‘ಮಾಸ್ಟರ್ ಆಫ್ ಸೆರೆಮೋನಿ’ ಎಂಬ ಚತುರ ಗಾರುಡಿಗ

1983ರಿಂದ ಆರಂಭಗೊಂಡು ಸಾವಿರಾರು ವೇದಿಕೆಯ ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದೇನೆ. ತುಂಬಾ ಸವಾಲಿನ ಹೈ ಪ್ರೋಟೋಕಾಲ್ ಕಾರ್ಯಕ್ರಮಗಳ ನಿರೂಪಣೆ ಕೂಡ ಮಾಡಿದ್ದೇನೆ. ಎಷ್ಟೋ ಬಾರಿ ಗೆದ್ದಿದ್ದೇನೆ. ಎಷ್ಟೋ ಬಾರಿ ಸೋತಿದ್ದೇನೆ.

ಎಷ್ಟೋ ಬಾರಿ ನನಗೆ ಈ ಕಾರ್ಯಕ್ರಮ ನಿರೂಪಣೆಯು ಒಂದು ‘ಥ್ಯಾಂಕಲೆಸ್ ಜಾಬ್’ ಅಂತ ಅನ್ನಿಸಿದ್ದು ಇದೆ. ಆದರೆ ಸಾವಿರಾರು ಜನರು ಸೇರಿದ ದೊಡ್ಡ ದೊಡ್ಡ ಸಭೆ ಮತ್ತು ಸಮ್ಮೇಳನಗಳ ವೇದಿಕೆಯ ನಿರೂಪಣೆಯು ಖಂಡಿತವಾಗಿ ಸುಲಭ ಅಲ್ಲ ಎಂದು ನನಗೆ ಅರಿವಾಗಿದೆ.

MC ಇಂದು ಒಂದು ಚಾರ್ಮಿಂಗ್ ಉದ್ಯೋಗ
ಇಂದು ‘ಮಾಸ್ಟರ್ ಆಫ್ ಸೆರೆಮೊನಿ’ ಒಂದು ಚಾರ್ಮಿಂಗ್ ಉದ್ಯೋಗವೇ ಆಗಿದೆ. ಇಂದು ವೃತ್ತಿಪರವಾದ ವೇದಿಕೆಯ ಕಾರ್ಯಕ್ರಮದ ನಿರೂಪಕರಾಗಿ ಮೆರೆಯಲು ಸಾವಿರಾರು ಯುವಕ, ಯುವತಿಯರು ಮುಂದೆ ಬರುತ್ತಿದ್ದಾರೆ ಮತ್ತು ಹಲವರು ಗೆಲ್ಲುತ್ತಿದ್ದಾರೆ ಕೂಡ!

Master of CEREMONIES – ಅವಕಾಶಗಳ ಆಗರ
ಕಲಿಯಲು ಆಸಕ್ತಿಯು ಇರುವವರಿಗೆ ಇಲ್ಲಿ ಬೇಕಾದಷ್ಟು ಅವಕಾಶಗಳು ಇವೆ. ಕಾರ್ಪೊರೇಟ್ ಸಂಸ್ಥೆಗಳು ಕೂಡ ಇಂದು ಉತ್ತಮ ನಿರೂಪಕರ ಹುಡುಕಾಟದಲ್ಲಿವೆ. ಅಂತಹ ಆಸಕ್ತರಿಗೆ ಸಭಾ ಕಾರ್ಯಕ್ರಮಗಳ ನಿರೂಪಣೆಯ ಬಗ್ಗೆ ಒಂದಿಷ್ಟು ಮಾರ್ಗದರ್ಶಿ ಸೂತ್ರಗಳನ್ನು ತಮ್ಮ ಮುಂದೆ ತೆರೆದು ಇಡುತ್ತಿದ್ದೇನೆ. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಟಿವಿ ಕಾರ್ಯಕ್ರಮಗಳ ನಿರೂಪಣೆಯ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

