ಅಜೀರ್ಣದ ಸಮಸ್ಯೆ

ಆರೋಗ್ಯವಂತನಾಗಿರಲು ಜೀರ್ಣಶಕ್ತಿ ಬಹಳ ಮುಖ್ಯ. ದುರ್ಬಲ ಜಠರಾಗ್ನಿಯು ಅನೇಕ ತೊಂದರೆಗಳನ್ನು ತರುತ್ತದೆ. ಸೇವಿಸಿದ ಆಹಾರ ಜೀರ್ಣವಾಗದೆ ಉಳಿದರೆ ಅದು ವಿಷವಾಗಿ ಪರಿವರ್ತನೆಗೊಳ್ಳುತ್ತದೆ. ಅದನ್ನು ಆಯುರ್ವೇದದಲ್ಲಿ ಆಮ ಎನ್ನುತ್ತೇವೆ. ಇದೇ ರೀತಿ ಅನೇಕ ದಿನಗಳವರೆಗೆ ಮುಂದುವರೆದರೆ ಅದು ವಿಷವಾಗಿ ಪರಿವರ್ತನೆಗೊಳ್ಳುತ್ತದೆ. ಆದ್ದರಿಂದ ನಮ್ಮ ಆರೋಗ್ಯವನ್ನು ಕಾಪಾಡಲು ನಮ್ಮ ಜೀರ್ಣಶಕ್ತಿ ಕುಂದದೆಯಿರುವ ಹಾಗೆ ನೋಡಿಕೊಳ್ಳಬೇಕು.

ಜೀರ್ಣ ಶಕ್ತಿ ಕುಂದಲು ಕಾರಣಗಳು:
ಇದರಲ್ಲಿ ಪ್ರಮುಖ ಕಾರಣ ಜಡತ್ವ ಹಾಗೂ ನಮ್ಮ ಜೀವನ ಶೈಲಿ.
ನಮ್ಮ ದೇಹ ಪ್ರಕೃತಿಗೆ ತಕ್ಕಂತೆ ಆಹಾರ ಸೇವಿಸದೇ ಇರುವುದು. ವಾತಪ್ರಕೃತಿಯ ವ್ಯಕ್ತಿಗಳ ಜೀರ್ಣಶಕ್ತಿಯೂ ವಿಷಮವಿರುವುದು. ಅಂದರೆ ಕೆಲವೊಮ್ಮೆ ಜೀರ್ಣವಾದರೆ ಕೆಲವೊಮ್ಮೆ ಜೀರ್ಣವಾಗದೆ ಇರುವುದು. ಪಿತ್ತ ಪ್ರಕೃತಿಯ ವ್ಯಕ್ತಿಗಳಿಗೆ ಜೀರ್ಣಶಕ್ತಿ ಉತ್ತಮವಿರುತ್ತದೆ. ಕಫಪ್ರಕೃತಿಯ ವ್ಯಕ್ತಿಗಳಿಗೆ ಮಂದಾಗ್ನಿ ವಿರುವುದು. ಅಂದರೆ ಜೀರ್ಣಶಕ್ತಿ ಕಮ್ಮಿ ಇರುವುದು. ನಿಮ್ಮ ಪ್ರಕೃತಿಯನ್ನು ತಿಳಿದುಕೊಂಡು ಆಹಾರವನ್ನು ಸೇವಿಸಿರಿ. ಋತುಗೆ ತಕ್ಕಂತೆ ಆಹಾರ ಸೇವಿಸಿ. ಬೇಸಿಗೆಯಲ್ಲಿ ಜೀರ್ಣಶಕ್ತಿ ಕಮ್ಮಿಯಿರುವುದು ಮಳೆಗಾಲದಲ್ಲಿ ಮದ್ಯಮ ಜೀರ್ಣಶಕ್ತಿ ಹಾಗೂ ಚಳಿಗಾಲದಲ್ಲಿ ನಮ್ಮ ಜೀರ್ಣಶಕ್ತಿಯು ಉತ್ತಮವಿರುತ್ತದೆ.

-ಆಹಾರ ಸೇವಿಸುವಾಗ ಆಹಾರದ ಮೇಲೆ ಗಮನವಿರುವುದು ಅತಿಮುಖ್ಯ. ಟಿವಿ, ಮೊಬೈಲ್ ಅಥವಾ ಓದುತ್ತಾ ಆಹಾರವನ್ನು ಸೇವಿಸಕೂಡದು. ಇದು ಜೀರ್ಣಶಕ್ತಿಯ ಮೇಲೆ ವಿಪರೀತ ಪರಿಣಾಮ ಬೀರುತ್ತದೆ.
-ಬೆಳಿಗ್ಗೆ ಹಾಗೂ ಸಾಯಂಕಾಲ ಲಘು ಉಪಾಹಾರ ಸೇವಿಸಿ ಮಧ್ಯಾಹ್ನ ಸ್ವಲ್ಪ ಜಾಸ್ತಿ ಆಹಾರ ಸೇವಿಸಬಹುದು.
-ದುಃಖದಲ್ಲಿದ್ದಾಗ ಕೋಪವಾದಾಗ ಆಹಾರವನ್ನು ಸೇವಿಸಬೇಡಿ.
-ಆಹಾರವನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದು, ಹಿಂದಿನ ಆಹಾರ ಜೀರ್ಣವಾಗದೆ ಪುನಃ ಸೇವಿಸುವುದು, ಪದೇಪದೆ ಆಹಾರ ಸೇವಿಸುವುದು, ತಣ್ಣಗಿರುವ ಆಹಾರ ಇದೆಲ್ಲವೂ ಅಜೀರ್ಣಕ್ಕೆ ನಾಂದಿಯಾಗುತ್ತದೆ.
-ಈ ಮೊದಲು ಸಿಹಿ ರಸವುಳ್ಳ ಆಹಾರವನ್ನು ಸೇವಿಸಿ ನಂತರ ಹುಳಿ, ಲವಣ, ಕಹಿ ರುಚಿಯ ಆಹಾರವನ್ನು ಸೇವಿಸಿ
-ಜೀರ್ಣಶಕ್ತಿಯನ್ನು ಹೆಚ್ಚಿಸಲು ಹೀಗೆ ಮಾಡಿ
-ಆಹಾರದಲ್ಲಿ ಜೀರಿಗೆ, ಶುಂಠಿ, ಕರಿಮೆಣಸು, ಕೊತ್ತಂಬರಿ, ಅರಿಶಿನ, ಏಲಕ್ಕಿ ಬಳಸಿ. ಹಣ್ಣು ತರಕಾರಿಯನ್ನು ಸೇವಿಸಿ.
-ಆಹಾರವನ್ನು ಬಿಸಿ ಇರುವಾಗಲೇ ಸೇವಿಸಿ.
-ಧ್ಯಾನ ಹಾಗೂ ಪ್ರಾಣಾಯಾಮ ಮಾಡಿ. ಇದರಿಂದ ಮಾನಸಿಕ ಒತ್ತಡ ದೂರವಾಗಿ ಜೀರ್ಣಕ್ರಿಯೆಯು ಸಕ್ರಿಯಗೊಳಿಸುತ್ತದೆ .
-ಯೋಗಾಸನವನ್ನು ಮಾಡಿ. ವಜ್ರಾಸನ, ಸುಪ್ತ ವೀರಾಸನ, ತ್ರಿಕೋನಾಸನ, ಅರ್ಧಪವನಮುಕ್ತಾಸನ, ಸೇತುಬಂಧ ಸರ್ವಾಂಗಾಸನ, ಶವಾಸನ ಮಾಡಿದರೆ ಜೀರ್ಣಶಕ್ತಿಯೂ ಹೆಚ್ಚುತ್ತದೆ .
