ಮಂಗಳೂರು : ರಾಜ್ಯದಲ್ಲಿ ಶೇ.60ರಷ್ಟು ಕನ್ನಡ ಇರುವ ನಾಮಫಲಕ ಅಳವಡಿಕೆ ಕಡ್ಡಾಯಕ್ಕೆ ತುಳುನಾಡಿನಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡೇತರ ನಾಮಫಲಕ ಧ್ವಂಸಗೊಳಿಸಿ ಹೋರಾಟ ನಡೆಯುತ್ತಿರುವ ಹಿನ್ನೆಲೆ ಆಕ್ರೋಶಗೊಂಡಿರುವ ತುಳು ಭಾಷೆ ಹೋರಾಟಗಾರರು ತುಳುನಾಡಿನಲ್ಲಿ ಯಾವುದೇ ಬೋರ್ಡ್ ಮುಟ್ಟದಂತೆ ಎಚ್ಚರಿಕೆ ನೀಡಿದ್ದಾರೆ.
ಪ್ರೀತಿಯಿಂದ ಭಾಷೆಗಳನ್ನು ಬಳಸಬೇಕೇ ಹೊರತು ಒತ್ತಾಯದ ಹೇರಿಕೆ ಸರಿಯಲ್ಲ ಎಂದು ತುಳು ಹೋರಾಟಗಾರ ರೋಷನ್ ರೇನಾಲ್ಡ್ ಹೇಳಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಅವರು, ಸರಕಾರದ ಕಡತಗಳಲ್ಲೇ ಇಂಗ್ಲೀಷ್ ಇದೆ. ಇವರು ಮೊದಲು ಅದನ್ನೆಲ್ಲಾ ತೆಗೆಯಲಿ ಎಂದರು.
ಬೋರ್ಡ್ಗಳನ್ನು ಒಡೆಯುವುದು ಒಂದು ದಂಧೆ
ಬೋರ್ಡ್ಗಳನ್ನು ಒಡೆಯುವುದು ಒಂದು ದಂಧೆಯಾಗಿದೆ. ಬೋರ್ಡ್ ಮಾಡುವ ಅಂಗಡಿಗಳಿಂದ ಇವರಿಗೆ ಫಂಡಿಂಗ್ ಆಗುತ್ತಿದೆ. ತುಳುವರು ಯಾವತ್ತು ಭಾಷೆಗಳ ವಿರೋಧಿಗಳಲ್ಲ. ತುಳು ಭಾಷೆ ರಾಜ್ಯದ ಎರಡನೇ ಭಾಷೆ ಆಗಬೇಕೆಂದು ಎರಡು ವರ್ಷಗಳಿಂದ ಕೇಳುತ್ತಿದ್ದೇವೆ. ಪಂಚದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಯೂ ಒಂದು. ಎಲ್ಲಾ ಭಾಷೆಗಳು ಎಂಟನೇ ಪರಿಚ್ಛೇದಕ್ಕೆ ಸೇರಿವೆ. ಆದರೆ ತುಳು ಬಾಕಿ ಉಳಿದಿದೆ. ಇದರ ಬಗ್ಗೆ ನಮಗೆ ಬಹಳ ನೋವಿದೆ ಎಂದರು.
ಇಲ್ಲಿರುವ ನಾಲ್ಕೈದು ತುಳುವರು ಕನ್ನಡ ಸಂಘಟನೆ ಕಟ್ಟಿಕೊಂಡಿದ್ದಾರೆ. ಕನ್ನಡ ಉಳಿಸಬೇಕೆಂದಿದ್ದರೆ ಅವರಿಗೆ ಶಿಕ್ಷಣದಲ್ಲಿ ಉಳಿಸಬೇಕಿತ್ತು. ಕನ್ನಡ ಶಾಲೆಗಳು ಇವತ್ತು ಮುಚ್ಚುತ್ತಿದೆ. ಅದು ಬಿಟ್ಟು ವ್ಯಾಪಾರ ಮಾಡುವ ಅಂಗಡಿಗಳ ಬೋರ್ಡ್ ಒಡೆಯುವುದು ಸರಿಯಲ್ಲ. ತುಳುನಾಡಿನಲ್ಲಿ ಭಾಷೆಗಳ ನಡುವೆ ದ್ವೇಷ ಸೃಷ್ಟಿಸಿ ಜಗಳ ಪ್ರಾರಂಭಿಸುವುದನ್ನು ನಾವು ಒಪ್ಪಲ್ಲ ಎಂದರು.

ತುಳುನಾಡಿನಲ್ಲಿ ಎಲ್ಲಿಯೂ ಸಹ ಯಾವುದೇ ಬೋರ್ಡ್ಗೆ ಕೈ ಹಾಕಿದರೆ ಇದನ್ನು ಖಂಡಿಸುತ್ತೇವೆ. ಕೊರೊನಾ ಬಳಿಕ ವ್ಯಾಪಾರಿಗಳು ಕಷ್ಟದಲ್ಲಿರುವಾಗ ಇವರ್ಯಾರು ಬಂದಿಲ್ಲ. ಈಗ ಬೋರ್ಡ್ ಒಡೆದು ಹಾಕಿ ನಷ್ಟ ಮಾಡಬಾರದು. ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೂರಿಸಂ ಇದೆ. ಇಲ್ಲಿಗೆ ವಿದೇಶ, ನೆರೆ ರಾಜ್ಯದಿಂದ ಪ್ರವಾಸಿಗರು ಬರುತ್ತಾರೆ. ಅವರಿಗೆಲ್ಲಾ ತೊಂದರೆ ಆಗುತ್ತದೆ ಎಂದರು.
ತುಳುನಾಡಿನ ಬೋರ್ಡ್ಗಳಲ್ಲಿ ಕೇವಲ ಇಂಗ್ಲೀಷ್ ಮಾತ್ರವಲ್ಲ, ಕನ್ನಡ, ಇಂಗ್ಲಿಷ್, ತುಳು ಭಾಷೆಯ ಲಿಪಿಗಳು ಇವೆ. ಬೋರ್ಡ್ಗಳ ವಿಚಾರಕ್ಕೆ ಬಂದರೆ ನಾವು ಬಿಡುವುದಿಲ್ಲ. ಬೇರೆ ರಾಜ್ಯದಿಂದ ಬಂದವರಿಗೆ ಕೇವಲ ಕನ್ನಡದಲ್ಲಿದ್ದರೆ ಅದು ಅರ್ಥ ಆಗಲ್ಲ. ಈಗ ಇಲ್ಲಿನ ಜನ ತುಳು ಬೋರ್ಡ್ ಸಹ ಹಾಕುತ್ತಿದ್ದಾರೆ. ಪ್ರೀತಿಯಿಂದ ಬಳಸಬೇಕೆ ಹೊರತು ಒತ್ತಾಯದ ಹೇರಿಕೆ ಆಗಬಾರದು ಎಂದರು.































