ಆದಿವಾಸಿಗಳ ಆರಾಧ್ಯ ದೈವ ಬಿರ್ಸಾ ಮುಂಡಾ

ಬ್ರಿಟಿಷ್ ಸಾಮ್ರಾಜ್ಯವು ಭಾರತವನ್ನು ಆಳುತ್ತಿದ್ದಾಗ ನಮ್ಮ ಭಾರತದಲ್ಲಿ ನಡೆದಿದ್ದ ಹಲವು ರಕ್ತಕ್ರಾಂತಿಗಳ ಬಗ್ಗೆ ನಮ್ಮ ಯುವ ಜನತೆಗೆ ಅರಿವು ಇಲ್ಲದಿರುವುದು ನಿಜವಾಗಿಯೂ ದುರಂತ! ಅಂತಹ ಒಂದು ರಕ್ತಕ್ರಾಂತಿಗೆ ಕಾರಣ ಆದವರು ಆದಿವಾಸಿಗಳ ಸಂಘಟನೆ ಮಾಡಿ ಬ್ರಿಟಿಷ್ ಸರಕಾರವನ್ನು ವಸ್ತುಶಃ ನಡುಗಿಸಿದವರು ಬಿರ್ಸಾ ಮುಂಡಾ!

ಜಾರ್ಖಂಡ್ ರಾಜ್ಯವು ಅವರನ್ನು ರಾಷ್ಟ್ರೀಯ ಐಕಾನ್ ಆಗಿ ಸ್ವೀಕರಿಸಿದೆ ಮತ್ತು ಭಾರತದ ಪಾರ್ಲಿಮೆಂಟ್ ಭವನದಲ್ಲಿ ಅವರ ಭಾವಚಿತ್ರವು ಇದೆ. ಆ ಗೌರವವನ್ನು ಪಡೆದ ಏಕೈಕ ಆದಿವಾಸಿ ನಾಯಕ ಎಂದರೆ ಅದು ಬಿರ್ಸಾ ಮುಂಡಾ!

ಮುಂಡಾ ಗುಡ್ಡಗಾಡು ಜನರ ಸ್ವಾಭಿಮಾನಿ ಬದುಕು
ಬಿರ್ಸಾ ಮುಂಡಾ ಅವರು ಹುಟ್ಟಿದ್ದು ರಾಂಚಿ ಸಮೀಪದ ‘ಉಳಿಹಾಟು’ಎಂಬ ಕುಗ್ರಾಮದಲ್ಲಿ. ಅವರದ್ದು ಮುಂಡಾ ಎಂಬ ಗುಡ್ಡಗಾಡು ಜನಾಂಗವಾಗಿತ್ತು. ಗುರುವಾರ ಹುಟ್ಟಿದ ಕಾರಣ ಮುಂಡಾ ಸಂಸ್ಕೃತಿಯ ಪ್ರಕಾರ ಅವರಿಗೆ ಬಿರ್ಸಾ ಎಂಬ ಹೆಸರು ಬಂತು. ಕಾಡಿನಲ್ಲಿ ಗುಡಿಸಲು ಕಟ್ಟಿ, ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಪೇಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದು ಅವರ ಜನಾಂಗದ ಪ್ರಮುಖ ಉದ್ಯೋಗವಾಗಿತ್ತು. ಕಾಡುಗಳೇ ಅವರ ಸರ್ವಸ್ವ ಆಗಿತ್ತು. ಯಾರೂ ಶಾಲೆಗೆ ಹೋದವರಲ್ಲ.

