ಮಾನ ಮಾರ್ಯಾದೆ ಇದ್ರೆ ಗ್ಯಾರಂಟಿ ಮುಂದುವರೆಸಿ – ಸುನಿಲ್ ಕುಮಾರ್

ಕಾರ್ಕಳ : ಚುನಾವಣಾ ಪೂರ್ವದಲ್ಲಿ ಕಾರ್ಯಕರ್ತನಿಂದ ರಾಹುಲ್ ಗಾಂಧಿಯವರೆಗೆ ಕೇವಲ ಗ್ಯಾರಂಟಿಯ ಬಗ್ಗೆ ಮಾತನಾಡಿದರೂ, ಅಧಿಕಾರಕ್ಕೆ ಬಂದ ನಂತರ ಅದನ್ನು ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್‌ ಸಂಪೂರ್ಣವಾಗಿ ವಿಫಲಗೊಂಡಿದೆ. ಆದರೆ, ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲು ಬಿಜೆಪಿ ಬಿಡುವುದಿಲ್ಲ. ಕಾಂಗ್ರೆಸ್‌ಗೆ ಮಾನಾ‌ ಮಾರ್ಯಾದೆ ಇದ್ರೆ ಗ್ಯಾರಂಟಿ ಯೋಜನೆ ಮುಂದುವರೆಸಬೇಕು ಎಂದು ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕುಮಾರ್‌ ಸವಾಲೆಸದರು.

ಅವರು ಕಾರ್ಕಳ ಬಿಜೆಪಿ ಮಂಡಲ ವತಿಯಿಂದ ಜೂ. 16ರಂದು ಶ್ರೀ ಬಿ. ಮಂಜುನಾಥ ಫೈ ಸಭಾಂಗಣದಲ್ಲಿ ನಡೆದ‌ ನೂತನವಾಗಿ ಆಯ್ಕೆಯಾದ ಲೋಕಸಭಾ ಸದಸ್ಯರಿಗೆ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 19 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಪಡೆದಾಗ ಗ್ಯಾರಂಟಿಯಿಂದ ನಮಗೆ ವೋಟ್ ಬರಲಿಲ್ಲ ಎಂದು ದೂಷಿಸುವುದಲ್ಲ ಬದಲಾಗಿ ನಿಮ್ಮ ಆಡಳಿತ ಸರಿಯಿಲ್ಲ ಎಂಬುದನ್ನು ತಿಳಿದುಕೊಳ್ಳಿ ಎಂದು ಕಾಂಗ್ರೆಸಿಗರಿಗೆ ತಮ್ಮ ಮಾತುಗಳಲ್ಲಿ ತಿವಿದ ಸುನಿಲ್‌ ಕುಮಾರ್ ಬೆಲೆ ಏರಿಕೆ ಮಾಡುತ್ತಿರುವ ಡೇಂಜರ್ ಮತ್ತು ಪಿಕ್ ಪಾಕೆಟ್ ಕಾಂಗ್ರೆಸ್ ವಿರುದ್ದ ಮುಂದಿನ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಕ್ಷೇತ್ರದ ಮತದಾರ ಬಿಜೆಪಿಯನ್ನು ಬಿಟ್ಟುಕೊಡಲಿಲ್ಲ
ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬರಬೇಕೆಂಬ ಸಂಕಲ್ಪದೊಂದಿಗೆ ನಾವೆಲ್ಲರೂ ಕಾರ್ಯನಿರ್ವಹಿಸಿದ್ದೆವು. ಈ ನಿಟ್ಟಿನಲ್ಲಿ ಕಾರ್ಕಳದಲ್ಲಿ ಕ್ಷೇತ್ರದ ಮತದಾರ ಬಿಜೆಪಿಯನ್ನು ಬಿಟ್ಟುಕೊಡಲಿಲ್ಲ. ಆದ್ದರಿಂದಲೇ ಲೋಕಸಭಾ ಚುನಾವಣೆಯಲ್ಲಿ ಕಾರ್ಕಳದಲ್ಲಿ ಪಕ್ಷಕ್ಕೆ 42 ಸಾವಿರಕ್ಕೂ ಅಧಿಕ ಮತಗಳು ಹೆಚ್ಚುವರಿಯಾಗಿ ದೊರೆತಿದೆ ಎಂದರು. ‌

