ಅಧ್ಯಯನ – ಸಮರ್ಥ ವಿಷಯ ಮಂಡನೆ ಮೂಲಕ ಸದನದ ಗಮನ ಸೆಳೆದ ಕಾರ್ಕಳದ ಶಾಸಕ

ಪ್ರತಿ ಬಾರಿ ಅಧಿವೇಶನ ನಡೆಯುವಾಗ ನಾನು ಬಹಳ ಕುತೂಹಲದಿಂದ ದೃಷ್ಟಿ ನೆಡುವುದು ಈ ಬಾರಿ ಸದನದಲ್ಲಿ ಯಾರು ಹೇಗೆ ವಿಷಯ ಮಂಡಿಸಿದರು? ಯುವ ಪತ್ರಕರ್ತರಾದ ನಾವು ಕಲಿಯುವುದು ಏನಿದೆ? ಕಲಿತಿದ್ದು ಎಷ್ಟು? ಮಾತುಗಾರಿಕೆ ಹೇಗೆ ಇರಬೇಕು? ಹೀಗೆ ಪ್ರತಿಯೊಂದರ ಕಡೆ ಗಮನ ಇರುತ್ತದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿವೇಶನ ನಡೆದಾಗ ಬಹಳ‌ ತೀಕ್ಷ್ಣ ಹಾಗೂ ಹರಿತದ ಮಾತುಗಾರಿಕೆಗೆ ಸದನ ಸಾಕ್ಷಿ ಆಗಿತ್ತು. ಕಾರಣ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದು ವಿಪಕ್ಷ ನಾಯಕ ಆಗಿದ್ದರು. ವಿಪಕ್ಷ ಸ್ಥಾನದಲ್ಲಿ ಇದ್ದಾಗ ಆರ್ಭಟಕ್ಕೆ, ಆರೋಪಕ್ಕೆ, ಆವೇಶಕ್ಕೆ ಅವಕಾಶ ಹೆಚ್ಚು. ಕಾರಣ ಅಧಿಕಾರಕ್ಕೆ ಮತ್ತೆ ಮರಳಬೇಕು, ಆಡಳಿತ ಪಕ್ಷದ ಹುಳುಕು ಎತ್ತಿ ತೋರಿಸಬೇಕು ಎನ್ನುವ ಅದಮ್ಯ ಉತ್ಸಾಹ ಇರುತ್ತದೆ. ಆ ಉತ್ಸಾಹ ಸಿದ್ದರಾಮಯ್ಯ ಅವರ ಬಳಿ ವಿಪಕ್ಷ ನಾಯಕನಾಗಿದ್ದಾಗ ಇತ್ತು.

ಆಗ ಅವರೆಲ್ಲ ಇದ್ದರು…
ಹಿಂದೆ ಸದನದ ಒಳಗೆ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುವ ಮಾತು ಇತ್ತು. ಜಗಳವಾಡಿಯಾದರೂ ಪಾರ್ಟಿ ಸಮರ್ಥನೆ ಮಾಡಿಕೊಳ್ಳುವ ಹಿಂದುಳಿದ ನಾಯಕ ಈಶ್ವರಪ್ಪ ಇದ್ದರು. ಮಾಧುಸ್ವಾಮಿಯವರಂಥ ಮಾತಿನ ಮೋಡಿಗಾರ, ಬಸವರಾಜ ಬೊಮ್ಮಾಯಿ ಅವರಂತಹ ಅನುಭವಸ್ಥ ವಿಷಯ ಪಂಡಿತ, ಸಿ.ಟಿ. ರವಿ ಅವರಂತಹ ಉತ್ತಮ ವಾಗ್ಮಿ, ಪಿ.ರಾಜೀವ್ ಅಂತಹ ಓದಿಕೊಂಡಿದ್ದ ವ್ಯಕ್ತಿ, ಏರುದನಿಯ ಬಿಸಿ ರಕ್ತದ ಸುನಿಲ್ ಕುಮಾರ್, ಕಾರಜೋಳ ಅಂತಹ‌ ಹಿರಿಯರು, ಕಾಗೇರಿಯಂತಹ ವಿಚಾರವಾದಿಗಳು, ಹೀಗೆ ಟೀಮ್ ಬಿಜೆಪಿಯಲ್ಲಿ ಸಮತೋಲನ ಇತ್ತು.

