ಕಂಬಳದ ಭೀಷ್ಮ ಗುಣಪಾಲ ಕಡಂಬರಿಗೆ ಕಂಬಳ ಕೂಟದಲ್ಲಿ ಅವಮಾನ ! – ಸಿಡಿದೆದ್ದ ಅಭಿಮಾನಿಗಳು

ಕಾರ್ಕಳ : ಕಂಬಳದ ಬೀಷ್ಮ ಎಂದೇ ಖ್ಯಾತರಾಗಿರುವ ಕಂಬಳದ ಹಿರಿಯ ತೀರ್ಪುಗಾರ ಕಾರ್ಕಳದ ಗುಣಪಾಲ ಕಡಂಬ ಅವರಿಗೆ ಕಳೆದ ಶನಿವಾರ ಮಂಗಳೂರು ಕಂಬಳ ಸಮಿತಿ ವತಿಯಿಂದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆದ ರಾಮ-ಲಕ್ಷ್ಮಣ ಜೋಡುಕರೆ ಕಂಬಳದಲ್ಲಿ ವ್ಯಕ್ತಿಯೋರ್ವರು ಅವಮಾನ ಮಾಡಿರುವ ಘಟನೆ ವರದಿಯಾಗಿದೆ. ಇದೀಗ ಈ ಘಟನೆ ಕಂಬಳ ಕ್ಷೇತ್ರ ಮಾತ್ರವಲ್ಲದೇ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಘಟನೆಯ ವಿವರ
ಹಿರಿಯ ತೀರ್ಪುಗಾರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಣಪಾಲ ಕಡಂಬ ಅವರು ಎಂದಿನಂತೆ ಮಂಗಳೂರು ಕಂಬಳದಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದರು. ರಾತ್ರಿ 11.45ರ ಸುಮಾರಿಗೆ ಅರುಣ್ ಶೆಟ್ಟಿ ಬಜ್ಪೆ ಎಂಬಾತ ವಿವರಣಾ ಕೌಂಟರ್‌ನಲ್ಲಿ ಪ್ರಕಟಣೆಗಾರರಿಂದ ಮೈಕ್ ಎಳೆದು ಕಡಂಬರತ್ತ ನೋಡಿ “ನೀವು ಸ್ವಲ್ಪ ಸುಮ್ಮನೆ ಕುಳಿತುಕೊಳ್ಳಿ, ಇಲ್ಲಿ ಕೋಣ ಬಿಡೋಕಿದೆ.. ನಾನು ಅರುಣ್ ಶೆಟ್ಟಿ ಮಾತಾಡೋದು” (ಈ ಒಂತೆ ಮನಿಪಂದೆ ಕುಲ್ವನಾ, ಮುಲ್ಪ ಎರು ಬುಡ್ಯೆರೆ ಉಂಡು, ಯಾನ್ ಅರುಣ್ ಶೆಟ್ಟಿ ಪಾತೆರುನಿಯಾ) ಎಂದು ಏಕವಚನದಲ್ಲಿ ಗರ್ವದಿಂದ ಹೇಳಿರುತ್ತಾರೆ. ಇದಕ್ಕೆ ಸಮಾಧಾನದಿಂದಲೇ ಪ್ರತಿಕ್ರಿಯಿಸಿದ ಕಡಂಬ ಅವರು, “ನಾವು ಮೈಕ್ ಬಂದ್ ಮಾಡಿ ಕೂರುತ್ತೇವೆ, ನೀವು ಕೋಣಗಳನ್ನು ಎಷ್ಟು ಹೊತ್ತಿಗಾದರೂ ಬಿಡಿ” (ಎಂಕ್ಲು ಮೈಕ್ ಬಂದ್ ಮಲ್ತ್‌ದ್ ಕುಲ್ಲುವ, ನಿಕ್ಲ್ ಏಪ ಬೋಡಾಂಡಲ ಎರು ಬುಡ್ಲೆ) ಎಂದು ತಿರುಗೇಟು ನೀಡಿದ್ದಾರೆ.

