ಪ್ರಕೃತಿ ಎದುರು ನಿನ್ನದೇನಿದೆ ಮನುಜ ?

ಮಳೆಗಾಲ ಪೂರ್ತಿ ಜಿಟುಗುಡುವ ಹನಿಗಳು, ವಾರಗಟ್ಟಲೆ ಹಗಲು ರಾತ್ರಿಯೆನ್ನದೆ ಹನಿ ಕಡಿಯದೆ ಬೀಳುವ ವರ್ಷಧಾರೆ. ರಾತ್ರಿಯಾದರೆ ಒಂದೊಂದು ರೀತಿಯ ಕೂಗಿನಿಂದ ಸಂಗೀತ ಹೊರಡಿಸುವ ಜೀವಿಗಳು, ಹುಳ-ಹುಪ್ಪಟೆ-ಹಾವು-ಚೇಳು-ಬಗೆಬಗೆಯ ಹುಲ್ಲು– ಕಾಡು, ತೋಟದ ನಡುವೆ ತುಂಬಿ ಹರಿಯುವ ನೀರ ಕಾಲುವೆಗಳು… ಹೀಗೆ ಹಳ್ಳಿಯ ಮಳೆಗಾಲದ ಜೀವನ ಅದೊಂದು ಸುಂದರ ಅನುಭವ. ಎಷ್ಟೇ ಮಳೆಯಿದ್ದರೂ ಆ ನೀರಿನಲ್ಲಿ ಆಟವಾಡಿಕೊಂಡು, ಗೆಳೆಯರ ಜೊತೆಯಲ್ಲಿ ಒದ್ದೆಯಾಗಿಕೊಂಡು, ನಡುಗಿಕೊಂಡು, ಪಾಠ ಕೇಳಿ ಮತ್ತದೇ ಮಳೆಯಲ್ಲಿ ನೆನೆದುಕೊಂಡು ಬರುವ ನಮ್ಮ ಬಾಲ್ಯ ಸುಂದರವಾಗಿತ್ತು. ಮಳೆ ಎಂದಾಗ ಯಾವ ಭಯವೂ ಇರಲಿಲ್ಲ. ಅಚಾನಕ್ಕಾಗಿ ಮರಗಳೆಲ್ಲವೂ ಧರಾಶಾಯಿಯಾಗಿ ಮನುಷ್ಯರ ಜೀವವನ್ನು – ಜೀವನವನ್ನು ಕಿತ್ತುಕೊಳ್ಳಬಹುದೆಂಬ ಆಲೋಚನೆಯೂ ಇರಲಿಲ್ಲ. ನೆರೆಯಂತೂ ದೂರದ ಮಾತು. ಅದರಲ್ಲೂ ಪಶ್ಚಿಮಘಟ್ಟಗಳ ಬುಡದಲ್ಲಿರುವ ನಮಗೆ ಸ್ವಲ್ಪ ವರ್ಷ ಹಿಂದಿನವರೆಗೆ ಮಳೆಯೆಂದರೆ ಸ್ವರ್ಗದ ಅನುಭೂತಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಇವೆಲ್ಲವೂ ಬದಲಾಗಿದೆ. ಈಗ ಮಳೆಯೆಂದರೆ ಮನೆಯಲ್ಲಿ ಬೆಚ್ಚಗೆ ಕುಳಿತುಕೊಳ್ಳುವುದಕ್ಕೂ – ಹೊದ್ದು ಮಲಗುವುದಕ್ಕೂ – ಅಷ್ಟೇಕೆ ಕಣ್ಣು ಮುಚ್ಚಿದರೂ ಎಲ್ಲಿ ಶಾಶ್ವತವಾಗಿ ದೇವರ ಪಾದ ಸೇರಿಬಿಡುತ್ತೇವೆನ್ನುವ ಭಯ. ಯಾವ ಮಳೆಗೆ ಯಾರ ಮನೆ ಮಣ್ಣಲ್ಲಿ ಹೂತು ಹೋಗುವುದೋ, ಎಲ್ಲಿ ಗಾಳಿಗೆ ಛಾವಣಿ ಹಾರುವುದೋ – ಮರಗಳು ಬೀಳುವುವೋ ಎನ್ನುವ ಹೆದರಿಕೆ. ಪೂರ್ವಿಕರು ಅಮ್ಮನೆಂದು ಪೂಜಿಸುತ್ತಿದ್ದ ಪ್ರಕೃತಿ ಯಾವಾಗ ರಣಚಂಡಿಯಾಗಿ ತನ್ನ ಮಕ್ಕಳನ್ನು ಒಡಲೊಳಗೆ ಮಲಗಿಸಿಕೊಳ್ಳುವಳೆನ್ನುವ ಅರಿವಿಲ್ಲದೆ ಮಳೆಗಾಲವನ್ನು ಕಳೆಯಬೇಕಾದ ಅನಿವಾರ್ಯತೆ. ಕಾರಣ ಹುಡುಕುತ್ತಾ ಹೋದರೆ ದೊರೆಯುವ ಉತ್ತರ ಒಂದೇ. ಅದು ಮನುಷ್ಯನ ಧನದಾಹ.

