ಕಾರ್ಕಳಿಗರು ಮರೆಯಬಾರದ ಚೇತನ – ಹೆಚ್. ಗೋಪಾಲ ಭಂಡಾರಿ

ಹೆಚ್ ಗೋಪಾಲ ಭಂಡಾರಿ ಸರ್ ಅವರನ್ನು ದಿವಂಗತ ಅನ್ನಲು ಮನಸ್ಸು ಒಪ್ಪುವುದೇ ಇಲ್ಲ. ಅವರು ಕಾರ್ಕಳದ ಮೇಲೆ ಬೀರಿದ ಪ್ರಭಾವ ಅಂತಹದ್ದೇ. ಇವತ್ತಿಗೂ ಅವರ ಎತ್ತರದ ನಿಲುವು, ವೈಟ್ ಆಂಡ್ ವೈಟ್ ಆದ ಡ್ರೆಸ್ ಕೋಡ್ ಕಣ್ಣ ಮುಂದೆ ಇದೆ ಮತ್ತು ಅವರ ಗಾಂಭೀರ್ಯದ ಧ್ವನಿಯು ಇವತ್ತಿಗೂ ಕಿವಿಯಲ್ಲಿ ಇದೆ. ಹಾಗಿರುವಾಗ ಅವರನ್ನು ದಿವಂಗತ ಎನ್ನುವುದು ಹೇಗೆ?

ಜುಲೈ 4, 2019ರಂದು ಇಡೀ ಕಾರ್ಕಳವು ತನ್ನ ಪುತ್ರನನ್ನು ಬೀಳ್ಕೊಟ್ಟು ಸೂತಕದ ಛಾಯೆಯಲ್ಲಿ ಇತ್ತು. ಹುತ್ತುರ್ಕೆ ಗೋಪಾಲ್ ಭಂಡಾರಿ ಜನಿಸಿದ್ದು ಹೆಬ್ರಿಯ ರೈತ ಕುಟುಂಬದಲ್ಲಿ. ಅವರ ಕುಟುಂಬದಲ್ಲಿ ಯಾರು ಕೂಡ ರಾಜಕೀಯದಲ್ಲಿ ಇರಲಿಲ್ಲ. ಬಾಲ್ಯದಲ್ಲಿ ಇಂದಿರಾ ಗಾಂಧಿ ಅವರ ಪ್ರಭಾವ. ಯೌವ್ವನ ದಾಟುವಾಗ ರಾಜಕೀಯದ ದೀಕ್ಷೆ ಕೊಟ್ಟವರು ಅವರ ರಾಜಕೀಯ ಗುರು ಆದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು. ಅವರ ಗುರು ಶಿಷ್ಯರ ಸಂಬಂಧವು ಕೊನೆಯವರೆಗೆ ಅತೀ ಮಧುರವೆ ಆಗಿತ್ತು.

ಇಂದಿರಾ ಗಾಂಧಿ ಅವರ ‘ಉಳುವವನೇ ಹೊಲದೊಡೆಯ’ ಕಾನೂನಿನ ಅನುಷ್ಠಾನದ ಹಂತದಲ್ಲಿ ಅವರು ಟ್ರಿಬ್ಯೂನಲ್ ಸದಸ್ಯರಾಗಿ ಮಾಡಿದ ಕೆಲಸವು ಬಹು ಶ್ಲಾಘನೆಗೆ ಪಾತ್ರವಾಯಿತು. ಮೊದಲು ಅವಿಭಜಿತ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಬಹು ದೊಡ್ಡ ಕ್ಷೇತ್ರವನ್ನು ಆಳಿದ್ದರು. ಆ ಅವಧಿಯಲ್ಲಿ ಸೂಡ ಗ್ರಾಮದಿಂದ ಹೆಬ್ರಿಯವರೆಗೆ, ನಾರಾವಿಯಿಂದ ನೀರೆ ಬೈಲೂರಿನವರೆಗೆ ಅವರ ಹಳೆಯ ಅಂಬಾಸಿಡರ್ ಕಾರ್ ಓಡಿದ್ದೆ ಓಡಿದ್ದು! ಭೂಸುಧಾರಣೆಯ ಫಲಾನುಭವಿಗಳಾದ ಬಡ ರೈತರಿಗೆ ಭೂಮಿಯ ದಾಖಲೆ ಹಂಚಿದ್ದು ಆಗಿನ ಕಾಲಕ್ಕೆ ಒಂದು ದಾಖಲೆ. ಗೋಪಾಲ್ ಭಂಡಾರಿ ಅವರ ಸೇವೆಗೆ ದೊರೆತ ಬಹು ದೊಡ್ಡ ಅವಕಾಶ ಅದು.

