ಆರೋಗ್ಯವೆಂದರೆ ದೈಹಿಕ ಮಾನಸಿಕ ಭಾವನಾತ್ಮಕ ಸಾಮಾಜಿಕವಾಗಿ ಸದೃಢವಾಗಿರುವುದು ಎಂದರ್ಥ. ದೈಹಿಕ ಆರೋಗ್ಯಕ್ಕೆ ಮಾತ್ರ ಪ್ರಾಮುಖ್ಯತೆ ಕೊಡದೆ ಈ ಕೆಳಗೆ ತಿಳಿಸಿರುವಂತೆ ಇತರ ಆರೋಗ್ಯದ ಬಗ್ಗೆಯೂ ಗಮನ ಹರಿಸುವುದು ಒಳ್ಳೆಯದು.
ಯಾವುದೇ ರೋಗ ದೈಹಿಕವಾಗಿ ಕಂಡರೂ ಅದರ ಹಿಂದೆ ಇತರ ಕಾರಣಗಳಿರುತ್ತದೆ. ಎಲ್ಲದರ ಪರಿಣಾಮ ಮಾತ್ರ ಶರೀರದ ಮೇಲೆ ಕಾಣುವುದರಿಂದ. ನಾವು ದೈಹಿಕ ಆರೋಗ್ಯವೇ ಮುಖ್ಯವೆಂದು ಎನಿಸಿದ್ದೇವೆ.
ಆರೋಗ್ಯದಿಂದಿರಲು ಹೇಗೆ ತಯಾರಾಗಬೇಕೆಂದು ತಿಳಿದುಕೊಳ್ಳೋಣ. ಹೀಗಿವೆ ಕೆಲವು ಸಲಹೆಗಳು
ದಿನಾಲು ಏಳುವಾಗ ಉಲ್ಲಾಸದಿಂದಿರಿ
ಯಾರನ್ನೋ ಬೈಯುತ್ತಾ , ಯಾಕೆ ಬೆಳಕಾಯಿತೆಂದು, ಎದ್ದು ಕೆಲಸ ಮಾಡಬೇಕೆಂದು ಚಿಂತಿಸುತ್ತಾ ಏಳಬೇಡಿ. ನಿದ್ದೆಯಿಂದೆದ್ದ ತಕ್ಷಣ ಮೊದಲು ದೇವರನ್ನು ಪ್ರಾರ್ಥಿಸಿ. ದೇವರು ನಿಮಗೆ ಕೊಟ್ಟದ್ದನ್ನು ಸ್ವೀಕರಿಸಿ ಧನ್ಯವಾದಗಳು ಹೇಳಿರಿ. ಮೊದಲ ಆಲೋಚನೆ ನಮ್ಮ ಇಡೀ ದಿನದ ಮೇಲೆ ಬೀಳುತ್ತದೆ. ಆದ್ದರಿಂದ ಧನ್ಯಾತ್ಮಕವಾಗಿರಿ. ಹಿಂದಿನ ದಿನದ ಆಗುಹೋಗುಗಳನ್ನು ಅಲ್ಲೇ ಬಿಟ್ಟು ಹೊಸ ದಿನವನ್ನು ಅಂಗೀಕರಿಸಿ.

ಕೆಲಸವನ್ನು ಪ್ರೀತಿಯಿಂದ ಮಾಡಿ
ನಾವು ದಿನವಿಡಿ ಅನೇಕ ಕೆಲಸವನ್ನು ಮಾಡುತ್ತೇವೆ ಕೆಲವೊಂದು ಇಷ್ಟದಿಂದ ಮಾಡಿದರೆ ಕೆಲವು ಕೆಲಸ ಇಷ್ಟವಿಲ್ಲದಿದ್ದರೂ ಅನಿವಾರ್ಯತೆಯಿಂದ ಮಾಡಬೇಕಾಗುತ್ತದೆ. ಆದ್ದರಿಂದ ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಖುಷಿಯಿಂದ ಅಲ್ಲದಿದ್ದರೂ ಬೇಸರದಿಂದ ಯಾವತ್ತು ಮಾಡಬೇಡಿ. ಕೆಲಸವನ್ನು ದೇವರ ಕೆಲಸವೆಂದು ಮಾಡಿ. ಬೇಸರವೆನಿಸಿದರೆ ಕೆಲಸ ಮಾಡುವ ರೀತಿಯನ್ನು ಬದಲಿಸಿ, ಜಾಗವನ್ನು ಬದಲಿಸಿ, ಕ್ರಿಯಾತ್ಮಕವಾಗಿ ಮಾಡಿ. ನಮ್ಮ ಕೆಲಸಗಳು ಹೇಗಿರಬೇಕೆಂದರೆ ನಮಗೂ ಇತರರಿಗೂ ಅದರಿಂದ ಉಪಯೋಗವಾಗಿರಬೇಕು. ಆಗ ಸಾಮಾಜಿಕವಾಗಿ ನಾವು ನಮ್ಮ ಕರ್ತವ್ಯ ಮಾಡಿದ ಹಾಗೆ ಆಗುತ್ತದೆ.