ಅವರಾರು ಈಗ ಇಲ್ಲಿಲ್ಲ…
ಆದರೆ ಈಗ ಪ್ರಸ್ತಾಪಿಸಿದ ಇಷ್ಟು ಹೆಸರುಗಳ ಪೈಕಿ ಯಡಿಯೂರಪ್ಪ ಸಕ್ರಿಯ ರಾಜಕೀಯದಲ್ಲಿಲ್ಲ. ಸಿ.ಟಿ‌. ರವಿ ವಿಧಾನಸಭೆಯಲ್ಲಿಲ್ಲ. ಬೊಮ್ಮಾಯಿಯವರು ಸಂಸದರಾಗಿದ್ದಾರೆ, ಮಾಧುಸ್ವಾಮಿ ಚುನಾವಣೆಯಲ್ಲಿ ಗೆದ್ದಿಲ್ಲ. ಕಾಗೇರಿ, ಕಾರಜೋಳ ಶಾಸಕರಾಗಿಲ್ಲ. ಪಿ.ರಾಜೀವ್‌ ಅವರನ್ನು ಕ್ಷೇತ್ರದ ಜನ ಗೆಲ್ಲಿಸಿಲ್ಲ. ಹೀಗಾಗಿ‌ ಬಿಜೆಪಿ‌ಯಲ್ಲಿ ಈಗ ಇರುವ 65 ಶಾಸಕರ ಪೈಕಿ ಸದನದಲ್ಲಿ ಆಗುವ ಚರ್ಚೆಯಲ್ಲಿ ಪಾಲ್ಗೊಂಡು ಸುದ್ದಿ ಆಗುವವರ ಸಂಖ್ಯೆ ಕಡಿಮೆ. ಒಂದಲ್ಲ ಒಂದು ಕಾರಣಕ್ಕೆ ಸದಾ ನಿರಾಸೆ ಭಾವದಲ್ಲೆ ಇರುವ ಟೀಮ್ ಬಿಜೆಪಿ ಒಳಗೆ ಇಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ರಾಜ್ಯಪಾಲರ‌ ವಂದನಾ ನಿರ್ಣಯದ ಮೇಲೆ ಮಾಡಿದ ಭಾಷಣ, ಆಡಿದ ಮಾತು ಸದನದ ಗಮನ ಸೆಳೆದಿದ್ದು, ಸದ್ಯದ ಬಿಜೆಪಿಯ ಒಳ ಜಗಳದಲ್ಲಿ ಆಶಾದಾಯಕವಾಗಿತ್ತು. ಎರಡನೇ ಹಂತದ ಲೀಡರ್ಸ್ ಪೈಕಿ ಸುನಿಲ್ ಅಂಥವರಿಗೆ ಗುರುತರ ಜವಾಬ್ದಾರಿ ನೀಡಿದರೆ ನಿರ್ವಹಿಸಬಲ್ಲರು ಎನ್ನುವುದನ್ನು ತೋರುವ ದಿಕ್ಸೂಚಿ ಭಾಷಣದಂತಿತ್ತು. ಸುನಿಲ್‌ ಕುಮಾರ್‌ಗೆ ಮಾತುಗಾರಿಕೆಯಲ್ಲಿ ಹಿಡಿತ ಇದೆ. ಹತ್ತು ಜನ ಎದುರಾಳಿಗಳು ಎದ್ದು ನಿಂತು ಚೀರಿ ಗದ್ದಲ ಎಬ್ಬಿಸಿದರೂ ಅವರೆಲ್ಲರ ಗದ್ದಲಕ್ಕೆ ತನ್ನದೊಂದೇ ಸಾಕು ಎನ್ನುವ ಕಂಚಿನ ಕಂಠ‌ ಇದೆ. ತನ್ನೊಳಗಿರುವ ಆ ಎಲ್ಲ ಪ್ಲಸ್‌ಗಳನ್ನು ಬಳಸಿಕೊಂಡು ಸುನಿಲ್ ಮಾತಾಡಿದಂತೆ ಕಂಡಿತು.

