ಸದನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆತ್ತಿಗೊಂಡ ಸುನಿಲ್ ಕುಮಾರ್
ಬೆಂಗಳೂರು : ವಿವಿಧ ಜಿಲ್ಲೆಗಳಿಗೆ ತೆರಳಿ ಹಿಂದೂ ಸಮಾಜೋತ್ಸವಗಳಲ್ಲಿ ಭಾಗವಹಿಸದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರಿಗೆ ಪೊಲೀಸರು, ಜಿಲ್ಲಾಡಳಿತಗಳು ನಿರ್ಬಂಧ ವಿಧಿಸುವ, ಸ್ವಯಂಪ್ರೇರಿತವಾಗಿ ದೂರು ದಾಖಲಿಸುವ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಶಾಸಕ ವಿ. ಸುನಿಲ್ ಕುಮಾರ್ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ವಿಷಯ ಪ್ರಸ್ತಾಪಿಸಿದ ಸುನಿಲ್ ಕುಮಾರ್, ‘ಕಲ್ಲಡ್ಕ ಪ್ರಭಾಕರ ಭಟ್, ಶರಣ್ ಪಂಪ್‌ವೆಲ್, ಚಕ್ರವರ್ತಿ ಸೂಲಿಬೆಲೆ, ವಿಕಾಸ್ ಪುತ್ತೂರು, ಪುನೀತ್ ಕೆರೆಹಳ್ಳಿ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳ ಮುಖಂಡರುಗಳ ಮೇಲೆ ಬೇರೆ ಬೇರೆ ಮೊಕದ್ದಮೆಗಳನ್ನು ಹಾಕಿ ಕೆಲ ಜಿಲ್ಲೆಗಳಿಗೆ ಹೋಗದಂತಹ ಹುನ್ನಾರವನ್ನು ಸರಕಾರ ಮಾಡುತ್ತಿದೆ ಎಂದ ಅವರು ಹಿಂದೂ ಸಮಾಜೋತ್ಸವದಲ್ಲಿ ಯಾವುದೇ ಗಲಾಟೆ, ಗಲಭೆಗಳು ನಡೆದ ಘಟನೆಗಳು ಇಲ್ಲ. ಆದರೆ, ನೀವೆ ಊಹಿಸಿಕೊಂಡು ಹಿಂದೂ ಸಮಾಜೋತ್ಸವಗಳಿಗೆ ತೆರಳಿ ಭಾಷಣ ಮಾಡಿದರೆ ಏನೊ ಆಗಿಬಿಡುತ್ತದೆ ಎಂದು ಇಂತಹ ಕಾರ್ಯಕರ್ತರ ಮೇಲೆ ವಿನಾಕಾರಣಕ್ಕೆ ಮೊಕದ್ದಮೆ ಹಾಕುತ್ತಿದ್ದೀರಿ ಎಂದು ಗಮನ ಸೆಳೆದರು.

ವಿಕಾಸ್ ಪುತ್ತೂರು ತರಿಕೇರಿನಲ್ಲಿ ಭಾಷಣ ಮಾಡಲು ಹೋಗಿದ್ದಾಗ ಇನ್ನೂ ಜಾರಿಗೆ ಬಾರದ ರಾಜ್ಯಪಾಲರ ಅಂಕಿತಕ್ಕೆ ಬಾಕಿ ಇರುವ ದ್ವೇಷ ಭಾಷಣ ತಡೆ ಮಸೂದೆ ಮೇಲೆ ನೋಟಿಸ್ ನೀಡಿದ್ದಾರೆ. ಇನ್ನು ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮೇಲೆ ಅನಗತ್ಯವಾಗಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ಹಿಂದೂ ಕಾರ್ಯಕರ್ತರನ್ನು ಸಹಿಸಲು ಸರ್ಕಾರಕ್ಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಸುನಿಲ್ ಕುಮಾರ್ ಯಾವುದೇ ಹಿಂದೂ ಸಮಾಜೋತ್ಸವದಲ್ಲಿ ಅಹಿತಕರ ವಾತಾವರಣ ಸೃಷ್ಟಿಯಾಗಿಲ್ಲ ಆದ್ದರಿಂದ ಕಾಯ್ದೆ ಜಾರಿಗೆ ಬರುವ ಮೊದಲೇ ಆ ಕಾನೂನಿನ ಮೇಲೆ ನೋಟಿಸ್ ಜಾರಿ ಮಾಡಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಉತ್ತರ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ, ‘ಇಂತಹ ನಿರ್ಧಾರಗಳು ಸರ್ಕಾರದ ಮಟ್ಟದಲ್ಲಿ ಆಗುವುದಿಲ್ಲ. ಜಿಲ್ಲಾ ಮಟ್ಟದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಕೋಮು ಪ್ರಚೋದನೆ, ಭಾಷಣ ನಿರ್ಬಂಧಿಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲೇ ಡಿಸಿಗಳು, ಎಸ್‌ಪಿಗಳು ಚಿಂತನೆ ಮಾಡಿ ನಿರ್ಧರಿಸುವ ಪ್ರಕ್ರಿಯೆ ನಮ್ಮ ಸರ್ಕಾರದಲ್ಲಿ ಮಾತ್ರವಲ್ಲ, ಎಲ್ಲ ಸರ್ಕಾರಗಳಲ್ಲೂ ಆಗಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಏನೂ ಇಲ್ಲ. ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ ಆಗಿರಬೇಕು ಎಂಬುದಷ್ಟೆ ನಮ್ಮ ಗುರಿ. ದ್ವೇಷ ಭಾಷಣ ತಡೆ ಮಸೂದೆ ಇನ್ನೂ ಕಾನೂನು ಆಗಿಲ್ಲ. ಅದರ ಮೇಲೆ ಪೊಲೀಸ್ ಅಧಿಕಾರಿ ಹೇಗೆ ನೋಟಿಸ್ ನೀಡಿದರೆಂದು ಗೊತ್ತಿಲ್ಲ. ಗೃಹ ಸಚಿವರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.