ಬಲವಂತದ ಮತಾಂತರಕ್ಕೆ ಬಲಿಯಾದ ಬಿರ್ಸಾ ಕುಟುಂಬ
ಅಂತಹ ಶ್ರೀಮಂತವಾದ ಕಾಡುಗಳ ಮೇಲೆ ಬ್ರಿಟಿಷರ ಕಣ್ಣು ಬೀಳಲು ಹೆಚ್ಚು ದಿನಗಳು ಬೇಕಾಗಲಿಲ್ಲ. ಆದಿವಾಸಿಗಳು ಕಾಡಿನ ಉತ್ಪನ್ನಗಳನ್ನು ಸಂಗ್ರಹ ಮಾಡುವ ಹಾಗಿಲ್ಲ ಎಂಬ ಕಾನೂನನ್ನು ಆಂಗ್ಲ ಸರಕಾರ ಮಾಡಿಬಿಟ್ಟಿತು! ಹಾಗೆಯೇ ಅವಿದ್ಯಾವಂತರಾದ ಆದಿವಾಸಿಗಳನ್ನು ಬಲವಂತವಾಗಿ ಮತಾಂತರ ಮಾಡಲು ಆಂಗ್ಲರು ಮುಂದಾದರು. ಆಮಿಷಕ್ಕೆ ಒಳಗಾದ ಬಿರ್ಸಾ ಅವರ ಅಪ್ಪ ತನ್ನ ಇಡೀ ಕುಟುಂಬವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿಬಿಟ್ಟರು! ಆಗ ಬಿರ್ಸಾ ಅವರಿಗೆ ಕೇವಲ 13 ವರ್ಷ.

ಬಿರ್ಸಾ ಮುಂಡಾ ಅವರ ಹೆಸರನ್ನು ‘ದೌದ ಪೂರ್ತಿ’ ಎಂದು ಮರುನಾಮಕರಣವನ್ನು ಮಾಡಲಾಯಿತು. ದಟ್ಟವಾದ ಬೋಹೊಂದಾ ಎಂಬ ಕಾಡಿನಲ್ಲಿ ಕುರಿಗಳನ್ನು ಕಾಯುತ್ತ, ಕೊಳಲು ಬಾರಿಸುತ್ತ ಬಿರ್ಸಾ ತನ್ನ ಬಾಲ್ಯದ ದಿನಗಳನ್ನು ಕಳೆದರು. ಕಲಿಕೆಯಲ್ಲಿ ಬುದ್ಧಿವಂತ ಆದ ಕಾರಣ ಕಾಡಿಗೆ ಸಮೀಪ ಇದ್ದ ಜರ್ಮನ್ ಮಿಷನ್ ಶಾಲೆಗೆ ಹೋಗಿ ಒಂದಿಷ್ಟು ಶಿಕ್ಷಣ ಪಡೆದಿದ್ದರು.

ಆದಿವಾಸಿ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸುವ ಪ್ರಯತ್ನ
ಬಿರ್ಸಾ ಮುಂಡಾ ಬೆಳೆಯುತ್ತ ಹೋದಂತೆ ಅವರಿಗೆ ಬ್ರಿಟಿಷ್ ಸರಕಾರದ ದೌರ್ಜನ್ಯವು ಅರ್ಥವಾಗತೊಡಗಿತು. ಅವರ ರಕ್ತವು ಬಿಸಿ ಆಗತೊಡಗಿತು. ತಮ್ಮ ನೆಲದ ಅಸ್ಮಿತೆಯಾದ ‘ಮುಂಡಾ ಸಂಸ್ಕೃತಿ’ಯನ್ನು ಉಳಿಸಬೇಕು ಎಂಬ ಸಂಕಲ್ಪ ಗಟ್ಟಿಯಾಯಿತು. ಅದರ ಪರಿಣಾಮವಾಗಿ ತಮ್ಮ ಇಡೀ ಕುಟುಂಬವನ್ನು ಅವರು ಮರಳಿ ಮುಂಡಾ ಸಂಸ್ಕೃತಿಗೆ ಪರಿವರ್ತನೆ ಮಾಡಿದರು. ಆದಿವಾಸಿಗಳನ್ನು ಸಂಘಟನೆ ಮಾಡುವ ಕೆಲಸಕ್ಕೆ ಇಳಿದರು. ಆದರೆ ವಿದ್ಯೆ ಇಲ್ಲದ ಆದಿವಾಸಿಗಳಿಗೆ ಅವರ ಮಾತುಗಳನ್ನು ಕೇಳುವ ತಾಳ್ಮೆಯೇ ಇರಲಿಲ್ಲ. ಅದಕ್ಕೆ ಬೇರೆ ದಾರಿ ಇಲ್ಲದೆ ಬಿರ್ಸಾ ಮುಂಡಾ ತಮ್ಮನ್ನು ಪ್ರವಾದಿ (Prophet) ಎಂದು ಕರೆದುಕೊಂಡರು. ‘ಪ್ರಕೃತಿಯೇ ನಮ್ಮ ದೇವರು. ಸಮಾನ ಸಮಾಜವೇ ನಮ್ಮ ನೀತಿ’ ಎಂದು ಬೋಧನೆಯನ್ನು ಶುರು ಮಾಡಿದರು. ಆದಿವಾಸಿಗಳು ಈಗ ಅವರ ಮಾತುಗಳನ್ನು ಕೇಳಲು ಆರಂಭಿಸಿದರು.

