ಪಂಚಾಯತ್‌ ಅಧಿಕಾರಾವಧಿ ಕೊನೆ – ಗ್ರಾಮ ಸಮರಕ್ಕೆ ಕ್ಷಣಗಣನೆ – ಎಪ್ರಿಲ್‌ ಅಂತ್ಯಕ್ಕೆ ಚುನಾವಣೆ ?

ಕಾರ್ಕಳ : ಸ್ಥಳೀಯ ಸರಕಾರವೆಂದೇ ಪರಿಗಣಿಸಲ್ಪಟ್ಟಿರುವ ಗ್ರಾಮ ಪಂಚಾಯತ್‌ನ ಅಧಿಕಾರಾವಧಿ ಫೆಬ್ರವರಿ ಎರಡನೇ ವಾರಕ್ಕೆ ಕೊನೆಗೊಳ್ಳುತ್ತಿದೆ. ರಾಜ್ಯದ ಒಟ್ಟು 5,948 ಗ್ರಾಮ ಪಂಚಾಯತ್‌ಗಳ ಪೈಕಿ 5,698 ಗ್ರಾಮ ಪಂಚಾಯತಿಗಳಿಗೆ 2020ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಗ್ರಾಮ ಪಂಚಾಯತ್‌ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಶೀಘ್ರದಲ್ಲೇ ಚುನಾವಣೆ ಘೋಷಣೆ ಮಾಡುವ ಸಾಧ್ಯತೆಯಿದೆ. ಒಂದು ಮೂಲದ ಪ್ರಕಾರ ಎಪ್ರಿಲ್‌ ಕೊನೆಯಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣೆಗೆ ಮುನ್ನ ಕ್ಷೇತ್ರ ವಿಂಗಡಣೆ, ಮತದಾರರ ಪಟ್ಟಿ ಪರಿಷ್ಕರಣೆ, ಮೀಸಲಾತಿ ಪಟ್ಟಿ ಪ್ರಕಟವಾಗಬೇಕಿದೆ.

2020ರಲ್ಲಿ ಮೊದಲ ಹಂತದ ಮತದಾನ ಡಿ. 22 ರಂದು ಹಾಗೂ ಎರಡನೇ ಹಂತದ ಮತದಾನ ಡಿ. 27ರಂದು ನಡೆದಿದ್ದು, ಮೊದಲ ಹಂತದಲ್ಲಿ ಹೆಬ್ರಿಯ 9 ಹಾಗೂ ಎರಡನೇ ಹಂತದಲ್ಲಿ ಕಾರ್ಕಳದ 27 ಗ್ರಾ. ಪಂ.ಗಳಿಗೆ ಚುನಾವಣೆ ನಡೆದಿತ್ತು. ಅಂದು ಕಾರ್ಕಳದ 27 ಗ್ರಾ.ಪಂ. ನ 399 ಸ್ಥಾನಗಳಿಗೆ ಮತ್ತು ಹೆಬ್ರಿಯ 9 ಗ್ರಾ.ಪಂ. ನ 122 ಸ್ಥಾನಗಳಿಗೆ ಚುನಾವಣೆಯಾಗಿತ್ತು.

209 ಬೂತ್
ಕಾರ್ಕಳ ವಿಧಾನಸಭಾ ವ್ಯಾಪ್ತಿಯಲ್ಲಿ 209 ಬೂತ್‌ಗಳಿದ್ದು 2026ರ ಜನವರಿವರೆಗೆ 93‌,568 ಪುರುಷರು, 1,01268 ಮಹಿಳೆಯರು ಸೇರಿದಂತೆ ಒಟ್ಟು 1,94,836 ಮತದಾರರಿದ್ದಾರೆ. ಕಾರ್ಕಳ ತಾಲೂಕಿನಲ್ಲಿ 27 ಹಾಗೂ ಹೆಬ್ರಿ ತಾಲೂಕಿನಲ್ಲಿ 9 ಗ್ರಾಮ ಪಂಚಾಯತ್‌ಗಳಿವೆ. ಕುಕ್ಕುಂದೂರು ಅತಿ ದೊಡ್ಡ ಗ್ರಾ. ಪಂ. ಅಂದರೆ 33 ಗ್ರಾ. ಪಂ. ಸದಸ್ಯರನ್ನು ಹೊಂದಿದ್ದು, ನಿಟ್ಟೆ (31) ಅನಂತರದ ಸ್ಥಾನದಲ್ಲಿದೆ. ಇರ್ವತ್ತೂರು, ನಾಡ್ಪಾಲು ಅತಿ ಸಣ್ಣ ಗ್ರಾ.ಪಂ.ಗಳಾಗಿದ್ದು 7 ಮಂದಿ ಸದಸ್ಯರನ್ನು ಹೊಂದಿದೆ.