ಶೋಕ ಗೀತೆ ಎನ್ನುವುದು ಗೊತ್ತಿರಲಿಲ್ಲ
ಅವರ ಭಾಷಣದ ಆರಂಭ ಉತ್ತಮವಾಗಿತ್ತು. ನೀ ಹಿಂಗಾ ನೋಡಬ್ಯಾಡ ನನ್ನ, ತಿರುಗಿ ನಾ ಹೆಂಗಾ ನೋಡಲಿ ನಿನ್ನಾ… ಬೇಂದ್ರೆ ಅಜ್ಜನ ಸಾಲುಗಳನ್ನು ಪ್ರಸ್ತಾಪ ಮಾಡಿ, ಈ ಹಾಡನ್ನು ನಾನು ಕರ್ನಾಟಕದ ಗ್ಯಾರಂಟಿಗೆ ಅನ್ವಯಿಸಿ ಹೇಳುತ್ತಿದ್ದೇನೆ. ಆರಂಭದಲ್ಲಿ ಈ ಹಾಡನ್ನು ನಾವೆಲ್ಲಾ ಪ್ರೇಮಗೀತೆ ಎಂದು ಭಾವಿಸಿದ್ದೇವು. ಬಳಿಕ ಗೊತ್ತಾಗಿದ್ದು ಬೇಂದ್ರೆಯವರು ತನ್ನ ಮಗ ತೀರಿಹೋಗಿದ್ದ ವೇಳೆ ಮಡದಿಯ ದುಃಖ ನೋಡಿ ಬರೆದ ಸಾಲು ಎನ್ನುವುದು. ಆರಂಭದಲ್ಲಿ ಸರ್ಕಾರದ ಈ ಗ್ಯಾರಂಟಿಯನ್ನು ನಾವೆಲ್ಲಾ ಹಾಗೇ ಅಂದುಕೊಂಡಿದ್ದೇವು. ಆದರೆ ಬರಬರುತ್ತಾ ಅರ್ಥ ಆಗಿದ್ದು ಏನು ಅಂದ್ರೆ ಇದರಲ್ಲಿ ಖುಷಿ ಇಲ್ಲ, ದುಃಖವೇ ತುಂಬಿದೆ‌ ಎಂದು.
ಹೀಗೆ ತಮ್ಮ ಮಾತಿಗೆ ಚಾಲನೆ ನೀಡಿದ ಸುನಿಲ್‌ ಮುಂದೆ ಯಾವ ವಿಷಯ ಪ್ರಸ್ತಾಪ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿಸಿದರು. ಸುನಿಲ್ ಯಾವ ಹೊಸ ವಿಷಯ ಪ್ರಸ್ತಾಪ ಮಾಡಿದರು ಎನ್ನುವುದಕ್ಕಿಂತ ಪ್ರಸ್ತಾಪ ಮಾಡಿದ ವಿಷಯವನ್ನು ಪ್ರಸ್ತುತಪಡಿಸಿದ ರೀತಿ ಮೆಚ್ಚುವಂತಿತ್ತು. ಸರ್ಕಾರವನ್ನು ಕೆರಳಿಸುವಂತೆ ಇತ್ತು. ಸರ್ಕಾರ ಇಷ್ಟೆಲ್ಲ ತಪ್ಪು ಮಾಡಿದೆಯಾ ಎಂದು ಯೋಚಿಸುವಂತೆ ಇತ್ತು.