ಮಾರ್ಗದರ್ಶಿ ಸೂತ್ರಗಳು.
1) ಕಾರ್ಯಕ್ರಮ ನಿರೂಪಣೆ ಮಾಡಲು ಹೊರಟವರು ಅತ್ಯಂತ ಕಡಿಮೆ ಮಾತಾಡಬೇಕು. ಆದರೆ ಸ್ವಾರಸ್ಯಕರವಾಗಿ ಮಾತಾಡುವುದನ್ನು ಕಲಿಯಬೇಕು. ನಿರಂತರ ಅಧ್ಯಯನ ಮಾಡದೆ ಹೋದರೆ ನೀವು ಇಲ್ಲಿ ಗೆಲ್ಲಲು ಸಾಧ್ಯವಿಲ್ಲ.

2) ವೇದಿಕೆಯ ಕಾರ್ಯಕ್ರಮಗಳ ನಿರೂಪಣೆಯಲ್ಲಿ ನಿಮ್ಮ ಭಾಷೆಯು ತುಂಬಾ ಮುಖ್ಯ. ಕನ್ನಡ, ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳನ್ನು ಚೆನ್ನಾಗಿ ಕಲಿತರೆ ಕರ್ನಾಟಕವನ್ನು ಗೆಲ್ಲಬಹುದು. ಸ್ಪಷ್ಟವಾದ ಉಚ್ಛಾರ, ಮಾತಿನ ಓಘ, ಪದಗಳ ಸರಿಯಾದ ಬಳಕೆ, ಅಲ್ಪಪ್ರಾಣ, ಮಹಾಪ್ರಾಣಗಳ ಖಚಿತತೆ ಇಲ್ಲದೆ ನಿರೂಪಣೆ ಮಾಡಲು ಹೋಗಬೇಡಿ. ನಿರಂತರ ಪ್ರಯತ್ನದ ಮೂಲಕ ಯಾವ ಭಾಷೆ ಆದರೂ ಕಲಿಯಬಹುದು.

3) ಕಾರ್ಯಕ್ರಮದ ಸಂಘಟಕರ ಜೊತೆ ಸೇರಿಕೊಂಡು ಕಾರ್ಯಕ್ರಮದ ಅಜೆಂಡಾ ಮಾಡುವುದು ಬಹಳ ಮುಖ್ಯ. ಅದನ್ನು ಆದಷ್ಟು ಪೂರ್ವಭಾವಿಯಾಗಿ ಮಾಡಿದರೆ ಒಳ್ಳೆಯದು. ಅಜೆಂಡಾದಲ್ಲಿ ಯಾರು ಎಷ್ಟು ಹೊತ್ತು ಮಾತಾಡಬೇಕು? ಯಾರು ಮೊದಲು ಮಾತಾಡಬೇಕು? ಯಾರು ನಂತರ ಮಾತಾಡಬೇಕು? ಎಂಬ ಸ್ಪಷ್ಟತೆಯು ಇರಬೇಕು.

4) ಕಾರ್ಯಕ್ರಮಗಳ ನಿರೂಪಣೆ ಮಾಡುವವರಿಗೆ ಪ್ರೋಟೋಕಾಲ್ ಮತ್ತು ಸಭಾ ನಡವಳಿಕೆಗಳ ಸ್ಪಷ್ಟವಾದ ಜ್ಞಾನ ಇರಬೇಕು.

