ನಾನು ತಾಯ್ತನವನ್ನು ಗೌರವಿಸುತ್ತೇನೆ. ಆದರೆ…

ಭಾವನಾ ಸಮಾಜಕ್ಕೆ ಕೊಡುವ ಸಂದೇಶವಾದರು ಏನು ?

ಭಾವನಾ ರಾಮಣ್ಣ ಒಳ್ಳೆಯ ಸಂವೇದನಾಶೀಲ ನಟಿ. ಉತ್ತಮ ಭರತನಾಟ್ಯ ಕಲಾವಿದೆ. ಆಕೆ ಇತ್ತೀಚಿನ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬ ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ಅವರಿಗೂ ಆ ಪ್ರಚಾರ ಬೇಕಿತ್ತೇನೋ ಎಂಬಷ್ಟು ಮಟ್ಟಿಗೆ ಆಕೆ ಬೇರೆ ಬೇರೆ ಮಾಧ್ಯಮಗಳಿಗೆ ಸಂದರ್ಶನ ಕೊಡುತ್ತಿದ್ದಾರೆ. ಮಾಧ್ಯಮಗಳಿಗೂ ಆಕೆಯ ಬದುಕಿನ ಮೂಲಕ ಟಿಆರ್ಪಿ ಪಡೆಯುವ ಹಂಬಲ.

ಅವರು ಏನು ಮಾಡಿದ್ದಾರೋ ಅದನ್ನು ದೇಶದ ಕಾನೂನಿನ ಪ್ರಕಾರ ಮಾಡಿದ್ದಾರೆ. ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅಂತವರು ಇದನ್ನು ಬಹಳ ಹಿಂದೆ ಮಾಡಿಯಾಗಿದೆ. ಮದುವೆಯಾಗದೆ ತಂತ್ರಜ್ಞಾನದ ಮೂಲಕ ಮಕ್ಕಳನ್ನು ಪಡೆಯುವುದು ಮುಂದೆ ಫ್ಯಾಶನ್ ಆಗಬಹುದು.

ಭಾರತದ ಕಾನೂನಿನಲ್ಲಿ ಮಾನವ ಹಕ್ಕುಗಳ ಪುಟಗಳು
ಭಾರತದ ಆಧುನಿಕ ಕಾನೂನು ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳ ಪುಟಗಳು ಸೇರುತ್ತಾ ಹೋದಂತೆ ಇಂತಹ ಪಾಶ್ಚಾತ್ಯ ನಿಲುವುಗಳು, ಆಯಾಮಗಳು ಸೇರ್ಪಡೆಯಾಗುತ್ತಾ ಹೋದವು. ಭಾರತದಲ್ಲಿ ಇತ್ತೀಚೆಗೆ ಬಂದಿರುವ ಕೆಲವು ಕಾನೂನುಗಳು ಈ ಪಾಶ್ಚಾತ್ಯ ಮುಖಗಳೇ ಆಗಿವೆ.

