ಆಯುರ್ವೇದ ದಿನಚರಿ

ರೋಗ ಬಂದ ಮೇಲೆ ಅದನ್ನು ಸರಿಪಡಿಸುವುದಕ್ಕಿಂತ ರೋಗ ಬಾರದೇ ಇರುವುದು ಒಳ್ಳೆಯದು. ಆಯುರ್ವೇದದ ಮುಖ್ಯ ಉದ್ದೇಶ ಜನರಿಗೆ ರೋಗ ಬಾರದೇ ಇರುವುದು ಹೇಗೆ ಎಂದು ತಿಳಿಸುವುದು. ದಿನನಿತ್ಯ ನಾವು ದೇಹ ಶುದ್ಧಿಯನ್ನು ಮಾಡುತ್ತೇವೆ. ಅದನ್ನು ಸರಿಯಾಗಿ ಮಾಡಿದರೆ ರೋಗ ದೂರ ಸರಿಯುವುದಲ್ಲದೆ ನಮ್ಮ ದೇಹವನ್ನು ಕೂಡ ಸದೃಢಗೊಳಿಸುತ್ತದೆ. ಆಯುರ್ವೇದದಲ್ಲಿ ದಿನಚರ್ಯ ಋತುಚರ್ಯಗಳ ವಿಸ್ತಾರವಾದ ವಿವರಣೆಯಿದೆ. ದಿನಚರ್ಯವೆಂದರೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ನಾವು ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು. ಹಾಗೆಯೆ ಋತುಚರ್ಯವೆಂದರೆ ಬೇರೆ ಬೇರೆ ಋತುವಿನಲ್ಲಿ ನಾವು ಪಾಲಿಸಬೇಕಾದ ನಿಯಮಗಳನ್ನು ತಿಳಿಸಿದೆ. ಆಯುರ್ವೇದ ದಿನಚರಿಯ ಪಾಲಿಸುವುದರಿಂದ ಯಾವ ಯಾವ ರೋಗಗಳನ್ನು ತಡೆಯಬಹುದು ಎಂದು ತಿಳಿದುಕೊಳ್ಳೋಣ.

ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು – ಮೊದಲಿಗೆ ನಾವು ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕೆಂದು ಆಯುರ್ವೇದದಲ್ಲಿ ತಿಳಿಸಿದೆ. ಈ ಸಮಯದಲ್ಲಿ ವಾತಾವರಣ ಶುದ್ಧವಾಗಿರುತ್ತದೆ ಮನಸ್ಸು ಶಾಂತವಾಗಿರುತ್ತದೆ ಹಾಗೂ ದಿನ ಶುರು ಮಾಡಲು ಪ್ರಶಸ್ಥಕಾಲ. ಮನಸ್ಸು ಪ್ರಸನ್ನವಾಗಿದ್ದರೆ ರೋಗ ಹತ್ತಿರ ಸುಳಿಯುವುದಿಲ್ಲ. ಬ್ರಾಹ್ಮಿ ಮುಹೂರ್ತವೆಂದರೆ ಸೂರ್ಯೋದಯಕ್ಕಿಂತ ಒಂದೂವರೆ ಗಂಟೆ ಮೊದಲು. ಈ ಸಮಯದಲ್ಲಿ ಎದ್ದರೆ ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ .

ಶೌಚವಿಧಿ– ಅಂದರೆ ಮಲ ತ್ಯಾಗ ಮಾಡುವುದು. ನಮ್ಮ ಜೀರ್ಣಕ್ರಿಯೆ ಸರಿಯಾಗಿದ್ದರೆ ನಾವು ತಿನ್ನುವಂತಹ ಆಹಾರ ಸರಿಯಾಗಿ ಜೀರ್ಣವಾಗುವುದು. ಆಗ ಮಲಬದ್ದತೆ ಕಾಡದು. ಆದ್ದರಿಂದ ಆಯುರ್ವೇದದಲ್ಲಿ ಹೇಳಿರುವಂತಹ ಆಹಾರ ವಿಧಿಯನ್ನು ಸರಿಯಾಗಿ ಪಾಲಿಸಿದರೆ ಮಲಬದ್ದತೆ ಕಾಡುವುದಿಲ್ಲ. ಆಗ ನಮ್ಮ ಜಠರಾಗ್ನಿಯು ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಅನೇಕ ರೋಗಗಳು ಉತ್ಪನ್ನವಾಗುವುದು ಆಮದೋಷದಿಂದ ಅಂದರೆ ಜೀರ್ಣವಾಗದ ಆಹಾರದಿಂದ. ಆದ್ದರಿಂದ ನಮ್ಮ ಜೀರ್ಣಕ್ರಿಯೆ ಸರಿಯಾಗಿದ್ದರೆ ಅನೇಕ ಕಾಯಿಲೆಗಳನ್ನು ತಡೆಯಬಹುದು.

ದಂತಧಾವನ- ಅಂದರೆ ಹಲ್ಲನ್ನು ಉಜ್ಜುವುದು. ಆಯುರ್ವೇದದಲ್ಲಿ ಹೇಳಿರುವ ಪ್ರಕಾರ ಅರ್ಕ, ಖದೀರ, ಕಹಿಬೇವು, ಅರ್ಜುನ ಇದರ ಕಡ್ಡಿಯನ್ನು ಹಲ್ಲುಜ್ಜಲು ಬಳಸುವುದು ಹಿತಕರ. ಖಾರ, ಕಹಿ, ಕಷಾಯ ರಸವಿರುವ ದ್ರವ್ಯಗಳನ್ನು ಬಳಸಿದರೆ ಹಲ್ಲುಗಳಿಗೆ ಒಳ್ಳೆಯದು. ಈಗಿನ ಕಾಲದಲ್ಲಿ ಆಯುರ್ವೇದ ಟೂತ್ಪೇಸ್ಟನ್ನು ಬಳಸಬಹುದು. ದಂತಮಂಜನವನ್ನು ಕೂಡ ಬಳಸಬಹುದು. ದಂತಮಂಜನ ಪೌಡರನ್ನು ಮೂರನೇ ಬೆರಳಿನಿಂದ ಎಲ್ಲ ಹಲ್ಲುಗಳನ್ನು ಉಜ್ಜಬೇಕು. ಹಲ್ಲು ಉಜ್ಜಿದ ಬಳಿಕ ತ್ರಿಫಲ ಚೂರ್ಣ ಅಥವಾ ತ್ರಿಕಟು ಚೂರ್ಣ ಅಥವಾ ತ್ರಿಜಾತಿ ಚೂರ್ಣವನ್ನು ಜೇನುತುಪ್ಪದಲ್ಲಿ ಬೆರೆಸಿ ದಂತಗಳಿಗೆ ಉಜ್ಜಬೇಕು. ಬಳಿಕ ನೀರಿನಿಂದ ಬಾಯನ್ನು ಸರಿಯಾಗಿ ಮುಕ್ಕಳಿಸಬೇಕು. ಹೀಗೆ ಮಾಡುವುದರಿಂದ ಹಲ್ಲುಗಳು ಸದೃಡವಾಗಿರುತ್ತದೆ ಹಾಗೂ ದಂತಕ್ಷಯ, ದಂತ ಹುಳು ಹಾಗೂ ಇನ್ನಿತರ ದಂತ ರೋಗಗಳು ಹಾಗೂ ವಸಡಿನ ಸಮಸ್ಯೆ ಸುಳಿಯುವುದಿಲ್ಲ. ಮೊದಲಿಗೆ ಕೆಳಗಿನ ದಂತ ಪಂಕ್ತಿಯನ್ನು ಉಜ್ಜಿದ ಬಳಿಕ ಮೇಲಿನ ದಂತಪಂಕ್ತಿಯನ್ನು ಉಜ್ಜಬೇಕು. ನೀರಿನಿಂದ ಸರಿಯಾಗಿ ಬಾಯಿಯನ್ನು ತೊಳೆದು ನಂತರ ಬಾಯಲ್ಲಿ ನೀರು ತುಂಬಿಸಿ ಕಣ್ಣುಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ದೃಷ್ಟಿ ದೋಷಗಳು ದೂರವಾಗುತ್ತದೆ. ಕಣ್ಣುಗಳಿಗೆ ಒಳ್ಳೆಯದು.

