೆಯಾಗಿರುವ ಕನ್ನಡ). ದ್ವಿತೀಯ ಭಾಷೆಯಾಗಿ ಅಂತಾರಾಷ್ಟ್ರೀಯ ಭಾಷೆಯಾಗಿರುವ ಇಂಗ್ಲೀಷ್ ಕಲಿಯಬೇಕು. ತೃತೀಯ ಭಾಷೆಯಾಗಿ ಭಾರತದಲ್ಲಿ ಅತಿ ಹೆಚ್ಚು ಮಂದಿ ಮಾತನಾಡುವ (ಜಗತ್ತಿನಲ್ಲಿ ಅತಿ ಹೆಚ್ಚು ಮಂದಿ ಮಾತನಾಡುವ ಮೂರನೇ ಭಾಷೆ) ಹಿಂದಿ ಭಾಷೆಯನ್ನು ಕಲಿಯುವ ಅವಕಾಶವನ್ನು ನೀಡಲಾಯಿತು. ಹಿಂದಿ ಇಡೀ ಭಾರತವನ್ನು ಬೆಸೆಯುವ ಒಂದು ಲಿಂಕ್ ಭಾಷೆಯಾಗಿ ಕಲಿಯಬೇಕು ಎಂದು ಇಂದಿರಾ ಗಾಂಧಿ ಅವರಿಗೆ ಒಲವಿತ್ತು. ಅವರು ರವೀಂದ್ರನಾಥ ಟ್ಯಾಗೋರರ ಶಾಂತಿನಿಕೇತನದಲ್ಲಿ ಹಿಂದಿ ಭಾಷೆಯ ಸೌಂದರ್ಯವನ್ನು ಅಧ್ಯಯನ ಮಾಡಿ ಬೆರಗಾಗಿದ್ದರು.

ಹಿಂದಿಗೇಕೆ ಕೊಡಲಿ ಏಟು
ಹಿಂದಿ ಕಲಿಯುವ ಮತ್ತು ಕಲಿಸುವ ವಿಷಯಕ್ಕೆ ಬಂದಾಗ ಅದನ್ನು ಹಿಂದಿ ಹೇರಿಕೆ ಎಂಬ ಕಾರಣಕ್ಕೆ ತಮಿಳುನಾಡು ಸರಕಾರವು ಮೊದಲು ತಗಾದೆ ತೆಗೆಯಿತು. ಅಲ್ಲಿ ಹಿಂದಿ ವಾರ್ತೆ, ಹಿಂದಿ ಪತ್ರಿಕೆ, ಹಿಂದಿ ಸಿನೆಮಾ, ಹಿಂದಿ ಧಾರಾವಾಹಿ ಎಲ್ಲವೂ ಬ್ಯಾನ್ ಆದವು ! ಹಾಗೆಯೇ ಹಲವು ಕನ್ನಡಪರ ಸಂಘಟನೆಗಳು ಕರ್ನಾಟಕದಲ್ಲಿ ಹಿಂದಿ ಹೇರಿಕೆ ಎಂಬ ಅಪಸ್ವರವನ್ನು ದೀರ್ಘ ಕಾಲದಿಂದ ತೆಗೆಯುತ್ತಾ ಬಂದವು.

ಎಸ್ಸೆಸೆಲ್ಸಿ ಹಿಂದಿ ಭಾಷೆ ಕೇವಲ ಕಾಟಾಚಾರಕ್ಕೆ
ಆ ಕ್ಯಾತೆಗೆ ಕರ್ನಾಟಕ ಸರಕಾರವೂ ಶರಣಾಗಿ ಇಂದು ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕಾಟಾಚಾರಕ್ಕೆ ಹಿಂದಿ ಪರೀಕ್ಷೆ ನಡೆಸುವ, ಆದರೆ, ಅದರ ಅಂಕಗಳನ್ನು ವಿದ್ಯಾರ್ಥಿಗಳಿಗೆ ನೀಡದೇ ಗ್ರೇಡ್ ಮಾತ್ರ ನೀಡುವುದಾಗಿ ಘೋಷಿಸಿದೆ. ಯಾರ ಅಭಿಪ್ರಾಯವನ್ನೂ ಲೆಕ್ಕಿಸದೇ, ಯಾವುದೇ ಸಂವಾದಕ್ಕೆ ಅವಕಾಶವನ್ನು ನೀಡದೇ ಕನಿಷ್ಠ ಪಕ್ಷ ಶಿಕ್ಷಣತಜ್ಞರ ಅಭಿಪ್ರಾಯವನ್ನೂ ಪರಿಗಣನೆ ಮಾಡದೇ ಸರಕಾರವು ಈ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡು ಶಿಕ್ಷಕ ವೃಂದದಿಂದ ಮತ್ತು ಪೋಷಕರಿಂದ ಕಠಿಣ ಟೀಕೆಗೆ ಒಳಗಾಗಿದೆ.

