2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕರಾವಳಿಯಲ್ಲಿ ಹತ್ತು ಸ್ಥಾನ : ಡಿ.ಕೆ. ಶಿವಕುಮಾರ್

ಬೆಳ್ತಂಗಡಿ : ಜನರ ಆತ್ಮಸಾಕ್ಷಿ ಮತಗಳಿಂದ 2028ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜೆಲ್ಲೆಯಲ್ಲಿ ಕಾಂಗ್ರೆಸ್ ಹತ್ತು ಕ್ಷೇತ್ರಗಳನ್ನು ಗೆಲ್ಲಲಿದೆ. ಆ ಮೂಲಕ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಳ್ತಂಗಡಿ ತಾಲ್ಲೂಕಿನ ಗುರುವಾಯನಕೆರೆಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಈ ವರ್ಷವನ್ನು ಸಂಘಟನೆ ವರ್ಷವೆಂದು ಘೋಷಣೆ ಮಾಡಿದ್ದಾರೆ. ಜೈ ಬಾಪು, ಜೈ ಭೀಮ್ ಹಾಗೂ ಜೈ ಸಂವಿಧಾನ ಸಮಾವೇಶ ಮಾಡಿ, ಗಾಂಧೀಜಿ, ಅಂಬೇಡ್ಕರ್ ತತ್ವ ಸಿದ್ಧಾಂತ ಹಾಗೂ ಸಂವಿಧಾನ ರಕ್ಷಣೆಗೆ ಕರೆ ನೀಡಿದ್ದಾರೆ. ಇವುಗಳನ್ನು ನಾವು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದರು.

ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಸಲುವಾಗಿ ಅಗತ್ಯ ರೂಪುರೇಷೆ ರೂಪಿಸಲು ನಾನು ಹಾಗೂ ಹೆಚ್.ಕೆ. ಪಾಟೀಲ್ ಅವರು ಸಭೆ ನಡೆಸಲಿದ್ದು, ಬಸವಣ್ಣ, ಪೈಗಂಬರ್ ಸೇರಿದಂತೆ ಹಿಂದೂಗಳು, ಕ್ರೈಸ್ತರು, ಜೈನರು ಸೇರಿದಂತೆ ಎಲ್ಲರ ರಕ್ಷಣೆ ಮಾಡುತ್ತೇವೆ ಎಂದು ತಿಳಿಸಿದರು.

ಕಾರ್ಕಳದಲ್ಲಿ ಹಿಂದೂ ಧರ್ಮದ ಹೆಸರಿನಲ್ಲಿ ಜನರ ಮತ ಪಡೆಯುತ್ತಿದ್ದಾರೆ. ಆದರೆ ಅವರಿಂದಲೇ ಅಲ್ಲಿ ಪರಶುರಾಮನ ಕೊಲೆಯಾಗಿದೆ. ಪರಶುರಾಮನ ಪ್ರತಿಮೆ ನೋಡಿ, ಇಂತಹ ಕೊಲೆ ನೋಡಿ ಅಲ್ಲಿನ ಜನ ಅವರಿಗೆ ಮತ ಹಾಕಿದ್ದಾರಲ್ಲ ಎಂದು ಅಚ್ಚರಿಯಾಯಿತು. ಆ ಪ್ರತಿಮೆಯನ್ನು ಅವರು ಹಾಗೆಯೇ ಇಟ್ಟುಕೊಂಡಿರಲಿ. ಅದು ಅವರ ಸಾಕ್ಷಿಗುಡ್ಡೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅಧಿಕಾರಕ್ಕೆ ಬಂದಂತೆ. ನಾವು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಬಿಜೆಪಿ ನಾಯಕರು ಇದು ಸಾಧ್ಯವೇ ಎಂದು ಪ್ರಶ್ನಿಸಿದರು. ನಾನು ಹಾಗೂ ಸಿದ್ದರಾಮಯ್ಯ ಅವರು ಪ್ರಿಯಾಂಕ ಗಾಂಧಿ ಅವರ ಸಮ್ಮುಖದಲ್ಲಿ ಗ್ಯಾರಂಟಿ ಚೆಕ್ ಗೆ ಸಹಿ ಹಾಕಿದೆವು. ನಮ್ಮ ಸರ್ಕಾರ ಬಂದ ನಂತರ 1.21 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. 200 ಯೂನಿಟ್ ವರೆಗೂ ಉಚಿತ ವಿದ್ಯುತ್, 10 ಕೆ.ಜಿ ಅಕ್ಕಿ, ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ಸಿಗುತ್ತಿದೆ ಎಂದು ಹೇಳಿದರು.

ಬಿಜೆಪಿಯವರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಬಿಜೆಪಿಯವರು ನಮಗೆ ನೆರವಾಗಲಿಲ್ಲ, ಕಾಂಗ್ರೆಸ್ ಸರ್ಕಾರ ನೆರವಾಗಿದೆ ಎಂದು ಬಿಜೆಪಿಗೆ ಮತ ಹಾಕಿದ ಮಹಿಳೆಯರು ಭಾವಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿಯಲ್ಲಿ ನಾನು ಸಮೀಕ್ಷೆ ಮಾಡಿಸಿದ್ದು, ಮುಂದಿನ ಚುನಾವಣೆಯಲ್ಲಿ ಈ ಜಿಲ್ಲೆಗಳಿಂದ ಕನಿಷ್ಠ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು. ಬೆಳ್ತಂಗಡಿ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ವರದಿ ಹೇಳುತ್ತಿದೆ ಎಂದು ಹೇಳಿದರು.





























































































error: Content is protected !!
Scroll to Top