ನನ್ನ ಗೆಲುವಿಗೆ ಕಾರ್ಕಳದ ಕೊಡುಗೆ ಅಪಾರ – ಕೋಟ
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ‌ ಮಾತನಾಡಿ, ಕಳೆದ 32 ವರ್ಷದ ರಾಜಕೀಯ ಜೀವನದಲ್ಲಿ ಈ ಚುನಾವಣೆ ತುಂಬಾ ದೊಡ್ಡ ಅನುಭವ ನೀಡಿತು. ನನ್ನ ಗೆಲುವಿಗೆ ಕಾರ್ಕಳದ ಕೊಡುಗೆ ಅಪಾರ ಎಂದ ಅವರು ನಿರೀಕ್ಷೆಗಳನ್ನು ಮೀರಿ ಕಾರ್ಕಳದಲ್ಲಿ ಬಹುದೊಡ್ಡ ಅಂತರ ದೊರೆಯಿತು ಎಂದು ಹರ್ಷ ವ್ಯಕ್ತಪಡಿಸಿದರು.

ಅಪಪ್ರಚಾರದಲ್ಲೇ ಮುಂದುವರೆದ ಕಾಂಗ್ರೆಸ್
ಕಾಂಗ್ರೆಸಿಗರು ರಾಜಧರ್ಮದಲ್ಲಿ ಚುನಾವಣೆಯನ್ನು ಎದುರಿಸಲಿಲ್ಲ, ಬದಲಾಗಿ ಅಪಚಾರದಲ್ಲೇ ಮುಂದುವರೆದರು. ಆದರೆ ಮೋದಿ ಮೇಲಿನ ವಿಶ್ವಾಸದಿಂದ ಕರಾವಳಿಯ ಜಿಲ್ಲೆ‌ಗಳಲ್ಲಿ ಜನ ಅಪಪ್ರಚಾರಕ್ಕೆ‌ ಕಿವಿಗೊಡಲಿಲ್ಲ. ಬಿಜೆಪಿಯವರು ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಿ ಅವರ ಬದುಕನ್ನು ಪಂಚ ತೀರ್ಥ ಕ್ಷೇತ್ರಗಳನ್ನಾಗಿ ಮಾಡಿದ್ದು ಮೋದಿ. ಆದರೆ ಅಂಬೇಡ್ಕರ್ ಅವರ ಪಾರ್ಥಿವ ಶರೀರಕ್ಕೆ 10 ಅಡಿ ಜಾಗ ಕೊಡದವರು ಕಾಂಗ್ರೆಸಿಗರು. ಇದನ್ನು ಜನತೆ ಅರ್ಥೈಸಿಕೊಳ್ಳದಿರುವುದು ವಿಷಾದನೀಯ ಎಂದು ಕೋಟ ಹೇಳಿದರು.