5) ಮೈಕ್ರೋಫೋನ್ ನಿಮ್ಮ ಪ್ರಮುಖವಾದ ಆಯುಧ. ಅದನ್ನು ಹೇಗೆ ಬಳಕೆ ಮಾಡಬೇಕು ಎಂದು ನೀವು ಖಂಡಿತ ಕಲಿಯಬೇಕು. ಮೈಕ್ ನಿಮ್ಮ ತುಟಿಗಳಿಗಿಂತ 2-3 ಇಂಚು ಕೆಳಗೆ ಇರಬೇಕು. ಹಾಗೆಯೇ ಮೈಕ್ ನಿಮ್ಮ ತುಟಿಗಳಿಗಿಂತ ಆರು ಇಂಚು ದೂರ ಇದ್ದರೆ ನಿಮ್ಮ ಧ್ವನಿಯು ಸ್ಪಷ್ಟವಾಗಿ ಕೇಳುತ್ತದೆ. ಸೂಕ್ತವಾದ ಮಾನಿಟರ್ ಬಳಕೆ ಮಾಡಲು ನೀವು ಕಲಿತರೆ ನೀವು ಅರ್ಧ ಗೆದ್ದಂತೆ. ನಿಮ್ಮ ಬೇಸ್ ವಾಯ್ಸ್ ನಿಮ್ಮನ್ನು ಗೆಲ್ಲಿಸುತ್ತದೆ. ಕಿರುಚುವ ಅಗತ್ಯ ಇಲ್ಲ.

6) ನಿಮ್ಮ ಡ್ರೆಸ್ ಕೋಡ್ ಆ ದಿನದ ಕಾರ್ಯಕ್ರಮದ ಔಚಿತ್ಯಕ್ಕೆ ಕನ್ನಡಿ ಹಿಡಿದಂತೆ ಇರಬೇಕು. ಸರಳವಾದ ಡ್ರೆಸ್ ಸಾಕು. ಕಣ್ಣು ಕುಕ್ಕುವ ಡ್ರೆಸ್ ಖಂಡಿತ ಬೇಡ. ಕಾರ್ಪೊರೇಟ್ ಸಂಸ್ಥೆಗಳ ಕಾರ್ಯಕ್ರಮಕ್ಕೆ ಬ್ಲೇಜರ್ ಇದ್ದರೆ ಬೆಸ್ಟ್.

7) ವೇದಿಕೆಯಲ್ಲಿ ಇಡೀ ಕಾರ್ಯಕ್ರಮದ ಉದ್ದಕ್ಕೂ ತುಳುಕುವ ನಿಮ್ಮ ನಗು ನಿಮ್ಮನ್ನು ಖಂಡಿತ ಗೆಲ್ಲಿಸುತ್ತದೆ. ಆ ನಗು ಬರುವುದು ಆತ್ಮವಿಶ್ವಾಸದಿಂದ. ಆತ್ಮವಿಶ್ವಾಸವು ಬರುವುದು ನಿರಂತರವಾದ ಅಭ್ಯಾಸದ ಮೂಲಕ.

8) ಶಬ್ದಗಳ ಆಡಂಬರಕ್ಕಿಂತ ಸರಳವಾದ ಹೃದಯದ ಭಾಷೆ ನಿಮ್ಮನ್ನು ಗೆಲ್ಲಿಸುತ್ತದೆ. ಹೆಚ್ಚು ಗ್ರಾಂಥಿಕವಾದ ಭಾಷೆ ಬೇಡ. ಎಲ್ಲರಿಗೂ ಅರ್ಥವಾಗುವ ಸರಳ ಭಾಷೆ ಸಾಕು.

9) ಸಂಘಟಕರ ಜೊತೆ ನೀವು ಪೂರ್ವಭಾವಿ ಆಗಿ ಮಾಡುವ ಮೀಟಿಂಗಗಳು ಸಭಾ ಕಾರ್ಯಕ್ರಮಗಳ ಚಂದ ವ್ಯವಸ್ಥೆಗೆ ಹೆಚ್ಚು ನೆರವಾಗುತ್ತವೆ.

10) ನಿಮ್ಮ ಹಾಸ್ಯಪ್ರಜ್ಞೆಯು ನಿಮ್ಮನ್ನು ಸದಾ ಜೀವಂತವಾಗಿ ಇಡುತ್ತದೆ. ಸರಸವಾದ ನಿರೂಪಣೆ ಇಂದಿನ ಅಗತ್ಯ. ಆದರೆ ಯಾರನ್ನೋ ನೋಯಿಸುವ ಜೋಕ್ಸ್, ಪದ ಪ್ರಯೋಗಗಳು ಬೇಡ.