ನಮ್ಮ ಹಿರಿಯರು ಪ್ರಕೃತಿಯಿಂದಾಗಿ ನಾವು ಎನ್ನುವ ಭಾವದಿಂದ ಪರಿಸರ ರಕ್ಷಣೆಗಾಗಿ ಮರಗಳನ್ನು ಪೂಜಿಸುವ ಪದ್ಧತಿಯನ್ನು ಜಾರಿಗೆ ತಂದು ಅರಣ್ಯ ಸಂಪತ್ತಿನ ರಕ್ಷಣೆ ಮಾಡಿದ್ದರು. ಪ್ರತಿಯೊಬ್ಬ ದೇವರಿಗೂ ಒಂದೊಂದು ವಾಹನವೆಂದೋ, ಆಭರಣವೆಂದೋ, ಸ್ವತಃ ದೇವರೆಂದೋ ಖೇಚರ – ಭೂಚರಗಳನ್ನು ಕಾಪಾಡಿದರು. ನಾಗಬನಗಳ ಹೆಸರಿನಲ್ಲಿ ಪ್ರಾಣಿ – ಕಾಡು – ಜಲ ಸಂಪನ್ಮೂಲಗಳನ್ನು ಜನರು ಹಾಳುಗೆಡವದಂತೆ ನೋಡಿದರು. ಬರಬರುತ್ತಾ ಮನುಷ್ಯ ಹೊಟ್ಟೆಹೊರೆಯುವುದಕ್ಕಾಗಿ ಆಧುನಿಕ ಶಿಕ್ಷಣ ಪಡೆದ. ಶಿಕ್ಷಿತ ಅನಾಗರಿಕನಾಗುತ್ತಾ ಹೋದಂತೆ ಹಿರಿಯರ ಆಚರಣೆಗಳು ಬಾಲಿಶವಾಗಿ ಕಂಡವು. ಹಳ್ಳಿಯ ಮನೆಗಳು ಐಶಾರಾಮಿ ಜೀವನಕ್ಕೆ ಸರಿ ಬರಲಿಲ್ಲ. ತನ್ನ ಜಾಗದ ಒಂದಗುಲವನ್ನು ಇನ್ನೊಬ್ಬ ಆಕ್ರಮಿಸಿದರೆ ಕತ್ತಿ ಹಿಡಿದು ಕಿತ್ತಾಡುವ ಅವನಿಗೆ ಕಾಡುಗಳನ್ನು ಕಡಿದು ನಾಡು ನಿರ್ಮಿಸುವುದೂ ಅಕ್ರಮ ಎನ್ನುವ ಅರಿವಾಗಲಿಲ್ಲ. ಘಟ್ಟಗಳನ್ನು ಕೊರೆದು, ಮಾತೆಯ ಒಡಲನ್ನು ಬರಿದುಗೊಳಿಸಿ ರಸ್ತೆಗಳನ್ನು ನಿರ್ಮಾಣ ಮಾಡುವಾಗಲೂ ತನ್ನ ತಪ್ಪಿನ ಅರಿವಾಗಲಿಲ್ಲ. ಹಸಿರು ಸೀರೆಯನ್ನುಟ್ಟ ಭೂಮಿಯನ್ನು ವಿವಸ್ತ್ರಗೊಳಿಸಿ ಸಾಧಿಸುವುದಾದರೂ ಏನು ಎನ್ನುವ ಆಲೋಚನೆಯನ್ನೂ ಮಾಡಲಿಲ್ಲ. ನಿರಂತರವಾಗಿ ಹೊತ್ತಮ್ಮನ ಮೇಲೆ ದಾಳಿಯನ್ನು ನಡೆಸುತ್ತಲೇ ಹೋದ. ಪರಿಸರವನ್ನು ಅದರಷ್ಟಕ್ಕೆ ಬಿಡದೆ ಅವಳನ್ನು ಕುರೂಪಗೊಳಿಸಿ ಕುಣಿದು – ಕುಣಿದು – ಕುಪ್ಪಳಿಸಿದ. ಅಧಿಕಾರ – ಹಣ ಇದ್ದ ಮಂದಿ , ಪಶ್ಚಿಮ ಘಟ್ಟಗಳಲ್ಲಿ ತಮ್ಮಷ್ಟಕ್ಕೆ ತಾವಿದ್ದ ಮಂದಿಯ ನಡುವೆ ಬಂದು ಹಣದಾಸೆ ಮೂಡಿಸಿ ಜಾಗ ಪಡೆದು ತಪ್ಪಲಿನಲ್ಲಿ ರೆಸಾರ್ಟ್ ನಿರ್ಮಿಸಿ, ನೀರಿನ ಹರಿವನ್ನು ನಿಲ್ಲಿಸಿ – ನದಿಯನ್ನೇ ತಿರುಗಿಸಿ, ನೀರಿಂಗಿಸುವ ಮರಗಳನ್ನು ಕಡಿದು ವಾರಾಂತ್ಯವಾದರೆ ಬರುವ ಜನರಿಗೆ ಸುಸಜ್ಜಿತ ಆರಾಮ ಮನೆಗಳನ್ನು ಒದಗಿಸಿದರು. ಪ್ರಕೃತಿಯ ಸೌಂದರ್ಯವನ್ನು ಸವಿಯುವ ಭರದಲ್ಲಿ ಆಕೆಯ ಬದುಕನ್ನೇ ಕಿತ್ತುಕೊಂಡು ಬಿಟ್ಟ ಮಾನವ. ಸಹಜ ಹಸಿರು ಸೀರೆಯನ್ನು ಆಕೆಯ ಮೇಲಿಂದ ಕಿತ್ತೆಸೆದು ಕಸದ ರಾಶಿಯಿಂದ ಅವಳನ್ನು ಮುಚ್ಚಿದ. ನೋವಿನಿಂದ ಚೀರುವ ಶಬ್ದವನ್ನೂ ಗ್ರಹಿಸಲಿಲ್ಲ. ಅವಳು ಅಮ್ಮನಾದರೂ ಆಕೆಯ ತಾಳ್ಮೆಗೊಂದು ಮಿತಿಯಿದೆ ಎನ್ನುವ ಅರಿವಾಗಲಿಲ್ಲ ಅವನಿಗೆ. ನಮ್ಮಿಂದಾಗಿ ಪ್ರಕೃತಿಯಿರುವುದಲ್ಲ, ಅದರಿಂದಾಗಿ ನಾವಿದ್ದೇವೆ ಎನ್ನುವುದನ್ನು ಮರೆತಿರುವುದರಿಂದಲೇ ಇತ್ತೀಚಿನ ವರ್ಷಗಳಲ್ಲಿ ಪ್ರತಿ ಮಳೆಗಾಲವೂ ಪ್ರಳಯರುದ್ರನುರಿಗಣ್ಣಿನಂತಿರುವುದು.

ಇಂದು ಅವಳ ಬಾರಿ
ಆಕೆಯ ತಪ್ಪೇನಿದೆ ? ತಪ್ಪಲಿನ ಮೇಲಿನ ಭಾರವನ್ನು ಹೊರಿಸಿದವರು ನಾವು – ಆಕೆ ಕೊಡವಿಕೊಂಡು ಭಾರವನ್ನು ಕಳಚಿಕೊಳ್ಳುತ್ತಿದ್ದಾಳೆ. ಆಕೆಯ ಒಡಲನ್ನು ಅವೈಜ್ಞಾನಿಕವಾಗಿ ಕೊರೆದವರು ನಾವೇ – ಅವಳು ಅದನ್ನು ತನ್ನಷ್ಟಕ್ಕೇ ಸರಿ ಪಡಿಸಿಕೊಳ್ಳುತ್ತಿದ್ದಾಳೆ. ಆಕೆಯನ್ನು ವಿವಸ್ತ್ರಗೊಳಿಸಿದವರು ನಾವೇ – ಅವಳದನ್ನು ಆಕ್ಷೇಪಿಸುತ್ತಿದ್ದಾಳೆ. ಅವಳ ಒಡಲೊಳಗೆ – ಜಲಮೂಲದೊಳಗೆ ಪ್ಲಾಸ್ಟಿಕ್ ಮಹಾಮಾರಿಯನ್ನು ಎಸೆದವರು ನಾವೇ – ಅವಳದನ್ನು ಮರಳಿ ನಮ್ಮ ಮನೆಯಂಗಳಕ್ಕೆ ಎಸೆಯುತ್ತಿದ್ದಾಳೆ. ನಾವವಳಿದ್ದಲ್ಲಿಗೆ ಹೋಗಿ ಅವಳ ಸೊಬಗನ್ನು ನಾಶ ಮಾಡಿದ್ದೇವೆ – ಇಂದು ಅವಳ ಬಾರಿ. ಅಷ್ಟೇ…