ಸಿಎಂ ಟ್ವೀಟ್ ಮಾಡಿದರೆ ಸಾಕಿತ್ತು
ನಕ್ಸಲ್ ಶರಣಾಗತಿ ವಿಷಯದ ಬಗ್ಗೆ ಮಾತನಾಡುವಾಗಲಂತೂ ಸುನಿಲ್ ತಮ್ಮ ಬಜರಂಗದಳದ ದಿನಗಳಲ್ಲಿ ಮಾಡುತ್ತಿದ್ದ ಉಗ್ರ ಭಾಷಣ ನೆನಪಿಸಿತು. ನಕ್ಸಲರ ಶರಣಾಗತಿ ತಪ್ಪು ಎನ್ನುವುದು ನನ್ನ ವಾದ ಅಲ್ಲ. ಆದರೆ ರಾತ್ರಿ ಹಗಲು ಎನ್ನದೆ ನಕ್ಸಲ್ ನಿಗ್ರಹ ದಳ ಕೂಂಬಿಂಗ್ ಮಾಡಿದರೂ ಸಿಗದ ನಕ್ಸಲರು ಸಿಎಂ ಸಿದ್ದರಾಮಯ್ಯ ಮಾಡಿದ ಒಂದು ಟ್ವೀಟ್ ಓದಿ ಅದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಟ್ವೀಟ್ ಮಾಡಿದ ಎರಡೇ ದಿನಕ್ಕೆ ಶರಣಾಗುತ್ತಾರೆ ಎಂದರೆ ಕೃಷ್ಣದಲ್ಲಿ ಯಾರು ಕುಳಿತಿದ್ದಾರೆ? ಎರಡೇ ದಿನಕ್ಕೆ ಬಂದು ಸಿದ್ದರಾಮಯ್ಯ ಸಮ್ಮುಖದಲ್ಲಿ ತಲೆಬಾಗಿ ನಿಲ್ಲುತ್ತಾರೆ ಇದೆಲ್ಲಾ ಹೇಗೆ ಸಾಧ್ಯ. ಸುನಿಲ್ ಮಾತು ಕೇಳುಗನಿಗೆ ಹೇಗೆ ಅನಿಸುತ್ತಿತ್ತು ಎಂದರೆ, ಹೌದಲ್ವಾ ನಕ್ಸಲರ ಹಿಡಿಯಲು ಯಾಕೆ ಇಷ್ಟೊಂದು ಖರ್ಚು ಮಾಡಬೇಕಿತ್ತು ಸರಕಾರ? ಯಾಕೆ ರಾತ್ರಿ ಹಗಲೆನ್ನದೇ ಬೆಟ್ಟ ಸುತ್ತಬೇಕಿತ್ತು? ಸಿದ್ದರಾಮಯ್ಯ ಒಂದು ಟ್ವೀಟ್ ಮಾಡಿ ಬಿಡಬಹುದಿತ್ತಲ್ಲಾ ಎಂದು ನಾಳೆ ಯಾರಾದರೂ ಕೇಳಿದರೂ ತಪ್ಪಲ್ಲ ಎಂದೆನಿಸಿತು‌. ಸುನಿಲ್ ಮಾತಿನಲ್ಲಿ ಆಕ್ರೋಶ ಇತ್ತು. 2008ರ ಚುನಾವಣೆಯಲ್ಲಿ ನಕ್ಸಲರಿಂದ ಕೊಲ್ಲಲ್ಪಟ್ಟ ತನ್ನ ಕಾರ್ಯಕರ್ತರಿಬ್ಬರ ಮೇಲಿನ ಪ್ರೀತಿ ಹಾಗೂ ನೋವು ವ್ಯಕ್ತವಾಗುತ್ತಿತ್ತು. ನಕ್ಸಲ್ ಬಗ್ಗೆ ಅರಿವಿರುವ ಜಿಲ್ಲೆಯಿಂದ ಬಂದ ಕಾರಣಕ್ಕೂ ಇರಬಹುದು ಆ ವಿಷಯದ ಮೇಲೆ ಮಾತನಾಡುವಾಗ ಅದರೊಳಗೆ ಇಳಿದು ಹೊರಬಂದಂತೆ ಕಾಣಿಸಿತು.