11) ವೇದಿಕೆಯ ಮೇಲಿನ ಭೌತಿಕ ಸಿದ್ಧತೆಗಳು ಸಾಕಷ್ಟು ಮೊದಲು ಮುಗಿದರೆ ಒಳ್ಳೆಯದು. ಉದಾಹರಣೆ ಸೀಟಿಂಗ್, ಬ್ಯಾನರ್, ಸ್ಮರಣಿಕೆ, ಕುಡಿಯುವ ನೀರು, ಬ್ಯಾಜ್, ನೇಮ್ ಬೋರ್ಡ್, ಪುಷ್ಪ ಗುಚ್ಛ, ಕಾಲುದೀಪ, ಕ್ಯಾಂಡಲ್ ಇತ್ಯಾದಿ! ಯಾವ ವಸ್ತು ಎಲ್ಲಿದೆ ಎನ್ನುವುದು ಕಾರ್ಯಕ್ರಮದ ನಿರೂಪಕರಿಗೆ ಸರಿಯಾಗಿ ಗೊತ್ತಿರಬೇಕು.

12) ವೇದಿಕೆಯ ಗಣ್ಯರನ್ನು ಸಂಬೋಧನೆ ಮಾಡುವಾಗ ಪ್ರೋಟೋಕಾಲ್ ಸರಿಯಾಗಿ ಪಾಲಿಸಿ. ಅವರ ಪ್ರೊಫೈಲ್ ಮೊದಲು ಹೇಳಿ ಹೆಸರು ಆನಂತರದಲ್ಲಿ ಹೇಳಬೇಕು. ಉದಾಹರಣೆಗೆ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರೇ…. ಇದು ಸರಿ. ಯಾರ ಹೆಸರನ್ನೂ ತಪ್ಪಾಗಿ ಹೇಳಬೇಡಿ. ತಿರುಚಬೇಡಿ. ಉದ್ದುದ್ದ ಪರಿಚಯ ಮಾಡಲು ಹೊರಡಬೇಡಿ. ಅವರೇ, ಅವರೇ ಜಾಸ್ತಿ ಆದಷ್ಟು ಪ್ರೇಕ್ಷಕರು ಕಿರಿಕಿರಿ ಪಡುತ್ತಾರೆ.

13) ಸಮಯದ ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ತುಂಬಾ ಅಗತ್ಯ. ಸಾಧ್ಯವಾದಷ್ಟು ಸರಿಯಾದ ಹೊತ್ತಿಗೆ ಕಾರ್ಯಕ್ರಮ ಆರಂಭ ಮಾಡಿ, ಸರಿಯಾದ ಹೊತ್ತಿಗೆ ಮುಗಿಸಲು ಇಚ್ಛಾಶಕ್ತಿ ಬೇಕು. ಒಂದು ಕಾರ್ಯಕ್ರಮದ ಗರಿಷ್ಠ ಅವಧಿ 90 ನಿಮಿಷ ಮೀರದ ಹಾಗೆ ನೋಡಿಕೊಳ್ಳಿ.

14) ಅತಿಥಿಗಳು ಮಾತಾಡುವ ಮೊದಲೇ ಅವರ ಸಮಯವನ್ನು ಅವರಿಗೆ ಸೂಚ್ಯವಾಗಿ ಹೇಳಿ. ಮಾತಾಡಲು ನಿಂತ ನಂತರ ಮಧ್ಯೆ ಬಾಯಿ ಹಾಕಬೇಡಿ. ಅನಿವಾರ್ಯ ಆದರೆ ಚೀಟಿ ಕೊಡಬಹುದು.

