ಸಾಣೂರಿನಲ್ಲಿ ಗುಡ್ಡ ಕುಸಿತದ ಭೀತಿ – ಆತಂಕದಲ್ಲಿ ಗ್ರಾಮಸ್ಥರು

ಕಾರ್ಕಳ : ಸಾಣೂರು ಗ್ರಾಮದಿಂದ ಮಂಗಳೂರಿನ ಬಿಕರ್ನಕಟ್ಟೆಯವರೆಗಿನ 45 ಕಿ.ಮೀ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ, ರಸ್ತೆ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯದ ಪರಿಣಾಮವಾಗಿ ಗ್ರಾಮಸ್ಥರಿಗೆ ಗುಡ್ಡ ಕುಸಿತದ ಆತಂಕ ಎದುರಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಭೂ ಮಾಲಕರ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಾಯದ ಆತಂಕ– ಸ್ಪಂದಿಸಿದ ಅಧಿಕಾರಿಗಳು
ಸಾಣೂರು ಯುವಕ ಮಂಡಲ ಕಟ್ಟಡದ ಮುಂಭಾಗದ ಮೈದಾನದಿಂದ ಪದ್ಮನಾಭ ನಗರದ ರಸ್ತೆಯವರೆಗೆ ಹೆದ್ದಾರಿ ಕಾಮಗಾರಿಯ ವೇಳೆ ಗುಡ್ಡ ಕಡಿದಿದ್ದು, ಗುಡ್ಡಜರಿದು ಬೀಳುವ ಭಾಗಕ್ಕೆ ಕಳೆದ ವರ್ಷದ ಮಳೆಗಾಲದ ಸಂದರ್ಭದಲ್ಲಿ ಟಾರ್ಪಾಲು ಹೊದಿಸಿ ಗುಡ್ಡ ಜರಿತಕ್ಕೆ ಹೊಸ ತಂತ್ರಜ್ಞಾನವನ್ನು ಗುತ್ತಿಗೆದಾರ ಕಂಪನಿ ಪರಿಚಯಿಸಿತ್ತು. ಆ ಬಳಿಕ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳಿಗೆ, ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಕಂಪನಿಯವರಿಗೆ, ಡಿಸಿ ಮತ್ತು ಜನಪ್ರತಿನಿಧಿಗಳಿಗೆ ಗುಡ್ಡ ಜರಿದ ಭಾಗಕ್ಕೆ ತಡೆಗೋಡೆ ನಿರ್ಮಾಣ ಮಾಡದಿದ್ದರೆ ಪಕ್ಕದಲ್ಲಿರುವ ಹೈ ಟೆನ್ಶನ್ ಟವರ್ ಮತ್ತು ಅದರ ಹಿಂಭಾಗದಲ್ಲಿರುವ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಧರಾಶಾಯಿಯಾಗುವ ಅಪಾಯವಿದೆಯೆಂದು ಸಾರ್ವಜನಿಕರು ತಿಳಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿರುವ ಅವರು ಮುಂದೆ ಸಂಭವಿಸುವ ಎಲ್ಲಾ ದುರಂತಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹೊಣೆಗಾರರಾಗಬೇಕಾಗುತ್ತದೆ ಎಂದಿದ್ದಾರೆ.

ಪಶು ಚಿಕಿತ್ಸಾಲಯ ಕಟ್ಟಡ ತೆರವು
ಕಳೆದ ವರ್ಷ ಇದೇ ಗುಡ್ಡದ ಪಕ್ಕದಲ್ಲಿದ್ದ ಪಶು ಚಿಕಿತ್ಸಾಲಯ ಕಟ್ಟಡ ಜರಿದು ಬೀಳುವ ಸಂಭವವಿದೆ ಎಂದು ಸಾರ್ವಜನಿಕರು ಎಚ್ಚರಿಸಿದಾಗ ಅಂದಿನ ಡಿಸಿ ಕೂರ್ಮ ರಾವ್ ಕೂಡಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಎಚ್ಚರಿಕೆ ನೀಡಿ ಕಟ್ಟಡ ತೆರವುಗೊಳಿಸಿ ಸಂಭಾವ್ಯ ಅಪಾಯದಿಂದ ಪಾರು ಮಾಡಿದ್ದರು.

ಪ್ರತಿಭಟನೆಯ ಎಚ್ಚರಿಕೆ
ದುರಂತ ಸಂಭವಿಸುವ ಮೊದಲೇ ಕಾರ್ಯ ಪ್ರವೃತ್ತರಾಗಿ ತಾತ್ಕಾಲಿಕವಾಗಿ ಗುಡ್ಡದ ಮಣ್ಣು ಜರಿದು ಬೀಳದಂತೆ ವ್ಯವಸ್ಥೆಯ ಜೊತೆಗೆ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಹೆದ್ದಾರಿ ಇಲಾಖೆ ಮುಂದಾಗದಿದ್ದರೆ ಗ್ರಾಮ ಪಂಚಾಯತ್ ಆಡಳಿತ, ವಿವಿಧ ಸಾಮಾಜಿಕ ಸಂಘಟನೆಗಳು, ಹೆದ್ದಾರಿ ಹೋರಾಟ ಸಮಿತಿ ಮತ್ತು ಸ್ಥಳೀಯ ನಾಗರಿಕರು ಪ್ರತಿಭಟನೆ ಮಾಡಬೇಕಾಗಿದೀತು ನರಸಿಂಹ ಕಾಮತ್ ಎಚ್ಚರಿಸಿದ್ದಾರೆ.











































































error: Content is protected !!
Scroll to Top