ನೇತ್ರಾವತಿ ನದಿ ತಿರುವು ಅವೈಜ್ಞಾನಿಕವೆನ್ನುವ ಅರಿವು ನಾಯಕರಿಗಿರಲಿಲ್ಲವೇ ? ಅಕ್ರಮ ರೆಸಾರ್ಟ್‌ಗಳಿಂದ ಪಶ್ಚಿಮ ಘಟ್ಟ ಬಳಲುತ್ತಿರುವುದೂ ಸರಕಾರಗಳಿಗೆ ತಿಳಿದಿರಲಿಲ್ಲವೇ ? ಅಂತಹ ರೆಸಾರ್ಟ್‌ಗಳಿಗೆ ತೆರಳಿ ಮೋಜು ಮಾಡುವ ನಮಗಾದರೂ ಅರಿವಿರಲಿಲ್ಲವೇ ? ಮಳೆ ನೀರಿನ ಕಾಲುವೆಗಳಿಗೂ ಜಾಗವಿಲ್ಲದಂತೆ ರಸ್ತೆಯಂಚಲ್ಲೂ ಮನೆ ನಿರ್ಮಿಸಿ ಕೃತಕ ನೆರೆಗೆ ಕಾರಣರಾದ ನಾಗರಿಕರು ಮತ್ತು ಅಧಿಕಾರಿಗಳಿಗೆ ಪಟ್ಟಣದ ನೀಲನಕಾಶೆ ಹೇಗಿರಬೇಕೆನ್ನುವುದೂ ಮರೆತು ಹೋಯಿತೇ ? ರಸ್ತೆ ಅಗಲೀಕರಣದ ಹೆಸರಿನಲ್ಲಿ ಗುಡ್ಡಗಳನ್ನು ಒಟ್ಟಾರೆ ಕಡಿದು ತಪ್ಪು ಮಾಡಿದರೂ ಮತ್ತೆ ಅದರ ಮೇಲೆ ಕಾಡು ಸೃಷ್ಟಿಸುವ ಸಣ್ಣ ಕೃತಜ್ಞತೆಯೂ ನಮಗೆ ಇಲ್ಲದೆ ಹೋದುದು ಈ ದುರಂತಗಳಿಗೆ ಕಾರಣ.

ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಅಪಾಯ
ಗಾಡ್ಗೀಳ್ ವರದಿ – ಕಸ್ತೂರಿ ರಂಗನ್ ವರದಿ ಕಾಡನ್ನು ಪ್ರೀತಿಸಿ ಬದುಕುವವರ ಜೀವನಕ್ಕೆ ಹಾನಿ ತಂದಿರಲಿಲ್ಲ. ಅಕ್ರಮ ಗಣಿಗಾರಿಕೆ- ಪವರ್ ಪ್ಲಾಂಟ್ – ರೆಸಾರ್ಟ್ – ಮೋಜು ಮಸ್ತಿಗಳಿಗೆ ಮಾತ್ರ ತಡೆ ನೀಡಿದ್ದು. ಅರಣ್ಯವನ್ನು ಒತ್ತುವರಿ ಮಾಡಿ ಅತಿಕ್ರಮಿಸುವ ಬಗ್ಗೆ ಮಾತ್ರ ಆಕ್ಷೇಪವಿದ್ದದ್ದು. ಜೀವ ವೈವಿಧ್ಯತೆಯ ಎಂಟು ಹಾಟ್ ಸ್ಪೋಟ್ ಗಳಲ್ಲಿ ಒಂದಾದ ನಮ್ಮ ಪಶ್ಚಿಮ ಘಟ್ಟಗಳ ರಕ್ಷಣೆಯ ಕಾಳಜಿಯಿತ್ತಷ್ಟೇ ಹೊರತು ಜನಜೀವನಕ್ಕೆ ಕುತ್ತುತರುವ ವರದಿಗಳಾಗಿರಲಿಲ್ಲ.
ಪ್ರಕೃತಿ ಯಾವತ್ತಾದರೊಂದು ದಿನ ಮುನಿಸಿಕೊಳ್ಳಬೇಕಾಗಿತ್ತು. ಈ ಬಾರಿ ಮುನಿಸಿಕೊಂಡಿದ್ದಾಳೆ. ಆದರೆ ದುರಂತವೆಂದರೆ ಪ್ರಕೃತಿಯನ್ನು ಹಾಳುಗೆಡವಿದ ಸಿರಿವಂತರು ಆರಾಮವಾಗಿದ್ದಾರೆ. ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದ ಜನರು ಬದುಕನ್ನೇ ಕಳೆದುಕೊಂಡಿದ್ದಾರೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಅಪಾಯ ಕಟ್ಟಿಟ್ಟ ಬುತ್ತಿ.

