ಜಾತಿ ಗಣತಿ ಹೆಸರಿನಲ್ಲಿ ಸಬ್ ಕಾ ವಿಭಜನ್ ಸಬ್ ಕಾ ಶೋಷಣ್ ತಂತ್ರ – ಸುನಿಲ್‌ ಕುಮಾರ್‌

ಬೆಂಗಳೂರು : ಜಾತಿ ಗಣತಿ ಹೆಸರಿನಲ್ಲಿ ಸಿಎಂ‌ ಸಿದ್ದರಾಮಯ್ಯ ಸಬ್ ಕಾ ವಿಭಜನ್ ಸಬ್ ಕಾ ಶೋಷಣ್ ತಂತ್ರ ನಡೆಸುತ್ತಿದ್ದು, 350 ಕ್ಕೂ ಹೆಚ್ಚು ದುರ್ಬಲ ಹಿಂದುಳಿದ ಜಾತಿಗಳ ಜತೆಗೆ ತಾವು ಪ್ರತಿನಿಧಿಸುವ ಕುರುಬ ಸಮುದಾಯವನ್ನು ಪ್ರವರ್ಗ 1 ಬಿಯಲ್ಲಿ ಸೇರಿಸಿಕೊಂಡಿದ್ದಾರೆ. ಇದು ರಾಜಕೀಯ ವಾಸನೆಗೆ ಕಾರಣವಾಗಿದೆ ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 400 ಕ್ಕೂ ಹೆಚ್ಚು ಹಿಂದುಳಿದ ಜಾತಿಗಳ ಜನರು ಇಲ್ಲಿಯವರೆಗೆ ಗ್ರಾಮ ಪಂಚಾಯತಿ ಸದಸ್ಯರಾಗಲೂ ಸಾಧ್ಯವಾಗಿಲ್ಲ. ಅದರೆ ಸಿದ್ದರಾಮಯ್ಯನವರು ತಾವು ಪ್ರತಿನಿಧಿಸುವ ಸಮುದಾಯವನ್ನು ಪ್ರವರ್ಗ 1ರ ಅತಿ ಹಿಂದುಳಿದ ವರ್ಗಗಳಿಗೆ ಸೇರಿಸಿದ್ದಾರೆ. ಇದು ಅತಿ ಹಿಂದುಳಿದ ಜಾತಿಗಳಿಗೆ ಮಾಡಿದ ಅನ್ಯಾಯ. ಇದರಿಂದ ಸಣ್ಣ ಸಣ್ಣ ಸಮುದಾಯಗಳು ಅವಕಾಶವಂಚಿತವಾಗುತ್ತವೆ. 43 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕುರುಬ ಸಮುದಾಯದ ಜತೆಗೆ ಇವರು ಸ್ಪರ್ಧೆ ಮಾಡಲು ಸಾಧ್ಯವೇ? ಎಂದು ಸುನಿಲ್‌ ಕುಮಾರ್‌ ಪ್ರಶ್ನಿಸಿದ್ದಾರೆ.