ಜೀವ್ಹಾನಿಲೇಖನ– ಅಂದರೆ ನಾಲಿಗೆಯನ್ನು ಸರಿಯಾಗಿ ಶುದ್ಧ ಮಾಡುವುದು. ಇದರಿಂದ ಬಾಯಿ ರುಚಿ ಹೆಚ್ಚುತ್ತದೆ ಹಾಗೂ ಬಾಯಿ ದುರ್ಗಂಧ ಕಡಿಮೆಯಾಗುತ್ತದೆ. ಬಾಯಿಯ ಅನೇಕ ರೋಗಗಳು ಮಾಯವಾಗುತ್ತವೆ.

ಅಂಜನ – ಕಣ್ಣಿಗೆ ಕಾಡಿಗೆ ಹಚ್ಚುವುದು. ಮನೆಯಲ್ಲಿಯೇ ತಯಾರಿಸಿದ ಕಾಡಿಗೆ ಕಣ್ಣಿಗೆ ತಂಪು ತರುವುದಲ್ಲದೆ ಅನೇಕ ದೃಷ್ಟಿದೋಷಗಳನ್ನು ನೇತ್ರ ರೋಗಗಳನ್ನು ತಡೆಯಬಹುದು. ಸೌವೀರಾಂಜನವು ಶ್ರೇಷ್ಠ ಎಂದು ಆಯುರ್ವೇದದಲ್ಲಿ ತಿಳಿಸಿದೆ ಇದನ್ನು ದಿನಾಲು ಹಚ್ಚಬಹುದು.

ಗಂಡೂಷ ಮತ್ತು ಕವಲ– ನಾಲಿಗೆ ಸ್ವಚ್ಛ ಮಾಡಿದ ಬಳಿಕ ಬಾಯಿಯನ್ನು ಸರಿಯಾಗಿ ಮುಕ್ಕಳಿಸಬೇಕು. ತದನಂತರ ಎಣ್ಣೆಯನ್ನು ಬಾಯಿಯಲ್ಲಿ ತುಂಬಿಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಬೇಕು ಇದನ್ನು ಗಂಡೂಷ ಎಂದು ಹೇಳುತ್ತೇವೆ . ಕವಲ ಎಂದರೆ ಸ್ವಲ್ಪವೇ ಎಣ್ಣೆಯನ್ನು ಬಳಸಿ ಬಾಯನ್ನು ಸರಿಯಾಗಿ ಮುಕ್ಕಳಿಸುವುದು. ಇಲ್ಲಿ ಬಳಸುವಂತಹ ಎಣ್ಣೆ ಹದ ಬಿಸಿ ಇದ್ದರೆ ಒಳ್ಳೆಯದು. ತೆಂಗಿನ ಎಣ್ಣೆ ಬಳಸುವುದು ಉತ್ತಮ. ಖದೀರ, ಅರಿಮೇದಾ ಮುಂತಾದ ದ್ರವ್ಯಗಳನ್ನು ಬಳಸಿ ತಯಾರಿಸಿದ ಕಷಾಯವನ್ನು ಉಪಯೋಗಿಸಬಹುದು. ಇದು ಕಫವನ್ನು ಹೊರಗೆ ಹಾಕುತ್ತದೆ ಹಾಗು ನಾಲಿಗೆಯನ್ನು ಶುದ್ಧಗೊಳಿಸುತ್ತದೆ. ರಕ್ತಸ್ರಾವ ಆಗುತ್ತಿದ್ದರೆ ತಣ್ಣೀರಿನಿಂದ ಬಾಯಿ ತೊಳೆದುಕೊಳ್ಳುವುದು ಸೂಕ್ತ. ಇದರಿಂದ ತುಟಿಗಳ ಒಡೆಯುವಿಕೆ, ಬಾಯಿ ಶುಷ್ಕತೆ, ವಸಡಿನ ರೋಗ, ಹಲ್ಲಿನ ಹುಳುಕು, ಧ್ವನಿಯ ಸಮಸ್ಯೆಗಳನ್ನು ನಿವಾರಿಸಬಹುದು.