ಸರಕಾರದ ವಿರುದ್ಧ ತೀವ್ರವಾದ ಹೋರಾಟ
1893-94ರ ಹೊತ್ತಿಗೆ ಬ್ರಿಟಿಷ್ ಸರಕಾರವು ಇನ್ನೊಂದು ಹೊಸ ಆದೇಶ ಹೊರಡಿಸಿತು. ‘ಎಲ್ಲ ಅರಣ್ಯಗಳು ಸಂರಕ್ಷಿತ ಅರಣ್ಯಗಳು, ಆದಿವಾಸಿಗಳಿಗೆ ಕಾಡಿನಲ್ಲಿ ಯಾವುದೇ ಹಕ್ಕಿಲ್ಲ’ ಎನ್ನುವುದು ಆ ಆದೇಶ! ಇದು ಆದಿವಾಸಿಗಳನ್ನು ಕೆರಳಿಸಿತು. 1894ರ ಅಕ್ಟೋಬರ್ 1ರಂದು ಬಿರ್ಸಾ ಮುಂಡಾ ಅವರ ನೇತೃತ್ವದಲ್ಲಿ ಛೋಟಾ ನಾಗ್ಪುರ ಎಂಬಲ್ಲಿ ಒಂದು ಬೃಹತ್ ಮೆರವಣಿಗೆಯು ಬೀದಿಗೆ ಇಳಿದು ಭಾರೀ ಸದ್ದು ಮಾಡಿತು. “ಮಹಾರಾಣಿಯ ಅಧಿಕಾರವನ್ನು ನಿಲ್ಲಿಸಬೇಕು. ಮುಂಡಾ ಸಂಸ್ಕೃತಿಯನ್ನು ಉಳಿಸಬೇಕು” ಎನ್ನುವುದು ಅವರ ಅಂದಿನ ಘೋಷಣೆ ಆಗಿತ್ತು. ಬ್ರಿಟಿಷ್ ಸರಕಾರವು ಬಿರ್ಸಾ ಮುಂಡಾ ಅವರನ್ನು ತಕ್ಷಣದಲ್ಲಿ ಬಂಧಿಸಿ ಹಾಜಿರಾಬಾದದ ಸೆರೆಮನೆಗೆ ಕಳುಹಿಸಿತು. ಎರಡು ವರ್ಷ ಜೈಲು ಮುಗಿದು ಹೊರಗೆ ಬಂದ ನಂತರ ಬಿರ್ಸಾ ಇನ್ನಷ್ಟು ತೀವ್ರವಾದ ಹೋರಾಟಕ್ಕೆ ಕಿಡಿ ಹಚ್ಚಿದರು.

