ವಿರೋಧ ಲೆಕ್ಕಿಸದೆ ವಿದ್ಯುತ್‌ ಮಾರ್ಗ ಯೋಜನೆ ಜಾರಿಗೊಳಿಸಲು ಮುಂದಾದ ಕೇರಳ

ಕಾರ್ಕಳ : ನಂದಿಕೂರಿನಲ್ಲಿರುವ ಅದಾನಿ ವಿದ್ಯುತ್‌ ಸ್ಥಾವರದಿಂದ ಕೇರಳದ ಕಾಸರಗೋಡಿಗೆ ವಿದ್ಯುತ್‌ ಹರಿಸುವ ಉಡುಪಿ-ಕಾಸರಗೋಡು, ಕರಿಂದಳಂ-ವಯನಾಡು 400 ಕೆವಿ ವಿದ್ಯುತ್‌ ಲೈನ್‌ಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದರೂ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಕೇರಳ ಮುಂದಾಗಿದೆ.
400 ಕೆವಿ ಸಬ್‌ಸ್ಟೇಷನ್‌ ನಿರ್ಮಾಣದ ವಿಚಾರವಾಗಿ ಕೇರಳ ಇಂಧನ ಸಚಿವ ಕೆ. ಕೃಷ್ಣನ್‌ ಕುಟ್ಟಿ ಆದಷ್ಟು ಬೇಗ ಈ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಿದ್ದೇವೆ. ಭೂಸ್ವಾಧೀನ ಮತ್ತಿತರ ವಿವಾದಗಳನ್ನು ಬಗೆಹರಿಸಲು ಕೇರಳ ರಾಜ್ಯ ವಿದ್ಯುತ್‌ ಮಂಡಳಿ (ಕೆಎಸ್‌ಇಬಿ) ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ.

ವಿದ್ಯುತ್‌ ಲೈನ್‌ ಹಾದು ಹೋಗುವ ಪ್ರದೇಶಗಳಲ್ಲಿ ಯೋಜನೆಗೆ ಭೂಸ್ವಾಧೀನಪಡಿಸಿಕೊಳ್ಳುವ ಭೂಮಿಯ ಮಾಲೀಕರಿಗೆ ಪರಿಹಾರ ನೀಡುವ ವಿಚಾರದಲ್ಲಿ ಉಂಟಾಗಿರುವ ವಿವಾದ ಬಗೆಹರಿಸಲು ಕೆಎಸ್‌ಇಬಿ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ನಂದಿಕೂರಿನಿಂದ ಕಾಸರಗೋಡಿಗೆ ವಿದ್ಯುತ್‌ ಲೈನ್‌

ಪಡುಬಿದ್ರಿ ಸಮೀಪ ನಂದಿಕೂರಿನಲ್ಲಿರುವ ಅದಾನಿ ವಿದ್ಯುತ್‌ ಸ್ಥಾವರದಿಂದ (ಹಿಂದಿನ ನಾಗಾರ್ಜುನ ವಿದ್ಯುತ್‌ ಕಂಪನಿ) ಕಾರ್ಕಳ ತಾಲೂಕಿನ ಇನ್ನಾ ಮೂಲಕ ದಕ್ಷಿಣ ಕನ್ನಡದ ವಿಟ್ಲದ ಗ್ರಾಮೀಣ ಭಾಗದಲ್ಲಿ ಹಾದುಹೋಗಿ ಕೇರಳದ ಕಾಸರಗೋಡು, ಅಲ್ಲಿಂದ ಮುಂದಕ್ಕೆ ವಯನಾಡು ತನಕ ವಿದ್ಯುತ್‌ ಹರಿಸುವ ಯೋಜನೆಯಿದು. ಕರ್ನಾಟಕದ ಭಾಗದಲ್ಲಿ 400 ಕೆವಿ ವಿದ್ಯುತ್‌ ತಂತಿ ಎಳೆಯಲು ಸರಕಾರ ಅನುಮತಿ ನೀಡಿದೆ.

