(ಕೆಲವು)ಬೇಸಿಗೆ ಶಿಬಿರಗಳು ಯಾಕೆ ಹೀಗೆ?

ಮಕ್ಕಳ ಪರೀಕ್ಷೆಗಳ ಒತ್ತಡವು ಮುಗಿದು ಇನ್ನೇನು ರಜೆಯು ಆರಂಭವಾಯಿತು ಅಂದರೆ ಹೆತ್ತವರ ಆತಂಕದ ಮಾತುಗಳು ಬೇಡ ಅಂದರೂ ನನ್ನ ಕಿವಿಗೆ ಅಪ್ಪಳಿಸುತ್ತವೆ – ರಜೆಯಲ್ಲಿ ನಮ್ಮ ಈ ತುಂಟ ಮಕ್ಕಳನ್ನು ಸಂಭಾಳಿಸುವುದು ಹೇಗೆ? ಇಡೀ ದಿನ ಮೊಬೈಲ್ ಹಿಡಿದು ಮೂಲೆಯಲ್ಲಿ ಕೂರುವ ಮಕ್ಕಳನ್ನು ಕಾಯುವುದು ಹೇಗೆ? ಮಕ್ಕಳ ತಂಟೆಗಳನ್ನು ಸಹಿಸಿಕೊಳ್ಳುವುದು ಹೇಗೆ? ಈ ಮಕ್ಕಳಿಗೆ ರಜೆ ಯಾಕಾದರೂ ಕೊಡುತ್ತಾರೋ? ಅಪ್ಪ, ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುವವರು ಅಂತಾದರೆ ಈ ಸಮಸ್ಯೆಯು ಇನ್ನಷ್ಟು ಉಲ್ಬಣ ಆಗುತ್ತದೆ. ಮಕ್ಕಳು ಹೇಳಿ ಕೇಳಿ ತುಂಬಾ ಕ್ರಿಯಾಶೀಲರು ಹೌದು. ಅವರನ್ನು ಇಡೀ ದಿನ ಎಂಗೇಜ್ ಮಾಡುವುದೇ ಬಹಳ ದೊಡ್ಡ ಸಮಸ್ಯೆ. ಮೊಬೈಲ್ ಫೋನಿಗೆ ಅಥವಾ ಟಿವಿಗೆ ಮಕ್ಕಳು ಅಡಿಕ್ಟ್ ಆದರೆ ಏನು ಮಾಡುವುದು ಎನ್ನುವುದು ಹೆತ್ತವರ ಇನ್ನೊಂದು ಆತಂಕ. ಐಪಿಎಲ್ ಪಂದ್ಯಗಳನ್ನು ನೋಡಿ ಮಕ್ಕಳು ಸಮಯ ವ್ಯರ್ಥ ಮಾಡ್ತಾರೆ ಎನ್ನುವ ದೂರು. ಈ ರಜೆಗಳು ಯಾಕಾಗಿ ಬರುತ್ತವೋ ಎನ್ನುವ ಹೆತ್ತವರು ನಮಗೆ ಎಲ್ಲೆಡೆಯೂ ದೊರೆಯುತ್ತಾರೆ.

