ನಗರದೆಲ್ಲೆಡೆ ಇರುವ ಅನಧಿಕೃತ ಮೀನು ಮಾರಾಟ ಮಳಿಗೆ ತೆರವುಗೊಳಿಸಿ

ಕಾರ್ಕಳ : ಕಾರ್ಕಳ ನಗರದ ವಿವಿಧೆಡೆ ಅನಧಿಕೃತ ಮೀನು ಮಾರಾಟ ಮಳಿಗೆಗಳಿದ್ದು, ಇದನ್ನು ತೆರವುಗೊಳಿಸುವಂತೆ ಸನ್ಮಿತ್ರ ಜೈನ್‌ ಅಸೋಸಿಯೇಶನ್‌ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಪುರಸಭೆ ವ್ಯಾಪ್ತಿಯಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ಮೀನು ಮಾರಾಟಕ್ಕಾಗಿಯೇ ಮಳಿಗೆ ತೆರೆಯಲಾಗಿದೆ. ಕಾನೂನು ಬದ್ಧವಾಗಿ ಆ ಪ್ರದೇಶದಲ್ಲಿ ಮಾತ್ರ ಮೀನು ಮಾರಾಟಕ್ಕೆ ಅವಕಾಶವಿದೆ. ಆದಾಗ್ಯೂ ನಗರದೆಲ್ಲೆಡೆಯೂ ಮೀನು ಮಾರಾಟ ಮಾಡಲಾಗುತ್ತಿದೆ ಎಂದು ಸನ್ಮಿತ್ರ ಜೈನ್‌ ಅಸೋಸಿಯೇಶನ್‌ ಮಾಡಿರುವ ಮನವಿಯಲ್ಲಿ ತಿಳಿಸಿದೆ.

ಯಾತ್ರಿಕರಿಗೆ ದುರ್ವಾಸನೆ
ಕಾರ್ಕಳದಲ್ಲಿ ಇತಿಹಾಸ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿವೆ. ಪುಣ್ಯ ಕ್ಷೇತ್ರಗಳು, ಪ್ರವಾಸಿ ತಾಣಗಳಿವೆ. ಇಲ್ಲಿಗಾಗಮಿಸುವ ಯಾತ್ರಿಕರು ಮೀನಿನ ದುರ್ವಾಸನೆ, ಗಬ್ಬುನಾಥ ಅನುಭವಿಸುವಂತಾಗಿದೆ. ಹೀಗಾಗಿ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿ, ಮೀನು ಮಾರುಕಟ್ಟೆಯಲ್ಲೇ ಅವರಿಗೆ ವ್ಯವಸ್ಥೆ ಕಲ್ಪಿಸುವಂತೆ ಸನ್ಮಿತ್ರ ಜೈನ್‌ ಅಸೋಶಿಯೇಶನ್‌ ಡಿಸಿಗೆ ನೀಡಿರುವ ಪತ್ರದಲ್ಲಿ ವಿನಂತಿಸಿದೆ.

ಪುರಸಭೆ ಮೌನ
ಅನಧಿಕೃತವಾಗಿ ಮೀನು ಮಾರಾಟದ ಕುರಿತು ಪುರಸಭೆಗೆ ಮಾಹಿತಿ ನೀಡಿದ್ದಾಗ್ಯೂ ಸಂಬಂಧಪಟ್ಟವರು ಯಾವುದೇ ಕ್ರಮವಹಿಸಿದೇ ಮೌನ ವಹಿಸಿದ್ದಾರೆ. ಇದರಿಂದಾಗಿ ಧಾರ್ಮಿಕ ಕ್ಷೇತ್ರಗಳಿಗೆ ತೆರಳುತ್ತಿರುವ ಭಕ್ತರಿಗೆ ತೀರಾ ತೊಂದರೆಯಾಗುತ್ತಿದೆ. ಮೀನಿನ ತ್ಯಾಜ್ಯ ಪರಿಸರದಲ್ಲಿ ದುರ್ನಾತ ಬೀರುತ್ತಿದೆ. ತ್ಯಾಜ್ಯವು ಮಳೆಯ ನೀರಿನೊಂದಿಗೆ ಪವಿತ್ರ ಸ್ಥಳವಾದ ಆನೆಕೆರೆ, ಸಿಗಡಿ ಕೆರೆಗೂ ಹರಿದು ಕೆರೆಯ ನೀರು ಕಲುಷಿತಗೊಳ್ಳುತ್ತದೆ. ಇದರಿಂದ ಧಾರ್ಮಿಕ ಧಕ್ಕೆಯಾಗುತ್ತಿದೆ ಎಂದು ಸನ್ಮಿತ್ರ ಜೈನ್‌ ಅಸೋಶಿಯೇಷನ್‌ ತಿಳಿಸಿದೆ.







































































error: Content is protected !!
Scroll to Top