ಬೆಂಗಳೂರು : ಧರ್ಮಸ್ಥಳ ಪ್ರಕರಣಗಳ ತನಿಖೆ ಆದಷ್ಟು ಬೇಗ ಮುಕ್ತಾಯವಾಗಲಿದ್ದು, ಶೀಘ್ರದಲ್ಲೇ ವರದಿ ಕೊಡಲು ಎಸ್‌ಐಟಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಧರ್ಮಸ್ಥಳ ಪ್ರಕರಣ ಸಂಬಂಧಪಟ್ಟಂತೆ ಶೀಘ್ರದಲ್ಲಿ ಎಸ್‌ಐಟಿಯಿಂದ ತನಿಖಾ ವರದಿ ಪಡೆಯಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಇಡೀ ತನಿಖೆಯನ್ನು ಆದಷ್ಟು ಬೇಗ ಮುಗಿಸಬೇಕೆಂದು ಎಸ್‌ಐಟಿಗೆ ತಿಳಿಸಿದ್ದೇವೆ ಎಂದರು.
ಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ. ಇತ್ತೀಚಿನ ಸಾಕ್ಷ್ಯಗಳನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ. ಎಸ್‌ಐಟಿಯವರು ಅವರ ಕೆಲಸ ಮಾಡುತ್ತಿದ್ದಾರೆ. ಆದಷ್ಟು ಶೀಘ್ರದಲ್ಲಿ ಇಡೀ ತನಿಖೆಯನ್ನು ಮುಗಿಸಿ, ವರದಿ ಕೊಡಲು ಎಸ್‌ಐಟಿಗೆ ಹೇಳಿದ್ದೇವೆ. ಸುಪ್ರೀಂಕೋರ್ಟ್ ನಲ್ಲಿ ಚಿನ್ನಯ್ಯ ಪಿಐಎಲ್ ವಜಾ ಆದ ವಿಚಾರವನ್ನೂ ಎಸ್‌ಐಟಿಯವರು ವರದಿಯಲ್ಲಿ ಸೇರಿಸಿಯೇ ಕೊಡುತ್ತಾರೆ ಎಂದರು.

ತಿಮರೋಡಿ ಬಂಧನವಾಗದ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಂಧನಕ್ಕೆ ಕಾನೂನು ತೊಡಕುಗಳು ಏನೇನಿದೆಯೋ ಅದರ ಬಗ್ಗೆ ನಾನು ಇನ್ನೂ ಚರ್ಚೆ ಮಾಡಿಲ್ಲ. ಏನೇ ಮಾಡಿದರೂ ಕಾನೂನು ಚೌಕಟ್ಟಿನಲ್ಲೇ ಮಾಡಬೇಕು. ಗಡಿಪಾರು ವಿಚಾರವನ್ನು ಅವರು ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಅದೇನಾಗುತ್ತೆ ಅಂತ ನೋಡೋಣ. ಆದರೆ, ತಿಮರೋಡಿ ಬಂಧಿಸೋದಾಗಲೀ, ಕ್ರಮ ಕೈಗೊಳ್ಳೋದಾಗಲೀ ಕಾನೂನು ಪ್ರಕಾರವೇ ಮಾಡಲಾಗುತ್ತದೆ. ಇದರ ಬಗ್ಗೆ ಸರ್ಕಾರ ಎಸ್‌ಐಟಿಗೆ ಸೂಚನೆ ಕೊಡಕ್ಕಾಗಲ್ಲ. ಅಂತಿಮವಾಗಿ ಎಸ್‌ಐಟಿಯವರು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.