ಕಾನೂನು ಬೇರೆ, ಪ್ರಕೃತಿ ಮತ್ತು ಸಂಸ್ಕೃತಿ ಬೇರೆ
ಬಹಳ ವರ್ಷಗಳ ಹಿಂದೆ ಟಿವಿ ಕಾರ್ಯಕ್ರಮಕ್ಕೆ ಬಂದ ಒಬ್ಬಳು ಬೋಲ್ಡ್ ಕಾಲೇಜು ಹುಡುಗಿ ವಿಚ್ಛೇದನ ಅನ್ನುವುದು ಸ್ತ್ರೀ ಸ್ವಾತಂತ್ರ್ಯದ ಪ್ರತೀಕ ಅಂದಿದ್ದಳು. ದಕ್ಷಿಣ ಭಾರತದ ಬಹಳ ದೊಡ್ಡ ನಟ ಎಂದು ಗುರುತಿಸಿಕೊಂಡಿದ್ದ ಕಮಲಹಾಸನ್ ನನಗೆ ಭಾರತೀಯ ಮದುವೆಗಳಲ್ಲಿ ನಂಬಿಕೆ ಇಲ್ಲ ಅಂದಿದ್ದ ಮಾತ್ರವಲ್ಲ, ಇಬ್ಬರು ಹೆಂಡತಿಯರಿಗೆ ಕೈಕೊಟ್ಟು ಮೂರನೇ ಹುಡುಗಿಯ ಜೊತೆಗೆ ಲಿವ್ ಇನ್ ಸಂಬಂಧದ ಮೂಲಕ ಸುಖವಾಗಿದ್ದನು. ಇವರಿಗೆಲ್ಲ ದಾಂಪತ್ಯದ ಸುಖ ಬೇಕು. ದಾಂಪತ್ಯ ಬೇಡ ! ಅವನ ಮಗಳೂ ಅವನದ್ದೇ ದಾರಿಯಲ್ಲಿ ಇದ್ದಾಳೆ. ಸಿಹಿಕಹಿ ಚಂದ್ರು ಮಗಳು ಮಕ್ಕಳೇ ಬೇಡ ಎಂದು ಇತ್ತೀಚೆಗೆ ಸಾರ್ವಜನಿಕವಾಗಿ ಹೇಳಿಕೆ ಕೊಟ್ಟು ಟ್ರೋಲ್ ಆಗಿದ್ದರು. ಮದುವೆ ಅನ್ನುವುದು ವಿದೇಶಿಗರಿಗೆ ಒಂದು ಕಾನೂನು. ಭಾರತೀಯರಿಗೆ ಅದು ಸಂಸ್ಕೃತಿಯ ಭಾಗ. ಬದುಕಿನ ಧರ್ಮ, ಅರ್ಥ, ಕಾಮ, ಮೋಕ್ಷ ಇವುಗಳ ಶೋಧ. ಶಾಸ್ತ್ರೀಯ ಮದುವೆ, ಸಂಪ್ರದಾಯಬದ್ಧ ಮದುವೆ, ಸರಳ ಮದುವೆ, ಕಾನೂನುಬದ್ಧವಾದ ರಿಜಿಸ್ಟರ್ ಮದುವೆ, ಉದಾತ್ತ ಆಶಯದ ಮಂತ್ರ ಮಾಂಗಲ್ಯ. ಇವೆಲ್ಲವೂ ನನಗೆ ಸಮ್ಮತ. ಗಂಡು ಹೆಣ್ಣು ಕೂಡುವುದು ಪ್ರಕೃತಿ ನಿಯಮ. ಮದುವೆಯೇ ಬೇಡ ಅಂದರೆ ? ನಾವು ಲಿವ್ ಇನ್ ಮೂಲಕ ಬದುಕುತ್ತೇವೆ ಅಂದರೆ ? ಸಲಿಂಗ ಮದುವೆಯನ್ನು ಕಾನೂನು ಬೆಂಬಲಿಸಬೇಕು ಅಂದರೆ ? ಅಲ್ಲಿಗೆ ಸಮಾಜ ಮುಂದಕ್ಕೆ ಎಲ್ಲಿಗೆ ಹೋಗಿ ತಲುಪಬಹುದು ?

ಭಾವನಾ ಅವರ ನಿಲುವು ಒಪ್ಪುವಂತದ್ದಲ್ಲ
ಭಾವನಾ ದೀರ್ಘಕಾಲದಿಂದ ಮದುವೆ ಆಗದೆ ಒಬ್ಬಂಟಿಯಾಗಿದ್ದಾರೆ. ಅದು ಅವರ ವೈಯಕ್ತಿಕ. ನಾನದನ್ನು ಪ್ರಶ್ನೆ ಮಾಡುವುದಿಲ್ಲ. ನಮ್ಮಲ್ಲಿ ಕೂಡು ಕುಟುಂಬ ಪದ್ಧತಿ ಹೋಗಿ ಪರಮಾಣು ಕುಟುಂಬಗಳು ಬಂದಾಗಿದೆ. ಕನಿಷ್ಠ ಪಕ್ಷ ಗಂಡ, ಹೆಂಡತಿ, ಒಂದು ಮಗು ಇಷ್ಟಾದರೂ ಮಂದಿ ಜೊತೆಗಿದ್ದಾರಲ್ಲ ಎಂದು ನಾವು ಸಮಾಧಾನ ಪಟ್ಟುಕೊಳ್ಳುತ್ತಿದ್ದೆವು. ಆದರೆ ಈಗ ಗಂಡನೂ ಬೇಡ, ಮಗು ಮಾತ್ರ ಸಾಕು ಎಂದು ಸೆಲೆಬ್ರಿಟಿಗಳು ಹೊರಟರೆ ? ಅದನ್ನು ಪ್ರಚಾರದ ಸರಕು ಮಾಡಿಕೊಂಡರೆ ?

