ಕೌಂಟುಂಬಿಕ ಹಿಂಸಾಚಾರ- ಮಹಿಳೆಯರ ರಕ್ಷಣಾ ಕಾಯ್ದೆ 2005

ಭಾರತ ದೇಶದ ಸಂವಿಧಾನದ 14, 15 ಮತ್ತು 21 ವಿಧಿಗಳ ಅಡಿಯಲ್ಲಿ ಮಹಿಳೆಯರಿಗೆ ಖಾತರಿ ಪಡಿಸಲಾದ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ನಾಗರಿಕ ಕಾನೂನಿನ ಅಡಿಯಲ್ಲಿ ಮಹಿಳೆಯರಿಗೆ ವಿಶೇಷವಾದ ಪರಿಹಾರವನ್ನು ಒದಗಿಸುವ ದೃಷ್ಟಿಯಿಂದ ಕೇಂದ್ರ ಸರಕಾರವು 13-09-2005 ರಿಂದ ಜಾರಿಗೆ ಬರುವಂತೆ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣಾ ಕಾಯ್ದೆ, 2005 ಎಂಬ ವಿಶೇಷವಾದ ಕಾಯ್ದೆಯನ್ನು ದೇಶಾದ್ಯಂತ ಜಾರಿಗೊಳಿಸಿರುತ್ತದೆ.
ಜಂಟಿ ಕುಟುಂಬ ಅಥವಾ ಕೌಟುಂಬಿಕ ಮನೆಯಲ್ಲಿ (ಶೇರ್‍ಡ್ ಹೌಸ್‍ಹೋಲ್ಡ್) ತನ್ನ ಪತಿ ಅಥವಾ ಕುಟುಂಬದ ಇತರ ಸದಸ್ಯರೊಂದಿಗೆ ವಾಸವಾಗಿರುವ ಸಂದರ್ಭದಲ್ಲಿ ಮಹಿಳೆಗೆ ಆಕೆಯ ಪತಿ ಅಥವಾ ಕುಟುಂಬದ ಇತರ ಸದಸ್ಯರಿಂದ ದೈಹಿಕ, ಲೈಂಗಿಕ, ಮೌಖಿಕ, ಭಾವನಾತ್ಮಕ ಅಥವಾ ಆರ್ಥಿಕವಾಗಿ ನಿಂದನೆ, ಬೆದರಿಕೆ, ಹಿಂಸೆ, ಕಿರುಕುಳವನ್ನು ತಡೆಗಟ್ಟುವ ಹಾಗೂ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯನ್ನು ನೀಡಿ ನೊಂದ ಮಹಿಳೆಗೆ ಸೂಕ್ತ ಪರಿಹಾರವನ್ನು ತಪ್ಪಿತಸ್ಥರಿಂದ ಕೊಡಿಸುವುದು ಮತ್ತು ಮಹಿಳೆಗೆ ತನ್ನ ಪತಿಯೊಂದಿಗೆ ಆತನ ಕುಟುಂಬದ ಇತರ ಸದಸ್ಯರೊಂದಿಗೆ ವಾಸಮಾಡುವ ಸಂದರ್ಭದಲ್ಲಿ ಆಕೆಗೆ ಸೂಕ್ತ ರಕ್ಷಣೆಯನ್ನು ನೀಡುವುದು ಮೇಲ್ಕಾಣಿಸಿದ ಕಾನೂನಿನ ಮುಖ್ಯ ಉದ್ದೇಶವಾಗಿರುತ್ತದೆ.
ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರ ಸರಕಾರವು ರಕ್ಷಣಾ ಅಧಿಕಾರಿಗಳನ್ನು ಮತ್ತು ಸೇವಾ ಪೂರೈಕೆದಾರರನ್ನು ನಿಯಮಿಸಿದ್ದು ಒಬ್ಬ ಮಹಿಳೆಯ ವಿರುದ್ಧ ಕೌಟುಂಬಿಕ ಹಿಂಸಾಚಾರ ನಡೆದಲ್ಲಿ ಅಥವಾ ನಡೆಯುವ ಸಾಧ್ಯತೆಯಿದ್ದಲ್ಲಿ ಯಾವುದೇ ವ್ಯಕ್ತಿಯು ರಕ್ಷಣಾಧಿಕಾರಿಗೆ ಮಾಹಿತಿಯನ್ನು ನೀಡಬಹುದಾಗಿದೆ. ಮಾತ್ರವಲ್ಲದೆ ನೊಂದ ಮಹಿಳೆಯು ನೇರವಾಗಿ ಅಥವಾ ರಕ್ಷಣಾಧಿಕಾರಿ ಮೂಲಕ ಸಂಬಂಧಪಟ್ಟ ವ್ಯಾಪ್ತಿಯ ಮ್ಯಾಜಿಸ್ಟ್ರೇಟ್‍ರಿಗೆ ದೂರನ್ನು ಸಲ್ಲಿಸಿ ಸೂಕ್ತ ಪರಿಹಾರಗಳನ್ನು ಪಡೆಯಬಹುದಾಗಿದೆ. ಈ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ತನ್ನ ಕಾರ್ಯ ನಿರ್ವಹಣೆಯ ಉದ್ದೇಶಕ್ಕಾಗಿ ಸೂಕ್ತ ಕಲ್ಯಾಣ ತಜ್ಞರ ನೆರವನ್ನು ಪಡೆಯಬಹುದಾಗಿದೆ. ಮಾತ್ರವಲ್ಲದೆ ಯಾವುದೇ ಹಂತದಲ್ಲಿ ಮ್ಯಾಜಿಸ್ಟ್ರೇಟ್‍ರು ಬಾಧಿತ ಮಹಿಳೆ ಮತ್ತು ಪ್ರತಿವಾದಿಗಳಿಗೆ ನೋಟೀಸು ಮಾಡಿ ದೂರನ್ನು ಸ್ವೀಕರಿಸಿದ 2 ತಿಂಗಳುಗಳ ಅವಧಿಯೊಳಗೆ ಪ್ರಕರಣದ ವಿಚಾರಣೆಯನ್ನು ಮಾಡಬೇಕಾಗಿರುತ್ತದೆ. ಕೆಲವು ವಿಶೇಷ ಸಂದರ್ಭದಲ್ಲಿ ಪ್ರಕರಣದ ವಿಚಾರಣೆಯನ್ನು ಮ್ಯಾಜಿಸ್ಟ್ರೇಟ್ ಇನ್ ಕ್ಯಾಮೆರಾ ಪ್ರೋಸಿಡಿಂಗ್ಸ್ ಮೂಲಕ ರಹಸ್ಯವಾಗಿ ನಡೆಸಬಹುದಾಗಿದೆ.

ಪ್ರತಿಯೊಬ್ಬ ವಿವಾಹಿತ ಮಹಿಳೆಯು ತನ್ನ ಪತಿಯ ಮನೆಯಲ್ಲಿ ವಾಸಿಸುವ ಹಕ್ಕನ್ನು ಹೊಂದಿರುತ್ತಾಳೆ. ಆಕೆಯನ್ನು ಪತಿ ಅಥವಾ ಆತನ ಮನೆಯವರು ಯಾವುದೇ ಕಾರಣಕ್ಕೆ ಮನೆಯಿಂದ ಹೊರಗೆ ಹಾಕುವ ಅಧಿಕಾರ ಹೊಂದಿರುವುದಿಲ್ಲ. ಒಂದು ವೇಳೆ ಈ ರೀತಿಯಾಗಿ ಪತಿ ಅಥವಾ ಆತನ ಮನೆಯವರು ವಿವಾಹಿತ ಮಹಿಳೆಯನ್ನು ಮನೆಯಿಂದ ಹೊರಹಾಕಿದಲ್ಲಿ ಅಥವಾ ಹೊರಹಾಕುವ ಪ್ರಯತ್ನ ನಡೆಸಿದಲ್ಲಿ ನೊಂದ ಮಹಿಳೆಯ ದೂರಿನ ಪ್ರಕಾರ ನ್ಯಾಯಾಲಯವು ಆಕೆಗೆ ಸೂಕ್ತ ರಕ್ಷಣೆಯನ್ನು ನೀಡಿ ಆಕೆ ತನ್ನ ಪತಿಯ ಮನೆಯಲ್ಲಿ ನಿರ್ಭೀತಿಯಿಂದ ಮತ್ತು ನೆಮ್ಮದಿಯಿಂದ ಜೀವಿಸುವಂತೆ ಕ್ರಮಕೈಗೊಳ್ಳಬೇಕಾಗುತ್ತದೆ ಮತ್ತು ಸಂದರ್ಭಕ್ಕಾನುಸಾರವಾಗಿ ಸೂಕ್ತ ಆದೇಶದ ಮೂಲಕ ಪೊಲೀಸ್ ರಕ್ಷಣೆಯನ್ನು ಸಹ ನೀಡಬಹುದಾಗಿದೆ. ಮೇಲ್ಕಾಣಿಸಿದ ಕಾನೂನಿನ ಪ್ರಕಾರದ ದೂರು