ಮೈಮೇಲಿದ್ದ ಆಭರಣ ಕಿತ್ತುಕೊಂಡಿದ್ದ ಆರೋಪಿಗಳು
ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆಗೈದ ರೀತಿಗೆ ಜನ ಬೆಚ್ಚಿಬಿದ್ದಿದ್ದಾರೆ. ಕೊಲೆಯ ಒಂದೊಂದೇ ಮಾಹಿತಿ ಈಗ ಹೊರಬೀಳುತ್ತಿದ್ದು, ಇದು ಥಳಿಸುವಾಗ ಆಕಸ್ಮಿಕವಾಗಿ ಸಂಭವಿಸಿದ ಸಾವು ಅಲ್ಲ, ಬದಲಾಗಿ ಕೊಲ್ಲುವ ಉದ್ದೇಶದಿಂದಲೇ ಭೀಕರವಾಗಿ ಚಿತ್ರಹಿಂಸೆ ನೀಡಿದ್ದರು ಎಂಬುದನ್ನು ಪುಷ್ಟೀಕರಿಸುತ್ತದೆ.
ನಿನ್ನೆ ದರ್ಶನ್ ಮತ್ತು ಗ್ಯಾಂಗನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗ ನಡೆದ ವಾದ- ಪ್ರತಿವಾದದಲ್ಲಿ ದರ್ಶನ್ ಮತ್ತು ಗ್ಯಾಂಗ್ ರೇಣುಕಾಸ್ವಾಮಿಗೆ ನೀಡಿದ್ದ ರಾಕ್ಷಸ ರೀತಿಯ ಚಿತ್ರಹಿಂಸೆಯ ವಿವರ ಹೊರಬಿದ್ದಿದೆ. ದರ್ಶನ್ ಮತ್ತು ಸಹ ಆರೋಪಿಗಳನ್ನು ಮತ್ತೆ ಒಂಬತ್ತು ದಿನಗಳ ಕಾಲ ವಶಕ್ಕೆ ಕೋರಿ ಪೊಲೀಸರು ಅರ್ಜಿ ಸಲ್ಲಿಸಿದ್ದರು. ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು, ಈ ಹಂತದಲ್ಲಿ ಸರ್ಕಾರದ ವತಿಯಿಂದ ವಿಶೇಷ ಅಭಿಯೋಜಕರಾಗಿ ನೇಮಕವಾಗಿರುವ ಪ್ರಸನ್ನ ಕುಮಾರ್ ಅವರು ಪೊಲೀಸರ ಪರ ವಾದ ಮಂಡಿಸಿ, ನ್ಯಾಯಾಲಯದ ಗಮನಕ್ಕೆ ತಂದ ಅಂಶವೆಂದರೆ ರೇಣುಕಾಸ್ವಾಮಿಯನ್ನು ಕೊಲ್ಲುವ ಮುಂಚೆ ಆತನಿಗೆ ಕರೆಂಟ್ ಶಾಕ್ ನೀಡಲಾಗಿತ್ತು ಎಂಬುದು.
ನ್ಯಾಯಾಲಯದಲ್ಲಿ ದರ್ಶನ್ ಹಾಗೂ ಗ್ಯಾಂಗ್ನ ಕ್ರೌರ್ಯದ ಬಗ್ಗೆ ಸಣ್ಣ ಸುಳಿವೊಂದನ್ನು ನೀಡಿದ ಹಿರಿಯ ವಕೀಲ ಪ್ರಸನ್ನ ಕುಮಾರ್, ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿದ್ದು, ಶಾಕ್ ನೀಡಲು ಬಯಸಿದ್ದ ಮೆಗ್ಗರ್ ಯಂತ್ರವನ್ನು ಸಹ ವಶಪಡಿಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದ್ದರು. ಅಲ್ಲದೆ, ಮೈಸೂರಿನಲ್ಲಿ ಕೆಲವು ಕಡೆ ಆರೋಪಿಯೊಟ್ಟಿಗೆ ಮಹಜರು ಮಾಡಬೇಕಿದೆ. ಆರೋಪಿಯ ಬಟ್ಟೆ ಹಾಗೂ ಚಪ್ಪಲಿಗಳನ್ನು ಸಹ ವಶಪಡಿಸಿಕೊಳ್ಳಬೇಕಿದೆ ಎಂದು ವಾದಿಸಿದ್ದಾರೆ.
ಮರ್ಮಾಂಗಕ್ಕೆ ಒದ್ದು, ತಲೆಯನ್ನು ಶೆಡ್‌ನಲ್ಲಿದ್ದ ವಾಹನಕ್ಕೆ ಗುದ್ದಿ, ದೇಹವನ್ನು ಒದ್ದು ದರ್ಶನ್ ಸೇಡು ತೀರಿಸಿಕೊಂಡಿದ್ದಾನೆ ಎಂದು ಓರ್ವ ಆರೋಪಿ ಬಾಯಿಬಿಟ್ಟಿದ್ದಾನೆ.