ಅಲ್ಲಲ್ಲಿ ತಲೆ ಎತ್ತುತ್ತಿರುವ ಬೇಸಿಗೆ ಶಿಬಿರಗಳು!
ಅದಕ್ಕೆ ಪೋಷಕರು ಕಂಡುಕೊಂಡಿರುವ ಒಂದು ತಾತ್ಕಾಲಿಕ ಪರಿಹಾರ ಅಂದರೆ ಅದು ಬೇಸಿಗೆ ಶಿಬಿರಗಳು. ಅಂತಹ ಕೆಲವು ಶಿಬಿರಗಳು ಮಕ್ಕಳ ಕ್ರಿಯಾಶೀಲತೆಗೆ ಸಪೋರ್ಟ್ ಆಗಿ ನಿಲ್ಲುತ್ತವೆ. ಆದರೆ ಹೆಚ್ಚಿನ ಮಕ್ಕಳ ರಜಾ ಶಿಬಿರಗಳು ‘ಪರ್ಯಾಯ ಶಾಲೆಗಳೇ ‘ಆಗಿರುತ್ತವೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು! ಅಲ್ಲಿ ಕೂಡ ಬೆತ್ತ ಹಿಡಿದು ಪಾಠ ಮಾಡುವ ಮೇಷ್ಟ್ರು ಇರುತ್ತಾರೆ. ಅನಾರೋಗ್ಯಕರ ಸ್ಪರ್ಧೆಯು ಇರುತ್ತದೆ. ಹೆತ್ತವರಿಗೆ ಕಿರಿಕಿರಿ ಆಗುವಷ್ಟು ಮನೆಕೆಲಸಗಳು ಇರುತ್ತವೆ. ನೂರಾರು ಸಣ್ಣ ಸಣ್ಣ ಮಕ್ಕಳನ್ನು ಕೂಡಿ ಹಾಕಿ ಕುಣಿಸುವ ಕಮರ್ಷಿಯಲ್ ಶಿಬಿರಗಳು ಇರುತ್ತವೆ! ಮಕ್ಕಳಿಗೆ ರಜೆಯ ಸಜೆಯಾಗಿ ಪರಿಣಮಿಸುವ ಇಂತಹ ಶಿಬಿರಗಳು ಮಕ್ಕಳ ಸೃಜನಶೀಲತೆಯನ್ನು ಸಾಯಿಸಿಬಿಡುತ್ತವೆ ಎಂದು ಖಂಡಿತವಾಗಿ ಹೇಳಬಲ್ಲೆ. ಈ ರಜಾ ದಿನದ ಶಿಬಿರಗಳಿಗೊಂದು ಮಾರ್ಗದರ್ಶಿ ಸೂತ್ರಗಳು ಇದ್ದರೆ ಒಳ್ಳೆಯದು ಎಂದು ನನ್ನ ಪ್ರಾಮಾಣಿಕ ಅನಿಸಿಕೆ. ಈ ಶಿಬಿರಗಳು ಮಕ್ಕಳಿಗೆ ‘ಪರ್ಯಾಯ ಶಾಲೆಗಳು’ ಎಂದನ್ನಿಸಬಾರದು. ಈ ಶಿಬಿರಗಳಲ್ಲಿ ಮಕ್ಕಳು ಕಲಿತ ಒಂದೆರಡು ವಾರಗಳ ನೃತ್ಯ, ಸಂಗೀತ, ನಾಟಕಗಳು ಮಕ್ಕಳಿಗೆ ಒಂದಷ್ಟು ಪ್ರೇರಣೆ ಕೊಡುತ್ತವೆ ಹೌದು. ಆದರೆ ಅವುಗಳನ್ನು ಎಷ್ಟು ಮಕ್ಕಳು ಮುಂದುವರೆಸಿಕೊಂಡು ಹೋಗುತ್ತಾರೆ? ಅಥವಾ ಎಷ್ಟು ಹೆತ್ತವರು ಅವುಗಳ ಕಲಿಕೆಗೆ ಮುಂದೆ ಪ್ರೋತ್ಸಾಹ ಕೊಡುತ್ತಾರೆ? ನನ್ನ ಬಳಿ ಉತ್ತರವಿಲ್ಲ.

ನೇಚರ್ ಕ್ಯಾಂಪುಗಳ ಅಗತ್ಯ ಇದೆ
ನಾಲ್ಕು ಗೋಡೆಗಳ ನಡುವೆ ನಡೆಯುವ ಶಿಬಿರಗಳಿಗಿಂತ ಪ್ರಕೃತಿಯ ಮಡಿಲಲ್ಲಿ ನಡೆಯುವ ನೇಚರ್ ಕ್ಯಾಂಪುಗಳು ಈ ದಿಸೆಯಲ್ಲಿ ಹೆಚ್ಚು ಪರಿಣಾಮಕಾರಿ ಆಗಬಲ್ಲದು. ಅಲ್ಲಿ ಹಳ್ಳಿಯ ಆಟಗಳು ಇರಬೇಕು. ಸ್ಟೋನ್ ಆರ್ಟ್, ರಿವರ್ ವಾಕ್, ನೀರಾಟಗಳು, ಮಣ್ಣಿನ ಆಟಗಳು, ಆವೆಮಣ್ಣಿನ ಕಲಾಕೃತಿಗಳು, ಮರದ ತೊಗಟೆಯ ಮೇಲೆ ಪೇಂಟಿಂಗ್ ಇರಬೇಕು. ಪ್ರಾಕೃತಿಕ ಆಹಾರವು ಇರಬೇಕು.