ಕಾರ್ಕಳದಿಂದ ಸಿಎಂ ಆಗಿ ಮುಂದೆ ಲೋಕಸಭೆಗೆ ಮುಖ ಮಾಡಿದ ಎಂ. ವೀರಪ್ಪ ಮೊಯಿಲಿ ಅವರಿಗೆ ಕಾರ್ಕಳದಲ್ಲಿ ಒಬ್ಬ ಸಮರ್ಥ ಉತ್ತರಾಧಿಕಾರಿ ಬೇಕಿತ್ತು. ಅವರು ಆರಿಸಿದ್ದು ನಿಷ್ಕಲ್ಮಶ ಮನಸ್ಸಿನ ಗೋಪಾಲ್ ಭಂಡಾರಿ ಅವರನ್ನು. ಕಾರ್ಕಳ ಆಗ ಹೇಳಿ ಕೇಳಿ ಕಾಂಗ್ರೆಸ್ ಭದ್ರಕೋಟೆ ಆಗಿತ್ತು. 1999ರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಭಂಡಾರಿ ಅವರು ಭಾರೀ ಮಾರ್ಜಿನ್ ಪಡೆದು ಗೆದ್ದರು. ಅವರು ಪಡೆದದ್ದು ಚಲಾವಣೆ ಆದ ಮತಗಳಲ್ಲಿ 62.68% ಮತಗಳನ್ನು! ಭಂಡಾರಿ ಅವರಿಗೆ ರಾಜಕೀಯವು ಕೇವಲ ಸೇವಾ ಕ್ಷೇತ್ರವೆ ಆಗಿತ್ತು. ಎಲ್ಲಿಯೂ ವ್ಯಕ್ತಿಪೂಜೆಯನ್ನು ಇಷ್ಟ ಪಟ್ಟವರಲ್ಲ. ಟ್ರಿಬ್ಯೂನಲ್ ಸದಸ್ಯ ಆಗಿದ್ದಾಗ ಯಾವ ಬಿಳಿ ಕಾರಲ್ಲಿ ಹೆಬ್ರಿಯಿಂದ ಕಾರ್ಕಳಕ್ಕೆ ಬರುತ್ತಿದ್ದರೋ ಅದೇ ಕಾರಲ್ಲಿ ಅವರು ಕೊನೆಯತನಕವೂ ಬರುತ್ತಿದ್ದರು. ಕಾರ್ಕಳದ ತಾಲೂಕು ಆಫೀಸ್ ಹತ್ತಿರ ಅವರ ಒಂದು ಆಫೀಸ್. ಅಲ್ಲಿ ಗಿಜಿ ಗಿಜಿ ಜನ. ಭಂಡಾರಿ ಅವರು ಅಧಿವೇಶನ ಇಲ್ಲದೆ ಇದ್ದಾಗ ಒಂದು ದಿನವೂ ಕಾರ್ಕಳಕ್ಕೆ ಬಾರದೆ ಇರಲಿಲ್ಲ.

