ನ.27ರಂದು ಕಾಂತಾರ-2ಕ್ಕೆ ಮುಹೂರ್ತ

ಬೆಂಗಳೂರು: ಕಾಂತಾರ ಚಿತ್ರ ಬಂದು ಎರಡು ವರ್ಷವಾಗಿದ್ದರೂ ಅದರ ಕ್ರೇಜ್‌ ಇನ್ನೂ ಕಡಿಮೆಯಾಗಿಲ್ಲ. ಜನ ಈಗಲೂ ಅದರ ಮುಂದಿನ ಭಾಗ ಯಾವಾಗ ಬರುತ್ತೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಕಾಂತಾರ ನಿರ್ಮಾಪಕರಾಗಿರುವ ವಿಜಯ್‌ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಕಾಂತಾರ-2 ಮುಹೂರ್ತಕ್ಕೆ ದಿನಾಂಕ ಘೋಷಿಸಿದೆ. ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ-2 ಪ್ರೀಕ್ವೆಲ್‌ಗೆ ನವೆಂಬರ್‌ 27ರಂದು ಮುಹೂರ್ತ ನಿಗದಿಪಡಿಸಲಾಗಿದೆ.

ಉಡುಪಿಯಲ್ಲೇ ಕಾಂತಾರ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಕಾಂತಾರ-2ರ ಕಥೆ, ಚಿತ್ರಕಥೆ, ಸೆಟ್‌ ಇತ್ಯಾದಿಗಳ ಕುರಿತು ತಯಾರಿ ನಡೆಸುತ್ತಿರುವ ಚಿತ್ರತಂಡ ಅಂದು ಈ ಸಿನಿಮಾವನ್ನು ಅಧಿಕೃತವಾಗಿ ಆರಂಭಿಸಲಿದೆ. ಕಾಂತಾರ 2ರಲ್ಲಿ ಪಂಜುರ್ಲಿ ದೈವದ ಮೂಲ ಕಥೆ ಇರಲಿದೆ ಎನ್ನಲಾಗಿದೆ. ಆದರೆ ಕಥೆಯ ಕುರಿತಂತೆ ರಿಷಭ್‌ ಶೆಟ್ಟಿ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಇತಿಹಾಸದ ಪುಟಗಳನ್ನು ಆಧಾರವಾಗಿಟ್ಟುಕೊಂಡು ನೈಜತೆಗೆ ಧಕ್ಕೆಯಾಗದಂತೆ ಕಾಲ್ಪನಿಕ ಕಥೆಯೊಂದನ್ನು ಕಟ್ಟುವ ಕೆಲಸದಲ್ಲಿ ರಿಷಬ್‌ ಶೆಟ್ಟಿ ನಿರತರಾಗಿದ್ದಾರೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಕಾಂತಾರ 2 ತೆರೆಗೆ ಬರುವ ನಿರೀಕ್ಷೆಯಿದೆ.

ಕೃಷಿ, ಊಳಿಗಮಾನ್ಯ ಪದ್ಧತಿ, ಭೂಮಿಯ ಒತ್ತುವರಿ, ಪರಿಸರ ರಕ್ಷಣೆ, ಮನುಷ್ಯ ಮತ್ತು ಪ್ರಕೃತಿ ಸಂಘರ್ಷ ಹೀಗೆ ಹಲವು ಅಂಶಗಳು ಚಿತ್ರದಲ್ಲಿರುತ್ತದೆ ಎಂದು ರಿಷಭ್‌ ಶೆಟ್ಟಿ ಹಿಂದೆ ಹೇಳಿದ್ದರು. ಕಾಂತಾರದಲ್ಲಿದ್ದ ಬಹುತೇಕ ಕಲಾವಿದರು ಕಾಂತಾರ 2ರಲ್ಲಿಯೂ ಇರಲಿದ್ದಾರೆ ಎನ್ನಲಾಗಿದೆ. ಕಾಂತಾರ ಮೊದಲ ಭಾಗಕ್ಕಿಂತ ಹೆಚ್ಚು ಅದ್ದೂರಿಯಾಗಿ, ಹೆಚ್ಚು ಸಾಹಸ ದೃಶ್ಯಗಳನ್ನು ಇದು ಹೊಂದಿರಲಿದೆ. ಈ ಸಿನಿಮಾವನ್ನು ಒಟ್ಟು ಮೂರು ಹಂತಗಳಲ್ಲಿ ಶೂಟಿಂಗ್‌ ಮಾಡುವ ಯೋಜನೆಯಿದೆ. ಸಿನಿಮಾದ ಶೂಟಿಂಗ್‌ ಆಗಸ್ಟ್‌ 2024ರಲ್ಲಿ ಮುಗಿಯುವ ನಿರೀಕ್ಷೆಯಿದೆ. ಡಿಸೆಂಬರ್‌ ವೇಳೆಗೆ ಬಿಡುಗಡೆಯಾಗಬಹುದು.







































































error: Content is protected !!
Scroll to Top