ಮುನಿದ ತಾಯಿಯ ಒಲಿಸಿಕೊಳ್ಳೋಣ
ಈ ಭೂಮಿ ನಮ್ಮ ಅಪ್ಪನದಲ್ಲ, ಅವರಪ್ಪನದೂ ಅಲ್ಲ, ನಮ್ಮ ಮಕ್ಕಳದು. ಪ್ರತಿ ಬಾರಿಯೂ ‘PRAY FOR MADIKERI, PRAY FOR KODAGU, PRAY FOR KERALA, PRAY FOR UTTARAKHAND, PRAY FOR KARAVALI, PRAY FOR WAYANAD‘ ಹೇಳಿ ಮಳೆಗಾಲದ ನಂತರ ಈ ನೋವನ್ನು ಮರೆತು ಪ್ರಕೃತಿಯನ್ನು ಹಾಳು ಮಾಡುವ ಬದಲು ಕೈಯ್ಯಾರೆ ಅವಳಿಗೆ ಹಸಿರನ್ನುಡಿಸೋಣ. ಮುನಿದ ತಾಯಿಯನ್ನು ಒಲಿಸಿಕೊಳ್ಳೋಣ. ಅವಳ ಸೊಬಗನ್ನು ಸವಿಯುವ ಭರದಲ್ಲಿ ಅವಳಿಗೆ ನೋವು ಕೊಡದೆ ಅವಳಷ್ಟಕ್ಕೆ ಅವಳನ್ನಿರಲು ಬಿಟ್ಟು ಅವಳೊಂದಿಗೆ ಒಂದಾಗಿ ಬದುಕೋಣ. ಮಳೆಗಾಲ ಮುಗಿದಿಲ್ಲ. ಇನ್ನೂ ನಾವು ಮನಸ್ಸು ಮಾಡಿದರೆ ಹಸಿರುಡಿಸಬಹುದು. ಆಕೆಗೆ – ಉಸಿರುಳಿಸಬಹುದು ನಾಳೆಗೆ. ಸಂವಿಧಾನಕ್ಕೆ ಎಪ್ಪತ್ತೈದರ ಹೊಸ್ತಿಲಲ್ಲಿ ಒಂದು ಕುಟುಂಬ ಎಪ್ಪತ್ತೈದು ಗಿಡ ನೆಟ್ಟರೆ ಸಾಕು – ಏಕ್ ಪೇಡ್ ಮಾ ಕೆ ನಾಮ್ ಅಭಿಯಾನಕ್ಕೆ ಕೈ ಜೋಡಿಸಿಕೊಂಡು ಒಬ್ಬ ಒಂದು ಗಿಡ ನೆಟ್ಟರೂ ಸಾಕು.

ಕಾರ್ಗಿಲ್ ವಿಜಯದ ಇಪ್ಪತ್ತೈದು ವರ್ಷಗಳ ಸಂಭ್ರಮದ ಅಮೃತ ಘಳಿಗೆಯಲ್ಲಿ ಪ್ರತಿಯೊಂದು ಸಂಘಟನೆ ಐದುನೂರ ಇಪ್ಪತ್ತೇಳು ಗಿಡಗಳನ್ನು ನೆಟ್ಟರೂ ಸಾಕು ಅವಳು ನಮ್ಮನ್ನು ಕ್ಷಮಿಸುತ್ತಾಳೆ. ಯಾಕೆಂದರೆ ‘ಕೆಟ್ಟ ಮಕ್ಕಳು ಹುಟ್ಟಬಹುದು – ಕೆಟ್ಟ ತಾಯಿ ಇರಲಾರಳು’. ನಾವು ಕಾರ್ಕಳದಲ್ಲಿ ಈ ಬದಲಾವಣೆಯತ್ತ ಹೆಜ್ಜೆ ಇಟ್ಟಿದ್ದೇವೆ. ನಮ್ಮ ಮಕ್ಕಳಿಗೆ ಹಸಿರು ಕಾರ್ಕಳವನ್ನು ನೀಡುವ ಪಣ ತೊಟ್ಟಿದ್ದೇವೆ. ನೀವೂ ಕೈ ಜೋಡಿಸುವಿರಾ ?



































































































error: Content is protected !!
Scroll to Top