ಅಭ್ಯಂಗ- ದಿನಾಲು ಅಭ್ಯಂಗ ಮಾಡುವುದರಿಂದ ನಮ್ಮ ತ್ವಚೆಯು ಮೃದುವಾಗಿರುತ್ತದೆ ಹಾಗೂ ಕಾಂತಿಯುಕ್ತವಾಗಿರುತ್ತದೆ. ಕಣ್ಣುಗಳಿಗೆ ಹಿತಕರ, ಆಯಾಸವನ್ನು ತೊಲಗಿಸುತ್ತದೆ ಹಾಗೂ ವಾತದೋಷವನ್ನು ಕಡಿಮೆಗೊಳಿಸಿ ದೇಹ ಬೇನೆ ಸಂದುನೋವನ್ನು ಗುಣಪಡಿಸುತ್ತದೆ. ದಿನಾಲು ಆಗದಿದ್ದರೆ ಕಡೆಪಕ್ಷ ವಾರಕ್ಕೊಮ್ಮೆ ಅಭ್ಯಂಗವನ್ನು ಮಾಡುವುದನ್ನು ರೂಢಿಸಿಕೊಳ್ಳಿ. ಮುಖಕ್ಕೆ ಹಾಗೂ ಹಸ್ತ ಪಾದಗಳಿಗೆ ಸ್ವಲ್ಪ ಎಣ್ಣೆಯನ್ನು ದಿನಾಲು ಹಚ್ಚಿ ನೋಡಿ. ತೆಂಗಿನೆಣ್ಣೆ ದಿನಾಲು ಬಳಸಬಹುದು. ಚಳಿಗಾಲದಲ್ಲಿ ಎಳ್ಳೆಣ್ಣೆಯು ಒಳ್ಳೆಯದು.

ವ್ಯಾಯಾಮ- ದಿನಾಲು ವ್ಯಾಯಾಮ ಮಾಡುವುದರಿಂದ ನಮ್ಮ ಜೀರ್ಣ ಶಕ್ತಿ ಹೆಚ್ಚುತ್ತದೆ ಹಾಗೂ ದೇಹಬಲ ಹೆಚ್ಚುತ್ತದೆ. ಇದರಿಂದ ಬೊಜ್ಜುತನ ಕರಗಿ ದೇಹವನ್ನು ಹಗುರಗೊಳಿಸುತ್ತದೆ. ದೇಹವು ಹಗುರವಾಗಿದ್ದರೆ ಕೆಲಸದಲ್ಲಿ ಚುರುಕುತನವನ್ನು ಕಾಣಬಹುದು . ಸೂರ್ಯನಮಸ್ಕಾರ, ಯೋಗಾಸನಗಳು, ಪ್ರಾಣಾಯಾಮ, ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಿ. ಇದು ಆಯಸ್ಸನ್ನು ವೃದ್ಧಿಸುತ್ತದೆ.

