ಅಪರಾಧದ ಕಾರಣಗಳು

ಪ್ರತಿಯೊಬ್ಬ ಮನುಷ್ಯನ ದೇಹ ರಚನೆ ಮತ್ತು ಆತನ ಮಾನಸಿಕ ಕ್ರಿಯೆ ಇವುಗಳು ಒಂದಕ್ಕೊಂದು ಪರಸ್ಪರ ಸಂಬಂಧವನ್ನು ಹೊಂದಿದ್ದು, ಅಸಹಜ ದೈಹಿಕ ರಚನೆಯನ್ನು ಹೊಂದಿದ ವ್ಯಕ್ತಿಗಳು ಕೆಲವೊಮ್ಮೆ ಅಪರಾಧದಲ್ಲಿ ತೊಡಗುವ ಸಾದ್ಯತೆ ಇರುತ್ತದೆ. ಯಾವುದೇ ವ್ಯಕ್ತಿಯು ದೈಹಿಕವಾಗಿ ಸದೃಢವಾಗಿದ್ದರೆ ಆತನ ಬುದ್ದಿ ಸಹಾ ಚುರುಕಾಗಿರುತ್ತದೆ. ಒಂದು ವೇಳೆ ಆತನು ದೈಹಿಕವಾಗಿ ವಿಕಲತೆಗಳಿಂದ ಕೂಡಿದ್ದರೆ, ಅದು ಆತನ ದೈನಂದಿನ ವ್ಯವಹಾರಗಳ ಮೇಲೆ ಪರಿಣಾಮ ಬೀರಬಹುದು. ಕೆಲವು ಸಂದರ್ಭಗಳಲ್ಲಿ ಕುರುಡ, ಕುಂಟ, ಕಿವುಡ ಇತ್ಯಾದಿ ವ್ಯಕ್ತಿಗಳು ತಮ್ಮ ಅಸಹಾಯಕತೆಯಿಂದಾಗಿ ಸಮಾಜ ವಿರೋಧಿ ಭಾವನೆಗಳನ್ನು ಹೊಂದಬಹುದು. ಬಲಿಷ್ಠವಾದ ವ್ಯಕ್ತಿಗಳು ತಮ್ಮ ಶಕ್ತಿ ಪ್ರದರ್ಶನಕ್ಕೆಂದು ಹಿಂಸಾಚಾರದಲ್ಲಿ ಇಳಿಯಬಹುದು.

ವ್ಯಕ್ತಿಯ ಆಸೆ ಆಕಾಂಕ್ಷೆಗಳು ಆತನ ಸಾಮಾಜಿಕ ಪ್ರಕ್ರಿಯೆಗಳ ಮೇಲೆ ಅವಲಂಬಿಸಿದ್ದು, ಆತನ ವ್ಯಕ್ತಿತ್ವವು ಸಾಮಾಜಿಕ ಪರಿಸರಗಳ ಪ್ರತಿರೂಪವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯು ಬಡತನದ ಒತ್ತಡದಿಂದ ತನ್ನ ಎಲ್ಲಾ ನೈತಿಕ ಆದರ್ಶಗಳನ್ನು ಗಾಳಿಗೆ ತೂರುತ್ತಾನೆ. ಈ ರೀತಿಯಾಗಿ ಕೆಲವು ಸಾರಿ ವ್ಯಕ್ತಿಯ ಆರ್ಥಿಕ ಪರಿಸ್ಥಿತಿಗಳು ಸಹಾ ಅಪರಾಧಕ್ಕೆ ಕಾರಣಗಳಾಗಿವೆ ಎಂದು ಅಪರಾಧ ಶಾಸ್ತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಬಡವರೆಲ್ಲರೂ ಅಪರಾಧಿಗಳಾಗಿರುವುದಿಲ್ಲ. ಸಮಾಜದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ನಿರುದ್ಯೋಗದ ಸಮಸ್ಯೆಯು ಕಾಡುವುದು ಸಹಜ. ಇದರಿಂದಾಗಿ ಸಮಾಜದ ಕೆಲವು ಸನ್ನಿವೇಶಗಳು ನಿರುದ್ಯೋಗಿಗಳನ್ನು ಸೋಮಾರಿಗಳನ್ನಾಗಿ ಮಾಡುತ್ತದೆ, ಮಾತ್ರವಲ್ಲದೆ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಬಂದ ಸಂದರ್ಭದಲ್ಲಿ ಅವರಿಗೆ ಸರಿಯಾದ ವ್ಯವಸ್ಥೆಗಳು ಸಿಗದೇ ಅವರ ಜೀವನ ಅಸ್ತವ್ಯಸ್ತಗೊಂಡು ಅವರಿಗೆ ವೈಯಕ್ತಿಕವಾಗಿ ಮತ್ತು ಕುಟುಂಬದ ವಿಘಟನೆಗೆ ದಾರಿಮಾಡಿಕೊಡುತ್ತದೆ. ಇಂತಹ ಸಂದರ್ಭಗಳು ಕೆಲವೊಮ್ಮೆ ಅಪರಾಧಗಳ ಸೃಷ್ಠನೆಗೆ ದಾರಿ ಮಾಡಿಕೊಡುವ ಸಾಧ್ಯತೆಗಳಿವೆ.

‘ಮನೆಯೇ ಮೊದಲ ಪಾಠಶಾಲೆ’ ಎಂಬಂತೆ ವ್ಯಕ್ತಿಯ ವ್ಯಕ್ತಿತ್ವವು ಮಗುವಾಗಿದ್ದಾಗಿನಿಂದಲೇ ಮೊಟ್ಟ ಮೊದಲಿಗೆ ಕುಟುಂಬದಲ್ಲಿಯೇ ಪ್ರಾರಂಭವಾಗುತ್ತದೆ. ಅಲ್ಲಿಂದಲೇ ಅವನು ತನ್ನ ಜೀವನದ ಮೊದಲ ಪಾಠಗಳನ್ನು ಕಲಿಯಲು ಪ್ರಾರಂಭಿಸುತ್ತಾನೆ. ಅವನ ವ್ಯಕ್ತಿತ್ವವು ಮನೆಯ ಪರಿಸರದಲ್ಲಿಯೇ ರೂಪುಗೊಳ್ಳುತ್ತದೆ. ಅಂದರೆ ಕುಟುಂಬದಲ್ಲಿಯ ಸದಸ್ಯರ ಸಂಬಂಧ, ರೀತಿ ನೀತಿಗಳ ಆಚರಣೆ, ನಿಯಂತ್ರಣ, ಸಂಪ್ರದಾಯ, ಸಂಸ್ಕೃತಿ ಇತ್ಯಾದಿಗಳು ಮಗುವಿನ ಬೆಳವಣಿಗೆಯಲ್ಲಿ ಮಹತ್ತರವಾದ ಪ್ರಭಾವವನ್ನು ಬೀರುತ್ತವೆ. ಕುಟುಂಬದ ಹಿರಿಯರ ಅಕಾಲ ಮರಣ, ವಿವಾಹ ವಿಚ್ಚೇದನ ಅಥವಾ ಪರಿತ್ಯಾಗಗಳು ಒಡೆದ ಕುಟುಂಬಗಳನ್ನು ಸೃಷ್ಟಿಸುತ್ತವೆ. ಇಂತಹ ವಿಘಟಿತ ಕುಟುಂಬಗಳಲ್ಲಿ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ದೊರೆಯದೇ ಅವರು ಅನೇಕ ಅನೈತಿಕ ವ್ಯವಹಾರಗಳಲ್ಲಿ ತೊಡಗಬಹುದು ಮತ್ತು ಇದರಿಂದಾಗಿ ವಿವಿಧ ಅಪರಾಧಗಳಿಗೆ ಅವಕಾಶ ಒದಗಿ ಬರಬಹುದು. ಒಂದು ದೃಷಿಯಿಂದ ಅಶಿಸ್ತಿನ ಕುಟುಂಬ, ಕ್ರೂರ ಶಿಕ್ಷೆ ವಿಧಿಸುವ ಕುಟುಂಬ, ಇಲ್ಲವೆ ಅತೀ ಸಲಿಗೆಯಿಂದ ವರ್ತಿಸುವ ಕುಟುಂಬಗಳು ಬಾಲಾಪರಾಧಗಳ ತವರು ಮನೆ ಎಂದು ಹೇಳಬಹುದು. ವಿಭಿನ್ನ ಸಂಸ್ಕೃತಿಯ ತಂದೆತಾಯಿಗಳಿದ್ದರೆ ಅಥವಾ ವ್ಯತ್ಯಾಸ ಹೊಂದಿದ ವಿಚಾರಗಳುಳ್ಳ ಪಾಲಕರಿದ್ದರೆ, ಅದು ಅವರ ಮಕ್ಕಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಸಮಾಜ ವಿಘಟನೆಯಿಂದ ಅನೇಕ ಸಾಮಾಜಿಕ ಸಮಸ್ಯೆಗಳು ಉತ್ಪನ್ನವಾಗುತ್ತವೆ. ಸಮಾಜ ವಿಘಟನೆಯು ವ್ಯಕ್ತಿಗಳ ಸಾಮೂಹಿಕ ಮಧುರ ಬಾಂಧವ್ಯಗಳನ್ನು ಛಿದ್ರ ವಿಚ್ಛಿದ್ರಗೊಳಿಸುತ್ತದೆ. ಕೊಳಚೆ ಪ್ರದೇಶಗಳಲ್ಲಿಯ ಜನರಿಗೆ ಅವರ ಜೀವನದ ಮೂಲಭೂತ ಅವಶ್ಯಕತೆಗಳು ಸರಿಯಾಗಿ ದೊರೆಯದೆ ಇರುವುದರಿಂದ ಮನರಂಜನೆ ಹಾಗೂ ಪಾಠಶಾಲೆಗಳ ಅನಾನುಕೂಲತೆ, ಅನೈತಿಕತೆ, ದುರ್ವ್ಯಸನಗಳ ಮತ್ತು ಅಪರಾಧ ಸಂಸ್ಕೃತಿ, ಮುಂತಾದ ವಾತಾವರಣಗಳು ವ್ಯಕ್ತಿಯನ್ನು ಅವ್ಯವಹಾರಗಳಲ್ಲಿ ತೊಡಗಿಸುವ ಸಂದರ್ಭಗಳನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಅವರ ಜೀವನದಲ್ಲಿ ಅಶಾಂತಿಯನ್ನು ಹುಟ್ಟಿಸಿ ಅವರನ್ನು ಅಪರಾಧ ನಡೆಸುವಂತೆ ಪ್ರಚೋಧನೆ ಉಂಟಾಗಬಹುದು. ಕೀಳುಮಟ್ಟದ ನಾಟ್ಯಗೃಹ, ದುಷ್ಟಜನರ ಸಹವಾಸ, ಅನೈತಿಕ ಪರಿಸರ ಇತ್ಯಾದಿಗಳು ಸಾಮಾನ್ಯ ಜನರ ಮೇಲೆ ಸಹಜವಾಗಿ ಪರಿಣಾಮವನ್ನು ಬೀರುತ್ತವೆ. ಸಮಾಜದಲ್ಲಿಯ ಅನೈತಿಕ ಪರಿಸ್ಥಿತಿಗಳು ವ್ಯಕ್ತಿಯನ್ನು ಅನೈತಿಕ ವ್ಯವಹಾರಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸುತ್ತದೆ. ಹಣ ಗಳಿಕೆಯ ಉದ್ದೇಶದಿಂದ ಇಂದಿನ ಕೆಲವು ಚಲನಚಿತ್ರ ಮತ್ತು ಸಮೂಹ ಮಾಧ್ಯಮಗಳು ಅರೆನಗ್ನತೆ, ಮದ್ಯಪಾನ, ಪ್ರೇಮಪ್ರಕರಣ, ಹಿಂಸಾಚಾರಗಳಿಂದ ಕೂಡಿದ ಮಾಹಿತಿಯನ್ನು ಜನರಿಗೆ ಹಂಚುವುದರಿಂದ ಕೆಲವು ಸಂದರ್ಭಗಳಲ್ಲಿ ಅಪರಾಧಕ್ಕೆ ಪ್ರಚೋದನೆ ನೀಡಿದಂತಾಗಬಹುದು. ವರದಕ್ಷಿಣೆಯು ಸಮಾಜದ ಬಹುದೊಡ್ಡ ಸಮಸ್ಯೆಯಾಗಿದೆ. ಸಮಾಜದಲ್ಲಿ ಎಷ್ಟೋ ಜನ ತಂದೆ ತಾಯಿಗಳು ವರದಕ್ಷಿಣೆ ಕೊಡಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದೂ ಉಂಟು, ಅಷ್ಟೇ ಅಲ್ಲ, ವರದಕ್ಷಿಣೆ ಕೊಡಲಾಗದೇ ವಿವಾಹವಾಗದೇ ಉಳಿದ ಯುವತಿಯರು ಆತ್ಮಹತ್ಯೆ ಇಲ್ಲವೆ ಅನೈತಿಕ ವ್ಯವಹಾರಗಳಲ್ಲಿ ತೊಡಗಿದ ಉದಾಹರಣೆಗಳಿವೆ. ಕೆಲವೊಂದು ಸಂದರ್ಭಗಳಲ್ಲಿ ಅನೇಕ ಜನರು ತಮ್ಮ ಧರ್ಮವನ್ನು ಸಮಾಜ ವಿರೋಧಿ ಕೃತ್ಯಗಳಿಗೆ ಪ್ರಚೋಧಿಸುವುದರಿಂದ ಮತ್ತು ರಾಜಕೀಯವಾಗಿ ಲಾಭವನ್ನು ಗಳಿಸುವ ಉದ್ದೇಶದಿಂದ ಮತ, ಜಾತಿ, ಪಂಗಡಗಳನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುವುದರಿಂದ ಧರ್ಮದ ಹೆಸರಿನಲ್ಲಿ ಜಾತಿ ಕಲಹಗಳು ನಡೆಯುತ್ತಿವೆ. ಮತಧರ್ಮದ ಹೆಸರಿನಲ್ಲಿ ನಾನಾರೀತಿಯ ಶೋಷಣೆಗಳು ನಡೆಯುತ್ತಿದೆ. ಮತಾಂಧ ವ್ಯಕ್ತಿಯು ಎಂತಹ ಹೀನ ಕೃತ್ಯವನ್ನಾದರೂ ಮಾಡಬಹುದು. ಜಾತಿ ಗಲಭೆ, ಜಾತಿ ಹಿಂಸಾಚಾರ, ಭಯೋತ್ಪಾದನೆ ಮತ್ತು ಕಳ್ಳಸಾಗಾಣೆಕೆ ಇತ್ಯಾದಿ ಅಪರಾಧಗಳಿಗೆ ಧಾರ್ಮಿಕ ಭಾವನೆಯೂ ಒಂದು ಕಾರಣವಾಗಿದೆ ಎಂದು ಹೇಳಬಹುದು. ಈ ರೀತಿಯಾಗಿ ಮತಧರ್ಮದ ಮತಾಂಧತೆಯು ಕೆಲವು ಅಪರಾಧಗಳಿಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ನೆರೆಹೊರೆಯ ಜನರು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದರೆ, ಇತರರೂ ಕೂಡ ಒಮ್ಮೊಮ್ಮೆ ಅವರ ಅನುಕರಣೆಯನ್ನು ಮಾಡಬಹುದು.







error: Content is protected !!
Scroll to Top