ಎಷ್ಟು ಬೇಕೋ ಅಷ್ಟು ಮಾತ್ರ ನಿದ್ದೆ ಮಾಡಿ
ನಮ್ಮ ದೈಹಿಕ ಪ್ರಕೃತಿಗೆ ಅನುಸಾರವಾಗಿ, ನಾವು ಮಾಡುವ ಕೆಲಸಕ್ಕೆ ತಕ್ಕಂತೆ, ದೈಹಿಕ ವಿಶ್ರಮ ಅಗತ್ಯ. ಆದರೆ ಅದು ಅತಿ ಕೂಡ ಆಗಬಾರದು. ನಿದ್ದೆಗೆಟ್ಟು ಕೆಲಸ ಮಾಡುವುದು, ಮೊಬೈಲ್ ನೋಡೋದು ಒಳ್ಳೆಯದಲ್ಲ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವನ್ನು ನಿದ್ದೆಗೆಟ್ಟು ವೀಕ್ಷಿಸುತ್ತಿದ್ದೇವೆ ಅದನ್ನು ಕಡಿತಗೊಳಿಸಿ.
ಪ್ರಕೃತಿಯನ್ನು ಸವಿಯಿರಿ
ದೇವರು ಸೃಷ್ಟಿಸಿದ ಅದ್ಭುತ ಪ್ರಕೃತಿಯನ್ನು ದಿನಾಲೂ ಸವಿಯಿರಿ. ಪ್ರಕೃತಿಯಲ್ಲಿ ಓದುವುದು ಆಟವಾಡುವುದು ಮಾಡಿರಿ. ಒಂದಿಷ್ಟು ಸಮಯ ಗಿಡ ಮರ ಹೂವು ಚಿಟ್ಟೆ ಪಕ್ಷಿ ಪ್ರಾಣಿ ಮಳೆ ಮೋಡಗಳನ್ನು ವೀಕ್ಷಿಸಿ. ನಿಮ್ಮೆಲ್ಲಾ ಸಮಸ್ಯೆಗಳನ್ನು ದೂರವಿಟ್ಟು ನಿಮ್ಮ ಎಲ್ಲಾ ಜ್ಞಾನೇಂದ್ರಿಯಗಳನ್ನು ಒಟ್ಟುಗೂಡಿಸಿ ಕಣ್ಣಿನಿಂದ ಪ್ರತಿಯೊಂದನ್ನು ಸೂಕ್ಷ್ಮತೆಯಿಂದ ನೋಡಿರಿ, ಮೂಗಿನಿಂದ ಸುವಾಸನೆಯನ್ನು ಆಘ್ರಾಣಿಸಿ, ಕಿವಿಯಿಂದ ಇಂಪಾದ ಧ್ವನಿಯನ್ನು ಕೇಳಿರಿ, ಗಾಳಿಯನ್ನು ಮಳೆಯನ್ನು ಸ್ಪರ್ಶಿಸಿ, ಪ್ರಕೃತಿ ಕೊಟ್ಟಿರುವ ಹಣ್ಣನ್ನು ಸವಿಯಿರಿ. ಇದರಿಂದ ಧನ್ಯತಾ ಭಾವ ಹುಟ್ಟುತ್ತದೆ. ದೇವರು ಕೊಟ್ಟ ಈ ದೇಹ ಧನ್ಯವೆನಿಸುವುದು.