15) ವೇದಿಕೆಯಲ್ಲಿ ಇರುವ ಯಾವುದೇ ಅತಿಥಿಗಳನ್ನು ಇಂಪ್ರೆಸ್ ಮಾಡುವುದು ನಿಮ್ಮ ಕೆಲಸ ಅಲ್ಲ. ಅದನ್ನು ದಯವಿಟ್ಟು ಮಾಡಬೇಡಿ.

16) ಒಬ್ಬ ಭಾಷಣಕಾರರು ಮಾತನಾಡಿದ ನಂತರ ಅವರ ಮಾತುಗಳ ಬಗ್ಗೆ ಪುನರಪಿ ವಿಮರ್ಶೆಯನ್ನು ಮಾಡಲು ಹೋಗಬೇಡಿ. ಅದು ನಿಮ್ಮ ಕೆಲಸ ಅಲ್ಲ. ಅವರಿಗೆ ಧನ್ಯವಾದ ಕೂಡ ನೀವು ಕೊಡುವ ಅಗತ್ಯ ಇಲ್ಲ.

17) ಸಭೆಗೆ ತಡವಾಗಿ ಬಂದು, ಅವಸರವಸರದಲ್ಲಿ ಭಾಷಣ ಮಾಡಿ ಹೋಗುವ ವಿಐಪಿ ಅತಿಥಿಗಳು ಇರುತ್ತಾರೆ. ಆಗ ಸ್ವಲ್ಪ ತಾಳ್ಮೆಯಿಂದ ವ್ಯವಹರಿಸಿ. ಯಾವುದೇ ಅತಿಥಿಗಳಿಗೆ ಮಾತು ನಿರಾಕರಣೆ ಮಾಡಬೇಡಿ.

18) ಸಭೆಯ ಉದ್ದಕ್ಕೂ ಪ್ರೇಕ್ಷಕರ ಮೂಡ್ ಮತ್ತು ಸಭೆಯ ಗೌರವವನ್ನು ಕಾಪಾಡುವುದು ನಿಮ್ಮ ಕರ್ತವ್ಯ. ಯಾವುದೇ ಹೊತ್ತಿನಲ್ಲಿ ಸಭೆ ಹಳಿ ತಪ್ಪುತ್ತಾ ಇದೆ ಅನ್ನುವಾಗ ಅದನ್ನು ಸರಿ ದಾರಿಗೆ ತರಲು ಚಾಕಚಕ್ಯತೆ ನಿಮಗೆ ಬೇಕು. ಅದು ಪ್ರಾಕ್ಟೀಸ್ ಮೂಲಕ ಬರುತ್ತದೆ.

19) ವೇದಿಕೆಯ ಕೆಳಗಿರುವ ಗಣ್ಯ ವ್ಯಕ್ತಿಗಳನ್ನು ಗುರುತಿಸುವ ಕೆಲಸ ಅತ್ಯಂತ ಅಪಾಯಕಾರಿ. ಯಾರ ಹೆಸರು ಬಿಟ್ಟು ಹೋದರೂ ಅಪಾಯ ಗ್ಯಾರಂಟೀ. ಆ ಕೆಲಸವನ್ನು ಸ್ವಾಗತ ಅಥವಾ ಧನ್ಯವಾದದಲ್ಲಿ ಮುಗಿಸಬಹುದು.

20) ಸ್ಕ್ರಿಪ್ಟ್ ಹಿಡಿದುಕೊಂಡು ನಿರೂಪಣೆ ಮಾಡುವುದು ಬೇಡ. ಆಗ ನಿಮ್ಮ ನಿರೂಪಣೆಯು ಪೂರ್ತಿ ಯಾಂತ್ರಿಕ ಆಗಿ ಬಿಡುತ್ತದೆ. ಆದರೆ ಹೈ ಪ್ರೊಫೈಲ್ ಕಾರ್ಯಕ್ರಮಗಳಲ್ಲಿ (ಉದಾ – ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು ಇತ್ಯಾದಿ VVIP ಗಳು ಇರುವ ಕಾರ್ಯಕ್ರಮ) ನಿಮಗೆ ಮೊದಲೇ ಸ್ಕ್ರಿಪ್ಟ್ ಕೊಟ್ಟಿರುತ್ತಾರೆ. ಒಂದಕ್ಷರ ಆಚೆ ಈಚೆ ಮಾಡದೆ ಆ ಸ್ಕ್ರಿಪ್ಟ್ ಒಪ್ಪಿಸುವುದು ಮಾತ್ರ ನಿಮ್ಮ ಕರ್ತವ್ಯ ಆಗಿರುತ್ತದೆ.