ಪದವೀಧರ ಕ್ಷೇತ್ರವನ್ನು ಅನಾಥವಾಗಲು ಬಿಡುವುದಿಲ್ಲ – ಸರ್ಜಿ
ನೈಋತ್ಯ ಪದವೀಧರ ಕ್ಷೇತ್ರದ ಸದಸ್ಯ ಡಾ.‌ ಧನಂಜಯ ಸರ್ಜಿ ಮಾತನಾಡಿ, ನಮ್ಮ ಗೆಲುವು ಕಾರ್ಯಕರ್ತರ ಗೆಲುವಾಗಿದೆ‌. ವ್ಯಕ್ತಿಯ ಜೋಡಣೆಯಾದಾಗ ಸಂಸ್ಕಾರಯುತ ಪ್ರಪಂಚ ನಿರ್ಮಾಣವಾಗುತ್ತದೆ. ವ್ಯಕ್ತಿಯ ಜೋಡಣೆ ಸಂಘಟನೆಯಿಂದ ಸಾಧ್ಯ. ಆದ್ದರಿಂದ ಸಂಘಟನೆಯಾಧರಿತ ಬಿಜೆಪಿಯಿಂದ ಸುಭದ್ರ ಭಾರತ ನಿರ್ಮಾಣವಾಗಿದೆ ಎಂದ ಅವರು ಮಾತನಾಡಿದವರಿಗೆ ಗೆಲುವಿನ ರೂಪದಲ್ಲಿ ಉತ್ತರ ದೊರೆತಿದೆ. ಪದವೀಧರ ಕ್ಷೇತ್ರವನ್ನು ಅನಾಥವಾಗಲು ಬಿಡುವುದಿಲ್ಲ. ನನ್ನನ್ನು ಗೆಲ್ಲಿಸುವಲ್ಲಿ ಶ್ರಮಸಿದ ಕಾರ್ಯಕರ್ತರ ಋಣವನ್ನು ತೀರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಗೆಲುವಿನ ಪರ್ವ- ಕಿಶೋರ್ ಕುಮಾರ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌ ಮಾತನಾಡಿ, ನಾನು ಅಧಿಕಾರ ವಹಿಸಿಕೊಂಡಾಗ ಸಾಕಷ್ಟು ಸವಾಲುಗಳು ಎದುರಾದವು. 2 ಲಕ್ಷಕ್ಕೂ ಅಧಿಕ ಅಂತರದಲ್ಲಿ ನಮ್ಮ ಲೋಕಸಭಾ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ, ನಿರೀಕ್ಷೆಗೂ ಮೀರಿದ ಈ ಗೆಲುವು ಮುಂದಿನ‌ ಎಲ್ಲಾ ಚುನಾವಣೆಗಳಲ್ಲಿ ನಮ್ಮ ಪಕ್ಷಕ್ಕೆ ಗೆಲುವಿನ‌ ಪರ್ವ ಎಂಬುದನ್ನು ಪ್ರತಿನಿಧಿಸುತ್ತಿದೆ ಎಂದ ಅವರು ಪಕ್ಷ ಮತ್ತು ಸಂಘಟನೆಯ ಕಾರಣದಿಂದ ಲೋಕಸಬೆ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ನಮ್ಮ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ. ತನ್ಮೂಲಕ ಬಿಜೆಪಿ ವ್ಯಕ್ತಿಯಾಧಾರಿತವಾದುದಲ್ಲ ಸಂಘಟನೆ ಆಧಾರಿತವಾದುದು ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದಂತಾಗಿದೆ ಎಂದರು.

ಸನ್ಮಾನ
ಇದೇ ಸಂದರ್ಭ ಅಗ್ನಿಪಥ್ ಯೋಜನೆಯಡಿಯಲ್ಲಿ ಸೇನೆಗೆ ಆಯ್ಕೆಗೊಂಡ ಪಳ್ಳಿ ಗ್ರಾಮದ ದುರ್ಗಪ್ರಸಾದ್ ಅವರನ್ನು ಕಾರ್ಕಳ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.

ಪಕ್ಷದ ಹಿರಿಯ ಮುಖಂಡರಾದ ಬೋಳ ಪ್ರಭಾಕರ್ ಕಾಮತ್, ಎಂ.ಕೆ. ವಿಜಯ್ ಕುಮಾರ್, ಕೆ.ಪಿ‌. ಶೆಣೈ, ಗೇರು ಅಭಿವೃದ್ಧಿ ನಿಗಮ‌ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಕಾರ್ಕಳ ವಿಧಾನಸಭಾ ಕ್ಷೇತ್ರ ಪ್ರಭಾರಿ ಶ್ಯಾಮಲ ಕುಂದರ್, ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ, ಜಯರಾಮ್ ಸಾಲ್ಯಾನ್, ಜಿಲ್ಲಾ ವಕ್ತಾರ ಮುಟ್ಲುಪಾಡಿ ಸತಿಶ್ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿ ಸುರೇಶ್‌ ಶೆಟ್ಟಿ ಶಿವಪುರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಾಲಯ ಕಾರ್ಯದರ್ಶಿ ಜ್ಯೋತಿ ರಮೇಶ್ ಪ್ರಾರ್ಥಿಸಿದರು‌. ಮಂಡಲ ಅಧ್ಯಕ್ಷ ನವೀನ್ ನಾಯಕ್ ಸ್ವಾಗತಿಸಿದರು. ರವೀಂದ್ರ ಕುಮಾರ್ ಕಾರ್ಯಕ್ರಮ‌ ನಿರೂಪಿಸಿ, ಕ್ಷೇತ್ರ ಕಾರ್ಯದರ್ಶಿ ಬೋಳ ಸತೀಶ್‌ ಪೂಜಾರಿ ವಂದಿಸಿದರು.



















































































error: Content is protected !!
Scroll to Top