ಪರಪು ಗುತ್ತುಕರೆ ದೈವಸ್ಥಾನದ ಪುನರ್‌ ಪ್ರತಿಷ್ಠೆ – ಗುಡಿ ಗೋಪುರ ಕಲಶ ಮತ್ತು ಹೊರೆಕಾಣಿಕೆ ಮೆರವಣಿಗೆ

ಕಾರ್ಕಳ : ಕುಕ್ಕುಂದೂರು ಗ್ರಾಮದ ಪರಪ್ಪು ಗುತ್ತು ಕರೆಯ ಪಿಲಿಚಂಡಿ, ಬೊಬ್ಬರ್ಯ, ನೀಚ ಹಾಗೂ ಗುಳಿಗ ದೈವಸ್ಥಾನದ ನೂತನ ಶಿಲಾಮಯ ಗುಡಿಯ ಪುನರ್‌ ಪ್ರತಿಷ್ಠೆ ಮತ್ತು ಜೀರ್ಣೋದ್ಧಾರ ಮೇ 9ರಂದು ಪ್ರಾರಂಭಗೊಂಡು ಮೇ 10ರವರೆಗೆ ನಡೆಯಲಿದೆ.
ಆ ಪ್ರಯುಕ್ತ ಮೇ 8ರಂದು ಸಂಜೆ ಬಂಡೀಮಠ ಮೂಡುಮಹಾಗಣಪತಿ ದೇವಸ್ಥಾನದಿಂದ ಹೊರಟು ಪರಪು ದೈವಸ್ಥಾನದವರೆಗೆ ವೈಭವದ ಗುಡಿ ಗೋಪುರ ಕಲಶ ಮತ್ತು ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಗುರುಪುರ ಸಂಸ್ಥಾನ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಈ ಮಣ್ಣಿನ ಚೈತನ್ಯ ಎಲ್ಲರೂ ಕೊಂಡಾಡುವಂತಾಗಲಿ. ಇಲ್ಲಿನ ಕಾರಣೀಕವು ಮುಂದಿನ ಯುವ ಪೀಳಿಗೆಗೆ ತಿಳಿಯಲಿ ತನ್ಮೂಲಕ ಗ್ರಾಮದೊಂದಿಗೆ ರಾಷ್ಟ್ರ ಸಮೃದ್ದವಾಗಲಿ ಎಂದು ಶುಭಾಶೀರ್ವಚನ ನೀಡಿದರು.

ಕುದರೆಮುಖ ವನ್ಯಜೀವಿ ವಿಭಾಗ ಕಾರ್ಕಳ ಇದರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್‌ ಎನ್‌. ಮಾತನಾಡಿ, ಅತ್ಯಂತ ಪ್ರಾಚೀನ ಇತಿಹಾಸವುಳ್ಳ ಪರಪು ಗುತ್ತು ಕರೆಯ ದೈವಸ್ಥಾನದ ಜೀರ್ಣೊದ್ಧಾರ ಕಾರ್ಯಕ್ರಮದಲ್ಲಿ ನಮಗೆ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನಮ್ಮ ಯೋಗ ಎಂದು ಹೇಳಿದರು.

ಮುಂಬೈ ಉದ್ಯಮಿ ಶ್ಯಾಮ್‌ ಎನ್.‌ ಶೆಟ್ಟಿ ಮಾತನಾಡಿ, ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ಗಾದೆ ಮಾತಿನಂತೆ ಭಗವಂತನು ನೀಡಿರುವುದನ್ನು ಭಗವಂತನಿಗೆ ಸಮರ್ಪಿಸೋಣ ಎನ್ನುತ್ತಾ ದೈವಸ್ಥಾನಕ್ಕೆ ಆನೆಕಲ್ಲನ್ನು ಕೊಡುಗೆಯಾಗಿ ನೀಡಿರುವ ಬಗ್ಗೆ ತಿಳಿಸಿದರು.
ಬೆಂಗಳೂರು ಉದ್ಯಮಿ ಚಂದ್ರು ಮಾತನಾಡಿ, ಭಕ್ತಿಯಿಂದ ದೇವರನ್ನು ನೆನೆದರೆ ನಮ್ಮ ಕಷ್ಟ ಕಾರ್ಪಣ್ಯಗಳನ್ನು ಈಡೇರಿಸಿ ಬಾಳನ್ನು ಹಸನಾಗಿಸಲು ಭಗವಂತ ಕ್ಷಣ ಮಾತ್ರದಲ್ಲಿ ಬರುತ್ತಾನೆ ಎಂದರು.

ಉದ್ಯಮಿಗಳು‌ ಬೋಳ ಪ್ರಶಾಂತ್‌ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ವೃಷಭರಾಜ ಕಡಂಬ, ದೈವಸ್ಥಾನದ ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಕೆ. ವಸಂತ್‌, ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಮಹಿಳಾ ಸಮಿತಿ ಅಧ್ಯಕ್ಷೆ ಗೀತಾ ಶೆಟ್ಟಿ ಉಪಸ್ಥಿತರಿದ್ದರು.ಯೋಗೀಶ್‌ ಕಿಣಿ ಪ್ರಾರ್ಥಿಸಿದರು. ಜೀರ್ಣೊದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಾಜೇಶ್‌ ರಾವ್‌ ಸ್ವಾಗತಿಸಿದರು. ಜ್ಯೋತಿ ರಮೇಶ್‌ ಕಾರ್ಯಕ್ರಮ ನಿರೂಪಿಸಿ, ಶಿವರಾಂ ರಾವ್‌ ವಂದಿಸಿದರು.



































































































error: Content is protected !!
Scroll to Top