21) ಎಷ್ಟೇ ಪ್ಲಾನಿಂಗ್ ಮಾಡಿದರೂ ಕೆಲವೊಮ್ಮೆ ಹೆಚ್ಚು ಕಡಿಮೆ ಆಗುವ ಸಾಧ್ಯತೆ ಇದೆ. ಆಗೆಲ್ಲ ನಿಮ್ಮ ತಾಳ್ಮೆ ಮತ್ತು ಪ್ರಸಂಗಾವಧಾನತೆಗಳು ನಿಮ್ಮನ್ನು ಕಾಪಾಡುತ್ತವೆ.

22) ಸಂದೇಶ ಕೊಡುವುದು, ಅಭಿಪ್ರಾಯ ಮಂಡಿಸುವುದು ನಿಮ್ಮ ಕೆಲಸ ಅಲ್ಲ. ಅದಕ್ಕೆಂದೇ ಸಭಾಧ್ಯಕ್ಷರು ಇರುತ್ತಾರೆ. ಅಧ್ಯಕ್ಷರ ಭಾಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಅದು ಕಾರ್ಯಕ್ರಮದ ಕೊನೆಯಲ್ಲಿ ಇರುತ್ತದೆ. ಸಭಾಧ್ಯಕ್ಷರ ಭಾಷಣದ ನಂತರ ಧನ್ಯವಾದ ಮಾತ್ರ ಇರುತ್ತದೆ. ಬೇರೆ ಯಾರೂ ಮಾತಾಡುವ ಅವಕಾಶ ಇರುವುದಿಲ್ಲ.

23) ವೇದಿಕೆಯಲ್ಲಿ ಇರುವ ಎಲ್ಲರೂ ಮಾತಾಡಬೇಕು ಎಂಬ ನಿಯಮ ಇಲ್ಲ. ಅವರ ಪರವಾಗಿ ಕೆಲವರು ಮಾತಾಡಿದರೆ ಸಾಕು. ಆದರೆ ಇದು ತುಂಬಾ ಸೆನ್ಸಿಟಿವ್ ಆದ ವಿಷಯ. ಸಂಘಟಕರ ಜೊತೆ ಮುಂಚಿತವಾಗಿ ಮಾತಾಡಿ ಅಂತಿಮ ಮಾಡಿ. ನೀವೇ ತೀರ್ಮಾನ ಮಾಡುವುದು ತುಂಬಾ ಅಪಾಯಕಾರಿ.

24) ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಇಲ್ಲದವರು ಕೂಡ ವೇದಿಕೆಗೆ ಬೇಕಾಗಬಹುದು. ಅದು ಸಭೆಯ ಸಂಘಟಕರ ಅನಿವಾರ್ಯತೆ. ಅದನ್ನು ನಿರಾಕರಣೆ ಮಾಡಬೇಡಿ.

25) ನಿರೂಪಣೆಯಲ್ಲಿ ತುಂಬಾ ಮುಖ್ಯವಾದ ಭಾಗ ಅಂದರೆ ಸಭಾಸದರಿಗೆ ಸಭೆಯ ಉದ್ದೇಶವನ್ನು ತಿಳಿಸುವುದು. ಸ್ವಾಗತ ಭಾಷಣವು ಮುಗಿದ ಕೂಡಲೇ ಒಂದೆರಡು ನಿಮಿಷಗಳಲ್ಲಿ ನೀವು ಆ ಸಭೆಯ ಉದ್ದೇಶವನ್ನು ಜನರಿಗೆ ಹೇಳಬೇಕು. ಪ್ರತ್ಯೇಕವಾದ ಪ್ರಾಸ್ತಾವಿಕ ಭಾಷಣ ಖಂಡಿತ ಅಗತ್ಯವಿಲ್ಲ.