ರಕ್ತ ಕ್ರಾಂತಿಗೆ ಶ್ರೀಕಾರ ಹಾಕಿದರು ಮುಂಡಾ
ಈ ಬಾರಿ ಬಿರ್ಸಾ ಮುಂಡಾ ಭೂಗತರಾದರು ಮತ್ತು ಹಿಂಸಾತ್ಮಕವಾದ ಹೋರಾಟಕ್ಕೆ ಇಳಿದು ಬಿಟ್ಟರು! ನಾಲ್ಕು ಜಿಲ್ಲೆಗಳ ಸುಮಾರು 7000 ಆದಿವಾಸಿಗಳನ್ನು ಒಟ್ಟು ಸೇರಿಸಿ ಅವರನ್ನು ಗೆರಿಲ್ಲಾ ಯುದ್ಧಕ್ಕೆ ಸಿದ್ಧಪಡಿಸಿದರು. 550 ಚದರ ಮೈಲು ವಿಸ್ತಾರದ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಅವರ ಹೋರಾಟದ ರೂಪುರೇಷೆಯು ಸಿದ್ಧವಾಯಿತು. ಬ್ರಿಟಿಷರ ಕಟ್ಟಡಗಳ ಮೇಲೆ, ಸರಕಾರದ ಭ್ರಷ್ಟರಾದ ಅಧಿಕಾರಿಗಳ ಮೇಲೆ, ಬ್ರಿಟಿಷರನ್ನು ಬೆಂಬಲಿಸುತ್ತಿದ್ದ ಶ್ರೀಮಂತ ನಾಗರಿಕರ ಮೇಲೆ……… ಹೀಗೆ ಸಾಲು ಸಾಲು ಗೆರಿಲ್ಲಾ ಮಾದರಿಯ ಸಶಸ್ತ್ರ ಧಾಳಿಗಳು ನಡೆದವು. ಪೋಲಿಸ್ ಠಾಣೆಯ ಮೇಲೆ ರಾತ್ರಿ ದಾಳಿ ನಡೆದು ಎಂಟು ಪೊಲೀಸರು ಹತರಾದರು. 32 ಜನರು ಪರಾರಿ ಆದರು. 89 ಭೂಮಾಲೀಕರ ಮನೆಗಳು ಉರಿದು ಹೋಗಿ ಬೂದಿಯ ರಾಶಿಯಾದವು. ಬ್ರಿಟಿಷರ ಆಸ್ತಿಗಳಿಗೆ ರಾತ್ರೋರಾತ್ರಿಗೆ ಬೆಂಕಿಯನ್ನು ಹಚ್ಚಲಾಯಿತು. ಸುಲಿಗೆಯನ್ನು ಮಾಡುತ್ತಿದ್ದ ವ್ಯಾಪಾರಿಗಳನ್ನು ಹೊಡೆದು ಹಾಕಲಾಯಿತು.

ನಡುಗಿದ ಆಂಗ್ಲ ಸರಕಾರ
ಇಂತಹ ದಾಳಿಗಳಿಂದ ಆಂಗ್ಲ ಸರಕಾರವು ಎಷ್ಟು ನಡುಗಿ ಹೋಯಿತು ಎಂದರೆ ರಾಂಚಿ ಜಿಲ್ಲಾಧಿಕಾರಿಯು ಸೈನ್ಯಕ್ಕೆ ಬರಹೇಳಿದ! ಬಿರ್ಸಾ ತಲೆಗೆ 500 ರೂಪಾಯಿಗಳ ದೊಡ್ಡ ಬಹುಮಾನ ಘೋಷಣೆ ಆಯಿತು!
1900 ಸೈನಿಕರ ಬ್ರಿಟಿಷ್ ಸೇನೆ ಆಧುನಿಕ ಶಸ್ತ್ರಗಳ ಜೊತೆ ದುಂಬಾರಿ ಬೆಟ್ಟದ ಮೇಲೆ ಬಿರ್ಸಾ ಅವರ ಆದಿವಾಸಿಗಳ ಸೈನ್ಯದ ಮೇಲೆ ಮುಗಿಬಿದ್ದಿತು. ಬಿಲ್ಲು, ಬಾಣ ಹಿಡಿದು ಹೋರಾಡಿದ ದಿಟ್ಟ ಆದಿವಾಸಿಗಳ ಸೇನೆಯು ಸೋತು ಧರಾಶಾಯಿ ಆಯಿತು. ನೂರಾರು ಆದಿವಾಸಿಗಳು ಪ್ರಾಣ ಕಳೆದುಕೊಂಡರು. ಅವರ ರಕ್ತದಿಂದ ತೊಯ್ದು ಹೋದ ದುಂಬಾರಿ ಬೆಟ್ಟವನ್ನು ‘ಹೆಣಗಳ ಬೆಟ್ಟ’ ಎಂದೇ ಮುಂದೆ ಕರೆಯಲಾಯಿತು!

