ಪ್ರಾಥಮಿಕ ಶಿಕ್ಷಣವನ್ನೂ ಪೂರ್ತಿ ಮಾಡದ ಆ ವ್ಯಕ್ತಿಯು ರಾಷ್ಟ್ರಮಟ್ಟದಲ್ಲಿ ಕಿಂಗ್ ಮೇಕರ್ ಆಗಿದ್ದು ಹೇಗೆ?

ಅವರ ಪ್ರಾಥಮಿಕ ಶಿಕ್ಷಣವು 11ನೇ ವರ್ಷಕ್ಕೆ ನಿಂತು ಹೋಗಿತ್ತು! ಅದಕ್ಕೆ ಕಾರಣ ತಂದೆಯ ಸಾವು. ಅವರಿಗೆ ತಮಿಳು ಬಿಟ್ಟರೆ ಬೇರೆ ಯಾವ ಭಾಷೆ ಬರುತ್ತಲೇ ಇರಲಿಲ್ಲ! ಇಂಗ್ಲಿಷ್ ಅಥವಾ ಹಿಂದೀ ಭಾಷೆ ಗೊತ್ತೇ ಇರಲಿಲ್ಲ! ಆದರೆ ರಾಜಕೀಯದಲ್ಲಿ ಅವರಷ್ಟು ಪರಿಣತರು ಬೇರೆ ಇರಲು ಸಾಧ್ಯವೇ ಇರಲಿಲ್ಲ! ಪಕ್ಷ ನಿಷ್ಠೆ ಹಾಗೂ ಸಿದ್ಧಾಂತಗಳಲ್ಲಿ ಕೂಡ ಅವರಿಗೆ ಅವರೇ ಸಾಟಿ ಆಗಿದ್ದರು. ಪರಿಣಾಮವಾಗಿ ಎರಡು ಅವಧಿಗಳಿಗೆ ಅಂದರೆ ನಾಲ್ಕು ವರ್ಷಗಳ ಕಾಲ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆದರು ಮತ್ತು ದೆಹಲಿ ಮಟ್ಟದಲ್ಲಿ ಕಿಂಗ್ ಮೇಕರ್ ಆದರು!

ಅವರೇ ಕೆ. ಕಾಮರಾಜ್!
ನೆಹರೂ ನಂತರ ಪ್ರಧಾನಿ ಯಾರು? ಎಂದು ಪ್ರಶ್ನೆ ಬಂದಾಗ ಪಟ್ಟು ಹಿಡಿದು ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ಆಯ್ಕೆ ಮಾಡಿದ್ದು ಅದೇ ಕಾಮರಾಜ್! ಶಾಸ್ತ್ರಿ ರಷ್ಯಾದಲ್ಲಿ ನಿಧನರಾದಾಗ ಮತ್ತೆ ದೊಡ್ಡ ಸಂಘರ್ಷವೇ ಏರ್ಪಟ್ಟಿತ್ತು. ಮುಂದೆ ಪ್ರಧಾನಿ ಯಾರು? ಎಂಬ ಪ್ರಶ್ನೆ ಬಂದಾಗ ಹಿಡಿದ ಪಟ್ಟು ಬಿಡದೆ ಇಂದಿರಾ ಗಾಂಧಿಯವರನ್ನು ಪ್ರಧಾನ ಮಂತ್ರಿ ಮಾಡಿದ್ದು ಇದೇ ಕಾಮರಾಜ್! ಆ ಅವಧಿಯಲ್ಲಿ ಅವರಷ್ಟು ಶಕ್ತಿಶಾಲಿ ನಾಯಕರು ರಾಷ್ಟ್ರಮಟ್ಟದಲ್ಲಿ ಬೇರೆ ಯಾರೂ ಇರಲಿಲ್ಲ!

ಇಂಗ್ಲಿಷ್ ಅಥವಾ ಹಿಂದೀ ಭಾಷೆ ಬರುತ್ತಿದ್ದರೆ ಶಾಸ್ತ್ರಿಯವರ ನಂತರ ಅವರೇ ಪ್ರಧಾನಿ ಆಗುವ ಅವಕಾಶವು ಇತ್ತು ಎಂದು ಅನೇಕ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ!

ಅವರ ಬಾಲ್ಯವು ಅತ್ಯಂತ ದಾರುಣ ಆಗಿತ್ತು!
1903ನೇ ಜುಲೈ 15ರಂದು ಆಗಿನ ತಮಿಳು ರಾಜ್ಯದ ರಾಮನಾಥಪುರ ಜಿಲ್ಲೆಯ ವಿರುಧುನಗರದಲ್ಲಿ ಜನಿಸಿದ ಕೆ. ಕಾಮರಾಜ್ ಅವರು ತನ್ನ 11ನೇ ವಯಸ್ಸಿಗೇ ಅಪ್ಪನನ್ನು ಕಳೆದುಕೊಳ್ಳಬೇಕಾಯಿತು. ಅಲ್ಲಿಗೆ ಅವರ ಶಾಲೆಯು ಕೂಡ ಮುಗಿಯಿತು! ಸಣ್ಣ ಪ್ರಾಯದಲ್ಲಿಯೇ ಸೋದರಮಾವನ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ ಹುಡುಗನು ಮುಂದೆ ರಾಜಕೀಯದಲ್ಲಿ ಆಸಕ್ತಿಯನ್ನು ತಾಳುತ್ತಾರೆ.