ಸಿಎಂ ಸದನ ಭಾಷಣಕ್ಕೂ ಜಾಹಿರಾತು
ಆಡಳಿತ ಪಕ್ಷದವರನ್ನು ಕೆರಳಿಸುವ ಅಥವಾ ಅವರಿಂದ ಉತ್ತರ ಬಯಸುವ ಇನ್ನೊಂದು ಸಂಗತಿ ಎತ್ತಿದರು ಸುನಿಲ್‌. ಸದನದಲ್ಲಿ ಮುಖ್ಯಮಂತ್ರಿ ಮಾಡುವ ಭಾಷಣವನ್ನು ಸಹ ಪತ್ರಿಕೆಗಳಿಗೆ ಜಾಹೀರಾತು ನೀಡಿ ಸುದ್ದಿ ಮಾಡಿಸಿಕೊಳ್ಳುವ ಹಂತಕ್ಕೆ ಹೋದರೆ ಸದನದ ಗೌರವ ಏನು? ಅಥವಾ ಸಿಎಂ ಸದನದಲ್ಲಿ ಆಡಿದ ಮಾತನ್ನು ಜಾಹೀರಾತು ನೀಡುವ ಸ್ಥಿತಿಗೆ ಬಂದರೆ ಒಂದೆರಡು ಬಾರಿ ಗೆದ್ದವರ ಸ್ಥಿತಿ ಹೇಗಿರಬೇಡ? ಸಾರ್ವಜನಿಕ ಭಾಷಣಕ್ಕೆ ಜಾಹೀರಾತು ಸರಿ. ಆದರೆ ಸದನದಲ್ಲಿ ನೀಡುವ ಉತ್ತರವನ್ನು ನೀವು ಹೀಗೆ ಕಮರ್ಷಿಯಲ್ ನೀಡಿದರೆ ಇದು ಸದನಕ್ಕೆ ಅಗೌರವ ಎನ್ನುವಂತೆ ವಿಷಯ ಮಂಡಿಸಿದ್ದು ಸದನದಲ್ಲಿ ಗದ್ದಲಕ್ಕೆ ಕಾರಣ ಆಯಿತು.

ಕಾಂತರಾಜು ವರದಿ ಮಂಡನೆ ಯಾಕಿಲ್ಲ?
ಹಿಂದುಳಿದ ವರ್ಗಗಳ ಚಾಂಪಿಯನ್ ಎಂದೆಲ್ಲ ಸಿದ್ದರಾಮಯ್ಯ ಮಾತನಾಡುತ್ತಾರೆ. ಹಾಗಾದರೆ ಕಾಂತರಾಜು ವರದಿ ಯಾಕೆ ಮಂಡಿಸಲಿಲ್ಲ ಎಂದು ಪ್ರಶ್ನೆ ಮಾಡಿ, ಮಾತಿನ ಕೊನೆಯಲ್ಲಿ ಹಿಂದುಳಿದ ವರ್ಗ ಎಂದರೆ ಹೆಲ್ಮೆಟ್ ರೀತಿ ಆಗಿದೆ. ನಿಮಗೆ ಬೇಕೆಂದಾಗ ಬಳಸುತ್ತೀರಿ, ಬೇಡವೆಂದಾದಾಗ ಕಳಚಿ ಇಡುತ್ತೀರಿ ಎಂದು ವಿಪಕ್ಷವನ್ನು ಚುಚ್ಚಿದರು. ಹೀಗೆ ಇನ್ನು ಅನೇಕ ವಿಷಯ ಪ್ರಸ್ತಾಪ ಮಾಡಿದರು. ಸಿಟಿ ರವಿ ಬಂಧನ ಪ್ರಕರಣ, ಕಾನೂನು ಸುವ್ಯವಸ್ಥೆ ವಿಷಯಗಳ ಮೇಲೆ ಬೆಳಕು ಚೆಲ್ಲಿದರು. ಇಷ್ಟೆಲ್ಲ ಸಬ್ಜೆಕ್ಟ್‌ಗಳ ಬಳಿಕ ತಮ್ಮ ಮಾತಿನ ಕೊನೆಯ ಭಾಗದಲ್ಲಿ ಮುಖ್ಯಮಂತ್ರಿ ಖುರ್ಚಿ ವಿಷಯದ ಬಗ್ಗೆ ವ್ಯಂಗ್ಯವಾಡಿದ್ದು, ತಮ್ಮ ಪ್ರಶ್ನೆಗೆ ಸ್ವತಃ ತಾವೆ ಉತ್ತರ ನೀಡಿದ್ದು ವಿಶೇಷ.