ಹೆರಿಗೆಯ ನೋವು ಸಹಿಸಿಕೊಂಡು, ರಕ್ತ ಬಸಿದು ಮಗುವನ್ನು ಪಡೆಯುವುದು ಬೇಡ ಎಂಬ ಕಾರಣಕ್ಕೋ, ನನ್ನ ಸೌಂದರ್ಯವನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೋ ದಂಪತಿ ಜೊತೆಗೆ ಕೂತು ನಿರ್ಧಾರ ಮಾಡಿ ಒಂದು ಅನಾಥ ಮಗುವನ್ನು ದತ್ತುಪಡೆದು ಸಾಕುವುದನ್ನು ಒಪ್ಪಬಹುದು. ಅಥವಾ ಆರೋಗ್ಯದ ಸಮಸ್ಯೆಗಳಿವೆ ಎಂಬ ಕಾರಣಕ್ಕೆ ಈ ನಿಲುವು ತುಂಬಾ ಸರಿ. ಆದರೆ ಬಾಡಿಗೆ ತಾಯಿಯನ್ನು ಬುಕ್ ಮಾಡಿ ಮಗು ಪಡೆಯುತ್ತೇನೆ ಎಂದು ಹೊರಟರೆ ? ಅದು ದೇಶದ ಕಾನೂನು ಪ್ರಕಾರ ಸರಿ ಹೌದು. ಆದರೆ ಅದೇ ಮಗು ಮುಂದೆ ಸತ್ಯವನ್ನು ತಿಳಿದು ತನ್ನ ನಿಜ ತಾಯಿಯನ್ನು ಹುಡುಕಿಕೊಂಡು ಹೊರಟರೆ ? ಇದರ ಹಿಂದೆ ತುಂಬಾ ಭಾವನಾತ್ಮಕ ಅಂಶಗಳು ಇವೆ.

ಇದು ಭಾವನಾತ್ಮಕ ಪ್ರಕರಣ
ನಟಿ ಭಾವನಾ ಅವರ ಪ್ರಕರಣವೂ ಅದೇ ರೀತಿಯ ಭಾವನಾತ್ಮಕ ಹಿನ್ನೆಲೆಯನ್ನು ಹೊಂದಿದೆ. ಒಂದು ಮಗುವಿಗೆ ತಂದೆ ಮತ್ತು ತಾಯಿ ಇಬ್ಬರ ಪ್ರೀತಿಯೂ ಬೇಕು. ಜನನ ಪ್ರಮಾಣ ಪತ್ರದಲ್ಲಿ, ಮುಂದೆ ಶಾಲೆಗೆ ಸೇರಿಸುವಾಗ ಅಥವಾ ಯಾವುದೇ ಸರಕಾರಿ ದಾಖಲೆಗಳನ್ನು ಪಡೆಯುವ ಸಂದರ್ಭದಲ್ಲಿ ಫಾರ್ಮ್ ತುಂಬಿಸುವಾಗ ಅಪ್ಪನ ಹೆಸರು ಬರೆಯುವ ಒಂದು ಕಾಲಂ ಭರ್ತಿ ಮಾಡಲಾದರೂ ಅಪ್ಪನ ಹೆಸರು ಬೇಕು. ಒಂದು ಮಗುವಿಗೆ ಅಪ್ಪನ ಹೆಸರು ಮತ್ತು ಪ್ರೀತಿ ದೊರೆಯದ ಹಾಗೆ ಮಾಡುವ ಭಾವನಾ ನಿಲುವನ್ನು ಒಪ್ಪಿಕೊಳ್ಳಲು ಸಾಧ್ಯವೇ ? ತಂತ್ರಜ್ಞಾನ ಬೆಳೆದಿದೆ ಹೌದು. ಆದರೆ ನನಗಿರುವ ಆತಂಕ ಏನೆಂದರೆ ಭಾವನಾ ಅಂತಹ ಸೆಲೆಬ್ರಿಟಿ ನಟಿಯರನ್ನು ಢಾಳಾಗಿ ಅನುಸರಿಸುವ ಯುವಜನತೆ ಅವರದ್ದೇ ದಾರಿ ಹಿಡಿದರೆ ಮುಂದೆ ನಮ್ಮ ಸಮಾಜ ಹೇಗಿರಬಹುದು ? ಅದೇ ಸಮಾಜ ಟ್ರೆಂಡ್ ಆದರೆ ಮುಂದೆ ಹೇಗೆ ?

