ನೆರವಿಗೆ ಧಾವಿಸಿದ ದತ್ತ ಮಾಲಾಧಾರಿಗಳು
ಮಂಗಳೂರು : ಪುತ್ತೂರಿನಲ್ಲಿರುವ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿ ಕೆಲ ವೈದ್ಯಕೀಯ ಉಪಕರಣಗಳಿಗೆ ಹಾನಿಯಾಗಿದ್ದು, ರೋಗಿಗಳು ಪಾರಾಗಿದ್ದಾರೆ.
ತಾಲೂಕು ಸರಕಾರಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನೋಡಿ ರೋಗಿಗಳು ಬೆದರಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಪಕ್ಕದ ವಿಹಿಂಪ ಕಾರ್ಯಾಲಯದಲ್ಲಿದ್ದ ದತ್ತಮಾಲಾಧಾರಿಗಳು ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದಾರೆ. ರಾತ್ರಿ 1 ಗಂಟೆ ವೇಳೆ ಶಾಸಕ ಅಶೋಕ್ ಕುಮಾರ್ ರೈ ಅವರೂ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ದುರ್ಘಟನೆಯಲ್ಲಿ ಹವಾನಿಯಂತ್ರಿತ ಘಟಕ ಮತ್ತು ಅದರ ಪಕ್ಕದಲ್ಲಿದ್ದ ಇತರ ಕೆಲವೊಂದು ಯಂತ್ರಗಳಿಗೆ ಹಾನಿಯಾಗಿದೆ. ಹವಾನಿಯಂತ್ರಿತ ಘಟಕದ ಚಿಪ್ಪು ಒಡೆದು ಈ ಘಟನೆ ಸಂಭವಿಸಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಐಸಿಯುನಲ್ಲಿದ್ದ ರೋಗಿಗಳನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ದಟ್ಟ ಹೊಗೆ ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ಕಾರಣ ರೋಗಿಗಳು ಅಪಾಯದಿಂದ ಪಾರಾಗಿದ್ದಾರೆ. ಬೆಂಕಿ ಶಮನದ ಬಳಿಕ ದತ್ತಮಾಲಾಧಾರಿಗಳು ಆಸ್ಪತ್ರೆಯನ್ನು ಶುಚಿಗೊಳಿಸಿದ್ದಾರೆ.



































