ಕಾರ್ಕಳ : ಧಾರ್ಮಿಕ ಸಂಸ್ಕಾರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಮತ್ತು ಮಠ, ದೇವಸ್ಥಾನದೊಂದಿಗೆ ಸಮಾಜದ ಸಂಪರ್ಕ ನಿರಂತರವಾಗಿರಬೇಕೆಂಬ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ಗುರುಸೇವಾ ಪರಿಷತ್ ಅಸ್ತಿತ್ವಕ್ಕೆ ಬರಬೇಕೆಂಬ ಅಪೇಕ್ಷೆಯಿದೆ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ನುಡಿದರು. ಅವರು ಜು. 5 ರಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ 20ನೇ ವರ್ಷದ ಚಾತುರ್ಮಾಸ್ಯ ವೃತಾಚರಣೆಯ ಪೂರ್ವಾಭಾವಿಯಾಗಿ ನಡೆದ ಕ್ಷೇತ್ರದರ್ಶನ ಸಂದರ್ಭ ಆಶೀರ್ವಚನ ನೀಡಿದರು.
ಗುರುಸೇವಾ ಪರಿಷತ್ ಮಠದ ಒಂದು ಅಂಗ ಸಂಸ್ಥೆ. ಇದರ ಮೂಲಕ ಸಮಾಜದ ಎಲ್ಲರಿಗೂ ಧಾರ್ಮಿಕ ಭಾವನೆಗಳನ್ನು ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ಸ್ವಾಮೀಜಿ ಹೇಳಿದರು.

ಪ್ರತಿಷ್ಠಾನದ ಶಿಷ್ಯವೃಂದ ಪ್ರಾರ್ಥಿಸಿ, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಸ್ವಾಗತಿಸಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ. ಬಿ. ಲೋಕೇಶ್ ಪ್ರಸ್ತಾವನೆ ಗೈದರು. ಜೊತೆ ಮೊಕ್ತೇಸರರಾದ ನಿಟ್ಟೆ ಸುರೇಶ್ ಆಚಾರ್ಯ ನಿರೂಪಿಸಿ, ಪಿ. ರವಿ ಆಚಾರ್ಯ ವಂದಿಸಿದರು. ದೇವಸ್ಥಾನದ ವಿವಿಧ ಅಂಗ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಮೊಕ್ತೇಸರರು, ಸದಸ್ಯರು ಮತ್ತು ವಿವಿಧ ಗ್ರಾಮದ ಗ್ರಾಮ ಮೊಕ್ತೇಸರರು, ಭಕ್ತಾದಿಗಳು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಡಾ. ಎಂ. ಮೋಹನ್ ಆಳ್ವ ಸವ್ಯಸಾಚಿ ಸಂಭ್ರಮ ಪುಸ್ತಕವನ್ನು ಮಹಾಸ್ವಾಮೀಜಿಯವರಿಗೆ ಹಸ್ತಾಂತರಿಸಲಾಯಿತು.