ಕಾರ್ಕಳ-ಹೆಬ್ರಿ ತಾಲೂಕಿನ 34 ಗ್ರಾ.ಪಂ.ಗಳ ಪೈಕಿ 31 ಗ್ರಾ.ಪಂ. ಅನ್ನು ಬಿಜೆಪಿ ಬೆಂಬಲಿತರು ಮುನ್ನಡೆಸಿದ್ದರು. ಇನ್ನಾ, ಈದು ಹಾಗೂ ಕುಚ್ಚೂರು ಗ್ರಾ.ಪಂ. ಕಾಂಗ್ರೆಸ್‌ ಬೆಂಬಲಿತ ಆಡಳಿತದಲ್ಲಿತ್ತು. 2023ರಲ್ಲಿ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಆಡಳಿತವಿದ್ದ ಕುಕ್ಕುಂದೂರು ಮತ್ತು ಚಾರ ಪಂಚಾಯತ್‌ ಕಾಂಗ್ರೆಸ್‌ ತೆಕ್ಕೆಗೆ ಸೇರಿಕೊಂಡಿತ್ತು. ಕುಕ್ಕುಂದೂರು ಗ್ರಾಮ ಪಂಚಾಯತ್‌ನಲ್ಲಿ 33 ಮಂದಿ ಸದಸ್ಯರಿದ್ದು, ಅವರಲ್ಲಿ 19 ಮಂದಿ ಬಿಜೆಪಿ, 14 ಮಂದಿ ಕಾಂಗ್ರೆಸ್‌ ಬೆಂಬಲಿತರಿದ್ದರು. ಬಹುಮತವಿದ್ದರೂ ಬಿಜೆಪಿ ಬೆಂಬಲಿತ ಕೆಲ ಸದಸ್ಯರು ಅಡ್ಡ ಮತದಾನ ಮಾಡಿರುವ ಪರಿಣಾಮ ಪಂಚಾಯತ್‌ ಅಧಿಕಾರ ಕಾಂಗ್ರೆಸ್‌ ಬೆಂಬಲಿತರ ಪಾಲಾಯಿತು. ಚಾರ ಪಂಚಾಯತ್‌ನಲ್ಲಿ 13 ಮಂದಿ ಸದಸ್ಯರಿದ್ದು, 7 ಮಂದಿ ಬಿಜೆಪಿ, 6 ಮಂದಿ ಕಾಂಗ್ರೆಸ್‌ ಬೆಂಬಲಿತರಿದ್ದಾರೆ. ಒಂದು ಅಡ್ಡ ಮತದಾನದ ಪರಿಣಾಮವಾಗಿ ಅಧ್ಯಕ್ಷ ಸ್ಥಾನ ಕೈ ಪಾಲಾಗುವ ಮೂಲಕ ಪಂಚಾಯತ್‌ ಆಡಳಿತ ಕಾಂಗ್ರೆಸ್‌ ತೆಕ್ಕೆಗೆ ಸೇರ್ಪಡೆಗೊಂಡಿತು.

ಗ್ರಾಮ ಪಂಚಾಯತ್‌ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಕಳ ಹಾಗೂ ಹೆಬ್ರಿ ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ಸಮಗ್ರ ಸಿದ್ಧತೆ, ಬೂತ್‌ ಅಧ್ಯಕ್ಷರಿಗೆ ತರಬೇತಿ ನೀಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ, ಗ್ರಾಮೀಣ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಬಿಜೆಪಿ ಬೆಂಬಲಿತ ಪಂಚಾಯತ್‌ನ ಅಸಮರ್ಪಕ ಆಡಳಿತ, ಕಾಂಗ್ರೆಸ್‌ನ ಸಂಘಟನಾ ಸಾಮರ್ಥ್ಯ, ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆ ನಮಗೆ ವರವಾಗಲಿದೆ.
-ಬಿಪಿನ್‌ಚಂದ್ರ ಪಾಲ್‌ ನಕ್ರೆ
ಕಾಂಗ್ರೆಸ್‌ ಮುಖಂಡರು

ರಾಜ್ಯ ಸರಕಾರದ ವೈಫಲ್ಯ, ಅಭಿವೃದ್ಧಿಗೆ ಅನುದಾನದ ಕೊರತೆ, ದಿನಬಳಕೆಯ ವಸ್ತುಗಳ ಮೇಲೆ ಬೆಲೆ ಏರಿಕೆ, ಜನಸಾಮಾನ್ಯರು ಮೂಲಭೂತ ಕೆಲಸ ಕಾರ್ಯಗಳಿಗೆ ಸರಕಾರಿ ಕಚೇರಿ ಅಲೆದಾಡುವಂತಹ ಪರಿಸ್ಥಿತಿ ಪ್ರಸ್ತುತ ರಾಜ್ಯದಲ್ಲಿದೆ. ಇದನ್ನು ಜನತೆಗೆ ಮನದಟ್ಟು ಮಾಡುವ ಕೆಲಸದೊಂದಿಗೆ ಈ ಬಾರಿಯ ಚುನಾವಣೆಯನ್ನು ನಾವು ಎದುರಿಸಲಿದ್ದೇವೆ.
-ನವೀನ್‌ ನಾಯಕ್‌
ಬಿಜೆಪಿ ಕ್ಷೇತ್ರಾಧ್ಯಕ್ಷರು









































































































error: Content is protected !!
Scroll to Top