ಅರ್ಜಿಯನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಕೌಟುಂಬಿಕ ಹಿಂಸಾಚಾರದ ಪರಿಣಾಮವಾಗಿ ನೊಂದ ಮಹಿಳೆ ಮತ್ತು ಆಕೆಯ ಮೈನರ್ ಮಕ್ಕಳು ಅನುಭವಿಸಿದ ಕಷ್ಟ ಮತ್ತು ನಷ್ಟವನ್ನು ಭರಿಸಲು ಸೂಕ್ತ ಹಣಕಾಸಿನ ಪರಿಹಾರವನ್ನು ಮತ್ತು ಜೀವನಾಂಶವನ್ನು ಆಕೆಗೆ ಮತ್ತು ಆಕೆಯ ಮೈನರ್ ಮಕ್ಕಳಿಗೆ ಪಾವತಿಸುವಂತೆ ಪ್ರತಿವಾದಿಗಳಿಗೆ ಅಂದರೆ ಕೌಟುಂಬಿಕ ಹಿಂಸಾಚಾರವನ್ನು ನಡೆಸಿದ ಆಕೆಯ ಪತಿ ಅಥವಾ ಆಕೆಯೊಂದಿಗೆ ವಾಸ ಮಾಡುವ ಕುಟುಂಬದ ಇತರ ಸದಸ್ಯರ ವಿರುದ್ಧ ನ್ಯಾಯಾಲಯವು ಆದೇಶಿಸಬಹುದಾಗಿದೆ. ಈ ರೀತಿಯಾಗಿ ಆದೇಶಿಸಲ್ಪಟ್ಟ ಹಣಕಾಸಿನ ಪರಿಹಾರವನ್ನು ಅಥವಾ ಜೀವನಾಂಶವನ್ನು ನಿಗದಿತ ಸಮಯದೊಳಗೆ ಪಾವತಿಸಲು ಪ್ರತಿವಾದಿಗಳು ವಿಫಲರಾದಲ್ಲಿ ಪ್ರತಿವಾದಿಯರ ವಿರುದ್ಧ ಸೂಕ್ತ ವಾರಂಟು ನೀಡಿ ಅವರನ್ನು ಬಂಧಿಸಿ ಹಣಕಾಸಿನ ಪರಿಹಾರದ ಮೊತ್ತವನ್ನು ವಸೂಲು ಮಾಡುವ ಮತ್ತು ಅಗತ್ಯಬಿದ್ದಲ್ಲಿ ಪ್ರತಿವಾದಿಗಳನ್ನು ಜೈಲಿಗೆ ಕಳುಹಿಸುವ ಅಧಿಕಾರವನ್ನು ನ್ಯಾಯಾಲಯವು ಹೊಂದಿರುತ್ತದೆ. ಮಾತ್ರವಲ್ಲದೆ ತನ್ನ ಗಂಡ ಅಥವಾ ಆತನೊಂದಿಗೆ ವಾಸಮಾಡಿಕೊಂಡಿರುವ ಕುಟುಂಬದ ಸದಸ್ಯರಿಂದ ತನ್ನ ಮಕ್ಕಳ ಹಿತಾಸಕ್ತಿಗೆ ಹಾನಿಕಾರಕ ಪರಿಸ್ಥಿತಿ ಉಂಟಾಗಿರುವುದನ್ನು ನೊಂದ ಮಹಿಳೆಯು ನ್ಯಾಯಾಲಯಕ್ಕೆ ಮನದಟ್ಟು ಮಾಡಿದಲ್ಲಿ ಸೂಕ್ತ ಕಸ್ಟಡಿ ಆದೇಶವನ್ನು ಸಹ ನ್ಯಾಯಾಲಯವು ಹೊರಡಿಸಬಹುದಾಗಿದೆ. ಒಂದು ವೇಳೆ ನೊಂದ ಮಹಿಳೆಯು ತನಗೆ ಮತ್ತು ತನ್ನ ಮೈನರ್ ಮಕ್ಕಳಿಗೆ ತನ್ನ ಪತಿ ಅಥವಾ ಪತಿಯ ಕುಟುಂಬದ ಇತರ ಸದಸ್ಯರೊಂದಿಗೆ ಜಂಟಿಯಾಗಿ ನೆಮ್ಮದಿಯಿಂದ ಮತ್ತು ಸುರಕ್ಷಿತವಾಗಿ ವಾಸಮಾಡಲು ಅಸಾಧ್ಯವಾಗಿರುವುದನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಿದಲ್ಲಿ ನ್ಯಾಯಾಲಯವು ನೊಂದ ಮಹಿಳೆ ಮತ್ತು ಆಕೆಯ ಮೈನರ್ ಮಕ್ಕಳು ವಾಸಕ್ಕಾಗಿ ಪ್ರತ್ಯೇಕ ನಿವಾಸದ ವ್ಯವಸ್ಥೆಯನ್ನು ಮಾಡುವಂತೆ ಪ್ರತಿವಾದಿಗಳ ವಿರುದ್ಧ ಸೂಕ್ತ ಆದೇಶವನ್ನು ಹೊರಡಿಸಬಹುದಾಗಿದೆ.



































































































error: Content is protected !!
Scroll to Top