ಕಾರ್ಕಳ ನಗರದ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ – ರೇಬಿಸ್‌ ಲಸಿಕೆ

110 ಶ್ವಾನಗಳ ಹಿಡಿದು ಶಸ್ತ್ರಚಿಕಿತ್ಸೆಗೊಳಪಡಿಸಿದ ಪುರಸಭೆ

ಕಾರ್ಕಳ : ಬೀದಿನಾಯಿಗಳ ಆಟ ಕಾಟಕ್ಕೆ ಕಡಿವಾಣ ಹಾಕಲು ಕಾರ್ಕಳ ಪುರಸಭೆ ಮುಂದಾಗಿದೆ. ಕ್ಯಾಪ್ಟನ್‌ ಎನಿಮಲ್‌ ಕೇರ್‌ ಟ್ರಸ್ಟ್‌ ಮಣಿಪಾಲ ಇದರ ಸಹಯೋಗದೊಂದಿಗೆ ನಗರದಲ್ಲಿನ ಬೀದಿ ನಾಯಿಗಳನ್ನು ಬಲೆ ಬೀಸಿ ಹಿಡಿದು ಪುರಸಭಾ ವಾಹನದಲ್ಲಿ ಕರಿಯಕಲ್ಲು ಡಂಪಿಂಗ್‌ ಯಾರ್ಡ್‌ ಪಕ್ಕದಲ್ಲಿರುವ ಶ್ವಾನ ಸಂತಾನಹರಣ ಶಸ್ತ್ರ ಚಿಕಿತ್ಸಾ ಕೇಂದ್ರಕ್ಕೆ ರವಾನಿಸಿ ಅಲ್ಲಿ ಶಸ್ತ್ರಚಿಕಿತ್ಸೆ, ರೇಬಿಸ್‌ ರೋಗ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಬಳಿಕ ಆ ನಾಯಿಗಳ ಕಿವಿಗೆ ಟ್ಯಾಗ್‌ ಅಳವಡಿಸಿ ಎಲ್ಲಿಂದ ನಾಯಿ ತರಲಾಗುತ್ತೋ ಅಲ್ಲಿಗೇ ತಂದುಬಿಡಲಾಗುತ್ತಿದೆ.

ಕಾರ್ಕಳ ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಪಾದಚಾರಿಗಳು, ವಾಹನ ಚಾಲಕರಿಗೆ ತೊಂದರೆಯನ್ನು ಮಾಡುತ್ತಿತ್ತು. ಹಿಂಡು ಹಿಂಡಾಗಿ ನಾಯಿಗಳು ಅಡ್ಡಾದಿಡ್ಡಿ ಓಡಾಡಿ ದ್ವಿಚಕ್ರ ಸವಾರರ ಸಂಚಾರಕ್ಕೂ ಅಡ್ಡಿಪಡಿಸುತ್ತಿತ್ತು. ದ್ವಿಚಕ್ರ ಸವಾರರನ್ನು ಬೀದಿನಾಯಿಗಳು ಅಟ್ಟಿಸಿ ಬರುತ್ತಿತ್ತು. ಕಾರ್ಕಳ ಬಸ್‌ ನಿಲ್ದಾಣ, ಸ್ವರಾಜ್‌ ಮೈದಾನ, ಬಂಡಿಮಠ, ಸಾಲ್ಮರ, ತಾಲೂಕು ಕಚೇರಿ ಜಂಕ್ಷನ್‌ ಹೀಗೆ ನಗರದೆಲ್ಲೆಡೆ ಬೀದಿನಾಯಿಗಳ ಕಾಟ ವಿಪರೀತವಾಗಿದ್ದು, ಇವುಗಳ ಉಪಟಳದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡು ಹೋಗುವಾಗ ನಾಯಿಗಳ ಗುಂಪು ಒಂದಕ್ಕೊಂದು ಕಚ್ಚಾಡುತ್ತಾ ಶರವೇಗದಿಂದ ಓಡಿ ಬರುತ್ತಿತ್ತು. ಹೀಗಾಗಿ ವಿದ್ಯಾರ್ಥಿಗಳು ಪ್ರಾಣ ರಕ್ಷಣೆಗಾಗಿ ಓಡುವ ಪರಿಸ್ಥಿತಿಯಿತ್ತು. ಹಲವು ಬಾರಿ ದ್ವಿಚಕ್ರಗಳು ಅಪಘಾತಕ್ಕೀಡಾದ, ವಿದ್ಯಾರ್ಥಿಗಳಿಗೆ ಕಚ್ಚಿದ ನಿದರ್ಶನಗಳಿತ್ತು.

ಸಾರ್ವಜನಿಕರ ಆಗ್ರಹ
ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಪುರಸಭೆಯನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಪುರಸಭೆ ಸಾಮಾನ್ಯ ಸಭೆಯಲ್ಲೂ ಈ ಕುರಿತು ಸಾಕಷ್ಟು ಬಾರಿ ಚರ್ಚೆಯಾಗಿತ್ತು. ಇದೀಗ ಪುರಸಭೆಯು ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ – ರೇಬಿಸ್‌ ನಿರೋಧಕ ಲಸಿಕೆ ನೀಡಲು ಮುಂದಾಗಿರುವುದು ಸಾರ್ವಜನಿಕರ ಆತಂಕ, ಭಯವನ್ನು ದೂರ ಮಾಡಿದೆ. ಪುರಸಭೆ ಪರಿಸರ ಅಭಿಯಂತರರಾದ ಜ್ಯೋತೀಶ್ವರಿ ಈ ಕಾರ್ಯದಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದು, ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.

110 ನಾಯಿಗಳಿಗೆ ಶಸ್ತ್ರಚಿಕಿತ್ಸೆ
ಜೂ. 22ರಿಂದ ದಿನಕ್ಕೆ 20ರಿಂದ 22ರಂತೆ ಬೀದಿನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆಗೊಳಪಡಿಸಲಾಗುತ್ತಿದೆ. ಮಣಿಪಾಲದ ಡಾ. ವಿಜಯ ಅವರು ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದು, ಪಶು ವೈದ್ಯರು ಸಹಕರಿಸುತ್ತಿದ್ದಾರೆ. ಈಗಾಗಲೇ ಸುಮಾರು 110 ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್‌ ರೋಗ ನಿರೋಧಕ ಲಸಿಕೆ ನೀಡಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ತಿಳಿಸಿದ್ದಾರೆ.











































































error: Content is protected !!
Scroll to Top