ಮುಂದೆ 1899ರ ಹೊತ್ತಿಗೆ ನಿದ್ರೆಯಲ್ಲಿದ್ದ ಬಿರ್ಸಾ ಅವರನ್ನು ಬ್ರಿಟಿಷರು ಬಂಧಿಸಿದರು. ಜೊತೆಗೆ ಅವರ 482 ಆದಿವಾಸಿ ಸಂಗಡಿಗರು ಅರೆಸ್ಟ್ ಆದರು. ಅವರ ಮೇಲೆ ವಿವಿಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲು ಮಾಡಲಾಯಿತು. ವಿಚಾರಣೆಯ ನಾಟಕವು ಆರಂಭ ಆಯಿತು. ಆದರೆ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲಿ 1900 ಜೂನ್ 9 ರಂದು ಬಿರ್ಸಾ ಅವರ ಮರಣವು ಸೆರೆಮನೆಯಲ್ಲಿ ಆಯಿತು. ಆಗ ಅವರಿಗೆ ಕೇವಲ 25 ವರ್ಷ!

ಬಿರ್ಸಾ ಮುಂಡಾ ಹುತಾತ್ಮರಾದರು
ಮುಂದೆ ಮುಂಡಾ ಜನರು ಅವರನ್ನು ಪ್ರೀತಿಯಿಂದ ಧರ್ಥಿ ಆಬಾ (ಭೂಮಿಯ ಅಪ್ಪ) ಎಂದು ಗೌರವದಿಂದ ಕರೆದರು. ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಅವರ ಪಾತ್ರವನ್ನು ಭಾರತ ಮರೆಯಲಿಲ್ಲ.

ಬಿರ್ಸಾ ಅವರ ಜನ್ಮದಿನ (ನವೆಂಬರ್ 15)ವನ್ನು ದೇಶದ ಆದಿವಾಸಿಗಳು ಇಂದಿಗೂ ಆಚರಿಸಿ ಬಿರ್ಸಾ ಅವರನ್ನು ನೆನೆಯುತ್ತಾರೆ. ಅವರ ಹೆಸರಲ್ಲಿ ಬಿರ್ಸಾ ಮುಂಡಾ ವಿಮಾನ ನಿಲ್ದಾಣ, ಬಿರ್ಸಾ ಮುಂಡಾ ಕೃಷಿ ವಿವಿ, ಬಿರ್ಸಾ ಮುಂಡಾ ಆದಿವಾಸಿ ವಿವಿ, ಬಿರ್ಸಾ ಮುಂಡಾ ತಾಂತ್ರಿಕ ಕಾಲೇಜು… ಇವುಗಳು ಝಾರ್ಖಂಡ ಮತ್ತು ಬಿಹಾರ್ ರಾಜ್ಯದಲ್ಲಿ ಇವೆ! ಬಿರ್ಸಾ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಹಿಂದಿಯ ಚಲನಚಿತ್ರ ‘ಗಾಂಧಿ ಸೇ ಪೇಹಲೆ ಗಾಂಧಿ’ ( 2008) ತೆರೆಗೆ ಬಂದು ಜನಪ್ರಿಯ ಆಗಿದೆ. ಸುಪ್ರಸಿದ್ದ ಬೆಂಗಾಲಿ ಲೇಖಕಿ ಆದ ಮಹಾಶ್ವೇತಾದೇವಿ ಅವರು ಬಿರ್ಸಾ ಮುಂಡಾ ಅವರ ಬದುಕನ್ನು ಆಧಾರವಾಗಿಟ್ಟುಕೊಂಡು ಬೃಹತ್ ಗಾತ್ರದ “ಅರನ್ಯೇರ್ ಅಧಿಕಾರಿ” ಎಂಬ ಕಾದಂಬರಿಯನ್ನು ಬರೆದು ಬಿಟ್ಟಿದ್ದಾರೆ.

ಬಿರ್ಸಾ ಮುಂಡಾ ಅವರ ಬದುಕು ಮತ್ತು ಹೋರಾಟಗಳು ಇಂದಿನ ಯುವ ಜನಾಂಗಕ್ಕೆ ಮಾದರಿ ಆಗಬೇಕು.

































































































error: Content is protected !!
Scroll to Top