ಸಿದ್ದರಾಮಯ್ಯ ಪ್ರತಿಕೃತಿ ದಹನ : ಯಶ್‌ಪಾಲ್‌ ಸುವರ್ಣ ವಿರುದ್ಧ ಕೇಸ್‌

ಉಡುಪಿ: ಕುಂದಾಪುರ ಸರಕಾರಿ ಕಾಲೇಜಿನ ಪ್ರಾಂಶುಪಾಲರಿಗೆ ಶ್ರೇಷ್ಠ ಪ್ರಾಂಶುಪಾಲ ಪ್ರಶಸ್ತಿ ಘೋಷಿಸಿ ಬಳಿಕ ತಡೆಹಿಡಿದ ಸರಕಾರದ ಕ್ರಮವನ್ನು ಪ್ರತಿಭಟಿಸುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅವಮಾನ ಮಾಡಿದ್ದಾರೆ ಎಂದು ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಸಹಿತ ಹಲವು ಬಿಜೆಪಿ ನಾಯಕಜರ ವಿರುದ್ಧ ಕೇಸ್‌ ದಾಖಲಾಗಿದೆ.
ಬಿಜೆಪಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹೆಬ್ರಿ ಚಾರ ನಿವಾಸಿ ಸೌರಭ್ ಬಲ್ಲಾಳ್ ದೂರು ನೀಡಿದ್ದು, ಯಶ್‌ಪಾಲ್ ಸುವರ್ಣ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಗಿರೀಶ್ ಅಂಚನ್, ವಿಜಯ ಕೊಡವೂರು, ಬಾಲಕೃಷ್ಣ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಮಹಿಳಾ ಮೋರ್ಚಾದ ವೀಣಾ ಶೆಟ್ಟಿ, ನಾಯಕರಾದ ಅಭಿರಾಜ್ ಸುವರ್ಣ, ಅಜಿತ್ ಮಲ್ಪೆ, ವಿಖ್ಯಾತ್ ಶೆಟ್ಟಿ ಇನ್ನಿತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಸೆಪ್ಟೆಂಬರ್ 6ರಂದು ಸಂಜೆ ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದು, ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿಗೆ ಗಿರೀಶ್ ಅಂಚನ್ ಹಾಗೂ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿಯವರು ಚಪ್ಪಲಿಯಿಂದ ಹೊಡೆದಿದ್ದಾರೆ. ಅಭಿರಾಜ್ ಪೆಟ್ರೋಲ್ ಸುರಿದು ಪ್ರತಿಕೃತಿಗೆ ಬೆಂಕಿ ಹಚ್ಚಿದ್ದಾರೆ. ಆರೋಪಿಗಳು ಗುಂಪುಗಳ ನಡುವೆ ದ್ವೇಷ, ಅಸೂಯೆ ಉಂಟಾಗುವಂತೆ ಮಾಡಿ, ಶಾಂತಿಭಂಗ ತರುವ ಉದ್ದೇಶದಿಂದ ಮುಖ್ಯಮಂತ್ರಿರವರನ್ನು ಅವಮಾನಿಸಿ ಉದ್ದೇಶಪೂರ್ವಕವಾಗಿ ಒಂದು ವರ್ಗವನ್ನು ಪ್ರಚೋದಿಸುವ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸೌರಭ್ ಬಲ್ಲಾಳ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ.

















































error: Content is protected !!
Scroll to Top