ಕ್ರಿಕೆಟ್‌ ಬೆಟ್ಟಿಂಗ್‌ : ಓರ್ವನ ಬಂಧನ – ಕಾರ್ಕಳದ ಉದ್ಯಮಿ ಪ್ರಮುಖ ಆರೋಪಿ

ಬೆಂಗಳೂರು : ಕ್ರಿಕೆಟ್‌ ಬೆಟ್ಟಿಂಗ್‌ನ ಬುಕ್ಕಿಯಾಗಿ ಗುರುತಿಸಿಕೊಂಡಿದ್ದ ಚಿಕ್ಕಮಾವಳ್ಳಿಯ ಸತೀಶ್‌ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಮುಂಬೈ ಉದ್ಯಮಿ, ಕಾರ್ಕಳ ತಾಲೂಕು ಅಜೆಕಾರಿನ ಪ್ರಕಾಶ್‌ ಶೆಟ್ಟಿ ಮತ್ತವನ ಮೂವರು ಸಹಚರರಿಗೆ ವಿಚಾರಣೆಗಾಗಿ ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ.
ಕ್ರಿಕೆಟ್‌ ಬೆಟ್ಟಿಂಗ್‌ ಜೂಜಾಟಕ್ಕೆ ಬಳಸುತ್ತಿದ್ದ 3 ಬ್ಯಾಂಕ್‌ ಖಾತೆ ವಹಿವಾಟು ಸ್ಥಗಿತಗೊಳಿಸಿ 41. 71 ಲಕ್ಷ ರೂ. ಜಫ್ತಿ ಮಾಡಲಾಗಿದೆ.

ಅಲೆಕ್ಸ್‌ ಡಾಟ್‌ಬೆಟ್‌ ಆಪ್‌, ವೆಬ್‌ಸೈಟ್‌ನ ಯೂಸರ್‌ ಐಡಿ, ಪಾಸ್‌ವರ್ಡ್‌ಗಳನ್ನು ಸತೀಶ್‌ ಪಂಟರುಗಳಿಗೆ ಕೊಡುತ್ತಿದ್ದ ಎನ್ನಲಾಗಿದೆ. ಅವರಿಂದ ಕ್ರಿಕೆಟ್‌ ಬೆಟ್ಟಿಂಗ್‌ ಜೂಜಾಟವನ್ನು ಆಡಿಸಲು ಹಣ ಸಂಗ್ರಹಿಸಿ ರಿಚಾರ್ಜ್‌ ಮಾಡಲು ವಾಟ್ಸಪ್‌ ಮುಖೇನ ಸೂಪರ್‌ ಮಾಸ್ಟರ್‌ ಬುಕ್ಕಿಯೊಂದಿಗೆ ವ್ಯವಹರಿಸುತ್ತಿದ್ದ. ಈ ವಿಚಾರ ಸಿಸಿಬಿ ಪೊಲೀಸರ ಗಮನಕ್ಕೆ ಬಂದಿದ್ದು, ಅ. 10ರಂದು ಬೆಂಗಳೂರಿನಲ್ಲಿ ಸತೀಶ್‌ನನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.

ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪಿ ಸತೀಶನನ್ನು ವಿಚಾರಣೆ ಮಾಡುವಾಗ ಅಜೆಕಾರಿನ ಪ್ರಕಾಶ್‌ ಶೆಟ್ಟಿ ಎಂಬಾತ ಈ ದಂಧೆಯ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ.

ಸಿಸಿಬಿ ಪೊಲೀಸ್ ತಂಡ ಅಜೆಕಾರಿನಲ್ಲಿರುವ ಪ್ರಕಾಶ್‌ ಶೆಟ್ಟಿ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದು, ಅಲೆಕ್ಸ್‌ ಡಾಟ್‌ ಬೆಟ್‌ ಹಾಗೂ ಆನ್‌ಲೈನ್‌ ಕ್ರಿಕೆಟ್‌ ಬೆಟ್ಟಿಂಗ್‌ ಆಪ್‌ಗಳ ಮೂಲಕ ಬೆಟ್ಟಿಂಗ್‌ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ನಿರ್ವಹಣೆ ಮಾಡಲು ಅಜೆಕಾರಿನ ಮನೆಯಲ್ಲಿ ಹೊರ ರಾಜ್ಯದ ನಾಲ್ವರು ಯುವಕರನ್ನು ಬಳಸಿಕೊಂಡಿದ್ದ. ಬೆಟ್ಟಿಂಗ್‌ನಲ್ಲಿ ಆಸಕ್ತಿ ಹೊಂದಿರುವವರನ್ನು ಟಾರ್ಗೆಟ್‌ ಮಾಡಿ ಪರಿಚಯಿಸಿಕೊಂಡು ಆನ್‌ಲೈನ್‌ನಲ್ಲೇ ಬೆಟ್ಟಿಂಗ್‌ ಡೀಲ್‌ ನಡೆಯುತ್ತಿತ್ತು.

ಮುಂಬೈನಲ್ಲಿ ಹೋಟೆಲ್‌ ಉದ್ಯಮ ನಡೆಸುತ್ತಿರುವ ಪ್ರಕಾಶ್‌ ಶೆಟ್ಟಿಯ ವಿಚಾರಣೆ ಬಳಿಕ ಇದರ ಹಿಂದೆ ಇರುವ ಮತ್ತಷ್ಟು ಮಂದಿಯ ಮಾಹಿತಿ ಗೊತ್ತಾಗಲಿದೆ. ಬಂಧಿತ ಆರೋಪಿಯಿಂದ 1.50 ಲಕ್ಷ ರೂ. ನಗದು, 1 ಟ್ಯಾಬ್‌, 6 ಮೊಬೈಲ್‌ ಜಪ್ತಿ ಮಾಡಲಾಗಿದೆ.error: Content is protected !!
Scroll to Top