ಭಾರತೀಯ ಕಬಡ್ಡಿ ತಂಡವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿದ ಸಾಧಕಿ ಕಾರ್ಕಳದ ಮಮತಾ ಪೂಜಾರಿ

ಮಹಿಳೆ ಎಂದರೆ ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುವ ಕಾಲವೊಂದಿತ್ತು. ಆದರೆ, ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಅದ್ವಿತೀಯ ಸಾಧನೆ ಮಾಡಬಲ್ಲರು. ಅಂತಹ ಸಾಧಕರಲ್ಲಿ ಓರ್ವರು ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಕಾರ್ಕಳ ತಾಲೂಕು ಹೆರ್ಮುಂಡೆ ಗ್ರಾಮದ ಮಮತಾ ಪೂಜಾರಿ. ಇವರು ಭೋಜ ಪೂಜಾರಿ ಮತ್ತು ಕಿಟ್ಟಿ ಪೂಜಾರ್ತಿ ದಂಪತಿ ಪುತ್ರಿ.

ಪುರುಷರಷ್ಟೇ ಆಡುವ ಕ್ರೀಡೆ ಎಂದು ಪರಿಗಣಿತವಾಗಿದ್ದ ಕಬಡ್ಡಿಯಲ್ಲಿ ಮಹಿಳೆಯರು ಮಿಂಚ ತೊಡಗಿದ್ದೇ ಇತ್ತೀಚೆಗಿನ ಕೆಲ ವರ್ಷಗಳಿಂದ. ಇಂಥ ಪರಿಸ್ಥಿತಿಯಲ್ಲಿ ದಿಟ್ಟತನದಿಂದ ಕಬಡ್ಡಿ ಆಡಿ ಬಹಳಷ್ಟು ಸಾಧನೆ ಮಾಡಿದವರು ಮಮತಾ ಪೂಜಾರಿ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹೆರ್ಮುಂಡೆಯಲ್ಲಿ ಓದಿರುವ ಅವರು ಮುನಿಯಾಲಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಹಾಗೂ ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಮಮತಾ ಪೂಜಾರಿ ಆರಂಭದಲ್ಲಿ ಕಬಡ್ಡಿ ಹೊರತುಪಡಿಸಿ ವಾಲಿಬಾಲ್‌ ಸೇರಿದಂತೆ ಬೇರೆಲ್ಲ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಬಳಿಕ ಅವರ ಹೈಟ್‌, ಸ್ಪೀಡ್‌ ಚೆನ್ನಾಗಿದ್ದ ಕಾರಣ ಬಳಿಕ ಕಬಡ್ಡಿಗೆ ಬಂದರು.

ಮಮತಾ ಪೂಜಾರಿ ಅವರಿಗೆ ಬಾಲ್ಯದಲ್ಲಿ ರಾಮಕೃಷ್ಣ ಹೆಗ್ಡೆ, ರಮೇಶ್‌ ಸುವರ್ಣ ಬಳಿಕ ಗೋಕರ್ಣನಾಥ ಕಾಲೇಜಿನಲ್ಲಿ ಪುರುಷೋತ್ತಮ ಪೂಜಾರಿ ಅವರು ಕಬಡ್ಡಿ ತರಬೇತಿ ನೀಡಿದ್ದರು.

2003ರಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಮತಾ 2004-05ರಲ್ಲಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದರು. 2006ರಲ್ಲಿ ಕೊಲಂಬೊದಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದರು. 2010ರಲ್ಲಿ ಚೀನಾದಲ್ಲಿ ನಡೆದ 1ನೇ ಏಷ್ಯನ್ ಗೇಮ್ಸ್‌ನಲ್ಲಿಯೂ ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಮಮತಾ ಪೂಜಾರಿ ಪ್ರಮುಖ ಪಾತ್ರವಹಿಸಿದ್ದರು. 2012ರಲ್ಲಿ ಪಾಟ್ನಾದಲ್ಲಿ ನಡೆದ ಚೊಚ್ಚಲ ಮಹಿಳಾ ಕಬಡ್ಡಿ ವಿಶ್ವಕಪ್‌ನಲ್ಲಿ ಭಾರತ ತಂಡದ ನಾಯಕಿಯಾಗಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಬಳಿಕ 2014ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡದ ಭಾಗವಾಗಿದ್ದ ಮಮತಾ ಪೂಜಾರಿ ಮತ್ತೊಮ್ಮೆ ಭಾರತ ಪದಕ ಗೆಲ್ಲುವಲ್ಲಿ ಕೊಡುಗೆ ನೀಡಿದ್ದಾರೆ. 2025ರಲ್ಲಿ ಬೆಹರೈನ್‌ನಲ್ಲಿ ನಡೆದ ಯೂತ್‌ ಏಷಿಯನ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಅರ್ಜುನ ಪ್ರಶಸ್ತಿ
ಮಮತಾ ಪೂಜಾರಿ ಕಬಡ್ಡಿ ಕ್ಷೇತ್ರದಲ್ಲಿ ನೀಡಿದ ಸಾಧನೆಗಾಗಿ ನೂರಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ಸರಕಾರ ನೀಡುವ ಎರಡನೇ ಅತ್ಯುನ್ನತ ಪ್ರಶಸ್ತಿಯಾಗಿರುವ ರಾಜ್ಯೋತ್ಸವ ಪ್ರಶಸ್ತಿ, 2014ರಲ್ಲಿ ಭಾರತ ಸರಕಾರ ನೀಡುವ ಅರ್ಜುನ ಪ್ರಶಸ್ತಿ ಮಮತಾ ಪೂಜಾರಿ ಅವರ ಕ್ರೀಡಾಸಾಧನೆಗೆ ಒಲಿದಿದೆ.