ಭೂಮಿಗೆ ಚಿಕ್ಕಾಸು ಪರಿಹಾರ

ಆದರೆ ವಿದ್ಯುತ್‌ ಮಾರ್ಗ ಈಗಾಗಲೇ ರೈತರ ಮತ್ತು ಭೂಮಾಲೀಕರ ವಿರೋಧಕ್ಕೆ ಗುರಿಯಾಗಿದೆ. ಇನ್ನಾದಲ್ಲಿ ಕೆಲ ತಿಂಗಳ ಹಿಂದೆ ವಿದ್ಯುತ್‌ ಮಾರ್ಗ ನಿರ್ಮಾಣದ ಗುತ್ತಿಗೆ ವಹಿಸಿಕೊಂಡ ಕಂಪನಿ ಸಿಬ್ಬಂದಿ ಯಾವುದೇ ಮುನ್ಸೂಚನೆಯಿಲ್ಲದೆ ಕಾಮಗಾರಿ ಶುರು ಮಾಡಿದಾಗ ಜನರು ಪ್ರತಿಭಟಿಸಿದ್ದರು. ಎರಡು ದಿನ ಬಿಟ್ಟು ಪೊಲೀಸರೊಂದಿಗೆ ಬಂದ ಕಂಪನಿಯವರು ಬಲವಂತವಾಗಿ ಕಾಮಗಾರಿ ಮಾಡಿದಾಗ ತಿಕ್ಕಾಟವಾಗಿ ಕೊನೆಗೆ ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬರಬೇಕಾಯಿತು.

ವಿಟ್ಲ ಭಾಗದಲ್ಲೂ ಈ ಯೋಜನೆಗೆ ಭಾರಿ ವಿರೋಧವಿದ್ದು, ಅಲ್ಲಿ ಹೋರಾಟಕ್ಕೆ ಸಮಿತಿ ರೂಪುಗೊಂಡಿದೆ. ಇತ್ತೀಚೆಗೆ ಈ ಕಂಪನಿಯವರು ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಜನರನ್ನು ನಂಬಿಸಿ, ಬೆದರಿಸಿ ಆ ಮೂಲಕ ಕಾಮಗಾರಿ ಮುಂದುವರಿಸಲು ಪ್ರಯತ್ನಿಸಿದಾಗ ಇದಕ್ಕೂ ಜನ ತಡೆಯೊಡ್ಡಿದ್ದಾರೆ.

ವಿದ್ಯುತ್‌ ಲೈನ್‌ ಕಾಮಗಾರಿಗೆ ಭೂಸ್ವಾಧೀನಪಡಿಸಿಕೊಳ್ಳಲು ನೋಟಿಸ್‌ ನೀಡುವುದಿಲ್ಲ, ಭೂಸ್ವಾಧೀನಕ್ಕೆ ಚಿಕ್ಕಾಸಿನ ಪರಿಹಾರ ನೀಡುತ್ತಾರೆ, ವಿರೋಧಿಸಿದರೆ ಬಲವಂತವಾಗಿ ಕಾಮಗಾರಿ ಮಾಡುತ್ತಾರೆ, ಪೊಲೀಸರನ್ನು ಕರೆ ತರುತ್ತಾರೆ ಎನ್ನುವುದು ಈ ಕಂಪನಿಯ ವಿರುದ್ಧ ಜನರಿಗಿರುವ ತಕರಾರು.

ಬಲವಂತದ ಕಾಮಗಾರಿ ಸಲ್ಲ

ಕರಾವಳಿಯಲ್ಲಿರುವವರೆಲ್ಲ ಸಣ್ಣ ಹಿಡುವಳಿದಾರರು. ಕೆಲವರು ಜೀವಮಾನದ ಗಳಿಕೆಯನ್ನೆಲ್ಲ ಹೂಡಿಕೆ ಮಾಡಿ ತುಂಡು ಭೂಮಿ ಖರೀದಿಸಿರುತ್ತಾರೆ. ಇಂಥ ಭೂಮಿಯ ಮೇಲೆ ನೋಟಿಸ್‌ ಕೂಡ ನೀಡದೆ ದಿಢೀರ್‌ ಎಂದು ವಿದ್ಯುತ್‌ ಕಂಬ ಹಾಕಲು ಮುಂದಾದರೆ ಜನ ಏನು ಮಾಡಬೇಕು? ವಿದ್ಯುತ್‌ ಕಂಬ ಇರುವ ಮತ್ತು ವಿದ್ಯುತ್‌ ತಂತಿ ಹಾದು ಹೋದ ಜಾಗಕ್ಕೆ ಬೆಲೆ ಸಿಗುವುದಿಲ್ಲ. ವಿದ್ಯುತ್‌ ಕಂಬದ ವ್ಯಾಪ್ತಿಯಲ್ಲಿ 40 ಮೀಟರ್‌ ತನಕ ಜಾಗ ಕನ್ವರ್ಷನ್‌ ಆಗುವುದಿಲ್ಲ. ಇಂಥ ಸ್ಥಳಗಳಲ್ಲಿ ಓಡಾಡುವುದು, ಜಾನುವಾರುಗಳನ್ನು ಮೇಯಲು ಬಿಡುವುದು ಕೂಡ ಅಪಾಯಕಾರಿ. ಹೀಗಾಗಿ ಜನರು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ.



















































































error: Content is protected !!
Scroll to Top