ಶೌಚಾಲಯದಲ್ಲಿ ವೀಡಿಯೊ ಶೂಟಿಂಗ್‌ : ಚಾರ್ಜ್‌ಶೀಟ್‌ ಸಲ್ಲಿಕೆ

ಉಡುಪಿ: ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಹುಡುಗಿಯರ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಕೋರ್ಟ್​ಗೆ ಸಿಐಡಿ ಡಿವೈಎಸ್​ಪಿ ಅಂಜುಮಾಲಾ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದ ಸಿಐಡಿ ಇದೀಗ ಎಫ್​ಎಸ್​​ಎಲ್​ ವರದಿ ಬಂದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದೆ. 2023ರ ಜುಲೈ 18ರಂದು ಖಾಸಗಿ ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದ ಘಟನೆ ನಡೆದಿತ್ತು.
ಹತ್ತು ತಿಂಗಳ ನಂತರ ತನಿಖೆಯನ್ನು ಪೂರ್ಣಗೊಳಿಸಿದ ಸಿಐಡಿ 1,100 ಪುಟಗಳ ಚಾರ್ಜ್‌ಶೀಟ್ ಉಡುಪಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಮೂವರು ವಿದ್ಯಾರ್ಥಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, 32 ಮಂದಿಯನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗಿದೆ. ಸಿಐಡಿ ತನಿಖೆ ವೇಳೆ ಮೂವರು ಯುವತಿಯರು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಕೂಡಲೇ ವೀಡಿಯೋ ಡಿಲೀಟ್ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಹೇಳಿಕೆ ನೀಡಿದ್ದಾರೆ. ವೀಡಿಯೋ ಚಿತ್ರೀಕರಣದ ಕುರಿತು ವಿದ್ಯಾರ್ಥಿಗಳ ಹೇಳಿಕೆಯೇ ಪ್ರಮುಖ ಸಾಕ್ಷಿ ಎಂದು ಪರಿಗಣಿಸಲಾಗಿದೆ.
ಅಹಮದಾಬಾದ್ ಎಫ್‌ಎಸ್‌ಎಲ್ ನೀಡಿದ ವರದಿಯಲ್ಲಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಮೊಬೈಲ್‌ನಲ್ಲಿದ್ದ ವೀಡಿಯೋ ಡಿಲೀಟ್ ಆಗಿದ್ದು, ವಿಡಿಯೋ ಹಿಂಪಡೆದಿಲ್ಲ ಎಂದು ಎಫ್‌ಎಸ್‌ಎಲ್ ವರದಿ ನೀಡಿದೆ.

ಪ್ರಕರಣ ದೊಡ್ಡ ವಿವಾದವಾಗಿ ಸರಕಾರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿತ್ತು. ಉಡುಪಿಯ ನೇತ್ರಜ್ಯೋತಿ ಕಾಲೇಜ್‌ನ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳ ಖಾಸಗಿ ವೀಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಸರಿ ಪಡೆ ಭಾರಿ ಹೋರಾಟ ನಡೆಸಿತ್ತು. ಬಳಿಕ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು.
ಹಿಂದೂ ವಿದ್ಯಾರ್ಥಿನಿ ಶೌಚಾಲಯದೊಳಗಿರುವಾಗ ಮೊಬೈಲ್‌ನಲ್ಲಿ ವೀಡಿಯೋ ಶೂಟ್‌ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಎಫ್​ಐಆರ್ ಕೂಡ ದಾಖಲಾಗಿತ್ತು. ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಮೂವರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮೂವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು.
ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು.



















































































error: Content is protected !!
Scroll to Top