ಪ್ರತೀ ದಿನವೂ ‘ಸ್ವದೇಶ ಮಿತ್ರನ್’ ಎಂಬ ತಮಿಳು ಪತ್ರಿಕೆಯನ್ನು ಓದುವುದು, ರಾಜಕೀಯದ ಸಭೆಗಳನ್ನು ದಿನವೂ ಅಟೆಂಡ್ ಮಾಡುವುದು, ಗಾಂಧಿ ಅವರ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸುವುದು ಅವರ ದಿನಚರಿ ಆಗಿ ಆಯಿತು. ಆಗ ಜೈಲುವಾಸ ಕೂಡ ಅವರು ಅನುಭವಿಸುತ್ತಾರೆ.

ಲೋಕಸಭೆಯ ಪ್ರವೇಶ
1946ರಿಂದ 1954ರವರೆಗೆ ಅವರು ಮದ್ರಾಸು ರಾಜ್ಯದಿಂದ ಚುನಾವಣೆ ಗೆದ್ದು ಲೋಕಸಭೆಗೆ ಪ್ರವೇಶವನ್ನು ಪಡೆದರು. ಅಲ್ಲಿ ರಾಜಕೀಯದ ಎಲ್ಲ ಪಟ್ಟುಗಳನ್ನು ಅವರು ಕಲಿತರು. ಲೋಕಸಭೆಯಲ್ಲಿ ತಮಿಳು ಭಾಷೆಯಲ್ಲಿ ಮಾತನ್ನಾಡಿದರು. ನೆಹರೂ ಮುಂದೆ ಕೂತು ಹತ್ತಾರು ಯೋಜನೆಗಳನ್ನು ತನ್ನ ರಾಜ್ಯಕ್ಕೆ ತಂದುಕೊಟ್ಟರು.

ತಮಿಳುನಾಡಿನ ಪವರಫುಲ್ ಮುಖ್ಯಮಂತ್ರಿ!
1954-63ರ ಅವಧಿಯಲ್ಲಿ ತನ್ನ ರಾಜ್ಯದ ಅತ್ಯುತ್ತಮ ಮುಖ್ಯಮಂತ್ರಿ ಆದರು. ಅವರ ಅಧಿಕಾರದ ಅವಧಿಯಲ್ಲಿ ಅವರ ರಾಜ್ಯಕ್ಕೆ ತಮಿಳುನಾಡು ಎಂದು ಹೆಸರು ಬಂದಿತು. ಆ ರಾಜ್ಯವನ್ನು ಅತ್ಯಂತ ಬಲಿಷ್ಠ ರಾಜ್ಯವನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು!

ಬಾಲ್ಯದಲ್ಲಿ ಶಿಕ್ಷಣ ವಂಚಿತರಾಗಿದ್ದ ಅವರು ಮುಖ್ಯಮಂತ್ರಿ ಆಗಿ ತಮಿಳುನಾಡಿನಲ್ಲಿ ಮೊದಲ ಬಾರಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ತಂದರು. ಇಡೀ ದೇಶದಲ್ಲಿ ಮೊದಲ ಬಾರಿಗೆ ಶಾಲೆಯ ಮಕ್ಕಳಿಗೆ ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ ಕೀರ್ತಿ ಅವರಿಗೇ ಸಲ್ಲುತ್ತದೆ!