ನಮಗೆಲ್ಲ ಅವರು ಇಷ್ಟ ಆಗುವುದು ನೂರಾರು ಕಾರಣಕ್ಕೆ. ಅದರಲ್ಲಿ ಒಂದು ಪ್ರಮುಖ ಕಾರಣ ಅವರ ಮಾನವೀಯ ಸಂಬಂಧ ಮತ್ತು ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಗುಣ. ಒಮ್ಮೆ ಅವರು ಕನೆಕ್ಟ್ ಆದರೆ ಮತ್ತೆ ಯಾರನ್ನೂ ದೂರ ಮಾಡುತ್ತಲೇ ಇರಲಿಲ್ಲ. ಯಾರೇ ಮದುವೆ, ಉಪನಯನ, ಗೃಹ ಪ್ರವೇಶ, ತಂಬಿಲ, ಕೋಲ, ನೇಮ ಯಾವುದಕ್ಕೆ ಕರೆದರೂ ಭಂಡಾರಿಯವರು ಹೋಗದೆ ಇರುತ್ತಿರಲಿಲ್ಲ. ಬಡವರ ಮನೆಯ ಕಾರ್ಯಕ್ರಮಕ್ಕೆ ಅವರು ಮಿಸ್ ಆದದ್ದೇ ಇಲ್ಲ. ಕೆಲವೊಮ್ಮೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಅವರು ಈ ರೀತಿಯ ಕಾರ್ಯಕ್ರಮಗಳಿಗೆ ಹೋದ ಉದಾಹರಣೆ ಇತ್ತು. ಅದು ಅವರ ಮಾನವೀಯ ಸಂಬಂಧದ ಪ್ರತಿಫಲನ ಆಗಿತ್ತು. ಹತ್ತಾರು ಮದುವೆಗಳಿಗೆ ಹೋದರೂ ಅವರು ಕೊನೆಗೆ ಊಟ ಮಾಡುವುದು ಆಫೀಸಿಗೆ ಬಂದು ಅವರ ಪತ್ನಿ ಕೊಟ್ಟ ಬುತ್ತಿಯ ಊಟವನ್ನೇ! ಗಂಜಿ ಮತ್ತು ಮೀನಿನ ಚಟ್ನಿ ಇದ್ದರೆ ಅವರ ಊಟ ಮುಗಿದುಹೋಗುತ್ತಿತ್ತು.

2004ರ ವಿಧಾನಸಭಾ ಚುನಾವಣೆಯಲ್ಲಿ ಸುನೀಲ್ ಕುಮಾರ್ ಅವರ ಪ್ರಖರವಾದ ಪ್ರವೇಶವು ಕಾರ್ಕಳಕ್ಕೆ ಆದಾಗ ಭಂಡಾರಿ ಅವರು ಅನಿವಾರ್ಯ ಆಗಿ ಸೋಲಬೇಕಾಯಿತು. ಆದರೆ ವಿರೋಚಿತವಾಗಿ ಸೋಲನ್ನು ಒಪ್ಪಿಕೊಂಡ ಭಂಡಾರಿ ಅವರು ತಮ್ಮ ಸೇವೆಯನ್ನು ನಿಲ್ಲಿಸಲೇ ಇಲ್ಲ. ಅವರ ಅದೇ ಕಾರು ದಿನವೂ ಹೆಬ್ರಿಯಿಂದ ಕಾರ್ಕಳಕ್ಕೆ ಬಂದು ರಾತ್ರಿಯಲ್ಲಿ ಹಿಂದೆ ಹೋಗುತ್ತಿತ್ತು. ನೊಂದವರ, ತುಳಿತಕ್ಕೆ ಒಳಗಾದವರ ಮಾತುಗಳನ್ನು ತಾಳ್ಮೆಯಿಂದ ಕೇಳುವ ಅವರ ಗುಣವು ನೊಂದವರಿಗೆ ಸಾಂತ್ವನ ಕೊಡುತ್ತಿತ್ತು. ಮತ್ತೆ ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದು 2008ರ ವಿಧಾನಸಭಾ ಚುನಾವಣೆಯಲ್ಲಿ ಭಂಡಾರಿ ಅವರು ಸುನೀಲ್ ಕುಮಾರ್ ಅವರನ್ನು ಸೋಲಿಸಿ ಮತ್ತೆ ಗೆದ್ದು ಬಂದರು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಅವರು ಮಾಡಿದ ಸೇವಾ ಕಾರ್ಯಕ್ರಮಗಳು, ಅಭಿವೃದ್ದಿ ಕಾರ್ಯಕ್ರಮಗಳು, ಹೆಬ್ರಿ ತಾಲೂಕು ಹೋರಾಟಗಳು, ಸುವಿಶಾಲ ಪಡುಬಿದ್ರೆ ಕಾರ್ಕಳ ಹೆದ್ದಾರಿ, ಗ್ರಾಮೀಣ ಅಭಿವೃದ್ದಿ ಕಾರ್ಯಕ್ರಮಗಳು ಎಲ್ಲವೂ ಮಾದರಿ ಆಗಿದ್ದವು. ‘ನಿನ್ನ ಶತ್ರುವನ್ನು ಕೂಡ ಪ್ರೀತಿಸು’ ಎನ್ನುವ ಅವರ ಬದುಕಿನ ಆದರ್ಶಗಳು ಇಂದಿನ ಸಂಘರ್ಷದ ರಾಜಕೀಯಕ್ಕೆ ಅಪರೂಪದಲ್ಲಿ ಅಪರೂಪ ಎಂದು ನನ್ನ ಅನಿಸಿಕೆ.

