ಭೀಕರ ಮಳೆಗೆ ತಾಲೂಕಿನೆಲ್ಲೆಡೆ ಭಾರಿ ಅನಾಹುತ

ಕಾರ್ಕಳ : ಭೀಕರ ಮಳೆಗೆ ತಾಲೂಕಿನೆಲ್ಲೆಡೆ ಭಾರಿ ಅನಾಹುತ ಸಂಭವಿಸಿದೆ. ಭೂ ಕುಸಿತ, ಮನೆಗೆ ಮರ ಬಿದ್ದು ಹಾನಿ, ಗೋಡೆ ಕುಸಿತ, ನೆರೆ ನೀರು ನುಗ್ಗಿ ಹಾನಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಪ್ರಮುಖವಾಗಿ ಸಾಣೂರು, ಇನ್ನಾ ಗ್ರಾಮದಲ್ಲಿ ಶಾಂಭವಿ ನದಿ ಉಕ್ಕಿ ಹರಿದು ನೆರೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಕಾರ್ಕಳ ನಗರದಲ್ಲಿ ಜೋಡುರಸ್ತೆ, ಕುಕ್ಕುಂದೂರು ಕೆ.ಎಂ.ಇ.ಎಸ್‌ ಶಾಲಾ ರಸ್ತೆ, ರೋಟರಿ ಆಸ್ಪತ್ರೆ ಸಾಗುವ ರಸ್ತೆ, ಕುಂಟಲ್ಪಾಡಿ ರಸ್ತೆ, ಆನೆಕೆರೆ ಸಂಪರ್ಕ ರಸ್ತೆ, ಗೊಮ್ಮಟ್ಟ ಬೆಟ್ಟ ಬಳಿಯ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕೃಷಿಭೂಮಿ ಕಡಲಿನಂತಾಗಿ ಬೆಳೆದ ಬೆಳೆ ಕೊಚ್ಚಿ ಹೋಗಿದೆ.

ಸ್ಥಳಾಂತರ
ಇನ್ನಾ ಗ್ರಾಮದ ಕುಳ್ತೆಮಠದಲ್ಲಿ ನೆರೆ ಪೀಡಿತ ಮೂರು ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮಾಳ ಗ್ರಾಮದ ಎಡಪಾಡಿಯಲ್ಲಿ ಕುಸುಮಾಕರ ಬರ್ವೆ ಅವರ ಮನೆಗೆ ಭೂಕುಸಿತದಿಂದ ಹಾನಿಯಾಗುವ ಸಂಭವವಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಅವರನ್ನು ತಾಲೂಕು ಆಡಳಿತದ ನೇತೃತ್ವದಲ್ಲಿ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಮಿಯ್ಯಾರು ಗ್ರಾಮದ ಚೆನ್ನಾಡಿಯ ಸಂಜೀವ ಅವರ ಮನೆ ಕುಸಿದು 3 ಲ. ರೂ. ನಷ್ಟ ಸಂಭವಿಸಿದೆ. ಮನೆಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಲಾಗಿದೆ.

ಪಳ್ಳಿ ಗ್ರಾಮದ ಧೂಮೊಟ್ಟುವಿನ ವಿನೋದ ಅವರ ಮನೆಯ ಶೀಟು ಹಾಗೂ ಪಕ್ಕಾಸು ಹಾನಿಯಾಗಿ ಅಂದಾಜು 30 ಸಾ. ರೂ. ನಷ್ಟ, ಕಲ್ಕಾರು ಸುಜಾತ ನಾಯ್ಕ ಅವರ ಮನೆಯ ಗೋಡೆ ಕುಸಿದು 50 ಸಾ. ರೂ. ನಷ್ಟ, ಕೌಡೂರು ಗ್ರಾಮದಲ್ಲಿ ಮನೆಯೊಂದಕ್ಕೆ ಹಲಸಿನ ಮರ ಬಿದ್ದು 40 ಸಾ. ರೂ. ನಷ್ಟ, ಶಿರ್ಲಾಲಿನಲ್ಲಿ ರಾಜು ಪೂಜಾರಿ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಕಲ್ಯ ಗ್ರಾಮದ ನೆಲ್ಲಿಗುಡ್ಡೆಯ ಕಮಲ ಪೂಜಾರ್ತಿಯವರ ಮನೆ ಹಾನಿಗೊಳಗಾಗಿ ಅಂದಾಜು 50 ಸಾ. ರೂ. ನಷ್ಟ ಸಂಭವಿಸಿದೆ.

ಮಳೆ ಪ್ರಮಾಣ
ಕಾರ್ಕಳ 228.8 ಮಿ. ಮೀ., ಇರ್ವತ್ತೂರು 226.4 ಮಿ.ಮೀ., ಅಜೆಕಾರು 181.4 ಮಿ.ಮೀ., ಸಾಣೂರು 199.8 ಮಿ. ಮೀ., ಕೆದಿಂಜೆ 187.8 ಮಿ. ಮೀ., ಮುಳಿಕಾರು 215.2 ಮಿ. ಮೀ. ಹಾಗೂ ಕೆರ್ವಾಶೆಯಲ್ಲಿ 184.6 ಮಿ. ಮೀ. ಮಳೆ ದಾಖಲಾಗಿದೆ.

ಮುಂಡ್ಕೂರಿನಲ್ಲಿ ರಸ್ತೆಯಲ್ಲಿ ತುಂಬಿದ ನೆರೆ ನೀರು
ಮಿಯ್ಯಾರಿನಲ್ಲಿ ಮಳೆಗೆ ಮನೆಯ ಗೋಡೆ ಕುಸಿತ
ಮಾಳ ಗ್ರಾಮದ ಭೂ ಕುಸಿತ ಸಂಭವವಿರುವ ಪ್ರದೇಶ
ಪಳ್ಳಿ ಗ್ರಾಮದ ಸುಜಾತ ನಾಯ್ಕ ಅವರ ಮನೆಯ ಗೋಡೆ ಕುಸಿದು ಹಾನಿ
ಶಿರ್ಲಾಲಿನಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ


































































































error: Content is protected !!
Scroll to Top