ಕಾರ್ಕಳದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ

ಕಾರ್ಕಳ : ಉಸ್ತುವಾರಿ ಸಚಿವನಾಗಿದ್ದ ಸಂದರ್ಭ ಉಡುಪಿಯನ್ನು ಪತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿ, ಅಭಿವೃದ್ಧಿಗೆ ಪೂರಕವಾಗಿ ತಾಲೂಕುಗಳ ರಚನೆ ಮಾಡಿದ್ದೆ. ಇದರಿಂದಾಗಿ ಜಿಲ್ಲೆಯ ಜನತೆಗೆ ಬಹಳಷ್ಟು ಅನುಕೂಲವಾಯಿತು. ನಾನು ಮಾಡಿರುವ ಕೆಲಸ ಕಾರ್ಯಗಳನ್ನು ಮುಂದಿಟ್ಟು ಈ ಬಾರಿ ಮತಯಾಚಿಸುತ್ತೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಹೇಳಿದರು.
ಅವರು ಮಾ. 29ರಂದು ಪೆರ್ವಾಜೆ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಜನರ ಸಮಸ್ಯೆಗಳಿಗೆ ಸ್ಪಂದನೆ
ಬಿಜೆಪಿಯವರು ನಾಯಕರ ಹೆಸರಿನಲ್ಲಿ ಮತ ಕೇಳುವವರು. ಆದರೆ ನಾನು, ಮಾಡಿರುವ ಕೆಲಸ ಕಾರ್ಯಗಳ ಮುಂದಿಟ್ಟು ಮತ ಯಾಚಿಸುತ್ತಿದ್ದೇನೆ. ಜನಪ್ರತಿನಿಧಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಅಂದಿನ ದಿನಗಳಲ್ಲಿ ಕಂಪ್ಯೂಟರ್ ಕೊರತೆಯಿಂದ ರೇಷನ್ ಕಾರ್ಡ್ ಪಡೆಯುವುದು ಕೂಡ ಕಷ್ಟಕರವಾಗಿತ್ತು. ಹಾಗಾಗಿ ಪ್ರತಿ ಪಂಚಾಯತ್‌ಗೆ ಸರಕಾರದಿಂದ ಕಂಪ್ಯೂಟರ್ ಒದಗಿಸಿಕೊಡುವ ಕಾರ್ಯ ಮಾಡಿದ್ದೆ ಎಂದು ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ದೆಹಲಿಯಲ್ಲಿ ಕೂರುವುದು ಕೆಲಸವಲ್ಲ
ಸಂಸದನಾಗಿ ಕೇವಲ‌ ದೆಹಲಿಯಲ್ಲಿ ಕೂರುವುದು ಕೆಲಸವಲ್ಲ. ಬದಲಾಗಿ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ನಾನು ಪ್ರತಿ ಪಂಚಾಯತ್‌ಗಳಿಗೆ ಭೇಟಿ ನೀಡುತ್ತಿದ್ದೆ. ಸಂಸದನಾಗಿದ್ದಾಗ ನಮ್ಮ ಭಾಗದ ಸಮಸ್ಯೆ ಕುರಿತು ಪ್ರಧಾನ ಮಂತ್ರಿಯವರೊಂದಿಗೆ ಚರ್ಚಿಸುತ್ತಿದ್ದೆ. ಆದರೆ, ಬಿಜೆಪಿಗರ್ಯಾರೂ ಅದನ್ನು ಮಾಡಲಿಲ್ಲ ಎಂದು ಹೆಗ್ಡೆಯವರು ಟೀಕಿಸಿದರು.