ನನ್ನೂರು ಕಾರ್ಕಳದಲ್ಲಿ ‘ ಚಿತ್ತಾರ ಸ್ಕೂಲ್ ಆಫ್ ಆರ್ಟ್’ ಎಂಬ ಕಲಾಸಂಸ್ಥೆಯು ನಡೆಸುವ ‘ಕಲಾ ಹೆಜ್ಜೆ ‘ ಎಂಬ ಹೆಸರಿನ ಹತ್ತು ದಿನಗಳ ನೇಚರ್ ಕ್ಯಾಂಪ್ ಒಂದು ಮಾದರಿಯಾದ ಬೇಸಗೆ ಶಿಬಿರವಾಗಿದೆ. ಈ ಶಿಬಿರಕ್ಕಾಗಿ ಮಕ್ಕಳು ಪ್ರತೀ ವರ್ಷವೂ ಚಾತಕ ಪಕ್ಷಿಯಂತೆ ಕಾಯುತ್ತಾರೆ. ಇಡೀ ಶಿಬಿರದಲ್ಲಿ ಫನ್ ಎಲಿಮೆಂಟ್, ಮನರಂಜನೆ, ಶಿಕ್ಷಣ, ಅನುಭವ, ಕಲಾಸಕ್ತಿ, ಪ್ರಕೃತಿ ಪ್ರೇಮ ಎಲ್ಲವೂ ಇದೆ. ಅವರನ್ನು ಖಂಡಿತವಾಗಿಯೂ ಅಭಿನಂದಿಸೋಣ.

ಜಗತ್ತಿನ ಪ್ರತಿಯೊಂದು ಮಗುವೂ ಕ್ರಿಯಾಶೀಲವೇ!
ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ಕುತೂಹಲ ಇವುಗಳು ಮಕ್ಕಳ ಸಹಜವಾದ ಗುಣಗಳು. ಪ್ರಶ್ನೆಗಳನ್ನು ಕೇಳುವುದು, ಹೊಸತನ್ನು ಬಯಸುವುದು, ಕ್ರಿಯಾಶೀಲವಾಗಿ ಯೋಚನೆ ಮಾಡುವುದು, ದೈಹಿಕ ಚಟುವಟಿಕೆ ಬಯಸುವುದು, ಆಟಗಳ ಮೂಲಕ ಕಲಿಯುವುದು, ಆನಂದವನ್ನು ಪಡೆಯುವುದು, ಪ್ರತೀ ಒಂದು ಮಗುವಿನ ಸಹಜವಾದ ಅಭಿವ್ಯಕ್ತಿಗಳು. ಇದನ್ನೇ ಹೆತ್ತವರು ತಂಟೆ ಎಂದು ಕರೆಯುವುದು! ಮಕ್ಕಳು ಕುತೂಹಲದ ಪ್ರಶ್ನೆಗಳನ್ನು ಕೇಳಿದಾಗ ಉತ್ತರಿಸುವ ತಾಳ್ಮೆಯನ್ನು ತೆಗೆದುಕೊಳ್ಳದೆ
‘ಅಧಿಕ ಪ್ರಸಂಗಿ ‘ಎಂದು ಬೈಯ್ಯುವ ಅನೇಕ ಹೆತ್ತವರು ಮತ್ತು ಶಿಕ್ಷಕರು ಇಂದಿಗೂ ಇದ್ದಾರೆ! ಎಡಿಸನ್ ಕಾಲದಲ್ಲಿಯೂ ಅಂತಹ ಒಬ್ಬರು ಶಿಕ್ಷಕಿ ಇದ್ದರು ಅಲ್ವಾ?