ಸರಕಾರವು ಮುಂದಿನ ವರ್ಷದಿಂದ ದ್ವಿಭಾಷಾ ನೀತಿಯನ್ನು ಜಾರಿಗೊಳಿಸುವ ಬಗ್ಗೆ ಯೋಚನೆ ಮಾಡಿಕೊಂಡು ಬರುತ್ತಿತ್ತು. ಹಿಂದಿ ಭಾಷೆಗೆ ಪರೋಕ್ಷವಾಗಿ ಕೋಕ್‌ ಕೊಡುವ ಬಗ್ಗೆಯೂ ಒಳಗೊಳಗೆ ಚರ್ಚೆ ನಡೆಯುತ್ತಿತ್ತು. ಆದರೆ, ಈ ವರ್ಷ ಇಡೀ ಹಿಂದಿ ಭಾಷೆಯನ್ನು ಬೋಧಿಸಿ, ಮೂರು ಮೂರು ಪೂರ್ವಸಿದ್ಧತಾ ಪರೀಕ್ಷೆ ಕೂಡಾ ನಡೆಸಿ, ಫಲಿತಾಂಶ ವಿಶ್ಲೇಷಣೆಯನ್ನು ಕೂಡ ಮಾಡಿ ಎಸ್ಎಸ್ಎಲ್ಸಿ ಪರೀಕ್ಷೆಯು ಆರಂಭವಾಗಿ ಅರ್ಧ ಪರೀಕ್ಷೆ ಮುಗಿಯುವವರೆಗೆ ಕಾದು ಈಗ ಧಿಡೀರ್ ಎಂದು ಈ ಆದೇಶ ಹೊರಡಿಸಿರುವುದು ವಿದ್ಯಾರ್ಥಿಗಳ ಪೋಷಕರ ಮತ್ತು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕಾಟಾಚಾರಕ್ಕೆ ಹಿಂದಿ ಪರೀಕ್ಷೆ ಎಂದಾದರೆ ಮಕ್ಕಳು ಇಡೀ ವರ್ಷ ಯಾಕೆ ಹಿಂದಿ ಓದಬೇಕಿತ್ತು ? ಶಿಕ್ಷಕರು ಯಾಕೆ ಪಾಠ ಮಾಡಬೇಕಿತ್ತು ?
ಹಿಂದಿ ಭಾಷೆಯ ಕಲಿಕೆಯಿಂದ ಕನ್ನಡಕ್ಕೆ ಎಲ್ಲಿ ಮತ್ತು ಯಾವಾಗ ತೊಂದರೆ ಆಗಿದೆ ?
ಪರದೇಶದ ಇಂಗ್ಲೀಷ್ ಭಾಷೆಯನ್ನು ಕಲಿಯುವುದಕ್ಕಿಂತ ಭಾರತದ್ದೇ ಹಿಂದಿ ಭಾಷೆಯನ್ನು ಕಲಿಯುವುದು ಸುಲಭ ಎಂದು ವಿದ್ಯಾರ್ಥಿಗಳು, ಅವರ ಪೋಷಕರು ಅಭಿಪ್ರಾಯಪಡುತ್ತಿದ್ದಾರೆ. ಶಿಕ್ಷಣ ತಜ್ಞರೂ ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕನ್ನಡಿಗರು ಹಿಂದಿ ವಾರ್ತೆ, ಹಿಂದಿ ಕಾಮೆಂಟರಿ, ಹಿಂದಿ ಸಿನೆಮಾ, ಹಿಂದಿ ಧಾರಾವಾಹಿಗಳನ್ನು ನಿರಂತರ ನೋಡುತ್ತಿರುವ ಕಾರಣ ಕನ್ನಡಿಗರಿಗೆ ಹಿಂದಿಯು ಇಂಗ್ಲೀಷ್ ಭಾಷೆಗಿಂತ ಹತ್ತಿರವಾದ ಭಾಷೆ ಆಗಿದೆ.
