ದುಬೈ : ಐಸಿಸಿ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಭಾರತ ಜಯಭೇರಿ ಬಾರಿಸಿದೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ ಗಳಿಂದ ಗೆದ್ದು ಬೀಗಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೀವಿಸ್ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಪೇರಿಸಿತು. ಗುರಿಯನ್ನು ಬೆನ್ನಟ್ಟಿದ ಭಾರತ ಒಂದು ಓವರ್ ಬಾಕಿ ಇರುವಾಗಲೇ ಜಯ ಸಾಧಿಸಿತು. 50 ಎಸೆತಗಳನ್ನು ಎದುರಿಸಿದ ಶುಭ್ಮನ್ ಗಿಲ್ ಅವರು 31 ರನ್ ಗಳನ್ನು ಗಳಿಸಿದರು. 19ನೇ ಓವರ್ ನ 4ನೇ ಎಸೆತದಲ್ಲಿ ಅರನ್ನು ಫಿಲಿಪ್ಸ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ವನ್ ಡೌನ್ ಆಗಿ ಬಂದ ವಿರಾಟ್ ಕೊಹ್ಲಿ ಅವರು ಸಹ 1 ರನ್ ಗೆ ಪೆವಿಲಿಯನ್ ಸೇರಿಕೊಂಡರು. 76 ರನ್ ಗಳಿಸಿದ್ದ ರೋಹಿತ್ ಶರ್ಮಾ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಕಳೆದುಕೊಂಡರು. 83 ಎಸೆತಗಳಿಂದ ಅವರು 7 ಬೌಂಡರಿ ಮತ್ತು 3 ಸಿಕ್ಸರ್ ಗಳಿದ್ದ 76 ರನ್ ಗಳಿಸಿದರು. ಆ ಬಳಿಕ ಕೆಎಲ್ ರಾಹುಲ್ (34 ನಾಟೌಟ್) ಮತ್ತು ರವೀಂದ್ರ ಜಡೇಜಾ (9 ನಾಟೌಟ್) ತಂಡವನ್ನು ಗೆಲುವಿನ ದಡ ಸೇರಿಸಿದರು. ಅಯ್ಯರ್ 48, ಅಕ್ಷರ್ 29 ರನ್ ಕಾಣಿಕೆ ನೀಡಿದರು. ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ್ದು ಡೇರಿಲ್ ಮಿಚೆಲ್. ಅವರು 101 ಎಸೆತಗಳಲ್ಲಿ 63 ರನ್ ಗಳಿಸಿದರು. ಗ್ಲೆನ್ ಫಿಲಿಪ್ 34 ರನ್ ಬಾರಿಸಿದರು. ರಚಿನ್ ರವೀಂದ್ರ 37 ರನ್, ಮಿಚೆಲ್ ಬ್ರೇಸ್‌ವೆಲ್ ಅರ್ಧ ಶತಕ ಗಳಿಸಿದರು.
ಚಾಂಪಿಯನ್ಸ್ ಟ್ರೋಫಿ ಭಾರತದ ಮಡಿಲಿಗೆ


































