ಲೋಕಸಭೆ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಶಾಕ್
ಹೊಸದಿಲ್ಲಿ : ರಾಜಕೀಯ ಪಕ್ಷಗಳು ನಿಧಿ ಸಂಗ್ರಹಿಸುವ ಹೊಸ ವ್ಯವಸ್ಥೆಯಾಗಿರುವ ಚುನಾವಣಾ ಬಾಂಡ್ ಅನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ನಿಧಿಯ ಬಗ್ಗೆ ಮಾಹಿತಿ ಅತ್ಯಗತ್ಯವಾಗಿದ್ದು ಚುನಾವಣಾ ಬಾಂಡ್ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ಮೂಲಕ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಆಘಾತ ನೀಡಿದೆ. ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವದ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿ ಚುನಾವಣಾ ಬಾಂಡ್‌ಗಳನ್ನು ನಿಷೇಧಿಸಿದೆ. ಸುಪ್ರೀಂ ಕೋರ್ಟ್ ಚುನಾವಣೆ ಬಾಂಡನ್ನು ಅಸಂವಿಧಾನಿಕ ಎಂದು ವ್ಯಾಖ್ಯಾನಿಸಿದ್ದು, ದೇಣಿಗೆ ಸಂಗ್ರಹಕ್ಕೆ ಬೇರೆ ವಿಧಾನವನ್ನು ಅಳವಡಿಸಲು ಹೇಳಿದೆ.
ರಾಜಕೀಯ ಪಕ್ಷಗಳು ಪಡೆಯುತ್ತಿರುವ ಹಣದ ಬಗ್ಗೆ ಮಾಹಿತಿ ಪಡೆಯುವುದು ಬಹಳ ಮುಖ್ಯ. ಚುನಾವಣಾ ಬಾಂಡ್‌ಗಳು ಮಾಹಿತಿ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠ ಪ್ರಕರಣದ ಕುರಿತು ಸರ್ವಾನುಮತದ ತೀರ್ಪು ನೀಡಿದೆ. ಆದರೆ ಪೀಠದಲ್ಲಿ ಎರಡು ಭಿನ್ನ ಅಭಿಪ್ರಾಯಗಳಿದ್ದವು. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠವು ಕಳೆದ ವರ್ಷ ನವೆಂಬರ್ 2ರಂದು ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.
ಚುನಾವಣಾ ಬಾಂಡ್ ಯೋಜನೆಯ ಪ್ರಕಾರ, ಭಾರತದ ಯಾವುದೇ ನಾಗರಿಕ ಅಥವಾ ದೇಶದಲ್ಲಿ ಸ್ಥಾಪಿಸಲಾದ ಯಾವುದೇ ಸಂಸ್ಥಾಪನೆಯಿಂದ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು. ಯಾವುದೇ ವ್ಯಕ್ತಿ ಏಕಾಂಗಿಯಾಗಿ ಅಥವಾ ಇತರ ವ್ಯಕ್ತಿಗಳ ಸಹಯೋಗದಲ್ಲಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು.

1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 29(ಎ) ಅಡಿಯಲ್ಲಿ ನೋಂದಾಯಿಸಲ್ಪಟ್ಟ ರಾಜಕೀಯ ಪಕ್ಷಗಳು ಮತ್ತು ಲೋಕಸಭೆ ಅಥವಾ ವಿಧಾನಸಭೆಗೆ ಕಳೆದ ಚುನಾವಣೆಯಲ್ಲಿ ಕನಿಷ್ಠ ಒಂದು ಶೇಕಡಾ ಮತಗಳನ್ನು ಗಳಿಸಿದ ಪಕ್ಷಗಳು ಚುನಾವಣಾ ಬಾಂಡ್‌ಗಳನ್ನು ಪಡೆಯಬಹುದು. ಬಾಂಡ್‌ಗಳನ್ನು ಅಧಿಕೃತ ಬ್ಯಾಂಕ್ ಖಾತೆಯ ಮೂಲಕ ಅರ್ಹ ರಾಜಕೀಯ ಪಕ್ಷವು ನಗದೀಕರಿಸಕೊಳ್ಳಬಹುದು.
