ಕಾರ್ಕಳ : ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಂದರ ಅವರು ಜು. 26ರಂದು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ದೊಡ್ಡ ಕಲ್ಲುಗಳನ್ನು ಲೋಡ್ ಮಾಡಿಕೊಂಡು ಬರುತ್ತಿದ್ದ KA-20 AA-3566 ಟಿಪ್ಪರ್‌ನನ್ನು ನಿಲ್ಲಿಸಿ ಚಾಲಕನಲ್ಲಿ ಕಲ್ಲು ಸಾಗಾಟ ಮಾಡಲು ಬೇಕಾದ ಪರವಾನಿಗೆ ಬಗ್ಗೆ ವಿಚಾರಿಸಿದಾಗ ಅದು ದಿನೇಶ್ ಅವರ ಬಳಿಯಿದೆ, ಕಲ್ಲುಗಳನ್ನು ಉಲ್ಲಾಳದ ಕಡಲ್ಕೊರೆತ ಸ್ಥಳಕ್ಕೆ ಹಾಕಲು ಹೋಗುತ್ತಿರುವುದಾಗಿ ತಿಳಿಸಿದ್ದಾನೆ. ಆತನನ್ನು ಕರೆದುಕೊಂಡು ಕಲ್ಲು ಲೋಡ್ ಮಾಡಿದ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ನಂದಳಿಕೆ ಗ್ರಾಮದ ಬಾರೆಜಡ್ಡು ಎಂಬಲ್ಲಿ ಹಿಟಾಚಿ ಸಹಾಯದಿಂದ ಅದರ ನಿರ್ವಾಹಕನು KA-20 AA-2787 ಟಿಪ್ಪರ್‌ಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಲೋಡ್ ಮಾಡಲು ನಿಲ್ಲಿಸಿದ್ದು, ಅದರ ಮುಂದೆ KA-20 AA-2786 ಟಿಪ್ಪರ್ ಲಾರಿಯಲ್ಲಿ ಕಲ್ಲುಗಳನ್ನು ಲೋಡ್ ಮಾಡಿಕೊಂಡು ಹೊರಡಲು ಸಜ್ಜಾಗಿತ್ತು. ಆಪಾದಿತರಾದ ದಿನೇಶ್, ಗಿರೀಶ ಮತ್ತು ಕಿಶೋರ್ ಗುರ್ಮೆ ಎಂಬವರು ಯಾವುದೇ ಪರವಾನಿಗೆ ಹೊಂದದೆ ಸರಕಾರಿ ಸ್ಥಳದಿಂದ ಶಿಲೆಕಲ್ಲುಗಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಟಿಪ್ಪರ್ ಮತ್ತು ಅದರಲ್ಲಿದ್ದ 7500 ರೂ. ಮೌಲ್ಯದ 2 ಲೋಡ್ ದೊಡ್ಡ ಶಿಲೆ ಕಲ್ಲುಗಳನ್ನು ಮತ್ತು ಹಿಟಾಚಿ ವಾಹನವನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.
ನಂದಳಿಕೆಯಲ್ಲಿ ಅಕ್ರಮವಾಗಿ ಗಣಿಗಾರಿಕೆ – ದೂರು ದಾಖಲು


