ಪಾರ್ಟಿ ಅಧ್ಯಕ್ಷರ ಆಯ್ಕೆ ಕಾರ್ಯಕರ್ತರ ತೀರ್ಮಾನ
ನಮ್ಮ ಪಾರ್ಟಿಯ ಅಧ್ಯಕ್ಷ ಯಾರು ಎನ್ನುವ ಚರ್ಚೆ ನಮ್ಮ ಕಾರ್ಯಕರ್ತರಿಗೆ ಸಂಬಂಧಿಸಿದ್ದು ಮಾತ್ರ. ನಿಮ್ಮ ಕೆಪಿಸಿಸಿ ಅಧ್ಯಕ್ಷ ಯಾರಾಗಬೇಕು ಎನ್ನುವುದು ನಿಮ್ಮ ಪಕ್ಷದ ಆಂತರಿಕ ವಿಷಯ ಆ ಬಗ್ಗೆ ನಾನು ಪ್ರಶ್ನೆ ಮಾಡುವುದಿಲ್ಲ ಎಂದು ಆರಂಭದಲ್ಲೇ ಹೇಳಿ, ಬಿಜೆಪಿ ಅಧ್ಯಕ್ಷ ಗಲಾಟೆಯನ್ನು ಆಡಳಿತ ಪಕ್ಷದವರು ಪ್ರಶ್ನೆ ಮಾಡದಂತೆ ನಾಜೂಕುತನ ತೋರಿದ್ದು ಸುನಿಲ್ ಬುದ್ಧಿವಂತಿಕೆ. ಆದರೆ ಮುಖ್ಯಮಂತ್ರಿ ಯಾರಾಗುತ್ತಾರೆ ಯಾರು ಮುಖ್ಯಮಂತ್ರಿ ಇದ್ದಾರೆ ಹಾಗೂ ದಿನನಿತ್ಯ ಆ ಸಿಎಂ ಗಾದಿಗೆ ಆಡುವ ಜಗಳ ನೇರವಾಗಿ ಆಡಳಿತ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಇದರ ಬಗ್ಗೆ ನಮ್ಮೆಲ್ಲರಿಗೂ ಕೇಳುವ ಅಧಿಕಾರ ಇದೆ ಎಂದು ಹೇಳುವ ಪ್ರಯತ್ನ ಮಾಡಿದ್ದು ಪ್ರಮುಖ‌ ಅನಿಸಿತು.