ರೇಣುಕಾಸ್ವಾಮಿ ಅವರ ಶವದ ಗುರುತು ಸಿಗದಂತೆ ಮಾಡಲು 30 ಲಕ್ಷ ರೂಪಾಯಿ ಆಮಿಷ ಒಡ್ಡಲಾಗಿತ್ತು. ಇದನ್ನು ವಶಪಡಿಸಿಕೊಳ್ಳಲಾಗಿದೆ. 10 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. 5 ಮತ್ತು 13ನೇ ಆರೋಪಿಗಳು ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಿದ್ದಾರೆ. ಇದಕ್ಕೆ ಬಳಕೆ ಮಾಡಿರುವ ವಸ್ತುವನ್ನು ವಶಪಡಿಸಿಕೊಳ್ಳಬೇಕಿದೆ. ಇನ್ನೂ ಹೆಚ್ಚಿನ ತನಿಖೆ ನಡೆಸುವ ಅಗತ್ಯ ಇರುವುದರಿಂದ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಕೋರಿದರು. ದರ್ಶನ್ ಪರವಾಗಿ ವಕೀಲ ಅನಿಲ್ ಬಾಬು ವಕಾಲತ್ತು ಹಾಕಿದ್ದು, ಪೊಲೀಸ್ ಕಸ್ಟಡಿಗೆ ನೀಡುವುದಕ್ಕೆ ಆಕ್ಷೇಪಿಸಿದರು.
ಈ ನಡುವೆ ಪ್ರಕರಣ ಸಂಬಂಧ ಕೆಲವು ಆರೋಪಿಗಳು, ರೇಣುಕಾ ಸ್ವಾಮಿ ಕೊಲೆಯಾದ ದಿನ ನಡೆದ ಘಟನೆಗಳನ್ನು ಈಗಾಗಲೇ ವಿವರಿಸಿದ್ದು, ಕೆಲವರು ಅಪ್ರೂವರ್ ಆಗಿ ಬದಲಾಗಿದ್ದಾರೆ ಎನ್ನಲಾಗುತ್ತಿದೆ.
ದರ್ಶನ್ ಗೆಳತಿ ಪವಿತ್ರ ಗೌಡಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪದ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಜೂನ್ 8ರಂದು ಬೆಂಗಳೂರಿಗೆ ಕರೆಸಿ, ಪಟ್ಟಣಗೆರೆಯ ವಾಹನಗಳನ್ನು ನಿಲ್ಲಿಸುವ ಖಾಸಗಿ ಶೆಡ್ ಒಂದರಲ್ಲಿ ಅವರ ಮೇಲೆ ಹಲ್ಲೆ ಮಾಡಿ ಕೊಲೆಗೈದಿರುವ ಆರೋಪ ದರ್ಶನ್ ಮತ್ತು ಸಹಚರರ ಮೇಲಿದೆ. ಆನಂತರ ಶವವನ್ನು ತಡರಾತ್ರಿ ಕಾಮಾಕ್ಷಿ ಪಾಳ್ಯ ಸಮೀಪದ ರಾಜಕಾಲುವೆಯಲ್ಲಿ ಎಸೆಯಲಾಗಿತ್ತು.
ಸ್ಥಳೀಯರಿಂದ ಅನಾಥ ಶವದ ಬಗ್ಗೆ ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ಭೇದಿಸಿ, ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿದ್ದ ದರ್ಶನ್‌ನನ್ನು ಬಂಧಿಸಿದ್ದರು. ಅಂದೇ ಮೊದಲ ಆರೋಪಿ ಪವಿತ್ರ ಗೌಡಳನ್ನು ಬಂಧಿಸಲಾಗಿತ್ತು. ಇಡೀ ಪ್ರಕರಣದ ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ದುಷ್ಕರ್ಮಿಗಳು ಬಳಿಕ ಆತನ ಮೈಮೇಲಿದ್ದ ಒಡವೆಗಳನ್ನೂ ದೋಚಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ. ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನವನ್ನು ಆರೋಪಿ ಜಗ್ಗ ದೋಚಿದ್ದಾನೆ ಎಂದು ಪೊಲೀಸರ ಮುಂದೆ ರವಿ ಸತ್ಯ ಬಾಯಿ ಬಿಟ್ಟಿದ್ದಾನೆ.
ಸುಮ್ಮನಹಳ್ಳಿ ಬಳಿ ರೇಣುಕಾಸ್ವಾಮಿ ಶವವನ್ನ ಎಸೆದು ಬಳಿಕ ಪೊಲೀಸ್ ಠಾಣೆಗೆ ಶರಣಾಗುವಂತೆ ಹೇಳಿದರು. ಆದರೆ ಭಯದಿಂದ ಠಾಣೆಗೆ ಹೋಗದೆ ಕಾರಿನಲ್ಲಿ ಚಿತ್ರದುರ್ಗಕ್ಕೆ ಬಂದೆ. ಕಾರಿನಲ್ಲಿ ಜಗ್ಗನ ಜೊತೆ ಚಿತ್ರದುರ್ಗಕ್ಕೆ ಬಂದುಬಿಟ್ಟೆ. ಆರೋಪಿ ಜಗ್ಗ ಚಿನ್ನಾಭರಣ ತೆಗೆದುಕೊಂಡು ಬಂದಿದ್ದ ಎಂದು ರವಿ ಹೇಳಿದ್ದಾನೆ.



