ಚುನಾವಣಾ ಬಾಂಡ್ ಜನಸಾಮಾನ್ಯರು, ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ಒಂದು ವಿಧದ ದೇಣಿಗೆ ಕ್ರಮ. 1,000 ರೂ, 10,000 ರೂ, 1 ಲಕ್ಷ ರೂ, 10 ಲಕ್ಷ ರೂ, 1 ಕೋಟಿ ರೂ ಇತ್ಯಾದಿ ಮುಖಬೆಲೆಗಳಲ್ಲಿ ಬಾಂಡ್‌ಗಳನ್ನು ಖರೀದಿಸಬಹುದು. ಈ ಬಾಂಡ್‌ಗಳು ಅನಾಮಧೇಯವಾಗಿರುತ್ತವೆ. ಅಂದರೆ, ಇದನ್ನು ಖರೀದಿಸಿದ ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಬಹಿರಂಗ ಇರುವುದಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡಲಾಗಿದೆ ಆ ಪಕ್ಷದ ಹೆಸರೂ ಬಹಿರಂಗ ಇರುವುದಿಲ್ಲ.
ಎಲೆಕ್ಟೋರಲ್ ಬಾಂಡ್ ಖರೀದಿಸಿದ ಬಳಿಕ ರಾಜಕೀಯ ಪಕ್ಷವು 15 ದಿನದೊಳಗೆ ಆ ಹಣವನ್ನು ಎನ್ಕ್ಯಾಷ್ ಮಾಡಿಕೊಳ್ಳಬೇಕು. ಅದು ತಪ್ಪಿದಲ್ಲಿ ಬಾಂಡ್ ಹಣವು ಪಿಎಂ ರಾಷ್ಟ್ರೀಯ ಪರಿಹಾರ ನಿಧಿಗೆ (ಪಿಎಂಎನ್ಆರ್ಎಫ್) ವರ್ಗಾವಣೆ ಆಗುತ್ತದೆ. ಎಲೆಕ್ಟೋರಲ್ ಬಾಂಡ್ ಖರೀದಿಸಿದರೆ ಆ ಹಣಕ್ಕೆ ತೆರಿಗೆ ವಿನಾಯಿತಿ ಸಿಕ್ಕುತ್ತದೆ. ರಾಜಕೀಯ ಪಕ್ಷಗಳು ಆದಾಯ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಆದರೆ, ಎಲೆಕ್ಟೋರಲ್ ಬಾಂಡ್ ವಿತರಣೆ ಮಾಡುವ ಎಸ್ಬಿಐ, ಇದಕ್ಕೆ ಸರ್ಕಾರದಿಂದ ನಿರ್ದಿಷ್ಟ ಶುಲ್ಕ ಪಡೆಯುತ್ತದೆ.
ಚುನಾವಣೆಗೆ ನಿಧಿ ಸಂಗ್ರಹಿಸುವ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ 2018ರಲ್ಲಿ ಚುನಾವಣಾ ಬಾಂಡ್ ಪ್ರಾರಂಭಿಸಿತ್ತು. ಚುನಾವಣಾ ಬಾಂಡ್‌ಗಳನ್ನು ಹಣಕಾಸು ಕಾಯ್ದೆ 2017ರ ಮೂಲಕ ತರಲಾಗಿದೆ. ಈ ಬಾಂಡ್‌ಗಳನ್ನು ವರ್ಷಕ್ಕೆ ನಾಲ್ಕು ಬಾರಿ ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ನಲ್ಲಿ ನೀಡಲಾಗುತ್ತದೆ. ಇದಕ್ಕಾಗಿ ಗ್ರಾಹಕರು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ವೆಬ್ಸೈಟ್ನಲ್ಲಿ ಖರೀದಿಸಬಹುದು. ಯಾವುದೇ ದಾನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 1 ಕೋಟಿ ರೂ.ವರೆಗಿನ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು ಮತ್ತು ತನ್ನ ಗುರುತನ್ನು ಮರೆಮಾಚುವ ಮೂಲಕ ಆಯ್ಕೆಯ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಬಹುದು. ಈ ವ್ಯವಸ್ಥೆಯ ದಾನಿಗಳ ಗುರುತನ್ನು ಬಹಿರಂಗಪಡಿಸುವುದಿಲ್ಲ. ಚುನಾವಣಾ ಬಾಂಡ್‌ಗಳ ಸಿಂಧುತ್ವವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಮತ್ತು ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸೇರಿದಂತೆ ಒಟ್ಟು ನಾಲ್ಕು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿತ್ತು. ಚುನಾವಣಾ ಬಾಂಡ್‌ಗಳು ನೀಡಿದ ಅನಾಮಧೇಯತೆಯು ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮತದಾರರ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.