ಉದ್ವರ್ತನ- ಅಂದರೆ ಕಡ್ಲೆಹಿಟ್ಟು, ಜೋಳದ ಹಿಟ್ಟು, ಹುರುಳಿ ಹಿಟ್ಟು, ಹೆಸರುಕಾಳಿನ ಹಿಟ್ಟು ಯಾವುದಾದರೂ ಒಂದನ್ನು ಬಳಸಿ ತ್ವಚೆಯ ಮೇಲೆ ತಿಕ್ಕುವುದು. ಇದರಿಂದ ಕೊಬ್ಬು ಕರಗುವುದಲ್ಲದೆ ತ್ವಚೆಯ ಹೊಳಪು ಹೆಚ್ಚುತ್ತದೆ. ಹಿಟ್ಟಿಗೆ ಅರಶಿಣ ಅಥವಾ ಎಣ್ಣೆ ಅಥವಾ ಹಾಲು ಹಾಕಿ ಬೆರೆಸಿ ಕಲ್ಕ ತಯಾರಿಸಿ ತ್ವಚೆಯ ಮೇಲೆ ಲೇಪಿಸಬಹುದು. ಇದನ್ನು ಪ್ರಸಾಧನವೆಂದು ಆಯುರ್ವೇದದಲ್ಲಿ ಹೇಳಿದೆ.

ಸ್ನಾನ- ಸ್ನಾನ ಮಾಡುವುದರಿಂದ ನಮ್ಮ ದೇಹದ ಕಲ್ಮಶಗಳು ದೂರವಾಗಿಸಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವನ್ನು ಶುದ್ಧಗೊಳಿಸಿ ಮನಸ್ಸನ್ನು ಪ್ರಸನ್ನಗೊಳಿಸುತ್ತದೆ. ಹದಬಿಸಿ ನೀರನ್ನು ಬಳಸಿದರೆ ಉತ್ತಮ. ತಲೆಸ್ನಾನ ಮಾಡುವಾಗ ತಣ್ಣೀರನ್ನು ಬಳಸಬೇಕು. ತಲೆಸ್ನಾನ ಮಾಡುವಾಗ ಬಿಸಿ ನೀರನ್ನು ಬಳಸಿದರೆ ಕಣ್ಣುಗಳಿಗೆ ಹಾನಿಯುಂಟುಮಾಡುತ್ತದೆ. ಚಳಿಗಾಲದಲ್ಲಿ ಮಾತ್ರ ಹದಬಿಸಿ ನೀರನ್ನು ತಲೆಸ್ನಾನಕ್ಕೆ ಬಳಸಬಹುದು.

ಸದ್ ವೃತ ಪಾಲನೆ- ಆಯುರ್ವೇದದಲ್ಲಿ ಸದ್ವೃತ್ ಪಾಲನೆಯ ಬಗ್ಗೆ ತಿಳಿಸಿದೆ. ಅಹಿಂಸೆಯ ಮಾರ್ಗವನ್ನು ಪಾಲಿಸಿ, ಪಾಪಕರ್ಮಗಳಿಂದ ದೂರವಿರಿ, ಹಿರಿಯರಿಗೆ ಗೌರವ ನೀಡಿ, ಇತರರಿಗೆ ಸಹಾಯವನ್ನು ಮಾಡಿ. ನಿಮ್ಮ ಮಾತುಗಳು ಹಿತಮಿತವಾಗಿರಲಿ ಮಿತವಾಗಿರಲಿ. ಪ್ರಕೃತಿಯ ಮೇಲೆ, ಪ್ರಾಣಿ, ಪಕ್ಷಿಗಳ ಮೇಲೆ ಪ್ರೀತಿ ದಯೆ ತೋರಿಸಿ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.
ನಮ್ಮ ನಿತ್ಯ ಕರ್ಮಗಳು ನಮ್ಮ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನೆಲ್ಲ ಪಾಲಿಸಿ ರೋಗದಿಂದ ದೂರವಿರಿ.







error: Content is protected !!
Scroll to Top