ಮುಂದಿನ ಚುನಾವಣೆಗೆ ಅವರು ಮತ್ತೆ ಸ್ಪರ್ಧೆ ಮಾಡಬೇಕು ಎಂದು ಕಾರ್ಕಳದ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ಅವರು ನಿರ್ದೇಶನ ಕೊಟ್ಟಾಗ ‘ಇದು ನನ್ನ ಕೊನೆಯ ಚುನಾವಣೆ ‘ ಎಂದು ಹೇಳುತ್ತ ಅಖಾಡಾಕ್ಕೆ ಇಳಿದರು. ಈ ಬಾರಿ ಬಹು ದೊಡ್ಡ ಸೋಲು ಅವರ ಆತ್ಮವಿಶ್ವಾಸವನ್ನು ಖಾಲಿ ಮಾಡಿತು. ಒಮ್ಮೆ ಹಿತಶತ್ರುಗಳನ್ನು ನೆನೆದು ಅವರು ಕಣ್ಣೀರು ಹಾಕಿದ ವಿಡಿಯೋ ಕಾರ್ಕಳದಲ್ಲಿ ವೈರಲ್ ಆಗಿತ್ತು. ‘ಗೆಲುವು, ಸೋಲು ನನ್ನನ್ನು ಅಲ್ಲಾಡಿಸಿದ್ದು ಅಲ್ಲವೇ ಅಲ್ಲ’ ಎಂದು ಅವರು ತುಂಬಾ ಸಲ ಹೇಳಿದ್ದರು. ಯಾವುದೇ ರಾಜಕೀಯದ ವೇದಿಕೆಯಲ್ಲಿ ಕೀಳು ಮಟ್ಟದ ಟೀಕೆಗಳನ್ನು ಮಾಡಿದವರೇ ಅಲ್ಲ. ಜಾತಿ ರಾಜಕೀಯ ಮಾಡಲೇ ಇಲ್ಲ. ಯಾರನ್ನೂ ದ್ವೇಷ ಮಾಡಲೇ ಇಲ್ಲ. ಎಂತಹ ಬಿಕ್ಕಟ್ಟು ಬಂದಾಗಲೂ ಪಕ್ಷ ಬಿಟ್ಟು ಹೋಗಲಿಲ್ಲ. ಮೊಯಿಲಿ ಅವರ ಮೇಲೆ ಇದ್ದ ನಂಬಿಕೆ ಕಳೆದುಕೊಳ್ಳಲಿಲ್ಲ. ಅಧಿಕಾರ ಇಲ್ಲದೆ ಇದ್ದಾಗಲೂ ಅವರು ಬೆಂಗಳೂರಿಗೆ ಹೋಗಿ ಬಡವರ ಕೆಲಸ ಮಾಡಿ ತರುತ್ತಿದ್ದರು. ವಿಧಾನ ಸಭೆಯಲ್ಲಿ ಅವರ ಪ್ರಭಾವ ಕೊನೆಯವರೆಗೂ ಇತ್ತು. ಕಾರ್ಕಳದ ಗ್ರಾಮಗಳ ಸಂಪರ್ಕವನ್ನು ಅವರು ಕಳೆದುಕೊಳ್ಳಲಿಲ್ಲ. ಅತ್ಯಂತ ಹಿಂದುಳಿದ ಒಂದು ಸಮಾಜದಿಂದ ಬಂದ ಗೋಪಾಲ್ ಭಂಡಾರಿ ಸರ್ ಅವರು ಇಡೀ ಕಾರ್ಕಳವನ್ನು ಆವರಿಸಿದ್ದು ಒಂದು ಅದ್ಭುತವಾದ ಯಶೋಗಾಥೆ. ಅದರ ಹಿಂದೆ ಅವರ ಮಾನವೀಯ ಗುಣ, ಇಚ್ಛಾಶಕ್ತಿ ಮತ್ತು ಸಾಮಾಜಿಕ ಸ್ಪಂದನೆಗಳು ಕೆಲಸ ಮಾಡಿದ್ದವು.