26) ವೇದಿಕೆಯಲ್ಲಿ ಕೆಲವೇ ಕೆಲವು ಸ್ವಯಂಸೇವಕರು ಸಾಕು. ಹೆಚ್ಚು ಜನ ಆದ ಕೂಡಲೇ ಗೊಂದಲವು ಸೃಷ್ಟಿ ಆಗುತ್ತದೆ. ಯಾರೂ ಕೂಡ ಅಧ್ಯಕ್ಷರ ಮುಂಭಾಗದಲ್ಲಿ ದಾಟಿ ಹೋಗದ ಹಾಗೆ ನೋಡಿಕೊಳ್ಳಿ.

27) ಎಲ್ಲ ಅತಿಥಿಗಳ ಭಾಷಣವೂ ಮುಖ್ಯವೇ ಆಗಿದೆ. ಈಗ ಕಾರ್ಯಕ್ರಮದ ಮುಖ್ಯವಾದ ಭಾಷಣ, ದಯವಿಟ್ಟು ಮೊಬೈಲ್ ಸೈಲೆಂಟ್ ಮಾಡಿ, ಮಕ್ಕಳನ್ನು ನಿಮ್ಮ ಹತ್ತಿರ ಕೂರಿಸಿ….. ಮೊದಲಾದ ಆದೇಶಗಳನ್ನು ನೀವು ಕೊಡಲು ಹೋಗಬೇಡಿ. ಒಬ್ಬ ಪ್ರೇಕ್ಷಕ ಪ್ರಭುವಿಗೆ ನೋವಾದರೂ ಅದು ನಿಮ್ಮ ಸೋಲು.

28) ಯಾವುದೇ ಅತಿಥಿಗಳನ್ನು ಸಲುಗೆಗೆ ಬಳಸಬೇಡಿ. ಇಂದಿನ ಮುಖ್ಯ ಅತಿಥಿಗಳು ನನ್ನ ಕ್ಲಾಸ್ ಮೇಟ್, ಬೆಂಚ್ ಮೇಟ್, ರೂಮ್ ಮೇಟ್, ನನ್ನ ಮಾವನ ಮಗ….. ಎಂದೆಲ್ಲ ಹೇಳಬೇಡಿ.

29) ಅತಿಥಿಗಳಲ್ಲಿ ಒಟ್ಟು ಮೂರು ವಿಧವಾದ ಅತಿಥಿಗಳು ಇರುತ್ತಾರೆ. ಮುಖ್ಯ ಅತಿಥಿ (ಚೀಫ್ ಗೆಸ್ಟ್), ಗೌರವಾನ್ವಿತ ಅತಿಥಿ (ಆನರೆಬಲ್ ಗೆಸ್ಟ್) ಮತ್ತು ಗೌರವ ಉಪಸ್ಥಿತಿ (ಆನರೇಬಲ್ ಪ್ರೆಸೆನ್ಸ್)
ಅದರಲ್ಲಿ ಹೈಯರ್ ಪ್ರೋಟೋಕಾಲ್ ಗೆಸ್ಟ್ ಅಂದರೆ ಅದು ಮುಖ್ಯ ಅತಿಥಿಗಳಾಗಿ (Chief Guest) ಬರುವವರು. ಅವರು ಸಭಾಧ್ಯಕ್ಷರ ಬಲ ಭಾಗದಲ್ಲಿ ಕುಳಿತುಕೊಳ್ಳುತ್ತಾರೆ.