ಮರೆಯಲಾಗದ ಕ್ಷಣ
ತಾನು ಭಾರತ ಕಬಡ್ಡಿ ತಂಡಕ್ಕೆ ಆಯ್ಕೆಯಾದ ದಿನ, ತಂಡದ ನಾಯಕಿಯಾಗಿ ಜವಾಬ್ದಾರಿ ವಹಿಸಿರುವ ಸಂದರ್ಭ, ಅರ್ಜುನ ಪ್ರಶಸಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ ಪಡೆದ ಕ್ಷಣ, ಇಂಡಿಯಾ ಪರವಾಗಿ ಆಡಿ ಬಂದಾಗ ಕಾರ್ಕಳ ಬಸ್‌ ಸ್ಟ್ಯಾಂಡ್‌ನಲ್ಲಿ ಸಿಕ್ಕಿದ ಅದ್ದೂರಿ ಸ್ವಾಗತ, ಮೆರವಣಿಗೆ ಇವೆಲ್ಲವೂ ಬದುಕಿನಲ್ಲಿ ಮರೆಯಲಾರದ ಕ್ಷಣಗಳು ಎನ್ನುತ್ತಾರೆ ಮಮತಾ.

ಮಹಿಳೆಯರಿಗೆ ತುಂಬಾ ಸಮಸ್ಯೆಗಳಿರುತ್ತವೆ. ಅದರಲ್ಲೂ ಕ್ರೀಡಾಪಟು ಆದವರಿಗೆ ಸಮಸ್ಯೆಗಳು ಇನ್ನೂ ಹೆಚ್ಚು. ಇದಕ್ಕೆಲ್ಲ ಎದೆಗುಂದದೆ ಮುನ್ನಡೆಯುವ ಛಾತಿ ಇದ್ದರಷ್ಟೇ ಕ್ರೀಡಾ ಕ್ಷೇತ್ರದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎನ್ನುವ ಮಮತಾ ಪೂಜಾರಿ ನಿಮ್ಮ ಜೀವನದಲ್ಲಿ ಏನಾಗಬೇಕು ಎಂದು ಬಯಸಿದ್ದೀರೋ ಅದನ್ನೇ ಮಾಡಿ. ಅವರಿವರು ಹೇಳಿದರು ಎಂದು ನಿಮ್ಮ ಗುರಿಯನ್ನು ಬದಲಾಯಿಸುತ್ತಾ ಹೋಗಬೇಡಿ, ನೀವು ಇಷ್ಟಪಡುವ ಕ್ಷೇತ್ರದಲ್ಲಿ ಪರಿಶ್ರಮ ಹಾಕಿದರೆ ಮಾತ್ರ ಸಾಧಿಸಿ ಗುರಿ ತಲುಪಲು ಸಾಧ್ಯ ಎನ್ನುತ್ತಾರೆ.

ಕಬಡ್ಡಿಯ ಸಾಧನೆಯಿಂದಾಗಿ ಮಮತಾಗೆ ಭಾರತೀಯ ರೈಲ್ವೆಯಲ್ಲಿ ಉದ್ಯೋಗ ದೊರೆತಿದೆ. ಮೆನ್ಸ್‌ ಪ್ರೋ ಕಬಡ್ಡಿಯಲ್ಲಿ ಕಾಮೆಂಟರಿ ಕಾರ್ಯವನ್ನು ನಿರ್ವಹಿಸುತ್ತಾರೆ. ಪ್ರಸ್ತುತ 18 ವಯೋಮಿತಿಯೊಳಗಿನ ಭಾರತೀಯ ಬಾಲಕಿಯರ ತಂಡದ ಕೋಚ್‌ ಆಗಿದ್ದಾರೆ. ಪತಿ ಅಭಿಷೇಕ್‌ ಕೋಟ್ಯಾನ್‌ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದು, ದಂಪತಿಗೆ ಜತಸ್ಯ ಕೋಟ್ಯಾನ್‌ ಎಂಬ ಪುತ್ರನಿದ್ದಾನೆ.



































































































error: Content is protected !!
Scroll to Top