ಅಂತಹ ಗೋಪಾಲ್ ಭಂಡಾರಿ ಅವರು ತಮ್ಮ 66ನೆ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿ ಆದಾಗ ಅವರನ್ನು ಬೀಳ್ಕೊಡಲು ಸೇರಿದ ಸಾವಿರಾರು ಜನರು, ಅವರ ದುಃಖ, ತಮ್ಮ ಮನೆಯ ಒಬ್ಬ ಆಪ್ತನನ್ನು ಕಳೆದುಕೊಂಡ ಭಾವನೆ ಇವುಗಳನ್ನು ಮರೆಯಲು ಸಾಧ್ಯವೇ ಇಲ್ಲ. ಕಾರ್ಕಳದ ಇತಿಹಾಸವನ್ನು ಯಾವ ಬಿಂದುವಿನಿಂದ ಬರೆಯಲು ಕೂತರೂ ಮೊದಲ ಪುಟದಲ್ಲಿ ಗೋಪಾಲ್ ಭಂಡಾರಿ ಸರ್ ಹೆಸರು ಇರುತ್ತದೆ. ಮುಂದೆ ಅತ್ಯಂತ ಅರ್ಹವಾಗಿ ಅವರ ಹೆಸರನ್ನು ಮೆಗಾ ಕಾರ್ಕಳ ಉತ್ಸವದ ಗಾಂಧಿ ಮೈದಾನದ ಪ್ರಧಾನ ವೇದಿಕೆಗೆ ಇಟ್ಟು ಉತ್ಸವ ಸಮಿತಿಯು ಅಭಿನಂದನೀಯ ಕೆಲಸ ಮಾಡಿತು. ಈಗ ಅವರ ಪುತ್ಥಳಿ ಅವರದ್ದೇ ಹುಟ್ಟೂರಾದ ಹೆಬ್ರಿಯಲ್ಲಿ ಇಂದು ಅನಾವರಣ ಆಗುತ್ತಿದೆ. ಹಾಗೆಯೇ ಅವರ ನೆನಪಲ್ಲಿ ಸಂಗ್ರಾಹ್ಯವಾದ ಒಂದು ಸ್ಮರಣ ಸಂಚಿಕೆ ಕೂಡ ಬಿಡುಗಡೆ ಆಗುತ್ತಿದೆ. ಗೋಪಾಲ್ ಭಂಡಾರಿ ಸರ್ ಅವರು ಈಗಲೂ ನಮ್ಮ ನಡುವೆ ಇದ್ದಾರೆ ಅನ್ನಿಸುತ್ತದೆ.















































































error: Content is protected !!
Scroll to Top