ಚಿತ್ರ ಬರೆದು ಮಗು ಗೋಡೆಯನ್ನು ಕೆಡಿಸಿತು ಎಂದು ಮಗುವನ್ನು ದೂರದೇ ಅದರ ಕೈಗೆ ಕ್ಯಾನ್ವಾಸ್ ಅಥವಾ ಡ್ರಾಯಿಂಗ್ ಪುಸ್ತಕವನ್ನು ಕೊಟ್ಟರೆ ಆ ಮಗು ಮುಂದೆ ಒಳ್ಳೆಯ ಕಲಾವಿದ ಆಗಬಹುದು.

12- 14 ಟ್ಯಾಲೆಂಟ್ ಅರಳುವ ವಯಸ್ಸು
12-14 ವರ್ಷದ ಮಗುವಿಗೆ ಅದರ ನಿಜವಾದ ಟ್ಯಾಲೆಂಟನ್ನು ಪರಿಚಯಿಸುವ ಕೆಲಸವನ್ನು ಪೋಷಕರು ಮತ್ತು ಶಿಕ್ಷಕರು ಮಾಡಬೇಕು. ಮಗು ಒಂದು ಒಳ್ಳೆಯ ಕಲಾವಿದ, ಗಾಯಕ, ಸಾಹಿತಿ, ಬರಹಗಾರ, ಮಾತುಗಾರ ಆಗಿ ರೂಪುಗೊಳ್ಳುವ ನಿರ್ಣಾಯಕ ಅವಧಿ ಅದು. ಈ ಪ್ರಾಯದ ಮಕ್ಕಳಿಗೆ ಪ್ರೋತ್ಸಾಹದ ವಾತಾವರಣ, ಒಂದಿಷ್ಟು ತರಬೇತಿ, ಮೆಚ್ಚುಗೆಯ ಮಾತುಗಳು, ಸೂಕ್ತವಾದ ವೇದಿಕೆಗಳು ದೊರೆತರೆ ಆ ಮಗುವು ಮುಂದೆ ಸಂತಸದಾಯಕವಾದ ಕಲಿಕೆಯಲ್ಲಿ ತೊಡಗುತ್ತದೆ. ಬೇಸಿಗೆ ಶಿಬಿರಗಳು ಇಂತಹ ಕೆಲಸ ಮಾಡಬೇಕು. ಅದರಿಂದ ಮಗುವಿಗೂ, ಹೆತ್ತವರಿಗೂ ಮುಂದೆ ಭಾರೀ ಕೀರ್ತಿ ಬರಬಹುದು. ಈ ಬಗ್ಗೆ ಹೆತ್ತವರು ಯೋಚಿಸಬೇಕು ಅಲ್ವಾ?