-ವಾರಕ್ಕೆ ಒಂದು ಊಟ ಬಿಡುವುದು ಆರೋಗ್ಯಕರ. ಇದರಿಂದ ನಮ್ಮ ಜಠರಾಗ್ನಿಯ ಕ್ಷಮತೆ ಹೆಚ್ಚುವುದು. (ಇದು ಆರೋಗ್ಯವಂತ ಮನುಷ್ಯರಿಗೆ ಮಾತ್ರ ಡಯಾಬಿಟೀಸ್, ರಕ್ತದೊತ್ತಡ, ವೃದ್ಧರು ಇನ್ನಿತರ ಕಾಯಿಲೆ ಇದ್ದಲ್ಲಿ ವೈದ್ಯರನ್ನು ಕೇಳಿ ತಿಳಿದುಕೊಳ್ಳಿ ).
-ಆಹಾರ ಸೇವಿಸುವ ಮುನ್ನ ಹಾಗೂ ಸೇವಿಸಿದ ನಂತರ ಸ್ವಲ್ಪ ನಡೆಯಿರಿ .
-ಆಹಾರ ಸೇವಿಸಿದ ಬಳಿಕ ಮಜ್ಜಿಗೆ ಅಥವಾ ಸೋಂಪನ್ನು ಸೇವಿಸಿರಿ.
-ಎರಡು ಗ್ಲಾಸ್ ನೀರಿಗೆ ಅರ್ಧ ಚಮಚ ಕರಿಮೆಣಸಿನ ಹುಡಿ, ಅರ್ಧ ಚಮಚ ಜೀರಿಗೆ, ಸ್ವಲ್ಪ ಶುಂಠಿ ಹಾಕಿ ಅರ್ಧ ಪ್ರಮಾಣ ಬರುವವರೆಗೆ ಕುದಿಸಿ ಸೋಸಿ ಈ ನೀರನ್ನು ಸೇವಿಸಿರಿ.
-ಸರಿಯಾದ ದಿನಚರಿಯನ್ನು ಪಾಲಿಸಿ. ಧನ್ಯಾತ್ಮಕ ಭಾವನೆಯನ್ನು ಇಟ್ಟುಕೊಳ್ಳಿ. ಇದು ಆಹಾರದ ಮೇಲೆ ಪರಿಣಾಮ ಬೀರುವುದು .
-ರಾತ್ರಿ ನಿದ್ದೆ ಮಾಡುವ ಮೂರು ಗಂಟೆ ಮುಂಚಿತವಾಗಿ ಆಹಾರವನ್ನು ಸೇವಿಸಿ.
-ನಿಮ್ಮ ದೇಹಕ್ಕೆ ತಕ್ಕಂತೆ ನಿದ್ದೆ ಮಾಡಿರಿ. ಇದು ಜೀರ್ಣಕ್ರಿಯೆಯನ್ನು ಸಮರ್ಪಕವಾಗಿ ಮಾಡಲು ಸಹಾಯ ಮಾಡುತ್ತದೆ.
-ವಾರಕ್ಕೆ ಒಂದು ದಿನ ಕಷಾಯವನ್ನು ಸೇವಿಸಿ. ಅರ್ಧ ಚಮಚ ಹುರಿದ ಜೀರಿಗೆ ಅರ್ಧ ಚಮಚ ಹುರಿದ ಕೊತ್ತಂಬರಿ ಬೀಜ ಒಂದು ಚಮಚ ಬೆಲ್ಲ ಒಂದು ಲೋಟ ನೀರಿಗೆ ಹಾಕಿ ಕುದಿಸಿ ಸೋಸಿದ ನಂತರ ಎರಡು ಚಮಚ ಹಾಲನ್ನು ಬೆರೆಸಿ ಕುಡಿಯಿರಿ.

-ಆಯುರ್ವೇದ ಔಷಧಗಳು – ಚಿತ್ರಕಾದಿ ವಟಿ, ತ್ರಿಫಲಾಚೂರ್ಣ, ಹಿಂಗ್ವಾಸ್ಟಕ ಚೂರ್ಣ, ಅವಿಪತ್ತಿಕರ ಚೂರ್ಣ.







error: Content is protected !!
Scroll to Top