ಆಯುರ್ವೇದ ಪಂಚಕರ್ಮ ಚಿಕಿತ್ಸಾ ವಿಧಾನದಲ್ಲಿ ಅಭ್ಯಂಗವನ್ನು ಶಾರೀರಿಕ ಶೋಧನಾ ಕ್ರಮವಾಗಿ ಬಳಸಲಾಗುತ್ತೆ. ಅದರಲ್ಲೂ ಅಭ್ಯಂಗದಿಂದ ದೇಹ ಮತ್ತು ಮನಸ್ಸು ವಿಶ್ರಾಂತಗೊಳ್ಳುತ್ತೆ. ಆಯುರ್ವೇದದಲ್ಲಿ ದಿನಾಲೂ ಅಭ್ಯಂಗ ಮಾಡಲು ಸೂಚಿಸಿದ್ದಾರೆ. ಆದರೆ ದಿನನಿತ್ಯ ಅಭ್ಯಂಗ ಮಾಡಲು ಸಮಯದ ಅಭಾವವಿರುವುದರಿಂದ ಕಷ್ಟ. ಆದ್ದರಿಂದ ಅಂತವರಿಗೆ ಕನಿಷ್ಠ ಪಕ್ಷ ನೆತ್ತಿ, ಕಿವಿ ಹಾಗೂ ಪಾದಗಳಿಗೆ ಅಭ್ಯಂಗ ಮಾಡಿದರೆ ಒಳ್ಳೆಯದು. ಪಾದಗಳಿಗೆ ಮಾತ್ರವಲ್ಲದೆ ಇಡೀ ದೇಹಕ್ಕೆ ಉಪಯೋಗವಾಗುವಂತಹ ಪಾದಾಭ್ಯಂಗದ ಬಗ್ಗೆ ತಿಳಿದುಕೊಳ್ಳೋಣ.
ಪಾದಗಳಿಗೆ ಎಣ್ಣೆ ಹಚ್ಚಿ ಅಭ್ಯಂಗ ಮಾಡುವುದರಿಂದ ಪಾದದ ರೂಕ್ಷತೆ, ಪಾದ ಒಡೆಯುವುದು ನಿಲ್ಲುತ್ತದೆ. ಪಾದಗಳು ಮೃದುವಾಗುತ್ತದೆ. ಇಡೀ ದಿವಸ ಕೆಲಸ ಮಾಡಿ ದಣಿವಿಧ ಪಾದಗಳಿಗೆ ಎಣ್ಣೆ ಹಚ್ಚಿ ಅಭ್ಯಂಗ ಮಾಡುವುದರಿಂದ ಪಾದಗಳಿಗೆ ಬಲ ನೀಡುತ್ತದೆ. ನೋವು ಕಡಿಮೆಯಾಗುತ್ತದೆ. ವಾತ ದೋಷವು ಶಮನವಾಗುತ್ತದೆ. ಹಿಮ್ಮಡಿ ನೋವು ಕಡಿಮೆಯಾಗುತ್ತದೆ. ಪಾದ ಹಿಡಿದುಕೊಳ್ಳುವುದನ್ನು ನಿವಾರಿಸುತ್ತದೆ.
ಪಾದಗಳಿಗೆ ಅಭ್ಯಂಗ ಮಾಡುವುದರಿಂದ ಇಡೀ ದೇಹಕ್ಕೆ ಉಪಯೋಗವಾಗುತ್ತದೆ. ಕಣ್ಣಿಗೆ ಬಹಳ ಒಳ್ಳೆಯದು. ಕಣ್ಣಿನ ಸಮಸ್ಯೆ ಇರುವವರು ನಿತ್ಯ ಪಾದಾಭ್ಯಂಗ ಮಾಡಿದರೆ ಒಳ್ಳೆಯದು. ದೃಷ್ಟಿ ದೋಷವನ್ನು ನಿವಾರಿಸುತ್ತದೆ. ವಾತ ರೋಗಗಳಲ್ಲಿ ಉತ್ತಮ ಪರಿಣಾಮ ನೀಡುತ್ತದೆ. ನಿದ್ರಾಹೀನತೆಯ ಸಮಸ್ಯೆ ಇರುವವರಿಗೆ ಪಾದಾಭ್ಯಂಗದಿಂದ ಸುಖಕರ ನಿದ್ದೆ ಬರುತ್ತದೆ.

