ಉಡುಪಿ ಜಿಲ್ಲೆಯಲ್ಲಿ ಸೆ.2ರಿಂದ ಎನಿವೇರ್ ರಿಜಿಸ್ಟ್ರೇಶನ್ ಸಿಸ್ಟಮ್ ಜಾರಿ

ಉಡುಪಿ: ಜಾಗ ಖರೀದಿ, ಮಾರಾಟ ಮತ್ತಿತರ ವ್ಯವಹಾರಗಳ ದಾಖಲೆಗಳನ್ನು ಇನ್ನು ಆಯಾಯ ತಾಲೂಕಿನ ಉಪನೋಂದಣಿ ಕಚೇರಿಯಲ್ಲೇ ನೋಂದಾಯಿಸಬೇಕೆಂದಿಲ್ಲ, ಜಿಲ್ಲೆಯೊಳಗೆ ಯಾವುದೇ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಸರಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿದ ಈ ಸೌಲಭ್ಯ ಸೆ.2ರಿಂದ ಉಡುಪಿ ಜಿಲ್ಲೆಯಲ್ಲೂ ಜಾರಿಗೆ ಬರಲಿದೆ.
‘ಎನಿವೇರ್ ನೋಂದಣಿ ವ್ಯವಸ್ಥೆ’ ಉಡುಪಿ ಜಿಲ್ಲೆಯಲ್ಲಿ ಸೆ.2ರಂದು ಪ್ರಾರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಘೋಷಿಸಿದ್ದಾರೆ.
2024-25ನೇ ಸಾಲಿನ ಆಯವ್ಯಯದಲ್ಲಿ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಪ್ಟೆಂಬರ್ 2ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಎನಿವೇರ್ ನೋಂದಣಿ ವ್ಯವಸ್ಥೆ’ ಜಾರಿಯಾಗಲಿದೆ ಎಂದು ಘೋಷಿಸಿದ್ದರು. ಈ ವ್ಯವಸ್ಥೆಯಡಿ ಜನರು ಜಿಲ್ಲೆಯ ಯಾವುದೇ ಉಪನೋಂದಣಿ ಕಚೇರಿಯಲ್ಲಿ ದಾಖಲೆಗಳನ್ನು ನೋಂದಾಯಿಸಿಕೊಳ್ಳಬಹುದು.
2011ರಲ್ಲಿ ಬೆಂಗಳೂರು ಹಾಗೂ 2024ರಲ್ಲಿ ತುಮಕೂರು ಮತ್ತು ಬೆಳಗಾವಿಯಲ್ಲಿ ಜಾರಿಯಾಗಿರುವ ಎನಿವೇರ್ ನೋಂದಣಿ ವ್ಯವಸ್ಥೆ ಉಡುಪಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 2ರಿಂದ ಜಾರಿಯಾಗಲಿದೆ. ಈ ಜಿಲ್ಲೆಗಳಲ್ಲಿ ವ್ಯವಸ್ಥೆಯ ಯಶಸ್ವಿ ಕಾರ್ಯನಿರ್ವಹಣೆಯ ಕಾರಣದಿಂದ ಉಡುಪಿ ಜಿಲ್ಲೆಯ ಉಪನೋಂದಣಿ ಕಚೇರಿಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು.
ಪ್ರಸ್ತುತ ಸಾರ್ವಜನಿಕರಿಗೆ ಸ್ಥಿರಾಸ್ತಿ ಇರುವ ಪ್ರದೇಶದ ಉಪನೋಂದಣಿ ಕಚೇರಿಯಲ್ಲಿ ಮಾತ್ರ ದಾಖಲೆಯನ್ನು ನೋಂದಾಯಿಸಲು ಅವಕಾಶವಿದೆ. ಉಡುಪಿ ಜಿಲ್ಲೆಯ ಉಪನೋಂದಣಿ ಕಚೇರಿಗಳು ಉಡುಪಿ, ಬ್ರಹ್ಮಾವರ, ಕುಂದಾಪುರ, ಶಂಕರನಾರಾಯಣ, ಬೈಂದೂರು ಮತ್ತು ಕಾರ್ಕಳದಲ್ಲಿವೆ ಎಂದು ಡಾ.ವಿದ್ಯಾ ಕುಮಾರಿ ತಿಳಿಸಿದ್ದಾರೆ.
ನೋಂದಣಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಮತ್ತು ವಿಳಂಬವನ್ನು ಕಡಿಮೆ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎನಿವೇರ್ ನೋಂದಣಿ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ನಾಗರಿಕರು ಈಗ ಹತ್ತಿರದ ಉಪನೋಂದಣಿ ಕಚೇರಿಯಲ್ಲಿ ದಾಖಲೆಗಳನ್ನು ನೋಂದಾಯಿಸಬಹುದು ಅಥವಾ ಲಭ್ಯವಿರುವ ಸ್ಲಾಟ್‌ಗಳೊಂದಿಗೆ ಕಚೇರಿಯನ್ನು ಆಯ್ಕೆ ಮಾಡಬಹುದು. ಈ ವ್ಯವಸ್ಥೆಯು ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ. ಇದು ಉಪನೋಂದಣಿ ಕಚೇರಿಗಳ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಸಿಬ್ಬಂದಿಯ ಮೇಲಿನ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ವಿವಿಧ ಕಚೇರಿಗಳಲ್ಲಿ ನೋಂದಣಿ ಕಾರ್ಯಗಳನ್ನು ಸಮವಾಗಿ ವಿತರಿಸುತ್ತದೆ.
ಸಾರ್ವಜನಿಕ ಪೋರ್ಟಲ್ ಮೂಲಕ ಸಾರ್ವಜನಿಕರು ಯಾವ ಉಪನೋಂದಣಿ ಕಚೇರಿಯಲ್ಲಿ ನೋಂದಣಿಗೆ ಅವಕಾಶ ಇದೆ ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.









error: Content is protected !!
Scroll to Top