ಕಾರ್ಕಳ : ಮುನಿಯಾಲು ಗೋಧಾಮದಲ್ಲಿ ಫೆ. 19ರಿಂದ 21ರವರೆಗೆ ನಡೆಯುವ ಏಕಪವಿತ್ರ ಶ್ರೀಮನ್ನ್ ನಾಗಮಂಡಲದ ಸಿದ್ಧತೆ ಕುರಿತು ಫೆ. 13ರಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಸಭೆ ಜರುಗಿತು. ಗೋಧಾಮದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ಯ ದಂಪತಿ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಮಾತನಾಡಿ, ಮುನಿಯಾಲು ಗೋಧಾಮದಲ್ಲಿ ನಡೆಯುವ ನಾಗಮಂಡಲ ಪಕೃತಿಯೊಂದಿಗಿನ ಮಾನವನ ಧಾರ್ಮಿಕ ಹಾಗೂ ಭಾವನಾತ್ಮಕ ಸಂಬಂಧವನ್ನು ಪ್ರತಿನಿಧಿಸುತ್ತದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸೋಣ ಎಂದರು. ಈ ಸಂದರ್ಭ ಜೊತೆ ಮೊಕ್ತೇಸರ ಪಿ. ರವಿ ಆಚಾರ್ಯ, ನಿಟ್ಟೆ ಸುರೇಶ್ ಆಚಾರ್ಯ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಎಂ. ರಮೇಶ್ ಆಚಾರ್ಯ, ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ನಳಿನಿ ವಿಜೇಂದ್ರ, ಸವಿತಾ ರಾಮಕೃಷ್ಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳುವಾಯಿ ಸೀತಾರಾಮ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ದೇವಸ್ಥಾನದ ಅಂಗ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.