ಅತಿ ಹಿಂದುಳಿದ ಸಮಾಜಗಳನ್ನು ಈ ವರದಿ ಪ್ರಪಾತಕ್ಕೆ ತುಳಿದಿದೆ. 1ಬಿ ಪ್ರವರ್ಗ ಸೃಷ್ಟಿಸಿ ಸಣ್ಣ ಜಾತಿಗಳಿಗೆ ಏನು ನ್ಯಾಯ ಕೊಡ್ತೀರಿ? ಪ್ರವರ್ಗ 2ಎ ನಲ್ಲಿರುವ ಉಳಿದ ಜಾತಿಗಳನ್ನು ಬಿಟ್ಟು ಒಂದೇ ಸಮುದಾಯವನ್ನು 1ಬಿ ಗೆ ಹಾಕಿದ್ದೀರಿ. ಇದು ಅವೈಜ್ಞಾನಿಕವಾಗಿದೆ. ರಾಜಕೀಯ ದುರುಪಯೋಗದ ವಾಸನೆ ಕಂಡುಬರುತ್ತಿದೆ. ಜನಸಂಖ್ಯೆ ಕಡಿಮೆ ಆಗಿದೆ ಅನ್ನೋದಕ್ಕಿಂತ ಹಿಂದುಳಿದ ವರ್ಗಗಳಿಗೆ ಈ ವರದಿ ದೊಡ್ಡ ಅನ್ಯಾಯ ಮಾಡಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಕೇಂದ್ರದಲ್ಲಿ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಡಿ ತನ್ನ ಕಾರ್ಯಕ್ರಮ ಕೊಡುತ್ತಿದೆ. ಆದರೆ, ಸಿದ್ದರಾಮಯ್ಯ ಈ ಜಾತಿ ಜನಗಣತಿ ಮೂಲಕ ಸಬ್ ಕಾ ವಿಭಜನ್ ಸಬ್ ಕಾ ಶೋಷಣ್ ಎಂಬ ಘೋಷಣೆಯನ್ನಿಟ್ಟುಕೊಂಡಿದ್ದಾರೆ. ಸ್ವತಃ ಸಿದ್ದರಾಮಯ್ಯ ಅವರೇ ಈ ಜಾತಿ ಜನಗಣತಿ ಬರೆಸಿರುವ ಅನುಮಾನ ದಟ್ಟವಾಗಿದೆ. ಸರಕಾರ ಯೋಜನೆಗೆ ಜಾತಿ ಜನಗಣತಿ ಮಾಡಬೇಕೇ ಹೊರತು ವಿಭಜನೆಗೆ ಮಾಡಬಾರದು. ಈ ವರದಿ ಗೊಂದಲಮಯವಾಗಿದ್ದು, ದೊಡ್ಡ ಪ್ರಮಾಣದಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುತ್ತಿರವುದು ಕಂಡು ಬರುತ್ತಿದೆ. ಹಿಂದುಳಿದ ಸಮಾಜಗಳಿಗೆ ಈ ವರದಿ ಅನ್ಯಾಯ ಮಾಡಲಾಗುತ್ತಿದೆ ಎಂದರು.

ವರದಿ ವೈಜ್ಞಾನಿಕವಾಗಿಲ್ಲ
ಕಾಂತರಾಜು ಅವರ ಮೂಲ ವರದಿಯೇ ಇಲ್ಲ ಅಂದ್ಮೇಲೆ ಜಯಪ್ರಕಾಶ್ ಹೆಗ್ಡೆ ಹೇಗೆ ವರದಿ ತಯಾರು ಮಾಡಿದರು ? ನಿಮ್ಮ ರಾಜಕೀಯ ಲಾಭ ಆಗಲಿಲ್ಲ ಎಂದು ಆ ವರದಿ ಎಲ್ಲಿಟ್ಟಿದ್ದೀರಿ ? ಒಟ್ಟಾರೆ ಮೀಸಲಾತಿ ಈಗ 85%ಕ್ಕೆ ತಗೊಂಡು ಹೋಗೋದಾಗಿ ವರದಿಯಲ್ಲಿ ತಿಳಿಸಿದ್ದೀರಿ. ಬಿಹಾರದಲ್ಲಿ 65% ಕ್ಕೆ ಮೀಸಲಾತಿ ಹೆಚ್ಚಿಸಲು ಕೋರ್ಟ್ ಒಪ್ಪಿಲ್ಲ. ಇನ್ನು ನಮ್ಮ ರಾಜ್ಯದಲಿ ಹೇಗೆ 85%ಕ್ಕೆ ಮೀಸಲಾತಿ ಕೊಡೋಕ್ಕೆ ಸಾಧ್ಯ? ಎಂದು ಪ್ರಶ್ನಿಸಿದ ಅವರು
ವರದಿ ವೈಜ್ಞಾನಿಕವಾಗಿಲ್ಲ. ಸಂವಿಧಾನಕ್ಕೆ ನಿಷ್ಠೆ ತೋರುವಲ್ಲಿ ಮತ್ತು ಯಾವುದೇ ಜಾತಿಯ ನಿಖರ ಮಾಹಿತಿಯನ್ನು ನೀಡುವಲ್ಲಿ ಈ ವರದಿ ವಿಫಲವಾಗಿದೆ. ಆದ್ದರಿಂದ ವಿಶೇಷ ಅಧಿವೇಶನ ಕರೆದು ಈ ವರದಿ ಬಗ್ಗೆ ಸರಕಾರ ಚರ್ಚಿಸಲಿ ಎಂದು ಆಗ್ರಹಿಸಿದರು.









































































































error: Content is protected !!
Scroll to Top