ಅರುಣ್ ಶೆಟ್ಟಿ ಈ ರೀತಿ ಅವಮಾನ ಮಾಡಿರುವುದು ಒಂದು ಕಡೆಯಾದರೆ ರಾಜ್ಯ ಕಂಬಳ ಸಮಿತಿಯ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಗುಣಪಾಲ ಕಡಂಬ ಅವರಿಗೆ ಏಕವಚನದಿಂದ ನಿಂದನೆ ಮಾಡಿದ್ದಾರೆ ಎಂದು ಸಹ ವರದಿಯಾಗಿದೆ. ಕೋಣಗಳು ಓಡಿ ರೇಸ್ ಪೂರ್ಣಗೊಳಿಸುವ ಮಂಜೊಟ್ಟಿ ಬಳಿ ಇರುವ ತೀರ್ಪುಗಾರರ ಕೌಂಟರ್‌ನಲ್ಲಿ ಕಂಬಳ ಸಮಿತಿಯ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಗುಣಪಾಲ ಕಡಂಬ ಅವರಿಗೆ ಏಕವಚನದಿಂದ ಅವಾಚ್ಯವಾಗಿ ನಿಂದನೆ ಮಾಡಿದ್ದಾರೆ ಎನ್ನುವ ಆರೋಪವೂ ಅಭಿಮಾನಿ ಬಳಗದಿಂದ ಕೇಳಿ ಬರುತ್ತಿದೆ. ಕಡಂಬರನ್ನು ಹೀಯಾಳಿಸುತ್ತಿದ್ದ ಸಂದರ್ಭ ಕಂಗಿನಮನೆ ವಿಜಯ ಕುಮಾರ್‌ ಜೈನ್‌ ಕೂಡ ಅಲ್ಲೇ ಇದ್ದರೂ ಮೌನವಾಗಿದ್ದದ್ದು ಒಂದಷ್ಟು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಆಕ್ರೋಶ – ಅಭಿಮಾನಿ ಬಳಗ ರಚನೆ
ಕಂಬಳ ಕ್ರೀಡಾಕೂಟಕ್ಕೆ ಒಂದು ಶಿಸ್ತಿನ ಚೌಕಟ್ಟನ್ನು ತಂದು, ಇದೊಂದು ಅಥ್ಲೆಟಿಕ್ ಕ್ರೀಡೆ ಎನ್ನುವಷ್ಟರ ಮಟ್ಟಿಗೆ ದಶಕಗಳ ಕಾಲ ಬೆವರು ಹರಿಸಿ ಪ್ರತಿಫಲಾಪೇಕ್ಷೆ ಇಲ್ಲದೇ ಸುಮಾರು 60 ವರ್ಷಗಳಿಂದ ಕಂಬಳದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಕಂಬಳದ ಭೀಷ್ಮ ಎಂದೇ ಖ್ಯಾತಿಯನ್ನು ಪಡೆದಿರುವ ಗುಣಪಾಲ ಕಡಂಬ ಅವರಿಗೆ ಆದ ಈ ಅವಮಾನವನ್ನು ಕಂಬಳಾಭಿಮಾನಿಗಳು ಖಂಡಿಸಿದ್ದಾರೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಡಂಬ ಅವರ ಪರವಾಗಿ ಧ್ವನಿ ಎತ್ತಲು ‘ಗುಣಪಾಲ ಕಡಂಬ ಅಭಿಮಾನಿ ಬಳಗ’ದ ಹೆಸರಿನಲ್ಲಿ ವ್ಯಾಟ್ಸ್ಯಾಪ್‌ ಗ್ರೂಪ್‌ಗಳು ರಚನೆಯಾಗಿದ್ದು, ಸಾವಿರಾರು ಮಂದಿ ಒಂದಾಗಿದ್ದಾರೆ. ಅರುಣ್ ಶೆಟ್ಟಿ, ಲೋಕೇಶ್‌ ಶೆಟ್ಟಿ ಮುಚ್ಚೂರು ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದರೆ ರಾಜ್ಯವ್ಯಾಪಿ ಹೋರಾಟ ನಡೆಸುವ ಎಚ್ಚರಿಕೆಯನ್ನೂ ಕಡಂಬರ ಅಭಿಮಾನಿ ಬಳಗ ನೀಡಿದ್ದಾರೆ.

ಶಿಸ್ತು ಸಮಿತಿಗೆ ದೂರು
ಇಷ್ಟೆಲ್ಲಾ ನಡೆದರೂ ಕಂಬಳ ಶಿಸ್ತು ಸಮಿತಿ ಮತ್ತು ಕಂಬಳ ರಾಜ್ಯ ಸಮಿತಿ ಪ್ರತಿಕ್ರಿಯಿಸಿಲ್ಲ. ಇದು ಅಭಿಮಾನಿಗಳ ಆಕ್ರೋಶವನ್ನು ಇಮ್ಮಡಿಗೊಳಿಸಿದೆ. ಶಿಸ್ತು ಉಲ್ಲಂಘನೆಯಾದಾಗ ಕ್ರಮ ಕೈಗೊಳ್ಳಬೇಕಾದ ಸಮಿತಿಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.































error: Content is protected !!
Scroll to Top