ತುಳುವಿಗೆ ಆದ್ಯತೆ
ಜಯಪ್ರಕಾಶ್ ಹೆಗ್ಡೆಯವರಿಗೆ ತುಳು ಬರುವುದಿಲ್ಲ‌ ಅನ್ನುವ ಮಾತುಗಳೂ ಬಂದಿದೆ. ತುಳು ಲಿಪಿಗೆ / ಭಾಷೆಗೆ ಪ್ರಾಧಾನ್ಯತೆ ನೀಡಬೇಕು ಎಂದು ಹೊರಾಡಿದವನು ನಾನು. ಚುನಾವಣೆ ವೇಳೆ ಯಾರೂ ಯಾರ ಮೇಲೆ‌ ಆಪಾದನೆ‌ ಮಾಡುವುದು ಬೇಡ, ಬದಲಾಗಿ ನಾವು ಮಾಡಿದ ಕೆಲಸಗಳನ್ನು ಜನರ ಮುಂದಿಡೋಣ ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಜಾತಿ ಬಗ್ಗೆ ಮಾತು
ನಾರಾಯಣ ಗುರುಗಳ‌ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸುವಾಗ, ಪಠ್ಯ ಪುಸ್ತಕದಿಂದ ಪಠ್ಯ ತೆಗೆಯುವಾಗ ಜಾತಿ ಪರವಾಗಿ ಮಾತನಾಡದವರು ಇಂದು ಚುನಾವಣೆಯ ಸಂದರ್ಭ ಜಾತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಚುನಾವಣಾ ಸಮಿತಿ ಅಧ್ಯಕ್ಷ ವಿನಯ ಕುಮಾರ್‌ ಸೊರಕೆ ಹೇಳಿದರು

ಕಾಂಗ್ರೆಸ್‌ ಕೊಡುಗೆ ಅಪಾರ
ಕಾರ್ಕಳದ ಮತದಾರರು ಡಾ. ಎಂ. ವೀರಪ್ಪ ಮೊಯ್ಲಿಯವರನ್ನು ಸತತವಾಗಿ 6 ಬಾರಿ ಚುನಾಯಿಸಿ, ರಾಜ್ಯಕ್ಕೆ ಓರ್ವ ಸಮರ್ಥ ಮುಖ್ಯಮಂತ್ರಿಯವರನ್ನು ನೀಡಿದವರು. ಕಾರ್ಕಳ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ನೀಡಿದ ಕೊಡುಗೆ ಅಪಾರ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವದ ಅವಶ್ಯಕತೆ ಇರುವ ಸಂದರ್ಭ ನಮ್ಮ‌ ನಾಯಕರು ಜಯಪ್ರಕಾಶ್ ಹೆಗ್ಡೆಯವರನ್ನು ಅಭ್ಯರ್ಥಿಯಾಗಿಸಿದ್ದಾರೆ. ಅವರ ಅಧಿಕಾರವಧಿಯಲ್ಲಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವೆಂದು ಸೊರಕೆ ಬಣ್ಣಿಸಿದರು.

ಜನರ ಬದುಕು ಕಟ್ಟುವ ಕೆಲಸವನ್ನು ಮಾಡುವುದು ಅವಶ್ಯ. ಆ ನಿಟ್ಟಿನಲ್ಲಿ ಕಾಂಗ್ರೆಸ್‌ ಸಾಗುತ್ತಿದೆ. ಕೊಟ್ಟ ಭರವಸೆಗಳನ್ನು 6 ತಿಂಗಳಲ್ಲಿ ರಾಜ್ಯ ಸರಕಾರ ಅನುಷ್ಠಾನಗೊಳಿಸಿದೆ. ಕೋಟಾ ಸಚಿವರಾಗಿದ್ದ ಸಂದರ್ಭ ಎಲ್ಲ ಕಡೆ ಕುಚಲಕ್ಕಿ ಕೊಡುತ್ತೇವೆ ಎಂದಿದ್ದರು. ಆದರೆ, ಅದನ್ನು ಈಡೇರಿಸಿಲ್ಲ ಎಂದು ತಿಳಿಸಿದ ಸೊರೆಕೆ ಬೈಲೂರು ಪರಶುರಾಮ ಥೀಮ್‌ ಪಾರ್ಕ್‌, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹೀಗೆ ಸ್ಥಳೀಯ ವಿಚಾರಗಳನ್ನು ಮುಂದಿಟ್ಟು ಕಾಂಗ್ರೆಸ್‌ ಮತಯಾಚನೆ ಮಾಡಬೇಕಿದೆ ಎಂದರು.

ಸವಾಲಾಗಿ ಸ್ವೀಕರಿಸೋಣ
ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಉಡುಪಿ- ಚಿಕ್ಕಮಗಳೂರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸೋಣವೆಂದು ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಕರೆ ನೀಡಿದರು. ಸದೃಢ ದೇಶ ನಿರ್ಮಾಣದ ನಿಟ್ಟಿನಲ್ಲಿ ಯುವಕರು ಚುನಾವಣೆಯಿಂದ ವಿಮುಖರಾಗದೇ ಮತದಾನದಲ್ಲಿ ಭಾಗವಹಿಸುವುದು ಅಗತ್ಯ. ರಾಜ್ಯದಲ್ಲಿ ಸುಭದ್ರ ಸರಕಾರವಿದೆ. ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಉಡುಪಿ ದುರಂತ ಜಿಲ್ಲೆಯಾಗಿದೆ ಎಂದವರು ವಿಷಾದ ವ್ಯಕ್ತಪಡಿಸಿದರು.