ಪಾದದ ಹೆಬ್ಬೆರಳಿಗೆ ಅಭ್ಯಂಗ ಮಾಡುವುದರಿಂದ ಮಾನಸಿಕ ಒತ್ತಡ ಕಮ್ಮಿಯಾಗುತ್ತದೆ. ಮೆದುಳಿನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಸಕ್ಕರೆ ಕಾಯಿಲೆ ಇದ್ದವರಿಗೆ ವಿಶೇಷವಾಗಿ ಪಾದಾಭ್ಯಂಗದಿಂದ ಅನೇಕ ಲಾಭಗಳು ಇವೆ. ಸಕ್ಕರೆ ಕಾಯಿಲೆಯ ಉಪದ್ರವಗಳನ್ನು ತಡೆಗಟ್ಟಬಹುದು.
ಯಾವ ಸಮಯದಲ್ಲಿ ಮಾಡಬೇಕು
ಬೆಳಿಗ್ಗೆ ಸ್ನಾನ ಮಾಡುವುದಕ್ಕಿಂತ 15 ನಿಮಿಷದ ಮುಂಚೆ ಪಾದಾಭ್ಯಂಗ ಮಾಡಿ ಸ್ನಾನ ಮಾಡಿರಿ ಅಥವಾ ರಾತ್ರಿ ಮಲಗುವ ಮುಂಚೆ ಮಾಡಿದರೆ ತುಂಬಾ ಒಳ್ಳೆಯದು.
ಹೇಗೆ ಮಾಡುವುದು
ಎಣ್ಣೆಯನ್ನು ಪಾದ ತಲಕ್ಕೆ ಹಚ್ಚಿ ಮೇಲೆಯಿಂದ ಕೆಳಗೆ, ಕೆಳಗೆಯಿಂದ ಮೇಲೆ ಹಾಗು ವರ್ತೂಲಾಕಾರವಾಗಿ ಮಸಾಜ್ ಮಾಡಬೇಕು. ಹೀಗೆ ಐದರಿಂದ ಹತ್ತು ನಿಮಿಷ ಮಾಡಿದರೆ ಒಳ್ಳೆಯದು. ನೀವೇ ಮಾಡಬಹುದು ಅಥವಾ ಬೇರೆಯವರಿಂದ ಮಾಡಿಸಬಹುದು.

ಯಾವ ಎಣ್ಣೆಯನ್ನು ಬಳಸಬೇಕು
ಎಳ್ಳೆಣ್ಣೆಯಿಂದ ಅಭ್ಯಂಗ ಮಾಡಿದರೆ ಒಳ್ಳೆಯದು ಅಥವಾ ಬಾಲಾ ತೈಲ, ಬಲಾಲಾಕ್ಷಾದಿ ತೈಲ ಮುಂತಾದ ಆಯುರ್ವೇದ ತೈಲವನ್ನು ಬಳಸಬಹುದು. ವಾತ ದೋಷವಿದ್ದಲ್ಲಿ, ನೋವು ಇದ್ದಲ್ಲಿ ಎಳ್ಳೆಣ್ಣೆ ಬಹಳ ಒಳ್ಳೆಯದು. ಪಾದಗಳಿಗೆ ಉರಿ ಇದ್ದರೆ ದನದ ತುಪ್ಪದಿಂದ ಅಭ್ಯಂಗ ಮಾಡುವುದು ಸೂಕ್ತ.
ನೆಗಡಿ ,ಕೆಮ್ಮು, ಅಜೀರ್ಣ, ಆಮವಾತ, ಆನೆಕಾಲು ರೋಗ, ಜ್ವರ ಇದ್ದವರು ಪಾದಾಭ್ಯಂಗ ಮಾಡಬಾರದು.