ಸರಕಾರವು ಕನ್ನಡವನ್ನು ಉದ್ಧಾರ ಮಾಡಬೇಕು ಎಂದಾದರೆ ಎಲ್ಲ ಸರಕಾರಿ, ಅನುದಾನಿತ, ಅನುದಾನರಹಿತ, ಸಿಬಿಎಸ್ಸಿ ಮತ್ತು ಐಸಿಎಸ್ಎಸಿ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನು ಜಾರಿಗೊಳಿಸುವ ಇಚ್ಛಾಶಕ್ತಿ ಹೊಂದಿರಬೇಕಿತ್ತು.
ಸರಕಾರದ ತ್ರಿಭಾಷಾ ಪದ್ಧತಿಯನ್ನು ನಂಬಿ ಕರ್ನಾಟಕದಲ್ಲಿ ಸಾವಿರಾರು ಶಿಕ್ಷಕರು ಹಿಂದಿ ಬಿಎಡ್ ಮಾಡಿ ಶಿಕ್ಷಕರಾಗಿದ್ದಾರೆ. ಅವರ ಭವಿಷ್ಯದ ಬಗ್ಗೆ ಸರಕಾರ ಯೋಚನೆ ಮಾಡಿದೆಯಾ ?
ಕರ್ನಾಟಕದಲ್ಲಿ ತೃತೀಯ ಭಾಷೆಯಾಗಿ ಹಿಂದಿ ಮಾತ್ರ ಕಲಿಸಲಾಗುತ್ತಿಲ್ಲ. ಉರ್ದು, ಕೊಂಕಣಿ, ತುಳು, ಅರೆಬಿಕ್, ಕನ್ನಡ, ಇಂಗ್ಲೀಷ್ ಭಾಷೆಗಳನ್ನು ಕೂಡ ಕಲಿಯುವ ಅವಕಾಶ ಈಗ ಇದೆ. ಶಿಕ್ಷಣ ಸಚಿವರು ಹೇಳಿದಂತೆ ತೃತೀಯ ಭಾಷೆಯನ್ನು ಹರಕೆಯ ಪರೀಕ್ಷೆ ಮಾಡಿ ಗ್ರೇಡ್ ಪದ್ಧತಿಗೆ ಒಳಪಡಿಸುತ್ತಿದೆ ಎಂದಾದರೆ ಈ ಮೇಲಿನ ಭಾಷೆಗಳ ಅವನತಿಗೆ ಪರೋಕ್ಷವಾಗಿ ಸರಕಾರವೇ ಹೊಣೆ ಆಗುವುದಿಲ್ಲವೇ? ಅವುಗಳಲ್ಲಿ ಹೆಚ್ಚಿನವು ಅಲ್ಪಸಂಖ್ಯಾತ ಭಾಷೆಗಳು.
ಭಾರತದಂತಹ ಭಾಷಾ ವೈವಿಧ್ಯದ ದೇಶದಲ್ಲಿ ಮತ್ತು ಬಹುತ್ವವನ್ನು ಒಪ್ಪಿಕೊಂಡ ದೇಶದಲ್ಲಿ ಉತ್ತರ ಭಾರತಕ್ಕೆ ಸಂಪರ್ಕ ಕಲ್ಪಿಸುವ ಹಿಂದಿ ಭಾಷೆಯ ಕಲಿಕೆ ಏಕೆ ಬೇಡ?
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಇಂಗ್ಲೀಷ್ ಸಂಸ್ಕೃತಿಯಿಂದ ಆದಷ್ಟು ಹಾನಿಯು ಹಿಂದಿ ಭಾಷೆಯಿಂದ ಖಂಡಿತವಾಗಿ ಆಗಿಲ್ಲ ಎನ್ನುತ್ತಾರೆ ಹಿಂದಿ ಶಿಕ್ಷಕರು. ಒಟ್ಟಿನಲ್ಲಿ ಸರಕಾರವು ತನ್ನ ಅವಸರದ ನಿರ್ಧಾರವನ್ನು ಮರು ಪರಿಶೀಲನೆ ಮಾಡಿ ಹಿಂಪಡೆಯಲಿ ಎನ್ನುವ ಕೂಗು ಶಿಕ್ಷಕರ ಮತ್ತು ಪೋಷಕರ ವಲಯದಲ್ಲಿ ಕೇಳಿಬರುತ್ತಿದೆ.



































































































error: Content is protected !!
Scroll to Top