ಅಪಘಾತದಲ್ಲಿ ನದಿಗೆ ಬಿದ್ದಿದ್ದ ಸಿನೆಮಾ ನಿರ್ದೇಶಕನ ಶವ 9 ದಿನಗಳ ಬಳಿಕ ಪತ್ತೆ

ಚೆನ್ನೈ : ಕಾರು ಅಪಘಾತಕ್ಕೀಡಾಗಿ ಸಟ್ಲೇಜ್‌ ನದಿಗೆ ಬಿದ್ದಿದ್ದ ತಮಿಳು ಸಿನೆಮಾ ನಿರ್ದೇಶಕನ ಮೃತದೇಹ 9 ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಚೆನ್ನೈಯ ಮಾಜಿ ಮೇಯರ್‌ ಪುತ್ರನಾಗಿರುವ ವೆಟ್ರಿ ದುರೈಸ್ವಾಮಿ ಶಿಮ್ಲಾದಿಂದ ಸ್ಪಿಟಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಫೆ.4ರಂದು ಕಿನ್ನೋರ್‌ ಜಿಲ್ಲೆಯಲ್ಲಿ ಕಾರು ಅಪಘಾಕ್ಕೀಡಾಗಿ ಸಟ್ಲೇಜ್‌ ನದಿಗೆ ಬಿದ್ದಿತ್ತು.
ಕಾರಿನಲ್ಲಿದ್ದ ಗೋಪಿನಾಥ್‌ ಎಂಬವರನ್ನು ಸ್ಥಳೀಯರು ರಕ್ಷಿಸಿದ್ದರು. ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು. ಆದರೆ ವೆಟ್ರಿ ದುರೈಸ್ವಾಮಿ ಪತ್ತೆಯಾಗಿರಲಿಲ್ಲ. ಅವರಿಗಾಗಿ ನದಿಯಲ್ಲಿ ನಿರಂತರ ಶೋಧ ನಡೆಯುತ್ತಿತ್ತು. ಈ ನಡುವೆ ಮಗ ಬದುಕಿದ್ದಾನೆಂದು ನಂಬಿದ್ದ ಮಾಜಿ ಮೇಯರ್‌ ಸಾಯಿದಾಯಿ ದುರೈಸ್ವಾಮಿ ಹುಡುಕಿಕೊಟ್ಟವರಿಗೆ 1 ಕೋ. ರೂ. ಬಹುಮಾನ ಘೋಷಿಸಿದ್ದರು.
ಅಪಘಾತ ಸ್ಥಳದಿಂದ ಕೆಲವು ಮೀಟರ್‌ ದೂರದಲ್ಲಿ ಮಾನವ ದೇಹದ ಅವಶೇಷಗಳು ಪತ್ತೆಯಾದ ಬಳಿಕ ಶೋಧ ಕಾರ್ಯ ತೀವ್ರಗೊಂಡಿತ್ತು. ಇಂಡೋ-ಟಿಬೆಟನ್‌ ಬೋರ್ಡರ್‌ ಫೋರ್ಸ್‌, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಯೋಧರು ಶೋಧ ನಡೆಸುತ್ತಿದ್ದರು. ಕೊನೆಗೆ 9 ದಿನಗಳ ಬಳಿಕ ಅಪಘಾತ ನಡೆದ ಸ್ಥಳದಿಂದ 3 ಕಿ.ಮೀ. ದೂರದಲ್ಲಿ ಸೋಮವಾರ ರಾತ್ರಿ ಶವ ಸಿಕ್ಕಿದೆ. ಕೊಳೆತ ಶವ ಸಂಪೂರ್ಣ ಜರ್ಜರಿತವಾಗಿತ್ತು. ವೈದ್ಯಕೀಯ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.







































































error: Content is protected !!
Scroll to Top