ಹೆಬ್ರಿ ಎಂಆರ್‌ಎಫ್‌ ಘಟಕಕ್ಕೆ ಬೆಂಕಿ – ಲಕ್ಷಾಂತರ ರೂ. ಮೌಲ್ಯದ ಸೊತ್ತು ನಾಶ

ಕಾರ್ಕಳ : ಹೆಬ್ರಿ ತಾಲೂಕಿನ ಎಂಆರ್‌ಎಫ್‌ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ಸೊತ್ತು ನಾಶ ಆದ ಘಟನೆ ಫೆ. 14ರಂದು ನಡೆದಿದೆ.
ಹೆಬ್ರಿ ಪೊಲೀಸ್‌ ಕ್ವಾಟರ್ಸ್‌ ಸಮೀಪದಲ್ಲಿ ಹೆಬ್ರಿ ತಾಲೂಕು ತ್ಯಾಜ್ಯ ಸಂಗ್ರಹದ ಎಂಆರ್‌ಎಫ್‌ ಘಟಕವಿದ್ದು ಇಂದು ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಕಿಯ ಕೆನ್ನಾಲೆಗೆ ಘಟಕದೊಳಗೆ ಸಂಗ್ರಹಿಸಿದ್ದ ತ್ಯಾಜ್ಯ ಸುಟ್ಟು ಭಸ್ಮವಾಗಿದ್ದು, ಸುತ್ತಲೂ ಹೊಗೆ ಆವರಿಸಿಕೊಂಡಿದೆ.

ಅಧಿಕಾರಿಗಳ ನಿರ್ಲಕ್ಷ್ಯ
ಹೆಬ್ರಿ ಎಂಆರ್‌ಆಫ್‌ ಘಟಕವು ತಾಲೂಕು ಪಂಚಾಯತ್‌ನಿಂದ 2 ವರ್ಷಗಳ ಹಿಂದೆ ಬೇರು ಸಂಸ್ಥೆಗೆ ಟೆಂಡರ್‌ ಮೂಲಕ ಹಸ್ತಾಂತರಗೊಂಡಿತ್ತು. ಕಳೆದ ಆರು ತಿಂಗಳಿಂದ ಮುಚ್ಚಲ್ಪಟ್ಟಿದೆ. ಇಂದು ಒಳಗಡೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಘಟಕದ ಬಾಗಿಲುಗಳನ್ನು ತೆರಯದೆ ನಿರ್ವಹಣೆ ಬಗ್ಗೆ ಸರಿಯಾದ ಕಾರ್ಯನಿರ್ವಹಿಸದೆ ಇರುವುದೇ ಬೆಂಕಿ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಈಡೇರದ ಅಗ್ನಿಶಾಮಕ ಠಾಣೆಯ ಬೇಡಿಕೆ
ಕಾರ್ಕಳ – ಹೆಬ್ರಿ ತಾಲೂಕಿಗೆ ಒಂದೇ ಅಗ್ನಿಶಾಮಕ ಠಾಣೆಯಿದ್ದು ಅದು ಕಾರ್ಕಳದಲ್ಲಿದೆ. ಕಾರ್ಕಳದಿಂದ ಹೆಬ್ರಿಗೆ ಸುಮಾರು 33 ಕೀ. ಮೀ. ದೂರವಿದೆ, ಹೆಬ್ರಿಯಲ್ಲಿ ಬೆಂಕಿಯ ದುರ್ಘಟನೆ ಸಂಭವಿಸಿದಾಗ ಕಾರ್ಕಳದಿಂದ ಅಲ್ಲಿಗೆ ಸಾಗುವಷ್ಟರಾಗಲೇ ಅಪಾಯದ ಮಟ್ಟ ತೀವ್ರವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಹೆಬ್ರಿಯ ಜನತೆ ತಾಲೂಕಿಗೆ ಪ್ರತ್ಯೇಕ ಅಗ್ನಿಶಾಮಕ ಠಾಣೆಗಾಗಿ ಬೇಡಿಕೆ ಇಡುತ್ತಲೇ ಬರುತ್ತಿದ್ದಾರೆ. ಇನ್ನು ಕೂಡ ಈ ಬಗ್ಗೆ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಗಮನ ವಹಿಸದೆ ಇರುವುದು ವಿಷಾದನೀಯ.









































































































error: Content is protected !!
Scroll to Top