ವಯನಾಡು ಭೂ ಕುಸಿತ : 135 ದಾಟಿದ ಸಾವಿನ ಸಂಖ್ಯೆ

ಕಲ್ಪೇಟ್ಟ: ಕೇರಳದ ವಯನಾಡಿನಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಎರಡು ವಿನಾಶಕಾರಿ ಭೂ ಕುಸಿತ ದುರಂತದಲ್ಲಿ ಸಾವಿಗೀಡಾವರ ಸಂಖ್ಯೆ 135 ದಾಟಿದೆ. ಇನ್ನೂ ನೂರಾರು ಮಂದಿ ಮಣ್ಣಿನ ರಾಶಿಯಡಿ ಇದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ. ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಯುತ್ತಿದೆ.

ಭೂ ಕುಸಿತದಿಂದ ಭಾರಿ ಹಾನಿಗೀಡಾದ ಚೂರ​​ಮಲೆಯಲ್ಲಿ ಪರಿಹಾರ ಕಾರ್ಯಾಚರಣೆಗಾಗಿ ತಾತ್ಕಾಲಿಕ ಸೇತುವೆಯ ನಿರ್ಮಾಣ ಮಾಡಲಾಗಿದೆ. ಈ ಸೇತುವೆಯನ್ನು ಸೇನೆ ಮತ್ತು ಕೇರಳ ಅಗ್ನಿಶಾಮಕ ದಳ ಜಂಟಿಯಾಗಿ ನಿರ್ಮಿಸಿದೆ. ರಾತ್ರಿ 2 ಗಂಟೆ ಸುಮಾರಿಗೆ ಭಾರಿ ಮಳೆಯ ಕಾರಣ ರಕ್ಷಣಾ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಬುಧವಾರ ಬೆಳಗ್ಗೆ ಮತ್ತೆ ರಕ್ಷಣಾ ಕಾರ್ಯಾಚರಣೆ ಶುರುವಾಗಿದ್ದು, ಯಂತ್ರಗಳ ಸಹಿತ ಪರಿಹಾರ ಸಲಕರಣೆಗಳನ್ಜು ಹೆಲಿಕಾಪ್ಟರ್‌ಗಳಲ್ಲಿ ತಂದು ಇಳಿಸಲಾಗಿದೆ. ಮುಂಡಕೈಯನ್ನು ಚೂರಮಲೆಗೆ ಸಂಪರ್ಕಿಸುವ ಸೇತುವೆ ಕೊಚ್ಚಿಹೋದ ಪರಿಣಾಮ ಇಲ್ಲಿಗೆ ತಲುಪಲು ಸಾಧ್ಯವಾಗಿರಲಿಲ್ಲ. ಮುಂಡಕೈಯಲ್ಲಿ ಸುಮಾರು 100 ಮಂದಿ ಪತ್ತೆಯಾಗಿದ್ದಾರೆ. ಜೀವಂತ ಸಿಕ್ಕಿದವರನ್ನು ನದಿಯ ಮೇಲೆ ಹಗ್ಗ ಕಟ್ಟಿ ಕಾಪಾಡುವ ಪ್ರಯತ್ನ ನಡೆಯುತ್ತಿದೆ.

ಮಂಗಳವಾರ ತಡರಾತ್ರಿ ರಾತ್ರಿ 1 ಗಂಟೆ ಮತ್ತು ಮುಂಜಾನೆ 4 ವೇಳೆಗೆ ಸಂಭವಿಸಿದ ಎರಡು ಭೂ ಕುಸಿತಗಳು ನಯನ ಮನೋಹರ ಪ್ರಕೃತಿ ಸೌಂದರ್ಯ ಹೊಂದಿರುವ ವಯನಾಡನ್ನು ಸಂಪೂರ್ಣ ನಾಶ ಮಾಡಿದೆ. ಒಂದಿಡೀ ಪಟ್ಟಣವೆ ಕೊಚ್ಚಿಕೊಂಡು ಹೋಗಿದ್ದು, ಅಲ್ಲಿ ಭೂಕಂಪ ಸದೃಶ ಪರಿಸ್ಥಿತಿ ಸೃಷ್ಟಿಯಾಗಿದೆ. ಇಡೀ ಪ್ರದೇಶ ಮುರಿದು ಬಿದ್ದ ಮರ, ಕುಸಿದು ಬಿದ್ದಿರುವ ಮನೆ ಅಂಗಡಿಗಳು, ಬಂಡೆಕಲ್ಲುಗಳ ರಾಶಿಯಿಂದ ತುಂಬಿದ್ದು, ಆದ ನಾಶ ನಷ್ಟಕ್ಕೆ ಸಾಕ್ಷಿ ನುಡಿಯುತ್ತಿವೆ.

ಸುಮಾರು 31 ಶವಗಳು ಮತ್ತು ಮನುಷ್ಯರ ಅಂಗಾಂಗಳು ಭೂಕುಸಿತ ಸಂಭವಿಸಿದ ಸ್ಥಳದಿಂದ ಸುಮಾರು 25 ಕಿ. ಮೀ. ದೂರವಿರುವ ನಿಲಂಬೂರಿನ ಪೊತ್ತುಕಲ್ಲು ಎಂಬಲ್ಲಿ ಚಲಿಯಾರ್‌ ಹೊಳೆಯಲ್ಲಿ ಸಿಕ್ಕಿದ್ದು, ಇದು ದುರಂತದ ಭೀಕರತೆಗೆ ಸಾಕ್ಷಿಯಾಗಿದೆ. ಇಷ್ಟರ ತನಕ 135 ಶವಗಳು ಸಿಕ್ಕಿವೆ. ಆದರೆ 47 ಶವಗಳ ಗುರುತು ಮಾತ್ರ ಪತ್ತೆಯಾಗಿದೆ. ಹೆಚ್ಚಿನ ಶವಗಳು ಗುರುತಿಸಲು ಸಾಧ್ಯವಾಗದಷ್ಟು ಛಿದ್ರಗೊಂಡಿವೆ.

ಮುಂಡಕೈ-ಚೂರಮಲೆ ಸೇತುವೆ ಕೊಚ್ಚಿ ಹೋದ ಕಾರಣ ಸುಮಾರು 300 ಕುಟುಂಬಗಳ 1,000 ಮಂದಿ ಅತಂತ್ರರಾಗಿದ್ದರು. ಭೂಕುಸಿತ ಸ್ಥಳದಿಂದ ದೂರ ಹೀಗಿ ಬೆಟ್ಟದಲ್ಲಿ ಅವರು ಆಶ್ರಯ ಪಡೆದಿದ್ದರು. ಈ ಪೈಕಿ ಹೆಚ್ಚಿನವರ ಮನೆಗಳು ನಾಶವಾಗಿವೆ.

ಬದಲಿತ್ತು ನದಿ ನೀರಿನ ಬಣ್ಣ

ಸಂಜೆಯೇ ನದಿ ನೀರಿನ ಬಣ್ಣ ಬದಲಾಗಿತ್ತು. ಅಪಾಯವನ್ನು ಗ್ರಹಿಸಿದ್ದ ಪಂಚಾಯತ್‌ ಅಧಿಕಾರಿಗಳು ಹಲವರನ್ನು ಸ್ಥಳಾಂತರಿಸಿದ್ದರು. ಅಪಾಯದ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೆ ಆಗಲಿರುವ ಅನಾಹುತವನ್ನು ಊಹಿಸಲು ಸಾಧ್ಯವಾಗದೆ ಮಂಗಳವಾರ ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಮುಂಡಕೈಯಲ್ಲಿ ಜನರು ಮಲಗಿದ್ದಾಗಲೇ ಮೊದಲ ಭೂಕುಸಿತ ಸಂಭವಿಸಿದೆ. ಘಟನೆಯ ವಿಚಾರ ತಿಳಿದು ಮೇಪ್ಪಾಡಿಯಿಂದ ಹಲವರು ಮುಂಡಕೈಗೆ ಬಂದಿದ್ದರು. ಚೂರಮಲೆ ನಿವಾಸಿಗಳಿಗೆ ಇದ್ಯಾವುದೂ ಗೊತ್ತೇ ಆಗಲಿಲ್ಲ.













































































error: Content is protected !!
Scroll to Top