30) ಕಾರ್ಯಕ್ರಮದಲ್ಲಿ ಸನ್ಮಾನಗಳು ಇದ್ದರೆ ಅದಕ್ಕೆ ಪ್ರತ್ಯೇಕವಾದ ವೇದಿಕೆಯು ಬೇಡ. ಐದಾರು ಸನ್ಮಾನಗಳು ಇದ್ದರೆ ಒಟ್ಟಿಗೆ ಮಾಡಿ ಮುಗಿಸುವುದು ಒಳ್ಳೇದು. ಆದಷ್ಟೂ ಅಧ್ಯಕ್ಷರ ಆಸನದ ಮುಂಭಾಗದಲ್ಲಿ ಸನ್ಮಾನಿತರ ಕುರ್ಚಿ ಬಾರದ ಹಾಗೆ ನೋಡಿಕೊಳ್ಳಿ. ಸನ್ಮಾನಿತರ ಪರಿಚಯವನ್ನು ಬಹಳ ಚುಟುಕಾಗಿ ಮಾಡಿ. ಪರಿಚಯ ಮಾಡುವಾಗ ಇಸವಿಗಳನ್ನು ಮತ್ತು ಅವರ ಖಾಸಗಿ ಸಂಗತಿಗಳನ್ನು ಅವಾಯ್ಡ್ ಮಾಡಿದರೆ ಒಳ್ಳೇದು.

31) ಸಭಾ ಕಾರ್ಯಕ್ರಮದಲ್ಲಿ ಆರಂಭದ ಪ್ರಾರ್ಥನೆಯು ಬಹಳ ಮುಖ್ಯ. ಅದು ಸಾಂದರ್ಭಿಕ ಆಗಿದ್ದಷ್ಟೂ ಒಳ್ಳೆಯದು. ಪ್ರಾರ್ಥನೆಗೆ ಎದ್ದು ನಿಲ್ಲಬೇಕು ಎಂಬ ನಿಯಮ ಇಲ್ಲ. ಆದರೆ ಸರಕಾರಿ ಕಾರ್ಯಕ್ರಮಗಳು ನಾಡಗೀತೆ ಅಥವಾ ರಾಷ್ಟ್ರಗೀತೆಯಿಂದ ಆರಂಭ ಆಗಬೇಕು. ಆಗ ಪ್ರೇಕ್ಷಕರು ಖಂಡಿತ ನಿಲ್ಲಬೇಕು. ಆಗ ಬೇರೆ ಪ್ರಾರ್ಥನೆ ಬೇಕಾಗಿಲ್ಲ.

32) ಕಾರ್ಯಕ್ರಮದ ನಿರೂಪಣೆ ಅಂದರೆ ಚಂದವಾದ ಮಲ್ಲಿಗೆಯ ಮೊಗ್ಗುಗಳನ್ನು ಹೆಣೆದಂತೆ ಇರಬೇಕು. ನೀವು ಮೊಗ್ಗುಗಳನ್ನು ನವಿರಾಗಿ ಹೆಣೆಯುವ ನೂಲಾಗಬೇಕೇ ಹೊರತು ನೀವೇ ಮಾಲೆ ಆಗಲು ಹೋಗಬಾರದು. ಇದನ್ನು ಅರ್ಥ ಮಾಡಿಕೊಂಡರೆ ನೀವು ಖಂಡಿತ ಗೆಲ್ಲುತ್ತೀರಿ ಮತ್ತು ಸಭೆಯನ್ನೂ ಗೆಲ್ಲಿಸುತ್ತೀರಿ.

ಇದು ಕಲಿತು ಮುಗಿಯುವ ಕ್ಷೇತ್ರ ಅಲ್ಲ ಅನ್ನುವುದು ಇಂದಿನ ಭರತ ವಾಕ್ಯ.
ನಿಮಗೆ ಒಳ್ಳೆದಾಗಲಿ.



































































































error: Content is protected !!
Scroll to Top