ಮಂಗಳೂರು: ಉಳ್ಳಾಲದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಉಚ್ಚಿಲ ಸಮೀಪ ಬಟ್ಟಪಾಡಿ ಎಂಬಲ್ಲಿ ಮನೆಯೊಂದು ಸಮುದ್ರಪಾಲಾಗಿದೆ. ಇನ್ನೂ 3 ಮನೆ ಮನೆಗಳು ಅಪಾಯದಲ್ಲಿವೆ. ಸಮುದ್ರಪಾಲಾದ ಮನೆಯ ಬೀಫಾತುಮ್ಮಾ ಮತ್ತವರ ಕುಟುಂಬವನ್ನು ಜೂನ್ 26ರಂದೇ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಸಂಭವನೀಯ ಅಪಾಯ ತಪ್ಪಿದಂತಾಗಿದೆ. ಇನ್ನು ಈ ಪ್ರದೇಶದಲ್ಲಿ ಅಪಾಯದಂಚಿನಲ್ಲಿದ್ದ 3 ಮನೆಗಳ ಸದಸ್ಯರನ್ನು ಜೂನ್ 27ರಂದು ಅಧಿಕಾರಿಗಳು ಸ್ಥಳಾಂತರಿಸಿದ್ದರು.
ಈ ಪ್ರದೇಶದಲ್ಲಿ ಸಮುದ್ರದ ಅಲೆಗಳ ಅಬ್ಬರ ತೀವ್ರಗೊಂಡಿದ್ದು, ಈಗಾಗಲೇ ಕೊಚ್ಚಿಹೋಗಿರುವ ಬೀಫಾತುಮ್ಮಾ ಅವರ ಮನೆಯ ಹಿಂಬದಿಯಲ್ಲೇ ಇರುವ ಮೂರು ಮನೆಗಳು ಅಪಾಯಕ್ಕೆ ಸಿಲುಕಿವೆ. ಈ ಮನೆಗಳಿಗೂ ಕಡಲ ಅಲೆಗಳು ರಭಸವಾಗಿ ಅಪ್ಪಳಿಸುತ್ತಿದ್ದು, ಇವುಗಳು ಕೂಡ ಸಮುದ್ರಪಾಲಾಗುವ ಸಾಧ್ಯತೆ ಹಿನ್ನಲೆಯಲ್ಲಿ ಈ ಮನೆಯ ಸದಸ್ಯರನ್ನು ಸ್ಥಳಾಂತರಿಸಲಾಗಿತ್ತು.
ಸ್ಥಳಾಂತರಗೊಂಡ ನಾಲ್ಕು ಮನೆಯ ಸದಸ್ಯರುಗಳು ಸದ್ಯ ಸಂಬಂಧಿಕರ ಮನೆಗಳಲ್ಲಿ ನೆಲೆಸಿದ್ದಾರೆ. ಶೀಘ್ರವೇ ಅವರಿಗೆ ಪರ್ಯಾಯ ಬಾಡಿಗೆ ಮನೆಗಳ ವ್ಯವಸ್ಥೆ ಮಾಡಲಾಗುವುದು ಎಂದು ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.






