ಭಾವನಾ ಬೇರೆ ಬೇರೆ ಮಾಧ್ಯಮಗಳಿಗೆ ಸಂದರ್ಶನ ಕೊಟ್ಟದ್ದನ್ನು ನಾನು ಗಮನಿಸಿದ್ದೇನೆ. ಮದುವೆ ಒಂದು ಬಂಧನ, ಗಂಡನ ಮನೆಗೆ ಹೋಗಿ ಇರಲು ನನಗೆ ಸಾಧ್ಯವೇ ಇಲ್ಲ. ನನ್ನ ವೈಯಕ್ತಿಕ ಬದುಕು ನನ್ನ ಹಕ್ಕು. ಇತ್ಯಾದಿ ಫೆಮಿನಿಸ್ಟ್ ಹೇಳಿಕೆಗಳನ್ನು ಅವರು ನೀಡಿದ್ದಾರೆ. ಟ್ರೋಲ್ ಮಾಡುವ ಕೆಲ ಮಂದಿ ಅವರನ್ನು ಕೆಟ್ಟದಾಗಿ ನಿಂದಿಸುವ, ಅವರ ಚಾರಿತ್ರ್ಯದ ಮೇಲೆ ಕೆಸರು ಎರಚುವ ಪೋಸ್ಟ್‌ಗಳನ್ನು ಹಾಕಿದ್ದಾರೆ. ಅದನ್ನು ದಯವಿಟ್ಟು ಮಾಡಬೇಡಿ ಎಂದು ನನ್ನ ವಿನಂತಿ. ಆಕೆಯನ್ನು ಅಪಮಾನಿಸುವ ಹಕ್ಕು ನಮಗಿಲ್ಲ.

ಆದರೆ ಆಕೆಯ ಈ ನಿಲುವುಗಳು ನನಗೆ ಸಮ್ಮತವಲ್ಲ. ಮುಂದೆ ನಮ್ಮ ಯುವಪೀಳಿಗೆ ಭಾವನಾ ಅವರ ಹುಚ್ಚಾಟಗಳನ್ನು ಅನುಸರಿಸುತ್ತಾ ಹೋದರೆ ನಮ್ಮ ಸಮಾಜವು ಮುಂದೆ ಹೇಗಿರಬಹುದು ? ಹಾಗೆಯೇ ಮಾಧ್ಯಮಗಳಲ್ಲಿ ನನ್ನ ಕಳಕಳಿಯ ವಿನಂತಿ. ಅದು ಅವರ ವೈಯಕ್ತಿಕ ಬದುಕು, ಅದರ ಪರಿಣಾಮಗಳನ್ನು ಎದುರಿಸುವ ತಾಕತ್ತು ಆಕೆಗಿದೆ. ಆಕೆಗೆ ಪ್ರಚಾರ ಕೊಡುತ್ತಾ ದೇವತೆಯ ಮಟ್ಟಕ್ಕೆ ಏರಿಸುವುದು ಬೇಡ ಅನ್ನುವುದು ಮಾತ್ರ ನನ್ನ ಮನವಿ. ಸಿನೆಮಾ ನಟ, ನಟಿಯರು ಸೆಲೆಬ್ರಿಟಿ ಮಾತ್ರ, ಅವರು ಲೆಜೆಂಡ್ಸ್ ಅಲ್ಲ ಎನ್ನುವುದು ಇಲ್ಲಿ ಮತ್ತೆ ಪ್ರೂವ್ ಆಯಿತು.



































































































error: Content is protected !!
Scroll to Top