ಮರೆಯಾಗುತ್ತಿರುವ ಅಜ್ಜಿ ಮನೆಯೆಂಬ ರೂಪಕ!
ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ಪರಮಾಣು ಕುಟುಂಬಗಳು ಯಾವಾಗ ಉಂಟಾದವೋ ಆಗ ನಾವು ಕಳೆದುಕೊಂಡದ್ದು ಈ ‘ಅಜ್ಜಿ ಮನೆ ‘ ಎಂಬ ಸುಂದರವಾದ ರೂಪಕವನ್ನು! ನಮ್ಮ ಬಾಲ್ಯವನ್ನು ಶ್ರೀಮಂತವಾಗಿ ಮಾಡಿದ್ದೇ ಈ ಅಜ್ಜಿ ಮನೆಗಳು. ಹಳ್ಳಿಯ ಪರಿಸರ, ಚೆನ್ನೆಮಣೆಯಂತಹ ಜಾನಪದ ಆಟಗಳು, ಸುಂದರವಾದ ತೊರೆಗಳು, ಫಲವತ್ತಾದ ಗದ್ದೆ, ಮಣ್ಣಿನ ಅಂಗಳ, ಮಡಲಿನ ಚಪ್ಪರ, ಮುದ ನೀಡುವ ಲಗೋರಿ, ಕಣ್ಣಾ ಮುಚ್ಚೆ ಆಟ, ಮರಕೋತಿ ಆಟಗಳು, ಮರ ಹತ್ತಿ ಕಿತ್ತು ತಿನ್ನುವ ಹುಳಿ ಮಾವಿನ ಹಣ್ಣು ಮತ್ತು ಗೇರುಹಣ್ಣು, ಮಣ್ಣಿನ ಆಟಗಳು, ಆಸಕ್ತಿಯಿಂದ ಕೇಳುವ ಅಜ್ಜಿ ಹೇಳುವ ಕಥೆಗಳು… ಇವ್ಯಾವುದೂ ಈಗಿನ ಮಕ್ಕಳಿಗೆ ಸಿಗುತ್ತಾ ಇಲ್ಲ ಎನ್ನುವುದು ನೋವಿನ ಸಂಗತಿ! ಅಜ್ಜಿ ಮಾಡುವ ತರಹೇವಾರಿ ತಿಂಡಿಗಳು, ಹಪ್ಪಳ, ಸಂಡಿಗೆ, ಮಾವಿನ ರಸಾಯನ, ಮಾಂಬಳ, ಹಲಸಿನ ಹಣ್ಣಿನ ಪಾಯಸ, ಉಪ್ಪಿನಕಾಯಿ, ಒಂದೆಲಗದ ಚಟ್ನಿಗಳು ಈಗಿನ ಮಕ್ಕಳಿಗೆ ದೊರೆಯುತ್ತಿಲ್ಲ ಅಲ್ಲವೇ?

ಅಜ್ಜಿಗೆ ಪಿಝಾ, ಬರ್ಗರ್ ಮಾಡಲು ಗೊತ್ತಿಲ್ಲ!
ಹಳ್ಳಿಯಲ್ಲಿ ಅಜ್ಜಿಮನೆ ಇದ್ದರೂ ಈಗಿನ ಆಧುನಿಕ ಮೊಮ್ಮಕ್ಕಳು ಹೋಗಲು ಕೇಳುತ್ತಿಲ್ಲ ಅನ್ನುತ್ತಾರೆ ಹೆತ್ತವರು. ಏಕೆಂದರೆ ಅಜ್ಜಿಗೆ ಪಿಝಾ, ಬರ್ಗರ್ ಮಾಡಲು ಬರುವುದಿಲ್ಲ! ಅಜ್ಜಿಯ ಮನೆಯಲ್ಲಿ ಮೊಬೈಲ್ ನೆಟ್ವರ್ಕ್ ದೊರೆಯುವುದಿಲ್ಲ! ಅಜ್ಜಿ ಮನೆಯಲ್ಲಿ ಟಿವಿ ಇಲ್ಲ! ಎಲ್ಲಕ್ಕಿಂತ ಮುಖ್ಯವಾಗಿ ಅಜ್ಜಿಗೆ ಇಂಗ್ಲೀಷ್ ಮಾತಾಡಲು ಬರುವುದಿಲ್ಲ ಅಂತಾರೆ ಈಗಿನ ಆಧುನಿಕ ಮಕ್ಕಳು!

ನಾವೆಲ್ಲರೂ ನಮ್ಮ ಇಡೀ ಬಾಲ್ಯವನ್ನು ಕಳೆದಿರುವ ಈ ಅಜ್ಜಿಯ ಮನೆಗಳು ಮಕ್ಕಳು ಈಗ ಅಂಟಿಕೊಂಡಿರುವ ಬೇಸಿಗೆ ಶಿಬಿರಕ್ಕಿಂತ ಎಷ್ಟೋ ಅದ್ಭುತವಾಗಿ ಇದ್ದವು! ಇದರ ಪರಿಣಾಮವಾಗಿ ನಮ್ಮ ಭವಿಷ್ಯದ ಮಕ್ಕಳು ಒಂದು ಶ್ರೀಮಂತವಾದ ಸಂಸ್ಕೃತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ನಿಮಗೆ ಅನ್ನಿಸುತ್ತಿದೆಯಾ?































































































error: Content is protected !!
Scroll to Top