ಜೆಸಿಬಿಯಲ್ಲಿ ಮದುವೆ ಮಂಟಪಕ್ಕೆ ಆಗಮನ
ಉಡುಪಿ : ತಮ್ಮ ಮದುವೆ ವಿಭಿನ್ನವಾಗಿದ್ದು ಸುದ್ದಿಯಾಗಬೇಕೆಂಬ ಹಪಾಹಪಿ ಈಗೀಗ ಹೆಚ್ಚಾಗುತ್ತಿದೆ. ಅದಕ್ಕಾಗಿ ವಧು-ವರ ಬೇರೆ ಬೇರೆ ಕಸರತ್ತು ಮಾಡುತ್ತಿರುವುದು ಆಗಾಗ ಸುದ್ದಿಯಾಗುತ್ತಿರುತ್ತದೆ. ಇತ್ತೀಚೆಗೆ ಬ್ರಹ್ಮಾವರದಲ್ಲಿ ಇದೇ ಮಾದರಿಯ ಮದುವೆಯೊಂದು ಜರುಗಿದ್ದು, ಇದರ ವೀಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬ್ರಹ್ಮಾವರದಲ್ಲಿ ನಡೆದ ಮಿಥುನ್ ಮತ್ತು ಪೂಜಾ ಎಂಬವರ ಮದುವೆಗೆ ಗೆಳೆಯರು ಭಿನ್ನವಾದ ಥೀಮ್ ಅರೇಂಜ್ ಮಾಡಿದ್ದರು. ವರ ಮತ್ತು ವಧು ಜೆಸಿಬಿಯಲ್ಲಿ ಮದುವೆ ಹಾಲ್ಗೆ ಬಂದು ಗಮನ ಸೆಳೆದರು. ಜೆಸಿಬಿಯನ್ನು ಹೂವಿನಿಂದ ಸಿಂಗಾರ ಮಾಡಿ, ಸ್ಪೆಷಲ್ ಸೋಫಾವನ್ನು ಜೋಡಿಸಿ ಅದರಲ್ಲಿ ವರ-ವಧು ಕುಳಿತು ಮದುವೆ ಹಾಲ್ಗೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟಕ್ಕೆ ಮುಗಿದಿಲ್ಲ ಮದುವೆ ವೇದಿಕೆಯಲ್ಲೇ ವಧು ಮತ್ತು ವರ ಕೋಳಿ ಅಂಕ ಆಡಿದ್ದಾರೆ. ಎರಡು ಹುಂಜಗಳನ್ನು ತಂದು ಕೋಳಿ ಅಂಕದಲ್ಲಿ ಬಿಡುವಂತೆ ಬಿಟ್ಟು ರಂಜಿಸಿದ್ದಾರೆ.
ಆದರೆ ಮದುವೆಯ ಪಾವಿತ್ರ್ಯವನ್ನು ಹಾಳುಗೆಡವಿದ ಈ ಹುಚ್ಚಾಟಕ್ಕೆ ಸಾಕಷ್ಟು ಟೀಕೆಗಳೂ ವ್ಯಕ್ತವಾಗಿವೆ. ಪ್ರಚಾರದ ಹುಚ್ಚಿನಿಂದ ಮದುವೆ ಮಂಟದಲ್ಲಿ ಹುಚ್ಚಾಟ ಆಡಿ ಸಂಪ್ರದಾಯಕ್ಕೆ, ಸಂಸ್ಕಾರಕ್ಕೆ ಧಕ್ಕೆ ತರಬೇಡಿ ಎಂದು ಅನೇಕರು ಬುದ್ಧಿ ಹೇಳಿದ್ದಾರೆ.


