ಮಾತಿನ ಚೌಕಟ್ಟು
ಸದನದಲ್ಲಿ ಯಾರು ಎಷ್ಟು ಹೊತ್ತು ಮಾತನಾಡಿದರು ಎನ್ನುವುದು ಮುಖ್ಯ ಅಲ್ಲ. ಇನ್ನು ಕೆಲವು ಬಾರಿ ಎಷ್ಟು ವಿಷಯ ಪ್ರಸ್ತಾಪ ಮಾಡಿದರೂ ಎನ್ನುವುದು ಪ್ರಮುಖ ಆಗುವುದಿಲ್ಲ. ಆಡಿದಷ್ಟು ಮಾತಿನಲ್ಲಿ ವಿಷಯ ಇತ್ತಾ ಎನ್ನೋದಷ್ಟೇ ಮುಖ್ಯ. ಜೊತೆಗೆ ಆಡಿದ ಮಾತನ್ನು ಕುಳಿತ ಸದನ ವೀಕ್ಷಕರಿಗೂ, ನಾಳೆ ಸುದ್ದಿ ಮಾಡುವ ಪತ್ರಕರ್ತರಿಗೂ ಎದುರಿಗೆ ಕುಳಿತ ಆಡಳಿತ ಪಕ್ಷಕ್ಕೂ ಕೇಳಿಸಿಕೊಳ್ಳಬೇಕು ಎನಿಸಬೇಕು. ಸುನಿಲ್ ಮಾಡಿದ ಭಾಷಣ, ಆಡಿದ ಮಾತು, ಬಳಸಿದ ಪದ, ವಾಕ್ಯ ರಚನೆ, ಮಾತಿನೊಳಗಿದ್ದ ಲಯ ಎಲ್ಲಿಯೂ ಹಾದಿ ತಪ್ಪಲಿಲ್ಲ. ಆಗ ಈಗ ಎಲ್ಲೊ ಒಮ್ಮೆ ಬಿಜೆಪಿ ಸದಸ್ಯರೇ ಸುನಿಲ್ ಮಾತಿನ ಫ್ಲೋ ತಪ್ಪಿಸುವ ಪ್ರಯತ್ನ ಮಾಡಿದರೇನೊ ಅನಿಸಿತು.

ಅವಕಾಶ ಇದ್ದರೆ ಕೊಡಿ ಎನ್ನುವಂತಿತ್ತು
ಒಳ ಜಗಳದಲ್ಲೇ ಬಿದ್ದು ಎದ್ದು ಬಳಲಿ ಬೆಂಡಾಗಿರುವ ರಾಜ್ಯ ಬಿಜೆಪಿಯಲ್ಲಿ ಇಂದು ಸುನಿಲ್ ಮಾಡಿದ ಸದನ ಭಾಷಣ ಪಾಸಿಟಿವ್ ಆಗಿತ್ತು. ಬಿಜೆಪಿ ಮನೆಯೊಳಗೆ ಏನೇನೊ ಬದಲಾವಣೆ ಎನ್ನುವ ಚರ್ಚೆ ಜೋರಾಗಿ ನಡೆದಿರುವಾಗ ಹಾಗೇನಾದರೂ ಸ್ಥಾನ ಪಲ್ಲಟ ನಡೆದರೆ ತಾನೂ ಸಹ ಒಬ್ಬನಿದ್ದೇನೆ, ತನಗೂ ಆ ಸಾಮರ್ಥ್ಯ ಇದೆ. ಅವಕಾಶ ಸಿಕ್ಕರೆ ನಿರ್ವಹಿಸಲು ಸಿದ್ಧ ಎನ್ನೋದನ್ನ ತೋರಿಸಿಯೆ ಬಿಡೋಣ ಎನ್ನುವ ಉಮೇದಿನಲ್ಲಿ ಸುನಿಲ್ ಕುಮಾರ್ ಸ್ಟಡಿ ಮಾಡಿಕೊಂಡು ಸದನಕ್ಕೆ ಬಂದಿದ್ದರೊ ಏನೊ ಗೊತ್ತಿಲ್ಲ. ಒಟ್ಟಾರೆ ಸುನಿಲ್ ಕುಮಾರ್ ಭಾಷಣ ಕೇಳುವಂತೆ, ಕೇಳಿದ ಮೇಲೆ ಒಪ್ಪುವಂತೆ ಇತ್ತು.































































































error: Content is protected !!
Scroll to Top