ಯುದ್ಧಕ್ಕಿಂತ ಮೊದಲೇ ಶಸ್ತ್ರ ತ್ಯಾಗ
ರಾಮ ಮಂದಿರ, ಹಿಂದುತ್ವ ಬಿಜೆಪಿಗೆ ವರದಾನವಾಗಲಿದೆ ಎಂದು ನಮ್ಮವರೇ ಹೇಳುತ್ತಿದ್ದಾರೆ. ನಮ್ಮವರಿಗೆ ನಮ್ಮ ಬಗ್ಗೆ ನಂಬಿಕೆ ಇಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿದ್ದು, ಯುದ್ಧಕ್ಕಿಂತ ಮೊದಲೇ ಶಸ್ತ್ರ ತ್ಯಾಗ ಮಾಡಿದಂತೆ ಎಂದು ಉದಯ ಶೆಟ್ಟಿ ಬೇಸರ ವ್ಯಕ್ತಪಡಿಸಿದರು. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಜನತೆಗೆ ದೊರೆಯುತ್ತಿದೆ. ಅದನ್ನು ಮತವಾಗಿ ಪರಿವರ್ತಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಉದಯ ಶೆಟ್ಟಿ ಮನವಿ ಮಾಡಿಕೊಂಡರು.

ರಾಜ್ಯ ಹಿಂದುಳಿದ ವರ್ಗಗಳ‌ ಉಪಾಧ್ಯಕ್ಷ ಡಿ.‌ ಆರ್. ರಾಜು ಮಾತನಾಡಿ, ವಿಧಾನ ಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅನುಭವಿಸಿದ ಸೋಲಿಗೆ ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಪ್ರತೀಕಾರ ತೀರಿಸಬೇಕಿದೆ. ಕಾಂಗ್ರೆಸ್‌ ಸರಕಾರ ನುಡಿದಂತೆ‌ ನಡೆದಿದ್ದು, ಕಾಂಗ್ರೆಸ್‌ನ ಯೋಜನೆ-ಸಾಧನೆಯನ್ನು ಜನತೆಗೆ ತಿಳಿಸುವ ಕಾರ್ಯ ಮಾಡಬೇಕಿದೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕೆಪಿಸಿಸಿ ಪ್ರಧಾನ‌ ಕಾರ್ಯದರ್ಶಿಗಳಾದ ಜಿ.ಎ. ಬಾವ, ಎಂ.ಎ. ಗಫೂರ್, ಜಿಲ್ಲಾ ಯುವ ಕಾಂ‌ಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್‌, ಕೆಪಿಸಿಸಿ ಸದಸ್ಯ ಸುರೇಂದ್ರ ಶೆಟ್ಟಿ, ಕೆಪಿಸಿಸಿ ಕಿಸಾನ್ ಘಟಕದ ಕಾರ್ಯದರ್ಶಿ ಕಿಶನ್ ಶೆಟ್ಟಿ, ಜಿಲ್ಲಾ ಇಂಟಕ್‌ ಅಧ್ಯಕ್ಷ ಕಿರಣ್‌ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಧಾಕರ್, ಬ್ಲಾಕ್‌ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಡಿಸೋಜಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ‌ಅಕ್ರಮ ಸಕ್ರಮ ಸಮಿತಿ ಸದಸ್ಯ ರಮೇಶ್ ಬಜಕಳ ಪ್ರಾರ್ಥಿಸಿದರು.‌ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ಚಂದ್ರ ಪಾಲ್ ಸ್ವಾಗತಿಸಿ, ಬ್ಲಾಕ್‌ ವಕ್ತಾರ ಶುಭದ ರಾವ್‌ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಯುವ ಕಾಂಗ್ರೆಸ್‌ ಅ‍ಧ್ಯಕ್ಷ ಯೋಗೀಶ್‌ ಇನ್ನಾ ವಂದಿಸಿದರು.









error: Content is protected !!
Scroll to Top