ಅವರು ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಊಟ ಆರಂಭ ಮಾಡಿದ ಆ ಘಟನೆ.
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಕಾಮರಾಜ್ ಜನಪ್ರಿಯತೆಯ ಶಿಖರದಲ್ಲಿ ಇದ್ದ ಕಾಲ ಅದು. ಒಮ್ಮೆ ಅವರು ತಮ್ಮ ಅಧಿಕೃತ ಕಾರಿನಲ್ಲಿ ಒಂದು ಹಳ್ಳಿಯ ಕಡೆಗೆ ಹೊರಟಿದ್ದರು. ಆಗ ಒಂದು ರೈಲ್ವೇ ಕ್ರಾಸಿಂಗ್ ಕಾರಣಕ್ಕೆ ಅವರು ನಿಲ್ಲಬೇಕಾಯಿತು. ಆಗ ಅವರು ಕಾರಿನ ಕಿಟಕಿಯಿಂದ ದೂರಕ್ಕೆ ನೋಡಲು ತೊಡಗಿದರು. ಅಲ್ಲಿ ಒಬ್ಬ 14-15 ವರ್ಷ ವಯಸ್ಸಿನ ಒಬ್ಬ ಹುಡುಗ ಬಿರುಬಿಸಿಲಿಗೆ ನೇಗಿಲು ಹಿಡಿದುಕೊಂಡು ಗದ್ದೆಯಲ್ಲಿ ಉಳುತ್ತಿದ್ದನು. ಕಾಮರಾಜರು ಅವನನ್ನು ಹತ್ತಿರ ಕರೆದು ಶಾಲೆಗೆ ಏಕೆ ಹೋಗಲಿಲ್ಲ ಎಂದು ಕೇಳಿದರು. ಅವನು ಧೈರ್ಯವಾಗಿ ಶಾಲೆಗೆ ನಾನು ಹೋದರೆ ನನಗೆ ಊಟ ಹಾಕುವವರು ಯಾರು? ನಿಮಗೆ ಹಸಿವಿನ ಬೆಲೆ ಗೊತ್ತಿದೆಯಾ? ಎಂದು ಕೇಳಿದನು. ಆ ಮಾತನ್ನು ಕೇಳಿ ಕಾಮರಾಜರಿಗೆ ಶಾಕ್ ಆಯಿತು. ಅವರು ಮುಂದಿನ ಅಧಿವೇಶನದಲ್ಲಿ ಇಡೀ ತಮಿಳುನಾಡಿನ ಎಲ್ಲ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯ ವಿಧೇಯಕವನ್ನು ಜಾರಿ ಮಾಡಿಯೇ ಬಿಟ್ಟರು! ಹಾಗೆ ಶಾಲೆಯ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಿದ ಮೊದಲ ರಾಜ್ಯ ತಮಿಳುನಾಡು, ಮೊದಲ ಮುಖ್ಯಮಂತ್ರಿ ಎಂಬ ಕೀರ್ತಿ ಕಾಮರಾಜ್ ಅವರಿಗೆ ದೊರೆಯಿತು!

ಎರಡು ಅವಧಿಗೆ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರು!
ಮುಂದೆ ನಾಲ್ಕು ವರ್ಷಗಳ ಅವಧಿಗೆ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದರು. ಶಾಸ್ತ್ರೀ ಮತ್ತು ಇಂದಿರಾ ಗಾಂಧಿ ಅವರನ್ನು ಪ್ರಧಾನಿ ಮಾಡುವಲ್ಲಿ ಅವರ ಪಾತ್ರವೇ ನಿರ್ಣಾಯಕ ಆಗಿತ್ತು ! ವಿಶೇಷವಾಗಿ ಇಂದಿರಾ ಗಾಂಧಿ ಅವರ ಆಯ್ಕೆಯ ಹೊತ್ತಿಗೆ ಅವರು ಸಾಕಷ್ಟು ಪ್ರತಿರೋಧ ಎದುರಿಸಬೇಕಾಯಿತು. ಎಲ್ಲ ಕಡೆಯಲ್ಲಿಯೂ ಕಾಮರಾಜ್ ಅವರ ನಿಲುವುಗಳೇ ಗೆದ್ದವು!

ಇಂದಿರಾಗಾಂಧಿ ವಿರುದ್ಧವೂ ಗೆದ್ದರು ಕಾಮರಾಜ್!
ಶಕ್ತಿಶಾಲಿ ಪ್ರಧಾನಿ ಆಗಿದ್ದ ಇಂದಿರಾಗಾಂಧಿಯವರು ರಾಷ್ಟ್ರಪತಿ ಹುದ್ದೆಯ ಚುನಾವಣೆಗೆ ನೀಲಂ ಸಂಜೀವ ರೆಡ್ಡಿ ಅವರನ್ನು ನಿಲ್ಲಿಸಿದಾಗ ಕಾಮರಾಜ್ ಮುನಿಸಿಕೊಂಡರು. ಸಂಜೀವ್ ರೆಡ್ಡಿ ವಿರುದ್ಧವಾಗಿ ದುರ್ಬಲ ಅಭ್ಯರ್ಥಿ ವಿವಿ ಗಿರಿಯವರನ್ನು ನಿಲ್ಲಿಸಿ ಚುನಾವಣೆಯಲ್ಲಿ ಗೆಲ್ಲಿಸಿಯೇ ಬಿಟ್ಟರು ಕಾಮರಾಜ್! ಅದರಿಂದ ಇಂದಿರಾಗಾಂಧಿ ಅವರ ಆಕ್ರೋಶಕ್ಕೆ ಕೂಡ ಗುರಿ ಆದರು. 1975 ಅಕ್ಟೋಬರ್ ಎರಡರಂದು ಅವರು ಇಹಲೋಕದ ವ್ಯಾಪಾರ ಮುಗಿಸಿದರು. 1976ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ತನ್ನ ಜೀವನವಿಡೀ ‘NEVER COMPROMISE’ ನಿಲುವುಗಳ ಜೊತೆಗೆ ಬದುಕಿದ ಕಾಮರಾಜ್ ಅವರ ಬದುಕೇ ಒಂದು ಅಚ್ಚರಿಗಳ ಮೂಟೆ!































































































error: Content is protected !!
Scroll to Top