ಸಾಣೂರಿನಲ್ಲಿ ಚರಂಡಿಯಿಲ್ಲದೆ ಸರ್ವಿಸ್‌ ರಸ್ತೆ ನಿರ್ಮಾಣ : ಮಳೆಗಾಲದಲ್ಲಿ ಸ್ಥಳೀಯರಿಗೆ ಸಂಕಷ್ಟ ಎದುರಾಗುವ ಭೀತಿ

ಕಾರ್ಕಳ : ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭರದಿಂದ ಸಾಗುತ್ತಿದ್ದು, ಮುಕ್ತಾಯದ ಹಂತದಲ್ಲಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಮುಖ್ಯರಸ್ತೆಯ ಕಾಮಗಾರಿ ಬಹುತೇಕ ಮುಗಿದಿದ್ದು, ಸರ್ವಿಸ್ ರಸ್ತೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಸಾಣೂರು ಪದ್ಮನಾಭನಗರ ಕಾಲೋನಿ ಎತ್ತರ ಪ್ರದೇಶದಲ್ಲಿದ್ದು, ಮಳೆಗಾಲದಲ್ಲಿ ನೀರು ಕಾಲೋನಿ ರಸ್ತೆಯಿಂದ ನೇರ ರಾಷ್ಟ್ರೀಯ ಹೆದ್ದಾರಿಗೆ ಬರುತ್ತಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕೆಳಭಾಗದಲ್ಲಿರುವ ಹೋಟೆಲು, ಸಲೂನ್‌, ಅಂಗಡಿ ಮತ್ತು ಎರಡು ಮನೆಗಳಿಗೆ ನುಗ್ಗಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.
ಸ್ಥಳೀಯರು ಸೇರಿ ತಾತ್ಕಾಲಿಕ ಚರಂಡಿ ವ್ಯವಸ್ಥೆ ಜೊತೆಗೆ ಗುತ್ತಿಗೆದಾರ ಕಂಪನಿಯವರು ಕೂಡ ತಾತ್ಕಾಲಿಕ ಕಾಂಕ್ರೀಟ್ ಪೈಪ್ ಮೋರಿ ವ್ಯವಸ್ಥೆ ಮಾಡಿದ್ದರು. ಇದೀಗ ಸರ್ವಿಸ್ ರಸ್ತೆ ನಿರ್ಮಾಣವಾಗುತ್ತಿದ್ದು, ಈ ಹಿಂದೆ ಅಳವಡಿಸಿದ್ದ ಮೋರಿಯನ್ನು ತೆಗೆದಿದ್ದಾರೆ. ನೆಲ ಸಮತಟ್ಟ ಮಾಡಿ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿರುತ್ತಾರೆ.
ಮಳೆಗಾಲದಲ್ಲಿ ಗುಡ್ಡದ ಮೇಲಿನ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡದೆ ಇರುವುದರಿಂದ ಮತ್ತೊಮ್ಮೆ ಪರಿಸರದ ನಿವಾಸಿಗಳು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಇನ್ನು ಎರಡು-ಮೂರು ತಿಂಗಳುಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಸರ್ವಿಸ್ ರಸ್ತೆ ನಿರ್ಮಾಣ ಮಾಡುವಾಗಲೇ ಸೂಕ್ತವಾದ ಚರಂಡಿ ವ್ಯವಸ್ಥೆಯನ್ನು ಮಾಡದಿದ್ದರೆ ಕಳೆದ ಮಳೆಗಾಲಕ್ಕಿಂತಲೂ ಹೆಚ್ಚಿನ ನೀರು ಅಂಗಡಿ ಮತ್ತು ಮನೆಗಳಿಗೆ ನುಗ್ಗಿ ಖಂಡಿತ ಇನ್ನಷ್ಟು ಜನ ಹೈರಾಣವಾಗುವ ಸಾಧ್ಯತೆ ಇದೆ. ಸರ್ವಿಸ್ ರಸ್ತೆ ಕಾಮಗಾರಿ ನಡೆಯುತ್ತಿರುವ ಪ್ರದೇಶದ ಅಡ್ಡರಸ್ತೆಯಿಂದ ಐದಾರು ಮನೆಗಳಿಗೆ ಹೋಗುವ ಹಾದಿ ಕೂಡ ಕಾಮಗಾರಿಯಿಂದಾಗಿ ಮುಚ್ಚಿ ಹೋಗಿದೆ. ಈ ಬಗ್ಗೆ ಈಗಾಗಲೇ ಸ್ಥಳೀಯ ಜನತೆ ಗುತ್ತಿಗೆದಾರ ಕಂಪನಿಗೆ ವಿಚಾರವನ್ನು ತಿಳಿಸಿರುತ್ತಾರೆ.


ಈ ಹಿಂದಿನಂತೆ ನಿರ್ಲಕ್ಷಯ ಮಾಡಿ ಮಳೆಗಾಲ ಬಂದ ನಂತರ ಮಾತ್ರ ಎಚ್ಚರವಾಗದೆ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಕನ್‌ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿಯವರಿಗೆ ತಿಳಿಸಿರುತ್ತಾರೆ. ಈ ಹಿಂದಿನಂತೆ ನಿರ್ಲಕ್ಷ ತೋರಿದರೆ ಪ್ರತಿಭಟನೆಯ ಹಾದಿ ಹಿಡಿಯ ಬೇಕಾದಿತೆಂದು ಸ್ಥಳೀಯ ಜನತೆ ಹಾಗೂ ಜನಪ್ರತಿನಿಧಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.





























































































error: Content is protected !!
Scroll to Top